ಬಸ್ ಪ್ರಯಾಣ ದರ ಏರಿಕೆ ಸುದ್ದಿ e1793794580775

KSRTC : ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ…!

BUSINESS Genaral STATE
  • ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ: ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ…!
  • ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಪರಿಷ್ಕರಣೆ ಜಾರಿ – ಸಚಿವ ಬೈರತಿ ಸುರೇಶ್ ಘೋಷಣೆ
  • ಇಂದು ಮಧ್ಯರಾತ್ರಿ ಯಿಂದಲೆ  ಹೊಸ ದರ ಜಾರಿ;

ಬೆಂಗಳೂರು: ನವೆಂಬರ್ 4: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ.

ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ಕರ್ನಾಟಕದ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ನವೆಂಬರ್ 4 ಮತ್ತು 5ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವ್ಯಾಪ್ತಿಯ ಬಸ್ ಪ್ರಯಾಣ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.Transport Minister Byrathi Suresh Press meet photos 3

ಶಕ್ತಿ ಯೋಜನೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ!

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಪ್ರತಿದಿನ ಸುಮಾರು 74.40 ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 26,125 ಬಸ್‌ಗಳು ಕಾರ್ಯಾಚರಿಸುತ್ತಿದ್ದು, 1,02,646 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ 24,179 ಬಸ್ ಅನುಸೂಚಿಗಳ ಮೂಲಕ ಸರಾಸರಿ 124.79 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ವಿವರಿಸಿದರು.

ಡೀಸೆಲ್ ಬೆಲೆ ಏರಿಕೆ, ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಹೊರೆ

ಕಳೆದ ಹತ್ತು ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಸೀಮಿತ ಬಾರಿ ಮಾತ್ರ ಹೆಚ್ಚಿಸಲಾಗಿದೆ. ಆದರೆ ಡೀಸೆಲ್ ಬೆಲೆ ಏರಿಕೆಯಿಂದ ಸಂಸ್ಥೆಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಪ್ರಸ್ತುತ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 98.13 ರೂಪಾಯಿ ತಲುಪಿದೆ. 2026ರ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಪ್ರತಿ ಲೀಟರ್‌ಗೆ 10.47 ರೂಪಾಯಿ ಏರಿಕೆಯಾಗಿದೆ.

ಸಾರಿಗೆ ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಶೇ.80ರಷ್ಟು ಹಣವನ್ನು ಇಂಧನ ಮತ್ತು ಸಿಬ್ಬಂದಿ ವೇತನಕ್ಕೆ ವ್ಯಯಿಸಲಾಗುತ್ತಿದೆ. ಪ್ರತಿದಿನ ಡೀಸೆಲ್ ಖರೀದಿಗೆ ಸುಮಾರು 15.60 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ವಾರ್ಷಿಕವಾಗಿ 5,694 ಕೋಟಿ ರೂಪಾಯಿ ಖರ್ಚಾಗುತ್ತಿದೆ ಎಂದು ಸಚಿವರು ತಿಳಿಸಿದರು.

ನಾಲ್ಕೂ ನಿಗಮಗಳಿಗೆ 10,200 ಕೋಟಿ ರೂ. ಸಂಚಿತ ನಷ್ಟ!

2016ರಿಂದ 2026ರವರೆಗೆ ನೌಕರರ ವೇತನ ಮತ್ತು ತುಟ್ಟಿಭತ್ಯೆ ಪರಿಷ್ಕರಣೆಯಿಂದಾಗಿ 6,418.04 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ ಉಂಟಾಗಿದೆ. 2026ರ ಸೆಪ್ಟೆಂಬರ್ 30ರ ವೇಳೆಗೆ ನಾಲ್ಕೂ ಸಾರಿಗೆ ನಿಗಮಗಳು ಒಟ್ಟು 10,200 ಕೋಟಿ ರೂಪಾಯಿ ಸಂಚಿತ ನಷ್ಟ ಹೊಂದಿವೆ.

ಇದರ ಜೊತೆಗೆ 9,912.10 ಕೋಟಿ ರೂಪಾಯಿ ಹೊಣೆಗಾರಿಕೆ ಮತ್ತು ಸಾಲದ ಬಾಕಿ ಉಳಿದಿದೆ. ನೌಕರರ ಭವಿಷ್ಯ ನಿಧಿ, ನಿವೃತ್ತಿ ಸೌಲಭ್ಯ ಹಾಗೂ ವೇತನ ಪರಿಷ್ಕರಣೆಯ ಬಾಕಿ ಮೊತ್ತವೇ 4,480 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ತಿಳಿಸಿದರು.

ಸಮಿತಿಗಳ ಶಿಫಾರಸಿನ ಮೇರೆಗೆ ದರ ಪರಿಷ್ಕರಣೆ

ಸಾರಿಗೆ ಸಂಸ್ಥೆಗಳ ಬಲವರ್ಧನೆ ಮತ್ತು ಪುನಶ್ಚೇತನಕ್ಕಾಗಿ ರಚಿಸಲಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಸಮಿತಿ ಹಾಗೂ 2026ರಲ್ಲಿ ರಚನೆಯಾದ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂಧನ, ಸಿಬ್ಬಂದಿ ಹಾಗೂ ಬಿಡಿಭಾಗಗಳ ವೆಚ್ಚದ ಏರಿಕೆಯನ್ನು ಪರಿಶೀಲಿಸಿ, ಅಕ್ಟೋಬರ್ 6, 2026ರಂದು ಸಲ್ಲಿಸಲಾದ ವರದಿಯ ಆಧಾರದ ಮೇಲೆ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ಪ್ರಮುಖ ಮಾರ್ಗಗಳ ಹೊಸ ಪ್ರಯಾಣ ದರ

ಬೆಂಗಳೂರು ನಗರದಿಂದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಹೊಸ ದರ ಅನ್ವಯವಾಗಲಿದೆ.

  • ಬೆಂಗಳೂರು–ನೆಲಮಂಗಲ: ₹35ರಿಂದ ₹44ಕ್ಕೆ
  • ಬೆಂಗಳೂರು–ದೊಡ್ಡಬಳ್ಳಾಪುರ: ₹38ರಿಂದ ₹47ಕ್ಕೆ
  • ಬೆಂಗಳೂರು–ಮಾಗಡಿ: ₹46ರಿಂದ ₹57ಕ್ಕೆ
  • ಬೆಂಗಳೂರು–ಕೋಲಾರ: ₹81ರಿಂದ ₹100ಕ್ಕೆ
  • ಬೆಂಗಳೂರು–ತುಮಕೂರು: ₹81ರಿಂದ ₹100ಕ್ಕೆ
  • ಬೆಂಗಳೂರು–ಮಂಡ್ಯ: ₹110ರಿಂದ ₹136ಕ್ಕೆ
  • ಬೆಂಗಳೂರು–ಮೈಸೂರು: ₹160ರಿಂದ ₹197ಕ್ಕೆ
  • ಬೆಂಗಳೂರು–ಹಾಸನ: ₹219ರಿಂದ ₹270ಕ್ಕೆ
  • ಬೆಂಗಳೂರು–ದಾವಣಗೆರೆ: ₹317ರಿಂದ ₹390ಕ್ಕೆ
  • ಬೆಂಗಳೂರು–ಹುಬ್ಬಳ್ಳಿ: ₹490ರಿಂದ ₹613ಕ್ಕೆ

ಬಿಎಂಟಿಸಿ ಪ್ರಯಾಣಿಕರಿಗೂ ದರ ಏರಿಕೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ಗಳಲ್ಲಿ 2 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹4 ಹಾಗೂ 2ರಿಂದ 4 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹6 ಹೆಚ್ಚಳವಾಗಲಿದೆ. ದೂರದ ಪ್ರಯಾಣಕ್ಕೆ ಗರಿಷ್ಠ ₹12 ಹೆಚ್ಚಳವಾಗಲಿದೆ.

ವಜ್ರ ಹವಾನಿಯಂತ್ರಿತ ಬಸ್‌ಗಳಲ್ಲಿ 6 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹5 ಹಾಗೂ 6ರಿಂದ 18 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹10 ಹೆಚ್ಚಳವಾಗಲಿದೆ. ದೂರದ ಪ್ರಯಾಣಕ್ಕೆ ಗರಿಷ್ಠ ₹15 ಹೆಚ್ಚಳವಾಗಲಿದೆ.

ಪ್ರಯಾಣಿಕರ ಸಹಕಾರಕ್ಕೆ ಸಾರಿಗೆ ಇಲಾಖೆ ಮನವಿ

ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರಯಾಣ ದರ ಏರಿಕೆಗೆ ಸಾರ್ವಜನಿಕರು ಸಹಕರಿಸಬೇಕು. ರಾಜ್ಯದ ಜನಜೀವನದ ಪ್ರಮುಖ ಭಾಗವಾಗಿರುವ ಸಾರಿಗೆ ಸಂಸ್ಥೆಗಳನ್ನು ಉಳಿಸಿ, ಬೆಳೆಸಲು ಅವಕಾಶ ಮಾಡಿಕೊಡಬೇಕೆಂದು ಸಾರಿಗೆ ಇಲಾಖೆ ಮನವಿ ಮಾಡಿದೆ.

ಒಟ್ಟಿನಲ್ಲಿ, ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯಿಂದ ಪ್ರತಿದಿನ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಾಗಲಿದೆ.

ಸಪ್ತಸ್ವರ ನ್ಯೂಸ್ | 

Leave a Reply

Your email address will not be published. Required fields are marked *