2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನ ಸಾರಾಂಶ
- ಭಾರತದ ನೈಜ ಜಿಡಿಪಿ 2023-24ನೇ ಸಾಲಿನಲ್ಲಿ ಶೇಕಡಾ 7.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ
- ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು
- ಮುಂದಿನ ವರ್ಷಕ್ಕೆ ಬಂಡವಾಳ ವೆಚ್ಚವನ್ನು ಶೇಕಡಾ 11.1 ರಷ್ಟು ಹೆಚ್ಚಳದೊಂದಿಗೆ ರೂ 11,11,111 ಕೋಟಿಗೆ ಹೆಚ್ಚಿಸಲಾಗುತ್ತಿದೆ, ಇದು ಜಿಡಿಪಿಯ ಶೇಕಡಾ 3.4 ಆಗಿರುತ್ತದೆ
- 2024-25 ರಲ್ಲಿನ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 5.1 ಎಂದು ಅಂದಾಜಿಸಲಾಗಿದೆ
- 2014-23ರ ಅವಧಿಯಲ್ಲಿ ಎಫ್ಡಿಐ ಒಳಹರಿವು 596 ಶತಕೋಟಿ ಡಾಲರ್ ಆಗಿತ್ತು, ಇದು 2005-14ರ ಅವಧಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳವಾಗಿದೆ
- ‘ಬಡವರು, ಮಹಿಳೆಯರು, ಯುವಜನರು ಮತ್ತು ರೈತರ ಏಳಿಗೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ
- ಯುವಕರಿಗಾಗಿ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಲಾಗುವುದು
- ರಾಜ್ಯಗಳ ಬಂಡವಾಳ ವೆಚ್ಚಕ್ಕಾಗಿ 50 ವರ್ಷಗಳ ಬಡ್ಡಿ ರಹಿತ ಸಾಲದ ಯೋಜನೆಯು ಈ ವರ್ಷವೂ 1.3 ಲಕ್ಷ ಕೋಟಿ ರೂ.ಗಳ ಒಟ್ಟು ವೆಚ್ಚದೊಂದಿಗೆ ಮುಂದುವರಿಯುತ್ತದೆ
- ಸರ್ವಾಂಗೀಣ, ಸರ್ವವ್ಯಾಪಿ ಮತ್ತು ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯ ವಿಧಾನದೊಂದಿಗೆ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ
- 2047 ರ ಹೊತ್ತಿಗೆ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡಲು ಸಂಬಂಧಿಸಿದ ನಿರ್ದೇಶನಗಳು ಮತ್ತು ಅಭಿವೃದ್ಧಿ ವಿಧಾನವನ್ನು ಆಧರಿಸಿದ ಹಲವಾರು ಘೋಷಣೆಗಳು ಮತ್ತು ಕಾರ್ಯತಂತ್ರಗಳನ್ನು ಬಜೆಟ್ ಒಳಗೊಂಡಿದೆ
- ದೇಶದ ಪೂರ್ವ ಪ್ರದೇಶ ಮತ್ತು ಅದರ ಜನರನ್ನು ಭಾರತದ ಬೆಳವಣಿಗೆಯ ಪ್ರಬಲ ಚಾಲಕರನ್ನಾಗಿ ಮಾಡಲು ಸರ್ಕಾರವು ಹೆಚ್ಚಿನ ಗಮನವನ್ನು ನೀಡುತ್ತದೆ
- ವೇಗದ ಜನಸಂಖ್ಯಾ ಬೆಳವಣಿಗೆ ಮತ್ತು ಜನಸಂಖ್ಯಾ ಬದಲಾವಣೆಗಳಿಂದ ಉಂಟಾಗುವ ಸವಾಲುಗಳ ವ್ಯಾಪಕ ಪರಿಗಣನೆಗಾಗಿ ಸರ್ಕಾರವು ಉನ್ನತಾಧಿಕಾರದ ಸಮಿತಿಯನ್ನು ರಚಿಸುತ್ತದೆ
- ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಪ್ರಸ್ತಾಪಿಸಲಾಗಿಲ್ಲ
- ಸುಮಾರು ಒಂದು ಕೋಟಿ ತೆರಿಗೆ ಪಾವತಿದಾರರು ಸಣ್ಣಪುಟ್ಟ ಮತ್ತು ವಿವಾದಿತ ನೇರ ತೆರಿಗೆ ಬೇಡಿಕೆಗಳ ಹಿಂಪಡೆಯುವಿಕೆಯಿಂದ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ
- ಭಾರತದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿರುವ ಸರ್ಕಾರ
ಭಾಗ-ಎ: ಸಾರಾಂಶ
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-2025 ನೇ ಸಾಲಿನ ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಮುಂದಿನ ವರ್ಷಕ್ಕೆ ಬಂಡವಾಳ ವೆಚ್ಚವನ್ನು ಶೇ 11.1 ರಷ್ಟು ಹೆಚ್ಚಳದೊಂದಿಗೆ 11,11,111 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು, ಇದು ಜಿಡಿಪಿಯ ಶೇ. 3.4 ಆಗಿರುತ್ತದೆ.
ಕಳೆದ 4 ವರ್ಷಗಳಲ್ಲಿ ಬಂಡವಾಳ ವೆಚ್ಚಗಳ ಬೃಹತ್ ಮೂರು ಪಟ್ಟು ಹೆಚ್ಚಳದ ಹಿನ್ನೆಲೆಯಲ್ಲಿ ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಭಾರಿ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ಅವರು ಹೇಳಿದರು.
ಹಣಕಾಸು ಸಚಿವರ ಭಾಷಣದ ಜೊತೆಗೆ ಪ್ರಸ್ತುತಪಡಿಸಲಾದ 2023-24 ನೇ ಆರ್ಥಿಕ ವರ್ಷದ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜುಗಳ ಪ್ರಕಾರ, ಭಾರತದ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.3 ರಷ್ಟು ಅಂದಾಜಿಸಲಾಗಿದೆ. ಇದು ಆರ್ ಬಿ ಐ (ಅದರ ಡಿಸೆಂಬರ್ 2023 ರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ) 2023-24 ನೇ ಆರ್ಥಿಕ ವರ್ಷದ ಬೆಳವಣಿಗೆಯ ಅಂದಾಜುಗಳನ್ನು 6.5 ಶೇಕಡಾದಿಂದ 7 ಶೇಕಡಾಕ್ಕೆ ಮಾಡಿದ ಪರಿಷ್ಕರಣೆಗೆ ಅನುಗುಣವಾಗಿದೆ, ಇದು 2023-24 ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಬಲವಾದ ಬೆಳವಣಿಗೆಯಿಂದ ಪ್ರೇರೇಪಿಸಲ್ಪಟ್ಟಿದೆ.
ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ ಭಾರತೀಯ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಮತ್ತು ಆರೋಗ್ಯಕರ ಸ್ಥೂಲ-ಆರ್ಥಿಕ ಮೂಲಭೂತ ಅಂಶಗಳನ್ನು ಕಾಪಾಡಿಕೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF), ತನ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ (WEO) ಅಕ್ಟೋಬರ್ 2023 ರಲ್ಲಿ, 2023-24 ನೇ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆಯ ಅಂದಾಜನ್ನು ಜುಲೈ 2023 ರಲ್ಲಿ 6.1 ಶೇಕಡಾದಿಂದ 6.3 ಶೇಕಡಾಕ್ಕೆ ಪರಿಷ್ಕರಿಸಿದೆ. ಇದು 2023 ರ ಜಾಗತಿಕ ಬೆಳವಣಿಗೆಯ ಅಂದಾಜು ಬದಲಾಗದೆ ಶೇಕಡಾ 3 ರಷ್ಟರಲ್ಲೇ ಇರುವ ಸಮಯದಲ್ಲಿ ಭಾರತದ ಆರ್ಥಿಕ ಸಾಮರ್ಥ್ಯದಲ್ಲಿ ಹೆಚ್ಚುತ್ತಿರುವ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಐ ಎಂ ಎಫ್ ಪ್ರಕಾರ, ಭಾರತವು 2027 ರಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ (ಡಾಲರ್ ಮಾರುಕಟ್ಟೆ ವಿನಿಮಯ ದರದಲ್ಲಿ) ಮತ್ತು ಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆಯು 5 ವರ್ಷಗಳಲ್ಲಿ 200 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. ಇದಲ್ಲದೆ, ವಿಶ್ವಬ್ಯಾಂಕ್, ಐ ಎಂ ಎಫ್, ಒಇಸಿಡಿ ಮತ್ತು ಎಡಿಬಿ ಯಂತಹ ವಿವಿಧ ಅಂತರರಾಷ್ಟ್ರೀಯ ಏಜೆನ್ಸಿಗಳು 2024-25ರಲ್ಲಿ ಭಾರತವು ಕ್ರಮವಾಗಿ 6.4, 6.3, 6.1 ಮತ್ತು 6.7 ರಷ್ಟು ಬೆಳವಣಿಗೆಯನ್ನು ಅಂದಾಜಿಸಿವೆ.
ಆರ್ಥಿಕ ಚಟುವಟಿಕೆಯಲ್ಲಿನ ಬಲವಾದ ಬೆಳವಣಿಗೆಯು ಆದಾಯ ಸಂಗ್ರಹವನ್ನು ಹೆಚ್ಚಿಸಿದೆ ಮತ್ತು ಡಿಸೆಂಬರ್ 2023 ರಲ್ಲಿ ಜಿ ಎಸ್ ಟಿ ಸಂಗ್ರಹವು 1.65 ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಹಣಕಾಸು ಸಚಿವರು ತಿಳಿಸಿದರು. ಒಟ್ಟು ಜಿ ಎಸ್ ಟಿ ಆದಾಯವು 1.6 ಲಕ್ಷ ಕೋಟಿ ರೂ.ಗಳನ್ನು ದಾಟಿರುವುದು ಇದು ಏಳನೇ ಬಾರಿಯಾಗಿದೆ.
2024-25ಕ್ಕೆ ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚಗಳು ಕ್ರಮವಾಗಿ 30.80 ಮತ್ತು 47.66 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು. ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ರೂ.ಎಂದು ಅಂದಾಜಿಸಲಾಗಿದೆ.
ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದ ಯೋಜನೆಯನ್ನು ಒಟ್ಟು 1.3 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ವರ್ಷ ಮುಂದುವರಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ರಾಜ್ಯ ಸರ್ಕಾರಗಳ ವಿಕಸಿತ ಭಾರತದ ಮೈಲಿಗಲ್ಲು-ಸಂಯೋಜಿತ ಸುಧಾರಣೆಗಳನ್ನು ಬೆಂಬಲಿಸಲು ಈ ವರ್ಷ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲವಾಗಿ ಎಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳನ್ನು ಪ್ರಸ್ತಾಪಿಸಲಾಗಿದೆ.
2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು 2021-22 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ವಿತ್ತೀಯ ಬಲವರ್ಧನೆಯನ್ನು ಉಲ್ಲೇಖಿಸಿದ ಶ್ರೀಮತಿ ಸೀತಾರಾಮನ್, 2024-25 ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 5.1 ಪ್ರತಿಶತ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ, 2024-25ರಲ್ಲಿ ಸೆಕ್ಯುರಿಟಿಗಳ ಮೂಲಕ ಒಟ್ಟು ಮತ್ತು ನಿವ್ವಳ ಮಾರುಕಟ್ಟೆ ಸಾಲವನ್ನು ಕ್ರಮವಾಗಿ 14.13 ಮತ್ತು 11.75 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಇವೆರಡೂ 2023-24 ಕ್ಕಿಂತ ಕಡಿಮೆ ಇರುತ್ತವೆ.
ಆರ್ಥಿಕತೆಯ ಕೆಲವು ಉಜ್ವಲ ಅಂಶಗಳತ್ತ ಗಮನಸೆಳೆದ ಹಣಕಾಸು ಸಚಿವರು, ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳ ಪರಿಷ್ಕೃತ ಅಂದಾಜು 27.56 ಲಕ್ಷ ಕೋಟಿ ರೂ.ಗಳಾಗಿದ್ದು, ಅದರಲ್ಲಿ ತೆರಿಗೆ ಸ್ವೀಕೃತಿಗಳು 23.24 ಲಕ್ಷ ಕೋಟಿಗಳಾಗಿವೆ ಎಂದು ಮಾಹಿತಿ ನೀಡಿದರು. ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು 44.90 ಲಕ್ಷ ಕೋಟಿ ರೂ. 30.03 ಲಕ್ಷ ಕೋಟಿ ರೂ. ಆದಾಯ ಸ್ವೀಕೃತಿಯು ಬಜೆಟ್ ಅಂದಾಜಿಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಆರ್ಥಿಕತೆಯ ಬಲವಾದ ಬೆಳವಣಿಗೆಯ ಆವೇಗ ಮತ್ತು ಔಪಚಾರಿಕತೆಯನ್ನು ಪ್ರತಿಬಿಂಬಿಸುತ್ತದೆ.
2024-25ರ ಅವಧಿಯಲ್ಲಿ ಸೆಕ್ಯೂರಿಟಿಗಳ ಮೂಲಕ ಒಟ್ಟು ಮತ್ತು ನಿವ್ವಳ ಮಾರುಕಟ್ಟೆ ಸಾಲವನ್ನು ಕ್ರಮವಾಗಿ 14.13 ಮತ್ತು 11.75 ಲಕ್ಷ ಕೋಟಿ ರೂ.ಎಂದು ಅಂದಾಜಿಸಲಾಗಿದೆ ಮತ್ತು 2023-24 ರಲ್ಲಿ ಇವೆರಡೂ ಕಡಿಮೆ ಇರುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.
2014-23ರಲ್ಲಿ ಎಫ್ ಡಿ ಐ ಒಳಹರಿವು 596 ಶತಕೋಟಿ ಡಾಲರ್ ನಷ್ಟಿತ್ತು, ಇದು ಸುವರ್ಣ ಯುಗವನ್ನು ಗುರುತಿಸುತ್ತದೆ ಮತ್ತು ಇದು 2005-14ರ ಅವಧಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಅವರು ಘೋಷಿಸಿದರು.
ನಿರಂತರ ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸಲು, ನಾವು ನಮ್ಮ ವಿದೇಶಿ ಪಾಲುದಾರರೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು ‘ಮೊದಲು ಭಾರತವನ್ನು ಅಭಿವೃದ್ಧಿಪಡಿಸಿ’ ಎಂಬ ಮನೋಭಾವದಲ್ಲಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಹಣಕಾಸು ಸಚಿವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಲ್ಕು ಪ್ರಮುಖ ಜಾತಿಗಳನ್ನು ದೃಢವಾಗಿ ನಂಬುತ್ತಾರೆ ಮತ್ತು ಅವುಗಳ ಬಗ್ಗೆ ಗಮನಹರಿಸಿದ್ದಾರೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಅವುಗಳೆಂದರೆ, ‘ಬಡವರು, ಮಹಿಳೆಯರು, ಯುವಜನರು ಮತ್ತು ರೈತರು. ಅವರ ಅಗತ್ಯಗಳು, ಅವರ ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣವು ಸರ್ಕಾರದ ಹೆಚ್ಚಿನ ಆದ್ಯತೆಯಾಗಿದೆ, ಏಕೆಂದರೆ ಅವರು ಪ್ರಗತಿ ಹೊಂದಿದಾಗ ಮಾತ್ರ ದೇಶವು ಪ್ರಗತಿಯಾಗುತ್ತದೆ ಎಂದು ಅವರು ಹೇಳಿದರು.
ಅಭಿವೃದ್ಧಿಗೆ ಈ ಸರ್ಕಾರದ ಮಾನವೀಯ ಮತ್ತು ಎಲ್ಲರನ್ನೂ ಒಳಗೊಂಡ ವಿಧಾನವು ಹಿಂದಿನ ವಿಧಾನದಿಂದ ಉದ್ದೇಶಪೂರ್ವಕ ನಿರ್ಗಮನವಾಗಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ವಿವರಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು, ‘ಎಲ್ಲರಿಗೂ ವಸತಿ’, ‘ಹರ್ ಘರ್ ಜಲ್’, ಎಲ್ಲರಿಗೂ ವಿದ್ಯುತ್, ಎಲ್ಲರಿಗೂ ಅಡುಗೆ ಅನಿಲ, ಬ್ಯಾಂಕ್ ಖಾತೆಗಳು ಮತ್ತು ಎಲ್ಲರಿಗೂ ಹಣಕಾಸು ಸೇವೆಗಳ ಮೂಲಕ ದಾಖಲೆ ಸಮಯದಲ್ಲಿ ಪ್ರತಿ ಮನೆ ಮತ್ತು ವ್ಯಕ್ತಿಯನ್ನು ಗುರಿಯಾಗಿರಿಸಿಕೊಂಡಿವೆ ಎಂದು ಅವರು ಹೇಳಿದರು.
ಈ ಸರ್ಕಾರವು ಸರ್ವಾಂಗೀಣ, ಸರ್ವವ್ಯಾಪಿ ಮತ್ತು ಎಲ್ಲರನ್ನೂ ಒಳಗೊಂಡ (ಸರ್ವಾಂಗೀಣ, ಸರ್ವಸ್ಪರ್ಶಿ ಮತ್ತು ಸರ್ವಸಮಾವೇಶಿ) ಅಭಿವೃದ್ಧಿಯ ಹಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಇದು ಎಲ್ಲಾ ಜಾತಿಗಳು ಮತ್ತು ಎಲ್ಲಾ ವರ್ಗಗಳ ಜನರನ್ನು ಒಳಗೊಳ್ಳುತ್ತದೆ. “ನಾವು 2047 ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ ಮಾಡಲು ಕೆಲಸ ಮಾಡುತ್ತಿದ್ದೇವೆ. ಆ ಗುರಿಯನ್ನು ಸಾಧಿಸಲು, ನಾವು ಜನರ ಸಾಮರ್ಥ್ಯವನ್ನು ಸುಧಾರಿಸಬೇಕು ಮತ್ತು ಅವರನ್ನು ಸಬಲಗೊಳಿಸಬೇಕು” ಎಂದು ಹೇಳಿದರು.
“ಹಿಂದೆ, ಸಾಮಾಜಿಕ ನ್ಯಾಯವು ಹೆಚ್ಚಾಗಿ ರಾಜಕೀಯ ಘೋಷಣೆಯಾಗಿತ್ತು. ನಮ್ಮ ಸರ್ಕಾರಕ್ಕೆ, ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯವಾದ ಆಡಳಿತ ಮಾದರಿಯಾಗಿದೆ” ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಧನಾತ್ಮಕ ಪರಿವರ್ತನೆಯನ್ನು ಕಂಡಿದೆ ಮತ್ತು ಭಾರತದ ಜನರು ಭರವಸೆ ಮತ್ತು ಆಶಾವಾದದಿಂದ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ಹಣಕಾಸು ಸಚಿವರು ಘೋಷಿಸಿದರು. “ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಆರ್ಥಿಕತೆಗೆ ಹೊಸ ಚೈತನ್ಯ ಪಡೆಯಿತು. ಅಭಿವೃದ್ಧಿಯ ಫಲ ಜನಸಾಮಾನ್ಯರಿಗೆ ತಲುಪತೊಡಗಿತು. ದೇಶವು ಹೊಸ ಉದ್ದೇಶ ಮತ್ತು ಭರವಸೆಯನ್ನು ಪಡೆದುಕೊಂಡಿದೆ” ಎಂದು ಅವರು ಹೇಳಿದರು.
ಈ 10 ವರ್ಷಗಳಲ್ಲಿ ‘ಸಬ್ ಕಾ ಸಾಥ್’ಮನೋಭಾವದಿಂದ ಸರ್ಕಾರವು ಬಹು ಆಯಾಮದ ಬಡತನದಿಂದ ಮುಕ್ತಿ ಪಡೆಯಲು 25 ಕೋಟಿ ಜನರಿಗೆ ಸಹಾಯ ಮಾಡಿದೆ ಮತ್ತು ಸರ್ಕಾರದ ಪ್ರಯತ್ನಗಳು ಈಗ ಅಂತಹ ಸಶಕ್ತ ಜನರ ಶಕ್ತಿ ಮತ್ತು ಉತ್ಸಾಹದೊಂದಿಗೆ ಸಮನ್ವಯಗೊಳ್ಳುತ್ತಿವೆ ಎಂದು ಹಣಕಾಸು ಸಚಿವರು ಹೇಳಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆಯು ಉದ್ಯಮಶೀಲತೆಯ ಆಕಾಂಕ್ಷಿಗಳಿಗಾಗಿ 22.5 ಲಕ್ಷ ಕೋಟಿ ರೂ. ಮೊತ್ತದ ಒಟ್ಟು 43 ಕೋಟಿ ಸಾಲಗಳನ್ನುನ್ನು ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು. ಮಹಿಳಾ ಉದ್ಯಮಿಗಳಿಗೆ ಮೂವತ್ತು ಕೋಟಿ ಮುದ್ರಾ ಯೋಜನೆ ಸಾಲಗಳನ್ನು ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಮಧ್ಯಂತರ ಬಜೆಟ್ 2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತ ಮಾಡಲು ನಿರ್ದೇಶನಗಳು ಮತ್ತು ಅಭಿವೃದ್ಧಿ ವಿಧಾನವನ್ನು ಆಧರಿಸಿದ ಹಲವಾರು ಘೋಷಣೆಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಹಲವಾರು ಘೋಷಣೆಗಳನ್ನು ಮಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ದೇಶದ ಪೂರ್ವ ಪ್ರದೇಶವನ್ನು ಮತ್ತು ಅದರ ಜನರನ್ನು ಭಾರತದ ಬೆಳವಣಿಗೆಯ ಪ್ರಬಲ ಚಾಲಕರನ್ನಾಗಿ ಮಾಡಲು ಸರ್ಕಾರವು ಹೆಚ್ಚಿನ ಗಮನವನ್ನು ನೀಡುತ್ತದೆ ಎಂದು ಹೇಳಿದರು, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಮೂರು ಕೋಟಿ ಮನೆಗಳ ಗುರಿಯನ್ನು ಸಾಧಿಸಲು ಹತ್ತಿರದಲ್ಲಿದೆ ಮತ್ತು ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ಅವಶ್ಯಕತೆಗಳನ್ನು ಪೂರೈಸಲು ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಹೆಚ್ಚು ಮನೆಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು. ಅದೇ ರೀತಿ, ಮೇಲ್ಛಾವಣಿ ಸೌರಶಕ್ತಿ ಬಳಕೆ ಮೂಲಕ, ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡಿದೆ ಮತ್ತು 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮ ಯೋಜನೆಯ ಔಪಚಾರಿಕೀಕರಣವು 2.4 ಲಕ್ಷ ಸ್ವಸಹಾಯ ಗುಂಪುಗಳು ಮತ್ತು ಅರವತ್ತು ಸಾವಿರ ವ್ಯಕ್ತಿಗಳಿಗೆ ಕ್ರೆಡಿಟ್ ಲಿಂಕ್ ಗಳೊಂದಿಗೆ ಸಹಾಯ ಮಾಡಿದೆ.
ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಲಾಗುವುದು ಎಂದ ಶ್ರೀಮತಿ ನಿರ್ಮಲಾ ಸೀತಾರಾಮನ್, ನಮ್ಮ ಟೆಕ್ ಪ್ರವೀಣ ಯುವಕರಿಗೆ ಇದು ಸುವರ್ಣ ಯುಗ ಎಂದು ಹೇಳಿದರು. ಈ ನಿಧಿಯು ಹಣಕಾಸು ಅಥವಾ ಮರುಹಣಕಾಸನ್ನು ದೀರ್ಘಾವಧಿ, ಅಲ್ಪಾವಧಿ ಮತ್ತು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳೊಂದಿಗೆ ಒದಗಿಸುತ್ತದೆ. ಇದು ವಿನೂತನ ವಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ರೈಲ್ವೆಗಾಗಿ, ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ -ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಬಂದರು ಸಂಪರ್ಕ ಕಾರಿಡಾರ್ ಮತ್ತು ಹೆಚ್ಚಿನ ಸಂಚಾರ ಸಾಂದ್ರತೆಯ ಕಾರಿಡಾರ್- ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗುವುದು. ಇದಲ್ಲದೆ, ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯವನ್ನು ಹೆಚ್ಚಿಸಲು ನಲವತ್ತು ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು.
ವಿಮಾನಯಾನ ವಲಯದಲ್ಲಿ, ವಿಮಾನ ನಿಲ್ದಾಣಗಳ ಸಂಖ್ಯೆ 149 ಕ್ಕೆ ದ್ವಿಗುಣಗೊಂಡಿದೆ ಮತ್ತು ಇಂದು ಐನೂರ ಹದಿನೇಳು ಹೊಸ ಮಾರ್ಗಗಳು 1.3 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳು 1000 ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಆರ್ಡರ್ ಮಾಡಿವೆ ಎಂದು ಅವರು ಹೇಳಿದರು.
ವೇಗದ ಜನಸಂಖ್ಯೆಯ ಬೆಳವಣಿಗೆ ಮತ್ತು ಜನಸಂಖ್ಯಾ ಬದಲಾವಣೆಗಳಿಂದ ಉಂಟಾಗುವ ಸವಾಲುಗಳ ವ್ಯಾಪಕ ಪರಿಗಣನೆಗೆ ಸರ್ಕಾರವು ಉನ್ನತಾಧಿಕಾರದ ಸಮಿತಿಯನ್ನು ರಚಿಸುತ್ತದೆ ಮತ್ತು ವಿಕಸಿತ ಭಾರತ ಗುರಿಗೆ ಸಂಬಂಧಿಸಿದಂತೆ ಈ ಸವಾಲುಗಳನ್ನು ಎದುರಿಸಲು ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ಕೇಳಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ನಮ್ಮ ಗಣರಾಜ್ಯದ 75 ನೇ ವರ್ಷದಲ್ಲಿ ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, “ನಾವು ಹೊಸ ಸ್ಫೂರ್ತಿಗಳು, ಹೊಸ ಪ್ರಜ್ಞೆ, ಹೊಸ ಸಂಕಲ್ಪಗಳೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಬದ್ಧರಾಗಿರುತ್ತೇವೆ, ಏಕೆಂದರೆ ದೇಶವು ಅಪಾರ ಸಾಧ್ಯತೆಗಳು ಮತ್ತು ಅವಕಾಶಗಳಿಗೆ ತೆರೆದುಕೊಳ್ಳುತ್ತದೆ” ಎಂಬ ಹೇಳಿಕೆಯನ್ನು ಎಂದು ಹಣಕಾಸು ಸಚಿವರು ಉಲ್ಲೇಖಿಸಿದರು. “ಇದು ನಮ್ಮ ‘ಕರ್ತವ್ಯ ಕಾಲʼ, 2014 ಕ್ಕೂ ಹಿಂದಿನ ಪ್ರತಿಯೊಂದು ಸವಾಲನ್ನು ನಮ್ಮ ಆರ್ಥಿಕ ನಿರ್ವಹಣೆ ಮತ್ತು ನಮ್ಮ ಆಡಳಿತದ ಮೂಲಕ ಜಯಿಸಲಾಯಿತು ಮತ್ತು ಇವು ದೇಶವನ್ನು ನಿರಂತರ ಉನ್ನತ ಬೆಳವಣಿಗೆಯ ದೃಢವಾದ ಹಾದಿಯಲ್ಲಿ ಇರಿಸಿವೆ” ಎಂದು ಅವರು ಹೇಳಿದರು.
“ಇದು ನಮ್ಮ ಸರಿಯಾದ ನೀತಿಗಳು, ನಿಜವಾದ ಉದ್ದೇಶಗಳು ಮತ್ತು ಸೂಕ್ತ ನಿರ್ಧಾರಗಳಿಂದ ಸಾಧ್ಯವಾಗಿದೆ. ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ, ನಮ್ಮ ಸರ್ಕಾರವು ‘ವಿಕಸಿತ ಭಾರತ’ ದ ಸಾಧನೆಗಾಗಿ ವಿವರವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತದೆ” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದರು.
ಭಾಗ-ಬಿ ಸಾರಾಂಶ
ಮಧ್ಯಂತರ ಬಜೆಟ್ ನಲ್ಲಿ ತೆರಿಗೆಗೆ ಸಂಬಂಧಿಸಿದ ಯಾವುದೇ ಬದಲಾವಣೆಯನ್ನು ಪ್ರಸ್ತಾಪಿಸಲಾಗಿಲ್ಲ. ಆಮದು ಸುಂಕಗಳು ಸೇರಿದಂತೆ ನೇರ ತೆರಿಗೆಗಳು ಮತ್ತು ಪರೋಕ್ಷ ತೆರಿಗೆಗಳ ಅದೇ ದರಗಳನ್ನು ಉಳಿಸಿಕೊಳ್ಳಲಾಗಿದೆ. ಆದಾಗ್ಯೂ, ತೆರಿಗೆಯಲ್ಲಿ ನಿರಂತರತೆಯನ್ನು ಒದಗಿಸಲು, ಸ್ಟಾರ್ಟ್-ಅಪ್ ಗಳಿಗೆ ಕೆಲವು ತೆರಿಗೆ ಪ್ರಯೋಜನಗಳು ಮತ್ತು ಸಾರ್ವಭೌಮ ಸಂಪತ್ತು ಅಥವಾ ಪಿಂಚಣಿ ನಿಧಿಗಳಿಂದ ಮಾಡಿದ ಹೂಡಿಕೆಗಳು ಮತ್ತು ಕೆಲವು ಐ ಎಫ್ ಸಿ ಘಟಕಗಳ ಕೆಲವು ಆದಾಯದ ಮೇಲಿನ ತೆರಿಗೆ ವಿನಾಯಿತಿಗಳನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ.
ಬಾಕಿ ಉಳಿದಿರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯುವುದು
ಶ್ರೀಮತಿ. ಸೀತಾರಾಮನ್ ಅವರು ತೆರಿಗೆ ಪಾವತಿದಾರರ ಸೇವೆಗಳನ್ನು ಸುಧಾರಿಸುವ ಘೋಷಣೆ ಮಾಡಿದರು, ಇದು ಸುಲಭವಾದ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಸರ್ಕಾರದ ದೃಷ್ಟಿಗೆ ಅನುಗುಣವಾಗಿದೆ. ಕ್ಷುಲ್ಲಕ, ಪರಿಶೀಲಿಸದ, ರಾಜಿ ಮಾಡಿಕೊಳ್ಳದ ಅಥವಾ ವಿವಾದಿತ ನೇರ ತೆರಿಗೆ ಬೇಡಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ, ಅವುಗಳಲ್ಲಿ ಹಲವು 1962 ರಷ್ಟು ಹಿಂದಿನವು, ಇವು ಪುಸ್ತಕಗಳಲ್ಲಿ ಹಾಗೆಯೇ ಉಳಿದಿವೆ, ಇದು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಆತಂಕವನ್ನು ಉಂಟುಮಾಡುತ್ತದೆ ಮತ್ತು ನಂತರದ ವರ್ಷಗಳಲ್ಲಿ ಮರುಪಾವತಿಗೆ ಅಡ್ಡಿಯಾಗುತ್ತದೆ. 2009-10ರ ಹಣಕಾಸು ವರ್ಷದವರೆಗಿನ ಅವಧಿಗೆ ಸಂಬಂಧಿಸಿದಂತೆ 25000 ರೂ. ಮತ್ತು 2010-11 ರಿಂದ 2014-15 ರವರೆಗಿನ ಹಣಕಾಸು ವರ್ಷಗಳವರೆಗೆ 10,000 ರೂ. ವರೆಗಿನ ಬಾಕಿ ಇರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಮಧ್ಯಂತರ ಬಜೆಟ್ ಪ್ರಸ್ತಾಪಿಸಿದೆ. ಇದರಿಂದ ಸುಮಾರು ಒಂದು ಕೋಟಿ ತೆರಿಗೆದಾರರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ.
ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಳ
ತೆರಿಗೆ ಪಾವತಿದಾರರ ಬೆಂಬಲಕ್ಕಾಗಿ ಅವರನ್ನು ಶ್ಲಾಘಿಸಿದ ಹಣಕಾಸು ಸಚಿವರು, ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ ಮತ್ತು ರಿಟರ್ನ್ ಸಲ್ಲಿಸುವವರು 2.4 ಪಟ್ಟು ಹೆಚ್ಚಾಗಿದ್ದಾರೆ ಎಂದು ಹೇಳಿದರು. ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಮತ್ತು ತರ್ಕಬದ್ಧಗೊಳಿಸಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ಇದರಿಂದಾಗಿ ಹೊಸ ತೆರಿಗೆ ವ್ಯವಸ್ಥೆಯಲ್ಲಿ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ತೆರಿಗೆ ಪಾವತಿದಾರರಿಗೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ. ಚಿಲ್ಲರೆ ವ್ಯಾಪಾರಗಳು ಮತ್ತು ವೃತ್ತಿಪರರಿಗೆ ಪೂರ್ವಭಾವಿ ತೆರಿಗೆಗೆ ಮಿತಿ ಹೆಚ್ಚಳದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರಗಳನ್ನು ಶೇ.30 ರಿಂದ ಶೇ.22 ಕ್ಕೆ ಮತ್ತು ಕೆಲವು ಹೊಸ ಉತ್ಪಾದನಾ ಕಂಪನಿಗಳಿಗೆ ಶೇ.15 ಕ್ಕೆ ಇಳಿಸಲಾಗಿದೆ ಎಂದು ಸಚಿವರು ಹೇಳಿದರು. ಕಳೆದ 5 ವರ್ಷಗಳಲ್ಲಿ ತೆರಿಗೆ ಪಾವತಿದಾರರ ಸೇವೆಗಳನ್ನು ಸುಧಾರಿಸುವುದು ಸರ್ಕಾರದ ಗಮನವಾಗಿದೆ, ಇದು ಹಳೆಯ ನ್ಯಾಯವ್ಯಾಪ್ತಿ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿವರ್ತಿಸಲು ಕಾರಣವಾಗಿದೆ ಮತ್ತು ತೆರಿಗೆ ರಿಟರ್ನ್ಸ್ ಸಲ್ಲಿಸುವಿಕೆಯನ್ನು ಸರಳ ಮತ್ತು ಸುಲಭಗೊಳಿಸಲಾಗಿದೆ. 2013-14ನೇ ಸಾಲಿನಲ್ಲಿದ್ದ ಸರಾಸರಿ ರಿಟರ್ನ್ಸ್ ಪ್ರಕ್ರಿಯೆಯ ಸಮಯವನ್ನು 93 ದಿನಗಳಿಂದ ಈ ವರ್ಷ ಕೇವಲ ಹತ್ತು ದಿನಗಳಿಗೆ ಇಳಿಸಲಾಗಿದೆ, ಇದರಿಂದಾಗಿ ಮರುಪಾವತಿಯನ್ನು ವೇಗವಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಜಿ ಎಸ್ ಟಿ ಯು ಅನುಸರಣೆ ಹೊರೆಯನ್ನು ಕಡಿಮೆ ಮಾಡಿದೆ
ಪರೋಕ್ಷ ತೆರಿಗೆಗಳ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಭಾರತದಲ್ಲಿ ಹೆಚ್ಚು ಚದುರಿ ಹೋಗಿದ್ದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಏಕೀಕರಿಸುವ ಮೂಲಕ ವ್ಯಾಪಾರ ಮತ್ತು ಉದ್ಯಮದ ಮೇಲಿನ ಅನುಸರಣೆ ಹೊರೆಯನ್ನು ಜಿ ಎಸ್ ಟಿ ಕಡಿಮೆ ಮಾಡಿದೆ ಎಂದು ಹೇಳಿದರು. ಪ್ರಮುಖ ಸಲಹಾ ಸಂಸ್ಥೆಯೊಂದು ನಡೆಸಿದ ಇತ್ತೀಚಿನ ಸಮೀಕ್ಷೆಯ ಕುರಿತು ಪ್ರಸ್ತಾಪಿಸಿದ ಅವರು, 94% ಉದ್ಯಮದ ಉದ್ಯಮ ನಾಯಕರು ಜಿ ಎಸ್ ಟಿ ಗೆ ಪರಿವರ್ತನೆಯನ್ನು ಹೆಚ್ಚಾಗಿ ಧನಾತ್ಮಕವಾಗಿ ನೋಡುತ್ತಾರೆ ಎಂದು ಹೇಳಿದರು. ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಸಚಿವರು ಜಿ ಎಸ್ ಟಿ ತೆರಿಗೆ ಮೂಲವು ದುಪ್ಪಟ್ಟಾಗಿದೆ ಮತ್ತು ಸರಾಸರಿ ಮಾಸಿಕ ಒಟ್ಟು ಜಿ ಎಸ್ ಟಿ ಸಂಗ್ರಹವು ಈ ವರ್ಷ 1.66 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಂಡಿದೆ ಎಂಬ ಅಂಶವನ್ನು ಎತ್ತಿ ತೋರಿಸಿದರು. ರಾಜ್ಯಗಳಿಗೂ ಇದರಿಂದ ಲಾಭವಾಗಿದೆ. 2017-18 ರಿಂದ 2022-23 ರ ಜಿ ಎಸ್ ಟಿ ನಂತರದ ಅವಧಿಯಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಪರಿಹಾರ ಸೇರಿದಂತೆ ರಾಜ್ಯಗಳ ಎಸ್ ಜಿ ಎಸ್ ಟಿ ಆದಾಯವು 1.22 ರಷ್ಟನ್ನು ಸಾಧಿಸಿದೆ. ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಕಡಿತ ಮತ್ತು ಹೆಚ್ಚಿನ ಸರಕು ಮತ್ತು ಸೇವೆಗಳ ಬೆಲೆಗಳನ್ನು ತೆರಿಗೆಗಳು ಕಡಿಮೆ ಮಾಡಿರುವುದರಿಂದ ಹೆಚ್ಚಿನ ಫಲಾನುಭವಿಗಳು ಗ್ರಾಹಕರಾಗಿದ್ದಾರೆ ಎಂದು ಸಚಿವರು ಹೇಳಿದರು. ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಲು ಕಸ್ಟಮ್ಸ್ ನಲ್ಲಿ ತೆಗೆದುಕೊಂಡ ಹಲವಾರು ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀಮತಿ ಸೀತಾರಾಮನ್ 2019 ರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಆಮದು ಬಿಡುಗಡೆ ಸಮಯವು ಇನ್ಲ್ಯಾಂಡ್ ಕಂಟೈನರ್ ಡಿಪೋಗಳಲ್ಲಿ ಶೇಕಡಾ 47 ರಷ್ಟು ಅಂದರೆ 71 ಗಂಟೆಗಳಿಗೆ, ಏರ್ ಕಾರ್ಗೋ ಕಾಂಪ್ಲೆಕ್ಸ್ಗಳಲ್ಲಿ ಶೇಕಡಾ 28 ರಷ್ಟು ಅಂದರೆ 44 ಗಂಟೆಗಳಿಗೆ ಮತ್ತು ಸಮುದ್ರ ಬಂದರುಗಳಲ್ಲಿ ಶೇಕಡಾ 27 ರಷ್ಟು ಅಂದರೆ 85 ಗಂಟೆಗಳಿಗೆ ಕಡಿಮೆಯಾಗಿದೆ ಎಂದು ಹೇಳಿದರು.
ಶ್ವೇತ್ರಪತ್ರ ಮಂಡನೆ
ಭಾರತೀಯ ಆರ್ಥಿಕತೆಯ ಸ್ಥಿತಿಯ ಕುರಿತು ಪ್ರಸ್ತಾಪಿಸಿದ ಕೇಂದ್ರ ಸಚಿವರು, 2014 ರಲ್ಲಿ ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಜವಾಬ್ದಾರಿಯು ಅಗಾಧವಾಗಿತ್ತು ಎಂದು ಹೇಳಿದರು, ‘ರಾಷ್ಟ್ರ ಮೊದಲುʼ ಎಂಬ ಬಲವಾದ ನಂಬಿಕೆಯನ್ನು ಅನುಸರಿಸಿ ಸರ್ಕಾರವು ಇದನ್ನು ಯಶಸ್ವಿಯಾಗಿ ಮಾಡಿದೆ ಎಂದು ಅವರು ಹೇಳಿದರು. ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಲಾಗಿದೆ ಮತ್ತು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಆರ್ಥಿಕತೆಯನ್ನು ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು. ‘ಆ ವರ್ಷಗಳ ದುರಾಡಳಿತದಿಂದ ಪಾಠ ಕಲಿಯುವ ಉದ್ದೇಶದಿಂದ 2014ರ ವರೆಗೆ ನಾವು ಎಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ’ಎಂಬ ವಿಷಯದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿದೆ ಎಂದು ಅವರು ಘೋಷಿಸಿದರು.
*****