DSC 1983 scaled

ತುಮಕೂರು : ಎ-ಖಾತೆ/ಬಿ-ಖಾತೆ : 3 ತಿಂಗಳ ಕಾಲಾವಧಿ ವಿಸ್ತರಣೆ…..!

DISTRICT NEWS ತುಮಕೂರು

ಎ-ಖಾತೆ/ಬಿ-ಖಾತೆ : 3 ತಿಂಗಳ ಕಾಲಾವಧಿ ವಿಸ್ತರಣೆ-ಸಚಿವ ರಹೀಮ್ ಖಾನ್
ತುಮಕೂರು(ಕ.ವಾ.)ಮೇ.14: ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆ, ನಿವೇಶನಗಳಿಗೆ ಎ-ಖಾತೆ ಮತ್ತು ಬಿ-ಖಾತೆ ಮಾಡಿಕೊಡುವ ಅವಧಿಯನ್ನು ಮತ್ತೆ 3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಮನೆ, ನಿವೇಶನಗಳಿಗೆ ದಾಖಲಾತಿ ಮಾಡಿಕೊಡುವ ಸಲುವಾಗಿ ಬಿ ಖಾತೆಯನ್ನು ಜಾರಿಗೆ ತರಲಾಗಿದ್ದು, ಈಗಾಗಲೇ 3 ತಿಂಗಳ ಅವಧಿ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಶೇ.50ರಷ್ಟು ಮಾತ್ರ ಬಿ ಖಾತೆಗಳಾಗಿರುವ ಹಿನ್ನೆಲೆಯಲ್ಲಿ ಉಳಿದವರಿಗೂ ಅನುಕೂಲ ಕಲ್ಪಿಸುವ ಸಲುವಾಗಿ ಬಿ ಖಾತೆ ಮಾಡಿಕೊಡುವ ಅವಧಿಯನ್ನು ಮತ್ತೆ 3 ತಿಂಗಳ ಕಾಲ ರಾಜ್ಯ ಸರ್ಕಾರ ವಿಸ್ತರಿಸಿದೆ ಎಂದರು.
ಕಳೆದ 30-40 ವರ್ಷಗಳಿಂದ ಯಾವುದೇ ದಾಖಲಾತಿಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಬಡ ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆ ಮೇರೆಗೆ ಸಚಿವ ಸಂಪುಟ ಹಾಗೂ ವಿಧಾನಸಭೆಯಲ್ಲಿ ಈ ಸಂಬಂಧ ಮಸೂದೆ ಮಂಡಿಸಿ ಬಿ ಖಾತೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10,000 ಎ ಖಾತೆ ಮತ್ತು 5800 ಬಿ ಖಾತೆ ಸೇರಿದಂತೆ 15800 ಎ ಮತ್ತು ಬಿ-ಖಾತೆಗಳಿವೆ ಎಂದು ಮಾಹಿತಿ ನೀಡುತ್ತಾ, ಪ್ರಸ್ತುತ 3 ತಿಂಗಳ ಅವಧಿಯಲ್ಲಿ ಶೇ.50ರಷ್ಟು ಮಾತ್ರ ಬಿ ಖಾತೆಯಾಗಿದೆ. ಉಳಿದ ಶೇ.50ರಷ್ಟು ಬಿ ಖಾತೆ ಆಗಬೇಕಾಗಿದೆ. ಹಾಗಾಗಿ ಉಳಿದವರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದರು.DSC 9813

ನಗರೋತ್ಥಾನ ಯೋಜನೆಯಡಿ 102 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಈ ಪೈಕಿ 40 ಕೋಟಿ ರೂ. ಮಾತ್ರ ಖರ್ಚಾಗಿದೆ. ಉಳಿದ ಹಣವನ್ನು ಆದಷ್ಟು ಶೀಘ್ರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವಂತೆ ಪಟ್ಟಣ ಪಂಚಾಯತಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್‍ಗಳಲ್ಲಿ ಸ್ವಚ್ಛತೆ ಕಾಪಾಡುವಂತೆಯೂ ಹಾಗೂ ಸಾರ್ವಜನಿಕರಿಗೆ ಶುಚಿ, ರುಚಿಯಾದ ಆಹಾರ ನೀಡುವಂತೆಯೂ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‍ಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆಯೂ ಸೂಚಿಸಿರುವುದಾಗಿ ಅವರು ಹೇಳಿದರು.
ಇಂದಿರಾ ಕ್ಯಾಂಟೀನ್‍ಗಳನ್ನು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೂ ಈ ಕ್ಯಾಂಟೀನ್‍ಗಳಲ್ಲಿ ಜನರಿಗೆ ತೊಂದರೆಯಾಗದಂತೆ ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಸಿ ಟಿವಿಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ನಗರೋತ್ಥಾನ ಯೋಜನೆ ಅನುಷ್ಠಾನ : ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತ್ತು – ಸಚಿವರ ಎಚ್ಚರಿಕೆ

DSC 9824

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಅನುಷ್ಠಾನ ಮಾಡುವಲ್ಲಿ ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯು ಪ್ರಾರಂಭವಾಗಿ 3 ವರ್ಷಗಳು ಕಳೆದರೂ ಕುಣಿಗಲ್ ಪುರಸಭೆಯಲ್ಲಿ ಕೇವಲ ಶೇ.14ರಷ್ಟು ಮಾತ್ರ ಭೌತಿಕ ಸಾಧನೆಯಾಗಿದೆ. ಕಾರಣವೇನೆಂದು ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಅನುಮೋದನೆ ನೀಡಿದ 27 ಕಾಮಗಾರಿಗಳ ಪೈಕಿ ಕೇವಲ 4 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದ್ದು, 6 ಕಾಮಗಾರಿಗಳು ಇನ್ನೂ ಟೆಂಡರು ಪ್ರಕ್ರಿಯೆ ಹಂತದಲ್ಲಿವೆ. ಇದೇ ರೀತಿ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಕ್ರಮವಿಡಲಾಗುವುದು ಎಂದು ಖಡಕ್ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಕುಡಿಯುವ ನೀರು, ಸ್ವಚ್ಛತಾ ಕಾಮಗಾರಿಗಳಿಗಾಗಿ ಜಿಲ್ಲೆಗೆ ಈವರೆಗೂ ಒಟ್ಟು 44.71 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ ಈ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಬೇಕಾಗಿತ್ತು. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಮಟ್ಟಕ್ಕೆ ಯೋಜನೆ ಪ್ರಗತಿಯಾಗಿಲ್ಲವೆಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿ ವಿಳಂಬಕ್ಕೆ ಸಚಿವರು ಕಾರಣ ಕೇಳಿದಾಗ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ ಅವರು ಗುತ್ತಿಗೆದಾರರಿಂದ ಟೆಂಡರು ಅರ್ಜಿಗಳು ಸಲ್ಲಿಕೆಯಾಗದಿರುವುದರಿಂದ ಕಾಮಗಾರಿ ಕೈಗೊಳ್ಳಲು ತಡವಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಿವಿಲ್ ಕಾಮಗಾರಿಗಳಿಗೆ ನಾಮುಂದು-ತಾಮುಂದು ಎಂದು ಟೆಂಡರ್ ಸಲ್ಲಿಸಲು ಗುತ್ತಿಗೆದಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸಭೆಗೆ ತಪ್ಪು ಮಾಹಿತಿ ನೀಡಿದರೆ ನಾನು ಸಹಿಸುವುದಿಲ್ಲ. ವಿಳಂಬಕ್ಕೆ ಯಾವುದೇ ನೆಪ ಹೇಳದೆ ಆಗಸ್ಟ್ ಮಾಹೆಯೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಸೂಚನೆ ನೀಡಿದರು.
ಮುಂದಿನ ಮಾರ್ಚ್-2026ಕ್ಕೆ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಜನವರಿ-2026ರೊಳಗೆ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಿಗಧಿತ ಅವಧಿಯೊಳಗೆ ಟೆಂಡರು ಪ್ರಕ್ರಿಯೆಯನ್ನೂ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಎಲ್ಲಾ ವಾರ್ಡುಗಳಿಗೆ ಪ್ರತೀ ದಿನ ನೀರು ಸರಬರಾಜು ಮಾಡಲು ಎಲ್ಲಾ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾವಗಡ ಪುರಸಭೆಯ 2 ವಾರ್ಡುಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತೀ ದಿನ ಬೆಳಿಗ್ಗೆ ಹಾಗೂ ಸಂಜೆ ಕ್ಷೇತ್ರಗಳಿಗೆ ಭೇಟಿ ನಿಡಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಚಿವರು ಮುಂದುವರೆದು ಮಾತನಾಡಿ, ನಗರ ಪ್ರದೇಶ ವ್ಯಾಪ್ತಿಯಲ್ಲಿ ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ, ಜೀವಹಾನಿ ಉಂಟಾದ ಯಾವುದೇ ಪ್ರಕರಣ ವರದಿಯಾದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ನಮಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರಲ್ಲದೆ, ನಾಗರಿಕರಿಗೆ ಶುದ್ಧ ನೀರು ಪೂರೈಕೆ ಮಾಡುವುದು ಅಧಿಕಾರಿಗಳ ಹೊಣೆ. ನಿರಂತರವಾಗಿ ಕುಡಿಯುವ ನೀರಿನ ಕ್ಲೋರಿನೇಷನ್ ಆಗಬೇಕು. ಓವರ್ ಹೆಡ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸಬೇಕು. ಸಿವಿಲ್ ಕಾಮಗಾರಿ ಕೈಗೊಳ್ಳುವಾಗ ಒಳಚರಂಡಿ ನೀರು ಕುಡಿಯುವ ನೀರಿನ ಕೊಳವೆ ಮಾರ್ಗಕ್ಕೆ ಮಿಶ್ರಣವಾಗದಂತೆ ಜಾಗರೂಕತೆವಹಿಸಬೇಕು. ಕುಡಿಯುವ ನೀರಿನ ಪೈಪು ಹಾಗೂ ಒಳ ಚರಂಡಿ ಮಾರ್ಗಕ್ಕೂ ಅಂತರವಿರುವಂತೆ ಕಾಮಗಾರಿ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
ಪೌರಾಡಳಿತ ಇಲಾಖೆಯು ಜನರ ಸೇವೆಗಾಗಿ ಬದ್ಧವಾಗಿರಬೇಕು. ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್‍ಗಳನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದಾಗ ಸಚಿವರು ಮಾತನಾಡಿ ಇಂದಿರಾ ಕ್ಯಾಂಟೀನ್‍ಗಳಲ್ಲಿ ಗುತ್ತಿಗೆದಾರರು ಊಟ ಮಾಡುವವರ ಲೆಕ್ಕವನ್ನು ತಪ್ಪಾಗಿ ನೀಡಿ ಸುಳ್ಳು ಬಿಲ್ ಮಾಡಿಕೊಳ್ಳುವುದನ್ನು ತಡೆಯಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಸುಳ್ಳು ಬಿಲ್ಲುಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಪೌರ ಕಾರ್ಮಿಕರ ನೇಮಕಾತಿ ಹಾಗೂ ವೇತನ ಪಾವತಿ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಎಸ್‍ಎಫ್‍ಸಿ, 15ನೇ ಹಣಕಾಸು, ಸ್ವಚ್ಛ ಭಾರತ್ ಮಿಷನ್ ಯೋಜನೆ, ತೆರಿಗೆ ವಸೂಲಾತಿ, ಎ-ಖಾತಾ/ಬಿ-ಖಾತಾ, ಕುಡಿಯುವ ನೀರಿನ ಕಾಮಗಾರಿ, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಪೌರಾಡಳಿತ ಇಲಾಖೆಯ ಮುಖ್ಯ ಇಂಜಿನಿಯರ್ ರಾಧಾಕೃಷ್ಣ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳು ಮತ್ತಿತರರು ಹಾಜರಿದ್ದರು.