file 00000000d8d082088b2cb1d0c331198d 200kb 1

ಹಿಂಗಾರು ಬೆಳೆಗಳ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ….!

BUSINESS National - ಕನ್ನಡ

ಹಿಂಗಾರು ಬೆಳೆಗಳ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಕುಸುಬೆಗೆ ₹675, ಸಾಸಿವೆ–ರೇಪ್‌ಸೀಡ್‌ಗೆ ₹413 ಹೆಚ್ಚಳ; ರೈತರಿಗೆ ಲಾಭದಾಯಕ ಬೆಲೆ ಖಾತರಿ

ನವದೆಹಲಿ, ಸೆ.30: 2027-28ನೇ ಸಾಲಿನ ಮಾರುಕಟ್ಟೆ ಹಂಗಾಮಿನಲ್ಲಿ ಎಲ್ಲಾ ಕಡ್ಡಾಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ.

2027-28ರ ಹಿಂಗಾರು ಹಂಗಾಮಿಗೆ ಕುಸುಬೆಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹675ರಷ್ಟು ಹೆಚ್ಚಿಸಿ ₹7,215ಕ್ಕೆ ನಿಗದಿಪಡಿಸಲಾಗಿದೆ. ರೇಪ್‌ಸೀಡ್ ಮತ್ತು ಸಾಸಿವೆ ಬೆಲೆಯನ್ನು ₹413ರಷ್ಟು ಹೆಚ್ಚಿಸಿ ₹6,613ಕ್ಕೆ ನಿಗದಿಪಡಿಸಲಾಗಿದೆ.

ಇನ್ನು ಮಸೂರ ಬೇಳೆಗೆ ₹390ರಷ್ಟು ಹೆಚ್ಚಳದೊಂದಿಗೆ ₹7,390, ಬಾರ್ಲಿಗೆ ₹136ರಷ್ಟು ಹೆಚ್ಚಳದೊಂದಿಗೆ ₹2,286, ಕಡಲೆಗೆ ₹83ರಷ್ಟು ಹೆಚ್ಚಳದೊಂದಿಗೆ ₹5,958 ಹಾಗೂ ಗೋಧಿಗೆ ₹25ರಷ್ಟು ಹೆಚ್ಚಳದೊಂದಿಗೆ ₹2,610 ಎಂಎಸ್‌ಪಿ ನಿಗದಿಯಾಗಿದೆ.

ಬೆಳೆ 2027-28ರ ಎಂಎಸ್‌ಪಿ ಹೆಚ್ಚಳ
ಗೋಧಿ ₹2,610 ₹25
ಬಾರ್ಲಿ ₹2,286 ₹136
ಕಡಲೆ ₹5,958 ₹83
ಮಸೂರ ₹7,390 ₹390
ರೇಪ್‌ಸೀಡ್ & ಸಾಸಿವೆ ₹6,613 ₹413
ಕುಸುಬೆ ₹7,215 ₹675

ಕೇಂದ್ರ ಸರ್ಕಾರದ 2018-19ರ ಬಜೆಟ್ ಘೋಷಣೆಯಂತೆ, ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂಎಸ್‌ಪಿ ನಿಗದಿಪಡಿಸುವ ನೀತಿಗೆ ಅನುಗುಣವಾಗಿ ಈ ಹೆಚ್ಚಳ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ಪಾದನಾ ವೆಚ್ಚದ ಮೇಲಿನ ನಿರೀಕ್ಷಿತ ಅಂಚು ಗೋಧಿಗೆ ಶೇ.106, ರೇಪ್‌ಸೀಡ್ ಮತ್ತು ಸಾಸಿವೆಗೆ ಶೇ.96, ಮಸೂರಕ್ಕೆ ಶೇ.92, ಕಡಲೆಗೆ ಶೇ.59, ಬಾರ್ಲಿಗೆ ಶೇ.58 ಹಾಗೂ ಕುಸುಬೆಗೆ ಶೇ.50ರಷ್ಟಿದೆ.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಂತಹ ಬೆಳೆಗಳ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಹೆಚ್ಚಿನ ಎಂಎಸ್‌ಪಿ ನೀಡುತ್ತಿದೆ. ಹೆಚ್ಚಿದ ಬೆಂಬಲ ಬೆಲೆ ರೈತರಿಗೆ ಲಾಭದಾಯಕ ಬೆಲೆ ಒದಗಿಸುವುದರ ಜೊತೆಗೆ ಬೆಳೆ ವೈವಿಧ್ಯೀಕರಣಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *