ಭಾರತದ ಮೆಟ್ರೋ ಜಾಲಕ್ಕೆ ಭರ್ಜರಿ ವಿಸ್ತರಣೆ!
248 ಕಿ.ಮೀ.ನಿಂದ 1,200 ಕಿ.ಮೀ.ಗೆ ಮೆಟ್ರೋ ಜಾಲ ವಿಸ್ತರಣೆ: ಪ್ರಧಾನಿ ಮೋದಿ
ನವದೆಹಲಿ: ದೇಶದಲ್ಲಿ ಮೆಟ್ರೋ ರೈಲು ಸಂಪರ್ಕ ವ್ಯವಸ್ಥೆ ಗಣನೀಯವಾಗಿ ವಿಸ್ತರಣೆಯಾಗಿದ್ದು, 2014ರಲ್ಲಿ ಕೇವಲ 248 ಕಿ.ಮೀ. ಇದ್ದ ಮೆಟ್ರೋ ಜಾಲ ಇಂದು ಸುಮಾರು 1,200 ಕಿ.ಮೀ.ಗೆ ತಲುಪಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
2014ಕ್ಕೂ ಮೊದಲು ದೇಶದ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೋ ರೈಲು ಸೇವೆ ಲಭ್ಯವಿತ್ತು. ಆದರೆ ಪ್ರಸ್ತುತ ದೇಶದ 26 ನಗರಗಳಿಗೆ ಮೆಟ್ರೋ ಸಂಪರ್ಕ ವಿಸ್ತರಣೆಯಾಗಿದೆ. ಪ್ರತಿದಿನ ಒಂದು ಕೋಟಿಗೂ ಅಧಿಕ ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಈ ಮಹತ್ವದ ಬೆಳವಣಿಗೆಯಿಂದ ನಗರ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಜನರ ಪ್ರಯಾಣದ ಸಮಯ ಉಳಿತಾಯವಾಗುತ್ತಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ, ಕೆಲಸದಲ್ಲಿ ಉತ್ಪಾದಕತೆ ಹೆಚ್ಚಳ ಹಾಗೂ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳ ವೃದ್ಧಿಗೆ ಮೆಟ್ರೋ ಜಾಲದ ವಿಸ್ತರಣೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪುಣೆಯಂತಹ ನಗರಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಉದಾಹರಣೆಯನ್ನು ಉಲ್ಲೇಖಿಸಿದ ಮೋದಿ, 2014ಕ್ಕೂ ಹಿಂದಿನ ವೇಗದಲ್ಲೇ ಮೆಟ್ರೋ ಯೋಜನೆಗಳು ಮುಂದುವರಿದಿದ್ದರೆ ಇಂತಹ ನಗರಗಳಿಗೆ ಮೆಟ್ರೋ ಬರಲು ವರ್ಷಗಳಷ್ಟೇ ಅಲ್ಲ, ದಶಕಗಳೇ ಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿಯವರು, ನಗರ ಭಾರತದ ಪರಿವರ್ತನೆಗೆ ಸರ್ಕಾರ ಬದ್ಧವಾಗಿದ್ದು, ಆಧುನಿಕ ಸಾರಿಗೆ ವ್ಯವಸ್ಥೆಯ ಮೂಲಕ ಸುಗಮ ಪ್ರಯಾಣ ಮತ್ತು ಉತ್ತಮ ನಗರ ಜೀವನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಗರೀಕರಣದ ವೇಗಕ್ಕೆ ತಕ್ಕಂತೆ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಮೆಟ್ರೋ ಜಾಲದ ವಿಸ್ತರಣೆ ಮಹತ್ವದ ಹೆಜ್ಜೆಯಾಗಿದೆ.
ಸಪ್ತಸ್ವರ ನ್ಯೂಸ್
