images 1

Covid 19; ಜನ ಭಯಪಡುವ ವಾತಾವರಣ ನಿರ್ಮಾಣವಾಗಿದೆ….!

STATE Genaral

 

*ಕೊರೋನಾ ಸೋಂಕಿನ ಚಿಕಿತ್ಸೆಗೆ ಜನಸಾಮಾನ್ಯ ಭಯಪಡುವಂತಹ ವಾತಾವರಣ ಸೃಷ್ಟಿಸುತ್ತಿರುವ ಸರ್ಕಾರ: ಆಮ್ ಆದ್ಮಿ ಪಕ್ಷದ ಆರೋಪ*

ಬೆಂಗಳೂರು: –  ಕೊರೋನಾ ಜತೆ ಬದುಕಲು ಕಲಿಯಿರಿ ಎಂದು ಹೇಳಿ ಜನಸಾಮಾನ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಸರ್ಕಾರ ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯವನ್ನು ಒದಗಿಸದ ಹೀನ ಸ್ಥಿತಿಗೆ ತಲುಪಿದೆ.

ವರದಿಯ ಪ್ರಕಾರ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದನ್ನು ಗಮನಿಸಿದರೆ ಸರ್ಕಾರ ರೋಗ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ರಾಜಧಾನಿಯಲ್ಲಿ ಪ್ರತಿ ದಿನ ಕೊರೋನಾ ಸೋಂಕಿತರು ಹಾಸಿಗೆ ಸಿಗದೆ, ಹಾಸಿಗೆ ಸಿಕ್ಕರೂ ಸರಿಯಾದ ಸಮಯಕ್ಕೆ ಐಸಿಯು, ವೆಂಟಿಲೇಟರ್, ಆಮ್ಲಜನಕ ಸಿಗದೆ ಸಾಯುತ್ತಿದ್ದಾರೆ.

ಕೊರೋನಾ ಸೋಂಕು ಮೊದಲು ಹಾನಿ ಮಾಡುವುದೇ ಶ್ವಾಸಕೋಶಕ್ಕೆ, ಆದರೂ ಈ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಪರಿಜ್ಞಾನ ಇಲ್ಲ. ಆಕ್ಸಿಜನ್ ಸಿಲಿಂಡರ್‌ಗಳ ಬೆಲೆ ಹೆಚ್ಚಳವಾಗುತ್ತಿದೆ, ಪೂರೈಕೆ ಕಡಿಮೆ ಇದೆ, ಹೀಗಿದ್ದರೂ ಸರ್ಕಾರ ಯಾರ ಮರ್ಜಿಗೆ ಒಳಗಾಗಿ ಸುಮ್ಮನೆ ಕುಳಿತಿದೆ ಎನ್ನುವುದೇ ಯಕ್ಷ ಪ್ರಶ್ನೆ.

ಸೋಂಕಿನ ಬಗ್ಗೆ ಇನ್ನೂ ಭಯ ಭೀತರಾಗಿರುವ ಜನರು “ಸೋಂಕಿನ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಹೆದರಿ ಮನೆಯಲ್ಲೆ ಉಳಿಯುತ್ತಿರುವ ಕಾರಣ ಸರಿಯಾದ ಚಿಕಿತ್ಸೆ ದೊರೆಯದೆ ರೋಗ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಿರುವ ಕಾರಣ ಸಾಯುತ್ತಿದ್ದಾರೆ.

ಜನಸಾಮಾನ್ಯನಿಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲದಿರುವುದೇ ಇಷ್ಟೆಲ್ಲಾ ಅವಗಡಗಳಿಗೆ ಕಾರಣ.

ಈಗಲೂ ಸೋಂಕಿತರನ್ನ ಕೀಳಾಗಿ ನೋಡಲಾಗುತ್ತಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಲೂಟಿ ಮಾಡಲಾಗುತ್ತಿದೆ, ಇದಕ್ಕೆಲ್ಲ ಹೆದರಿರುವ ಜನ ಉದ್ಯೋಗ ಅವಕಾಶಗಳಿದ್ದರೂ ಬೆಂಗಳೂರಿಗೆ ಬರಲು ಹೆದರುತ್ತಿದ್ದಾರೆ. ಇದರಿಂದ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಕೌಶಲ ಆಧಾರಿತ ಕಾರ್ಮಿಕರು, ಸಹಾಯಕರು ಸಿಗದೆ ಸಣ್ಣ, ಸಣ್ಣ, ಕಾರ್ಖಾನೆಗಳು ಬಾಗಿಲು ಹಾಕಿವೆ. ಇಷ್ಟೆಲ್ಲಾ ಅವಘಡಗಳಿಗೆ ಸರ್ಕಾರದ ಕೆಟ್ಟ ನಿರ್ವಹಣೆ ಹಾಗೂ ಆಡಳಿತ ವೈಫಲ್ಯವೇ ಕಾರಣ ಎಂದು ಆಮ್ ಆದ್ಮಿ ಪಕ್ಷ ಆರೋಪಿಸುತ್ತದೆ.

ಆಮ್ ಆದ್ಮಿ ಪಕ್ಷ ಬೆಂಗಳೂರು ನಗರದಾದ್ಯಂತ “ಆಪ್ ಕೇರ್” “ಆಕ್ಸಿ ಮಿತ್ರ” ಅಭಿಯಾನ ನಡೆಸಿದ ವೇಳೆ ಪಲ್ಸ್ ಆಕ್ಸಿ ಮೀಟರ್ ಮೂಲಕ ದೇಹದ ಆಮ್ಲಜನಕ ಪ್ರಮಾಣ ಪರೀಕ್ಷೆ ನಡೆಸಿದಾಗ *10 ಜನರಲ್ಲಿ 4 ಜನಕ್ಕೆ 90 ಕ್ಕಿಂತಲೂ ಕಡಿಮೆ ಪ್ರಮಾಣ ಕಂಡುಬಂದಿತ್ತು*. ಈ ಅಪಾಯಕಾರಿ ಸಂಗತಿಯನ್ನು ಸರ್ಕಾರಕ್ಕೆ ತಿಳಿಸಿದ್ದರೂ ಸಹ ಇದುವರೆಗೂ ಕಿಂಚಿತ್ತೂ ಗಮನಹರಿಸಿಲ್ಲ. ಜನಸಾಮಾನ್ಯರಿಗೆ ಈ ವಿಚಾರದ ಬಗ್ಗೆ ತಿಳುವಳಿಕೆ ಇಲ್ಲ, ಈಗಾಗಲೇ ಕರ್ನಾಟಕದಲ್ಲಿ ಸುಮಾರು 8 ಸಾವಿರ ಜನ ಕೊರೋನಾ ಸೋಂಕಿನಿಂದ ಮರಣ ಹೊಂದಿದ್ದಾರೆ, ಇಡೀ ದೇಶದಲ್ಲಿ ಹೆಚ್ಚು ಮರಣ ಹೊಂದಿದವರ ಪಟ್ಟಿಯಲ್ಲಿ ಕರ್ನಾಟಕ 3 ಸ್ಥಾನದಲ್ಲಿದೆ.

ಇಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದರೂ ಸಹ ಕರ್ನಾಟಕದ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ನಾಯಕರುಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಈಗಲಾದರೂ ಎಚ್ಚೆತ್ತುಕೊಂಡು ಆಮ್ಲಜನಕ ಪೂರೈಕೆಗೆ ಸರ್ಕಾರ ಗಮನ ಹರಿಸಬೇಕು ಹಾಗೂ ಪ್ರತಿ ಮನೆಗೆ ಪಲ್ಸ್ ಆಕ್ಸಿ ಮೀಟರ್‌ ಗಳನ್ನು ನೀಡಬೇಕು.
ಪ್ರಸ್ತುತ ಆಸ್ಪತ್ರೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ವಿವರ ದೊರೆಯುತ್ತಿದೆ.ಆದರೆ ಚಿಕಿತ್ಸೆಗೆ ಹೆದರಿ ಮನೆಯಲ್ಲೇ ಉಳಿದುಕೊಂಡು ಮರಣ ಹೊಂದುತ್ತಿರುವವರ ಪ್ರತಿ ದಿವಸದ ವಿವರವನ್ನೂ ಸರ್ಕಾರ ನೀಡುತ್ತಿಲ್ಲ, ಇದನ್ನೂ ಸಹ ಸರ್ಕಾರ ಜನರ ಮುಂದೆ ಇಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.