file 000000009f6c8210a71531f1b91001c0 200kb

Karnataka : ಅನ್ನಸೇವೆ ಆ್ಯಪ್ ನಾಳೆಯಿಂದ ರಾಜ್ಯಾದ್ಯಂತ ಲಭ್ಯ….!

BUSINESS Genaral STATE

ಅನ್ನಸೇವೆ ಆ್ಯಪ್ ನಾಳೆಯಿಂದ ರಾಜ್ಯಾದ್ಯಂತ ಲಭ್ಯ!

ಇನ್ಮುಂದೆ ಮನೆಯಲ್ಲೇ ಕುಳಿತು e-KYC ಮಾಡಿಕೊಳ್ಳಬಹುದು

ಬೆಂಗಳೂರು, ಅಕ್ಟೋಬರ್ 13: ಅನ್ನಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ. e-KYC ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆಯುವ ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆ ಇನ್ಮುಂದೆ ತಪ್ಪಲಿದೆ. ಫಲಾನುಭವಿಗಳು ಸ್ವತಃ e-KYC ಮಾಡಿಕೊಳ್ಳಲು ಅನುಕೂಲವಾಗುವ ‘ಅನ್ನಸೇವೆ’ ಮೊಬೈಲ್ ಆ್ಯಪ್ ನಾಳೆಯಿಂದ (ಅಕ್ಟೋಬರ್ 14) ರಾಜ್ಯಾದ್ಯಂತ ಲಭ್ಯವಾಗಲಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಅಕ್ಟೋಬರ್ 1ರಂದು ಆ್ಯಪ್ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರಾಜ್ಯದ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಈ ಸೌಲಭ್ಯ ದೊರೆಯಲಿದೆ.

ಮೊಬೈಲ್‌ನಲ್ಲೇ e-KYC ಸೌಲಭ್ಯ

ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಅನ್ನಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, UIDAI ಫೇಸ್ ಅಥೆಂಟಿಕೇಶನ್ ವ್ಯವಸ್ಥೆಯ ಮೂಲಕ ಸ್ವಯಂ e-KYC ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಿಂದ ಕೆಲಸದ ನಿಮಿತ್ತ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗಲಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಸಮಸ್ಯೆಗೂ ಪರಿಹಾರ ದೊರೆಯಲಿದೆ.

12 ದಿನಗಳಲ್ಲಿ 1.60 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಂದ ಬಳಕೆ

ಅನ್ನಸೇವೆ ಆ್ಯಪ್‌ಗೆ ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 1ರಿಂದ 12ರವರೆಗೆ ಪ್ರಾಯೋಗಿಕವಾಗಿ ಆ್ಯಪ್ ಲಭ್ಯವಿದ್ದ ಎಂಟು ಜಿಲ್ಲೆಗಳಲ್ಲಿ ಒಟ್ಟು 1,60,267 ಫಲಾನುಭವಿಗಳು ಇದರ ಮೂಲಕ e-KYC ಪೂರ್ಣಗೊಳಿಸಿದ್ದಾರೆ. ರಾಜ್ಯಾದ್ಯಂತ ಆ್ಯಪ್ ಲಭ್ಯವಾಗುತ್ತಿರುವುದರಿಂದ ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.

ಇನ್ನೂ 60 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಂದ e-KYC ಬಾಕಿ

ರಾಜ್ಯದಲ್ಲಿ e-KYC ಮಾಡಿಸಬೇಕಿರುವ ಒಟ್ಟು 2,67,64,276 ಫಲಾನುಭವಿಗಳ ಪೈಕಿ ಅಕ್ಟೋಬರ್ 12ರವರೆಗೆ 2,06,76,278 ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಂದರೆ, ಇನ್ನೂ ಸುಮಾರು 60.88 ಲಕ್ಷ ಫಲಾನುಭವಿಗಳಿಂದ e-KYC ಬಾಕಿ ಉಳಿದಿದೆ.

ಒಂದು ವರ್ಷದ ಹಿಂದೆ e-KYC ಮಾಡಿಸಿಕೊಂಡಿದ್ದ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗಿ e-KYC ಮಾಡಿಸಬೇಕು ಎಂದು ಇಲಾಖೆ ತಿಳಿಸಿದೆ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳು ‘ಅನ್ನಸೇವೆ’ ಆ್ಯಪ್‌ನ ಸೌಲಭ್ಯ ಬಳಸಿಕೊಂಡು ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ e-KYC ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ನಾಳೆಯಿಂದ ರಾಜ್ಯದಾದ್ಯಂತ ಈ ಸೌಲಭ್ಯ ಲಭ್ಯವಾಗಲಿದೆ.

Leave a Reply

Your email address will not be published. Required fields are marked *