ಯುವತಿಯರಲ್ಲೂ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್ ಆತಂಕ!
40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಎಚ್ಚರ ವಹಿಸಿ; ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಡಾ. ರಾಧೇಶ್ಯಾಮ್ ನಾಯಕ್
ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂಬ ಭಾವನೆ ನಿಮ್ಮಲ್ಲಿದ್ದರೆ, ಆ ಕಲ್ಪನೆಯನ್ನು ಬದಲಿಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ಕಳವಳಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಅಂದಾಜಿನ ಪ್ರಕಾರ, 2022ರಲ್ಲಿ 15ರಿಂದ 39 ವರ್ಷ ವಯಸ್ಸಿನ ಮಹಿಳೆಯರಲ್ಲಿ ವರದಿಯಾದ ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇಕಡಾ 27ಕ್ಕೂ ಹೆಚ್ಚು ಪ್ರಕರಣಗಳು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ್ದವು. ಈ ಹಿನ್ನೆಲೆಯಲ್ಲಿ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಬೆಂಗಳೂರಿನ ಸಂಪ್ರದಾ ಆಸ್ಪತ್ರೆಯ ಹಿರಿಯ ವೈದ್ಯಕೀಯ ಕ್ಯಾನ್ಸರ್ ತಜ್ಞ ಡಾ. ರಾಧೇಶ್ಯಾಮ್ ನಾಯಕ್ ಸಲಹೆ ನೀಡಿದ್ದಾರೆ.
ಸ್ತನದಲ್ಲಿ ಹೊಸದಾಗಿ ಗಡ್ಡೆ ಕಾಣಿಸಿಕೊಳ್ಳುವುದು, ಸ್ತನದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆ, ಚರ್ಮದಲ್ಲಿ ಗುಳಿ ಬಿದ್ದಂತಾಗುವುದು, ಸ್ತನದ ತೊಟ್ಟು ಒಳಕ್ಕೆ ತಿರುಗಿಕೊಳ್ಳುವುದು ಅಥವಾ ಅಸಹಜ ಸ್ರಾವ ಕಂಡುಬರುವುದು ಸ್ತನ ಕ್ಯಾನ್ಸರ್‌ನ ಎಚ್ಚರಿಕೆಯ ಲಕ್ಷಣಗಳಾಗಿರಬಹುದು. ಇಂತಹ ಬದಲಾವಣೆಗಳು ಕಂಡುಬಂದಾಗ ವಯಸ್ಸಿನ ಕಾರಣಕ್ಕೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಯುವತಿಯರು ಸ್ತನ ಕ್ಯಾನ್ಸರ್ ತಮ್ಮ ವಯಸ್ಸಿನಲ್ಲಿ ಬರುವುದಿಲ್ಲ ಎಂದು ಭಾವಿಸುವುದು, ಹಾರ್ಮೋನ್‌ಗಳ ಬದಲಾವಣೆಯಿಂದ ಈ ಲಕ್ಷಣಗಳು ಕಾಣಿಸಿಕೊಂಡಿರಬಹುದು ಎಂದು ನಿರ್ಲಕ್ಷಿಸುವುದು ಹಾಗೂ ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ಕಾರಣದಿಂದ ವೈದ್ಯಕೀಯ ತಪಾಸಣೆಯನ್ನು ಮುಂದೂಡುವುದು ರೋಗ ಪತ್ತೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಸ್ತನಗಳ ಸಾಮಾನ್ಯ ಸ್ವರೂಪದ ಬಗ್ಗೆ ಅರಿವು ಹೊಂದಿರುವುದು ಮುಖ್ಯ. ಆದರೆ, ಸ್ವಯಂ ಅರಿವು ವೈದ್ಯಕೀಯ ತಪಾಸಣೆಗೆ ಪರ್ಯಾಯವಲ್ಲ. ಅನುಮಾನಾಸ್ಪದ ಬದಲಾವಣೆಗಳು ಕಂಡುಬಂದರೆ ಅವು ತಾನಾಗಿಯೇ ಸರಿಹೋಗಬಹುದು ಎಂದು ಕಾಯದೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಡಾ. ನಾಯಕ್ ಕಿವಿಮಾತು ಹೇಳಿದ್ದಾರೆ.
ಇನ್ನು ಕುಟುಂಬದಲ್ಲಿ ಸ್ತನ ಕ್ಯಾನ್ಸರ್‌ನ ಇತಿಹಾಸವಿಲ್ಲ ಎಂಬ ಕಾರಣಕ್ಕೆ ಈ ಕಾಯಿಲೆ ಬರುವುದಿಲ್ಲ ಎಂದು ಭಾವಿಸುವುದು ತಪ್ಪು. ಅನುವಂಶಿಕ ಅಂಶಗಳು ಅಪಾಯವನ್ನು ಹೆಚ್ಚಿಸಬಹುದಾದರೂ, ಕುಟುಂಬದ ಇತಿಹಾಸವಿಲ್ಲದ ಮಹಿಳೆಯರಿಗೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ತನ ಕ್ಯಾನ್ಸರ್ ಪತ್ತೆಯಲ್ಲಿ ಕೃತಕ ಬುದ್ಧಿಮತ್ತೆ ಅಂದರೆ ಎಐ ತಂತ್ರಜ್ಞಾನವೂ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಹೊಂದಿದೆ. ಮ್ಯಾಮೊಗ್ರಾಮ್ ಚಿತ್ರಗಳಲ್ಲಿನ ಅನುಮಾನಾಸ್ಪದ ಬದಲಾವಣೆಗಳನ್ನು ಗುರುತಿಸಲು, ಚಿತ್ರಗಳ ವಿಶ್ಲೇಷಣೆಗೆ ನೆರವಾಗಲು ಹಾಗೂ ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಪ್ರಕರಣಗಳನ್ನು ಗುರುತಿಸಲು ಈ ತಂತ್ರಜ್ಞಾನ ಸಹಕಾರಿಯಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಜತೆಗೆ, ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಜೀವನಶೈಲಿ ಮತ್ತು ವೈಯಕ್ತಿಕ ಅಪಾಯದ ಅಂಶಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯ. ಆದರೆ, ಯಾವುದೇ ಜೀವನಶೈಲಿ ಕ್ರಮವೂ ಸ್ತನ ಕ್ಯಾನ್ಸರ್ ಬರುವುದನ್ನು ಸಂಪೂರ್ಣವಾಗಿ ತಡೆಯುವ ಖಾತರಿ ನೀಡುವುದಿಲ್ಲ. ಹೀಗಾಗಿ ಜಾಗೃತಿ, ಸಮಯೋಚಿತ ವೈದ್ಯಕೀಯ ಸಲಹೆ ಮತ್ತು ಸೂಕ್ತ ತಪಾಸಣೆಗೆ ಆದ್ಯತೆ ನೀಡಬೇಕು ಎಂಬುದು ತಜ್ಞರ ಸಲಹೆಯಾಗಿದೆ.
