“ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ ಪ್ರಗತಿಯ ರಥ” ಕಾರ್ಯಕ್ರಮ ಉದ್ಘಾಟಿಸಿ ಪ್ರಜಾಪ್ರಭುತ್ವ ಹಾಗೂ ಗ್ಯಾರಂಟಿ ಯೋಜನೆಗಳ ಮಹತ್ವ ಸಾರಿದ ನಾಯಕರುಗಳು
ಬೆಂಗಳೂರು ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ): ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡುವ ಮೂಲಕ ಬಲಿಷ್ಠ ಮತ್ತು ದೃಢ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ನವ ಸಂಕಲ್ಪ ತೊಟ್ಟಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ತಮ್ಮ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿಂದು ನಡೆದ “ದೃಢ ಕರ್ನಾಟಕದ ಸಂಕಲ್ಪ: ಶತಕದ ಪಥ, ಪ್ರಗತಿಯ ರಥ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು ಮತ್ತು ಕೃಷಿ ವಲಯಕ್ಕೆ ಹೊಸ ಉತ್ತೇಜನ, ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಉಳುಮೆ ಸೌಲಭ್ಯ ಕಲ್ಪಿಸುವ ‘ಮುಖ್ಯಮಂತ್ರಿಗಳ ನೇಗಿಲ ಯೋಗಿ’ ಯೋಜನೆ ಜಾರಿಯಾಗಲಿದೆ. ರಸ್ತೆ ಬದಿಯಲ್ಲಿ ತೇಗದ ಸಸಿ ನೆಟ್ಟು ಪೆÇೀಷಿಸುವ ರೈತರಿಗೆ ಕಟಾವಿನ ಸಮಯದಲ್ಲಿ ಶೇ. 70ರಷ್ಟು ಆದಾಯ ನೀಡುವ ‘ತೇಗದ ಸಿರಿ’ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸುವ ‘ಗ್ರಾಮಾನುಭವ’ ಯೋಜನೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಿದರು.
ಭೂರಹಿತರು ಹಾಗೂ ಯುವಜನರ ಸಬಲೀಕರಣ :
ಗ್ರಾಮೀಣ ಭಾಗದ ಮನೆರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಸೇರಿದಂತೆ ಎಲ್ಲಾ ಜಾತಿ ಮತ್ತು ಧರ್ಮದ ಮನೆರಹಿತ ಬಡವರಿಗೆ ಉಚಿತ ಮನೆ ಹಾಗೂ ನಿವೇಶನ ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತರಿಗೆ ಪ್ರಸ್ತುತ ವರ್ಷ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಯುವ ಸಮುದಾಯಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ‘ಭಾರತ ಜೋಡೋ ಯುವ ಸಂಘ’ ಸಂಘಟಿಸುವ ಸಲುವಾಗಿ ವಾರ್ಷಿಕ 1,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರತಿ ಉದ್ಯೋಗಕ್ಕೆ 2,500 ರೂ. ನೀಡುವ ‘ಉದ್ಯೋಗ ನಿಧಿ’ ಹಾಗೂ ಖಾಸಗಿ ವಲಯದ ಉದ್ಯೋಗಾವಕಾಶಗಳಿಗೆ ತರಬೇತಿ ನೀಡುವ ‘ಯುವ ಉದ್ಯೋಗ ಸೇತು’ ಯೋಜನೆಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ, ಎಐ ಮತ್ತು ಕೈಗಾರಿಕಾ ಪ್ರಗತಿ:
ಸರ್ಕಾರಿ ಶಾಲೆಗಳಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಶೇ 7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ವಿಶ್ವ ಬ್ಯಾಂಕ್ ಹಾಗೂ ಸಿ.ಎಸ್.ಆರ್. ನೆರವಿನೊಂದಿಗೆ 1,000 ಕೆಪಿಎಸ್ (KPS) ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುವುದು. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಜ್ಜೆಯಿಡಲು ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪ್ರಾಯೋಜಿತ ‘ಎಐ ವಿಶ್ವವಿದ್ಯಾಲಯ’ ಸ್ಥಾಪಿಸಲಾಗುತ್ತಿದ್ದು, 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು
ಕೈಗಾರಿಕಾ ವಲಯದಲ್ಲಿ 100 ದಿನಗಳಲ್ಲಿ 43,214 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅನಿವಾಸಿ ಭಾರತೀಯರನ್ನು (NRI) ಪ್ರೋತ್ಸಾಹಿಸಲು ಹಾಗೂ ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ಪ್ರತ್ಯೇಕ ಸಚಿವಾಲಯಗಳನ್ನು ರಚಿಸಲಾಗುವುದು ಎಂದರು.
ಸಾಧನೆಯ ರಿಪೋರ್ಟ್ ಕಾರ್ಡ್:
2037ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್‍ಗೆ ಏರಿಸುವ ಮಹಾ ಸಂಕಲ್ಪವನ್ನು ಸಿಎಂ ವ್ಯಕ್ತಪಡಿಸಿದರು. ಪ್ರಜಾಸೇವೆ ಇಲಾಖೆ ಮತ್ತು 6ನೇ ಗ್ಯಾರಂಟಿ ‘ಭೂಮಿ ಗ್ಯಾರಂಟಿ’ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ ಹಾಗೂ ಪೋಡಿ ಮುಕ್ತಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಒಟ್ಟು 1,45,416 ಕೋಟಿ ರೂ. ವಿನಿಯೋಗಿಸಲಾಗಿದ್ದು, 2.70 ಕೋಟಿ ಫಲಾನುಭವಿಗಳಿಗೆ ನೆರವು ತಲುಪಿದೆ. ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ 76,951 ಕೋಟಿ ರೂ., ಗೃಹಜ್ಯೋತಿಗೆ 30,522 ಕೋಟಿ ರೂ., ಅನ್ನಭಾಗ್ಯಕ್ಕೆ 21,054 ಕೋಟಿ ರೂ., ಹಾಗೂ ಶಕ್ತಿ ಯೋಜನೆಯಡಿ 821 ಕೋಟಿ ಉಚಿತ ಪ್ರಯಾಣಕ್ಕಾಗಿ 15,735 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ 2.53 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಜಿಡಿಪಿ ಶೇ 8.1ರಷ್ಟು ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶಂಸೆ
ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೊಸ ಚಿಂತನೆಗಳೊಂದಿಗೆ ಹೊಸ ಕಾರ್ಯಕ್ರಮಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸರ್ಕಾರ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಿದರು.
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ “ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ ಪ್ರಗತಿಯ ರಥ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಸರ್ಕಾರ ನೀಡಿದ ವಾಗ್ದಾನಗಳನ್ನು ಈಡೇರಿಸಿ ಅಸಮಾನತೆಯನ್ನು ಹೋಗಲಾಡಿಸುವುದು ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.
ವಿರೋಧ ಪಕ್ಷಗಳ ಟೀಕೆಗಳ ನಡುವೆಯೂ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಬಡ ಜನರಿಗೆ ತಲುಪಿಸಲಾಗಿದೆ. 165 ಪ್ರಣಾಳಿಕೆ ಭರವಸೆಗಳಲ್ಲಿ 158ಕ್ಕೂ ಹೆಚ್ಚು ಈಡೇರಿಸಲಾಗಿದೆ.
ಬರ ಪರಿಹಾರ ಹಾಗೂ ಕೇಂದ್ರದ ಧೋರಣೆ:
ರಾಜ್ಯದ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ನೀಡಲಿಲ್ಲ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವೇ ರೂ. 3,500 ಕೋಟಿ ಬಿಡುಗಡೆ ಮಾಡಿತು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಪ್ರಜಾ ಸೇವೆ: ಪ್ರತಿಯೊಬ್ಬ ಸಚಿವರೂ ತಮ್ಮ ಜಿಲ್ಲೆಗಳಲ್ಲಿ ‘ಜನಸಂದರ್ಶನ’ ನಡೆಸುವ ಮೂಲಕ ಜನರ ಕುಂದುಕೊರತೆ ಆಲಿಸಬೇಕು ಎಂದು ಕರೆ ನೀಡಿದರು.
ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ. ಕೆ. ಶಿವಕುಮಾರ್ – ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ
• ಸಿದ್ದರಾಮಯ್ಯನವರು ಹಾಕಿಕೊಟ್ಟ ಪಥದಲ್ಲಿ ನಮ್ಮ ಸರ್ಕಾರದ ಹೆಜ್ಜೆ
• ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ಈ ಕಾರ್ಯಕ್ರಮವೇ ಉತ್ತರ ; ಕರ್ನಾಟಕದ ಪ್ರಗತಿ, ದೇಶದ ಪ್ರಗತಿ- ಡಿ.ಸಿ.ಎಂ
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ಹೊಸ ಆಲೋಚನೆಗಳು ಹಾಗೂ ಜನಪರವಾದ ಕಾರ್ಯಕ್ರಮಗಳನ್ನು ಕೇವಲ ನೂರು ದಿನಗಳಲ್ಲಿ ರಾಜ್ಯದ ಜನತೆಗೆ ತಲುಪಿಸುವ ಕಾರ್ಯ ಮಾಡಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ರಾಜ್ಯ ಸರ್ಕಾರದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದ ವಾತಾವರಣವಿರುವುದರಿಂದ ಆಡಂಬರದ ಸಂಭ್ರಮಾಚರಣೆ ಮಾಡದೆ, ಸರಳವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಬರ ಪರಿಹಾರ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ :
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನು 100ಕ್ಕೂ ಹೆಚ್ಚು ತಾಲ್ಲೂಕುಗಳ ಅಧ್ಯಯನ ನಡೆಯುತ್ತಿದೆ. ಹಿಂದೆ ಬಂದಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ರಾಜ್ಯಕ್ಕೆ ಸಂಭವಿಸಿದ್ದ ರೂ. 39,000 ಕೋಟಿ ನಷ್ಟಕ್ಕೆ ಕೇಂದ್ರದಿಂದ ರೂ. 18,000 ಕೋಟಿ ಪರಿಹಾರ ಕೋರಿದ್ದರೂ ಸ್ಪಂದನೆ ಸಿಗದೆ, ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ರೂ. 3,454 ಕೋಟಿ ಪಡೆಯಬೇಕಾಯಿತು. ಜಿಎಸ್‍ಟಿ ಪರಿಹಾರ ಸ್ಥಗಿತ, 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಕಡಿತ ಹಾಗೂ ಜೆಜೆಎಂ ಅನುದಾನ ಬಾಕಿಯಿಂದ ರಾಜ್ಯಕ್ಕೆ ಭಾರಿ ನಷ್ಟವುಂಟಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ಆರ್ಥಿಕ ದೃಷ್ಟಿಕೋನ ಮತ್ತು 11ಜಿ ಮಾದರಿ :
ಇಷ್ಟೇಲ್ಲಾ ಸಂಕಷ್ಟಗಳ ನಡುವೆಯೂ 16 ಬಜೆಟ್‍ಗಳನ್ನು ನೀಡಿದ ನಾಯಕರಾದ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಆರೋಗ್ಯಕರವಾಗಿ ಇಟ್ಟಿದ್ದಾರೆ. ರೂ. 1,50,126 ಕೋಟಿ ವೆಚ್ಚದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಇವು ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ ಪಡೆದಿವೆ. ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರು ಶಕ್ತಿ ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಅಲ್ಲಿ 50% ರಿಯಾಯಿತಿ ದರದಲ್ಲಿ ಜಾರಿ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ್ದ 590 ಭರವಸೆಗಳಲ್ಲಿ ಈಗಾಗಲೇ 245ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ. ಸಿದ್ದರಾಮಯ್ಯನವರು ಪ್ರತಿಪಾದಿಸಿದ ಗ್ಯಾರಂಟಿ, ಗ್ರಾಸ್ ರೂಟ್, ಗಿಗ್, ಹಸಿರು ಹಾಗೂ ನಗರಾಭಿವೃದ್ಧಿ ಒಳಗೊಂಡ 11ಜಿ ಆರ್ಥಿಕ ಮಾದರಿಯ ಹಾದಿಯಲ್ಲೇ ಪ್ರಸ್ತುತ ಸರ್ಕಾರ ಸಾಗುತ್ತಿದೆ ಎಂದು ತಿಳಿಸಿದರು.
ಯುವಜನತೆ ಮತ್ತು ಉದ್ಯೋಗ :
ದೇಶದಲ್ಲಿ 40 ಕೋಟಿ ಇರುವ ‘ಜೆನ್‍ಜಿ’ (ಉeಟಿZ) ಯುವಸಮೂಹದ ಭವಿಷ್ಯ ರೂಪಿಸಲು ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಆರಂಭವಾಗಿದ್ದ 72,000 ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಹಾಗೂ ‘ಯುವ ಉದ್ಯೋಗ ಸೇತು’ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನಾರಂಭಿಸಲು ತೀರ್ಮಾನಿಸಲಾಗಿದೆ.
ರಾಹುಲ್ ಗಾಂಧಿ ಪಾದಯಾತ್ರೆಯ ಸ್ಮರಣೆ – ಭಾರತ್ ಜೋಡೊ ಸಂಘಗಳು :
ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆ ಪೂರ್ಣಗೊಂಡು 5 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಯುವಕರಲ್ಲಿ ಸಹೋದರತ್ವ ಬೆಳೆಸಲು ರಾಜ್ಯದಾದ್ಯಂತ 1,000 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ‘ಭಾರತ್ ಜೋಡೊ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ. ಸದಸ್ಯತ್ವ ಆರಂಭಗೊಂಡ ಕೇವಲ ಒಂದು ವಾರದಲ್ಲೇ 7.3 ಲಕ್ಷ ಯುವಕರು ನೊಂದಾಯಿಸಿಕೊಂಡಿದ್ದಾರೆ.
ನೂರು ದಿನಗಳ ಸಾಧನೆಯ ಹೊಸ ಯೋಜನೆಗಳು:
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ: ಗ್ರಾಮೀಣ ಭಾಗದಲ್ಲಿ ಉಳುಮೆಯಿಲ್ಲದೆ ಉಳಿದಿರುವ ಕೃಷಿ ಭೂಮಿಯನ್ನು ಸರ್ಕಾರವೇ ಉಳುಮೆ ಮಾಡಿಕೊಡಲು ನಿರ್ಧಾರ.
ಪ್ರಜಾಸೇವೆ ಕಾರ್ಯಕ್ರಮ: ಸಚಿವರು ಮತ್ತು ಶಾಸಕರು ತಿಂಗಳಿಗೆ ಎರಡು ಬಾರಿ ಜನರ ಮನೆ ಬಾಗಿಲಿಗೆ ತೆರಳಿ ಕುಂದುಕೊರತೆ ಪರಿಹರಿಸುವ ಯೋಜನೆ.
ಎಐ ವಿಶ್ವವಿದ್ಯಾಲಯ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಯುವಕರನ್ನು ಸಜ್ಜುಗೊಳಿಸಲು ಎಐ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಐಐಐಟಿ ಬೆಂಗಳೂರಿನಲ್ಲಿ ಸೂಕ್ತ ಕಾರ್ಯಕ್ರಮಗಳ ಆಯೋಜನೆ.
5 ಲಕ್ಷ ನಿವೇಶನಗಳ ಹಂಚಿಕೆ: ರಾಜ್ಯಾದ್ಯಂತ ವಸತಿ ರಹಿತರಿಗೆ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಮುಂದಿನ ಎರಡು ತಿಂಗಳಲ್ಲಿ ವಿತರಿಸುವ ಗುರಿ (ಒಂದು ಜಿಲ್ಲೆಗೆ 50 ಸಾವಿರ ನಿವೇಶನ).
ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-2031: ಏರೋಸ್ಪೇಸ್ ತಂತ್ರಜ್ಞಾನ ಹಾಗೂ ಎಚ್‍ಎಎಲ್ ಸಹಯೋಗದ ಉತ್ಪಾದನೆಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ.
ಶ್ರಮಿಕ ನಿವಾಸ ಯೋಜನೆ: ದೊಡ್ಡ ಕೈಗಾರಿಕೆಗಳ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಮನೆ ನಿರ್ಮಿಸಿಕೊಳ್ಳಲು ಸಹಾಯಧನ.
ತೇಗ ಸಿರಿ ಯೋಜನೆ: ತೋಟದ ಬೇಲಿಗಳಲ್ಲಿ ತೇಗದ ಗಿಡ ಬೆಳೆಸುವ ರೈತರಿಗೆ ಲಾಭದಲ್ಲಿ ಶೇ 70ರಷ್ಟು ಹಂಚಿಕೆ ನೀಡುವ ಯೋಜನೆ.
ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2026-31: ಬೆಂಗಳೂರಿನ ಹೊರತಾಗಿ ಇತರ ಜಿಲ್ಲೆಗಳಿಗೂ ಉಡುಪು ತಯಾರಿಕಾ ಕೈಗಾರಿಕೆಗಳನ್ನು ವಿಸ್ತರಿಸಲು ಪೆÇ್ರೀತ್ಸಾಹ.
ಶಕ್ತಿ ಸ್ಮಾರ್ಟ್ ಕಾರ್ಡ್: ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಗುರುತಿಗಾಗಿ ಸ್ಮಾರ್ಟ್ ಕಾರ್ಡ್ ವಿತರಣೆ.
ಇದೇ ಸಂದರ್ಭದಲ್ಲಿ ‘ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ’ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಚಾಲನೆ ನೀಡಿದರು
ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯಮಾನ್ಯರಿಗೆ ಸ್ವಾಗತ ಕೋರಿ ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು, ಸರ್ಕಾರ ಕೈಗೊಂಡಿರುವ ಪ್ರತಿಯೊಂದು ಹೆಜ್ಜೆಯು ಮುಂದಿನ ಎರಡು ವರ್ಷಗಳು ಮಾತ್ರವಲ್ಲದೆ, ಕರ್ನಾಟಕದ ಭವಿಷ್ಯದ ಪ್ರಗತಿಗೆ ಮೂಲಾಧಾರವಾಗಿದೆ ಎಂದು ತಿಳಿಸಿದರು.
ಈ 100 ದಿನಗಳ ಸಾಧನೆಯು ದೃಢ ಕರ್ನಾಟಕದ ನಿರ್ಮಾಣದ ಸಂಕಲ್ಪವನ್ನು ತೋರಿಸುತ್ತದೆ ಹಾಗೂ ಭವಿಷ್ಯದ ಸುವರ್ಣ ಅಭಿವೃದ್ಧಿಗೆ ನಾಂದಿಯಾಗಿದೆ.
ಸಾರ್ವಜನಿಕರು ಆಶೀರ್ವಾದ ನೀಡಿ ವಿಧಾನಸೌಧದಲ್ಲಿ ಜನಸೇವೆ ಮಾಡಲು ಅವಕಾಶ ನೀಡಿದ್ದು, ಅದೇ ವಿಧಾನಸೌಧದಲ್ಲಿ ಈ ಕಾರ್ಯಕ್ರಮದ ಮೂಲಕ ಸಾಧನೆಗಳನ್ನು ಜನರಿಗೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೃಢ ಕರ್ನಾಟಕದ ಸಂಕಲ್ಪ ಶತಕದ ಪಥ ಪ್ರತಿಯ ರಥ ಕಾರ್ಯಕ್ರಮದಲ್ಲಿ ಜಾರಿಗೆ ತರಲಾದ ಈ ಕೆಳಕಂಡ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ವಿವಿಧ ಇಲಾಖೆಗಳ ಹಲವು ಸೇವೆಗಳಿಗೆ ಒಂದೇ ವೇದಿಕೆಯಲ್ಲಿ ಸೇವೆಗಳನ್ನು ಒದಗಿಸುವ ಸಲುವಾಗಿ ನಮ್ಮ ಸೇವಾ ಒನ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಯಿತು.
ರೈತರಿಗೆ ಕೃಷಿಯನ್ನು ಲಾಭದಾಯಕವಾಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆಗೆ ಚಾಲನೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಎಂಬ ಸಿ.ಎಸ್.ಆರ್ ಪೆÇೀರ್ಟಲ್‍ಗೆ ಚಾಲನೆ ನೀಡಲಾಯಿತು.
ಪ್ರಯಾಣಿಕರ ವಿವಿಧ ಸೇವೆಗಳನ್ನು ಪಡೆದುಕೊಳ್ಳುವ ಸಲುವಾಗಿ ಅನುಕೂಲವಾಗುವಂತೆ ಬಿ.ಎಂ.ಟಿ.ಸಿ 2.0 ಮತ್ತು ಕೆ.ಎಸ್.ಆರ್.ಟಿ.ಸಿ 2.0 ಆಪ್ ಬಿಡುಗಡೆ ಮಾಡಲಾಯಿತು.
ನಿವೇಶನವಿಲ್ಲದ ಐದು ಲಕ್ಷ ಗ್ರಾಮೀಣ ಜನರಿಗೆ ನಿವೇಶನ ಒದಗಿಸುವ ಸಲುವಾಗಿ ನಿವೇಶನ ನೀಡುವ ಯೋಜನೆಯ ಒಡಂಬಂಡಿಕೆ ಪತ್ರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಸಮ್ಮುಖದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಲಾಯಿತು.
ವಿದ್ಯಾದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಸಾಂಕೇತಿಕವಾಗಿ 5 ಜನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಸಂಪುಟದ ಎಲ್ಲಾ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಹಾಗೂ ವಿವಿಧ ಕ್ಷೇತ್ರದ ಕಾರ್ಮಿಕರನ್ನು ಒಳಗೊಂಡಂತೆ, ಸಮಾಜದ ವಿವಿಧ ವರ್ಗಗಳ ಫಲಾನುಭವಿಗಳು ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
