IMG 20200922 WA0018

ರೈತ ವಿರೋಧಿ ಕಾನೂನು: ವಿನಾಶ ಕಾಲಕ್ಕೆ ವಿಪರೀತ ಬುದ್ದಿ…!

STATE Genaral

 

ಬೆಂಗಳೂರು : ರೈತ ವಿರೋಧಿ ಕಾನೂನು: ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎಂಬಂತಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ಎಂದು ಕಟುವಾಗಿ ಟೀಕಿಸಿದ್ದಾರೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ.

ಬೆಂಗಳೂರಿನ ಪ್ರೀಡಮ್ ಪಾರ್ಕಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ  ರೈತರಿಗೆ ನೈತಿಕ‌ಬೆಂಬಲ ನೀಡಿ ಮಾತನಾಡಿದರು.

• ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ರೈತರ ಒಕ್ಕಲೆಬ್ಬಿಸಿ ಕೃಷಿ ಭೂಮಿಯನ್ನು ಕಾರ್ಪೋರೇಟ್ ಧಣಿಗಳಿಗೆ ಒಪ್ಪಿಸುವ ದುರುದ್ದೇಶದಿಂದಲೇ ರೈತರ ಹಿತಾಸಕ್ತಿ ರಕ್ಷಿಸುತ್ತಿದ್ದ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತಿದೆ.
• ಭೂಸುಧಾರಣೆ ಮತ್ತು ಎಪಿಎಂಸಿ ಕಾನೂನು ತಿದ್ದುಪಡಿಯ ಸುಗ್ರೀವಾಜ್ಞೆಯೂ ಸೇರಿದಂತೆ ಎಲ್ಲ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಸುತ್ತಿರುವ ರೈತ,ದಲಿತ ಮತ್ತು ಕಾರ್ಮಿಕರ ಐಕ್ಯ ಹೋರಾಟಕ್ಕೆ ನನ್ನ ಬೆಂಬಲ ಇದೆ, ಅನ್ನದಾತನ ರಕ್ಷಣೆ ನಮ್ಮೆಲ್ಲರ ಕರ್ತವ್ಯ
• ಕೊರೊನಾ ಸೋಂಕಿನಿಂದಾಗಿ ಜನ ಸಾವು-ನೋವಿಗೀಡಾಗಿ ದಿಕ್ಕುತೋಚದಂತಿದ್ದಾರೆ. ಇಂತಹ ಸೂತಕದ ದಿನಗಳಲ್ಲಿ ಈ ರೀತಿ ರೈತ ವಿರೋಧಿ,ಕಾರ್ಮಿಕ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ತರಲು ಮನುಷ್ಯತ್ವ ಇಲ್ಲದ ಸರ್ಕಾರಕ್ಕೆ ಮಾತ್ರ ಸಾಧ್ಯ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ
• ಕೊರೊನಾ ನಂತರದ ಬದುಕಿನ ಏಕೈಕ ಆಶಾಕಿರಣ ಕೃಷಿಕ್ಷೇತ್ರ ಎಂದು ಜ್ಞಾನೋದಯವಾಗುವ ಹೊತ್ತಿನಲ್ಲಿಯೇ ಅದನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡವಳಿಕೆ ಕೊರೊನಾ ವೈರಸ್ ಗಿಂತಲೂ ಮಾರಣಾಂತಿಕ.
• ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಪ್ರಮುಖ ಬೆಳೆಗಳನ್ನು ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡುವ ತಿದ್ದುಪಡಿ, ಬೀಜ-ಗೊಬ್ಬರಗಳ ಮೇಲೆ ಜಿಎಸ್ ಟಿ.. ಹೀಗೆ ರೈತರ ಮೇಲೆ ಪ್ರಹಾರ ಮಾಡುತ್ತಾ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ರೈತರಿಂದ ಭೂಮಿಯನ್ನೇ ಕಿತ್ತುಕೊಳ್ಳಲು ಹೊರಟಿವೆ.
• ಕೃಷಿ ಕ್ಷೇತ್ರದ ತಿದ್ದುಪಡಿ ಗಳು ಹೊಸತೂ ಅಲ್ಲ, ಅಕಸ್ಮಿಕವೂ ಅಲ್ಲ ಇವು ಈಗಾಗಲೇ ನರೇಂದ್ರ ಮೋದಿ ಸರ್ಕಾರ ಜಾರಿ ಮಾಡುತ್ತಿರುವ ಹಲವಾರು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಕೃಷಿ ನೀತಿಗಳ ಭಾಗವಾಗಿದೆ

IMG 20200922 WA0016
• ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ರೈತರ ಹಿತದೃಷ್ಟಿಯ ಲವಲೇಶವೂ ಇಲ್ಲ.
• ಈ ತಿದ್ದುಪಡಿಗಳಿಂದಾಗಿ ಭಾರತದ ಕೃಷಿಕ್ಷೇತ್ರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳು (MNC) ಗಳ ಹಿಡಿತ ಹೆಚ್ಚಾಗಲಿದೆ. ಭಾರತದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಕ್ರಮೇಣ ನಾಶವಾಗುತ್ತದೆ.
• ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನಷ್ಟು ಬಲಪಡಿಸಿದ್ದರು. ಯಡಿಯೂರಪ್ಪ ಅವರ ಸರ್ಕಾರ ಉಳುವವನನ್ನು ಒಕ್ಕಲೆಬ್ಬಿಸಲು ಹೊರಟಿದೆ.
• ಹಸಿರು ಶಾಲು ಹೊದ್ದುಕೊಂಡು ತಾನೊಬ್ಬ ರೈತ ನಾಯಕ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಬಿ.ಎಸ್ ಯಡಿಯೂರಪ್ಪ ಅವರ ಮುಖವಾಡ ಕಳಚಿ ಬಿದ್ದಿದೆ. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರನ್ನು ಗುಂಡಿಕ್ಕಿ ಕೊಂದರು, ಈಗ ಅವರಿಂದ ಭೂಮಿ ಕಿತ್ತುಕೊಂಡು ಸಾಯಿಸಲು ಹೊರಟಿದ್ದಾರೆ.
• ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯೂ ಸೇರಿದಂತೆ ರೈತವಿರೋಧಿಯಾದ ಎಲ್ಲ ಮಸೂದೆಗಳನ್ನು ನಮ್ಮ ಪಕ್ಷ ಸದನದ ಒಳಗೆ ಮತ್ತು ಹೊರಗೆ ಬಲವಾಗಿ ವಿರೋಧಿಸಲಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ರೈತರಿಗೆ ತಿಳುವಳಿಕೆ ನೀಡಿ ಗ್ರಾಮೀಣ ಮಟ್ಟದಿಂದಲೇ ಹೋರಾಟವನ್ನು ರೂಪಿಸಲು ನಿರ್ಧರಿಸಿದ್ದೇವೆ. ಬಿಜೆಪಿಯ ರೈತವಿರೋಧಿ ನೀತಿಯನ್ನು ಮನೆಮನೆಗೂ ಮುಟ್ಟಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.