IMG 20260902 WA0007

ಪಾವಗಡ : ಪಿ. ಎಂ. ಕಿಸಾನ್: ಬಯೋಮೆಟ್ರಿಕ್ / ಫೇಸ್ ಇ-ಕೆವೈಸಿ ಕಡ್ಡಾಯ…!

Genaral STATE

ಪಿ. ಎಂ. ಕಿಸಾನ್: ಬಯೋಮೆಟ್ರಿಕ್ / ಫೇಸ್ ಇ-ಕೆವೈಸಿ ಕಡ್ಡಾಯ.

ಪಾವಗಡl: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮುಂದಿನ ಕಂತಿನ ಹಣ ಪಡೆಯಲು ಬಯೋಮೆಟ್ರಿಕ್ / ಫೇಸ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಜಯ್ ಕುಮಾರ್ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ತಡೆಗಟ್ಟಲು ಮತ್ತು ಪಾರದರ್ಶಕವಾಗಿ ಪ್ರೋತ್ಸಾಹಧನ ವಿತರಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇ-ಕೆವೈಸಿ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಪಾವಗಡ ತಾಲ್ಲೂಕಿನ 22,736 ರೈತರಿಗೆ ಮುಂದಿನ ಕಂತಿನ ಹಣ ಕೈತಪ್ಪಲಿದೆ. ಸೆಪ್ಟೆಂಬರ್‌ನಲ್ಲಿ ಯೋಜನೆಯ 21ನೇ ಕಂತು ಬಿಡುಗಡೆಯಾಗಲಿದೆ.

ಕೇಂದ್ರ ಸರ್ಕಾರದ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ನಂತೆ ವಾರ್ಷಿಕ ಮೂರು ಕಂತುಗಳಲ್ಲಿ ತಲಾ 6 ಸಾವಿರ ರೂ.ಗಳನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

2019ರ ಫೆಬ್ರವರಿ 1ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಸಣ್ಣ, ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರ ಕುಟುಂಬಗಳಿಗೆ ಈ ಸೌಲಭ್ಯ ನೀಡಲಾಗುತ್ತಿದೆ. ಇದುವರೆಗೆ ಒಟಿಪಿ ಆಧಾರಿತ ಇ-ಕೆವೈಸಿ ಇತ್ತು. ಇದರಿಂದ ಮೃತಪಟ್ಟ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆಯಾದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ, ಈಗ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾತ್ರ ಕಡ್ಡಾಯಗೊಳಿಸಲಾಗಿದೆ.

*ಇ-ಕೆವೈಸಿ ಮಾಡಿಸುವುದು ಹೇಗೆ?*

*1.* ರೈತರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಪಿಎಂ ಕಿಸಾನ್ APP’ ಡೌನ್‌ಲೋಡ್ ಮಾಡಿಕೊಂಡು ಮುಖದ ಗುರುತಿನ (Face Authentication) ಮೂಲಕ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.

*2.* ಆಧಾರ್ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಹತ್ತಿರದ ಸಿಎಸ್‌ಸಿ (ನಾಗರಿಕ ಸೇವಾ ಕೇಂದ್ರ) ಗೆ ತೆರಳಿ ಬೆರಳಚ್ಚು (Biometric) ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ಮುಖ ದೃಢೀಕರಣ ಆಧಾರಿತ ಇ-ಕೆವೈಸಿಗೆ ಪ್ರತಿ ಗ್ರಾಮದ ವಿಲ್ಲೇಜ್ ನೋಡಲ್ ಆಫೀಸರ್ (VNO), ಕೃಷಿ ಸಖಿ, ಪಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಜಯ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *