- ಹಿರಿಯೂರು ಉಪಚುನಾವಣೆ: ಅಭ್ಯರ್ಥಿ ಆಯ್ಕೆ ಬಗ್ಗೆ ಹೆಚ್.ಡಿ.ಕೆ ಮಹತ್ವದ ಚರ್ಚೆ!
- ಬಿಜೆಪಿ–ಜೆಡಿಎಸ್ ಮುಖಂಡರ ಸಮನ್ವಯದ ಮೂಲಕ ಎನ್ಡಿಎ ಅಭ್ಯರ್ಥಿ ಅಂತಿಮ: ಕುಮಾರಸ್ವಾಮಿ
- ಮನೆ ಮನೆಗೆ ತೆರಳಿ ಮೈತ್ರಿಕೂಟದ ಪರ ಕೆಲಸ ಮಾಡಿ; ಮುಖಂಡರು, ಕಾರ್ಯಕರ್ತರಿಗೆ ಕೇಂದ್ರ ಸಚಿವರ ಸೂಚನೆ
- ಹಿರಿಯೂರು ಉಪಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ: 9 ಮಂದಿ ಪ್ರಮುಖರಿಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಚುನಾವಣಾ ಸಿದ್ಧತೆಗೆ ವೇಗ ನೀಡಿದೆ. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ರಾಜ್ಯದ 9 ಮಂದಿ ಪ್ರಮುಖ ನಾಯಕರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದೆ.
ಈ ಕುರಿತು ಬಿಜೆಪಿ ಕರ್ನಾಟಕ ರಾಜ್ಯ ಘಟಕವು ನವೆಂಬರ್ 3, 2026ರಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಚುನಾವಣಾ ಉಸ್ತುವಾರಿಗಳಾಗಿ ನೇಮಕಗೊಂಡವರು:
* ಸಿ.ಟಿ. ರವಿ – ವಿಧಾನಪರಿಷತ್ ಸದಸ್ಯರು, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು.
* ಗೋವಿಂದ ಕಾರಜೋಳ – ಸಂಸದರು, ಮಾಜಿ ಉಪಮುಖ್ಯಮಂತ್ರಿಗಳು.
* ಬಿ. ಶ್ರೀರಾಮುಲು – ಮಾಜಿ ಸಚಿವರು.
* ಧೀರಜ್ ಮುನಿರಾಜು – ರಾಜ್ಯ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಶಾಸಕರು.
* ಎಂ. ಚಂದ್ರಪ್ಪ – ಶಾಸಕರು.
* ಜಿ.ಹೆಚ್. ತಿಪ್ಪಾರೆಡ್ಡಿ – ಮಾಜಿ ಶಾಸಕರು.
* ಕೆ.ಎಸ್. ನವೀನ್ – ವಿಧಾನಪರಿಷತ್ ಸದಸ್ಯರು.
* ಎಸ್. ಮುನಿಸ್ವಾಮಿ – ಮಾಜಿ ಸಂಸದರು.
* ಚಿಕ್ಕನಂದ ಎಂ. ಗೌಡ – ಜಿಲ್ಲಾ ಅಧ್ಯಕ್ಷರು, ಮಾಜಿ ವಿಧಾನಪರಿಷತ್ ಸದಸ್ಯರು.
ಹಿರಿಯೂರು ಗೆಲ್ಲಲು ಬಿಜೆಪಿ ರಣತಂತ್ರ!
ಹಿರಿಯೂರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಮನೆಮನೆಗೆ ತೆರಳಿ ಮತದಾರರನ್ನು ತಲುಪುವುದು ಸೇರಿದಂತೆ ಚುನಾವಣಾ ಸಿದ್ಧತೆಯ ಜವಾಬ್ದಾರಿಯನ್ನು ಈ ನಾಯಕರು ನಿರ್ವಹಿಸಲಿದ್ದಾರೆ.
ಒಂಬತ್ತು ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿರುವ ಬಿಜೆಪಿ, ಹಿರಿಯೂರು ಉಪಚುನಾವಣೆಯಲ್ಲಿ ಗೆಲುವಿನ ಗುರಿಯೊಂದಿಗೆ ಚುನಾವಣಾ ಅಖಾಡಕ್ಕೆ ಸಜ್ಜಾಗುತ್ತಿದೆ.

ಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ರಣತಂತ್ರ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಜೆಡಿ ( ಎಸ್ ) ಸಭೆ
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎನ್ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದ ಪ್ರಮುಖ ಮುಖಂಡರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸಭೆಯಲ್ಲಿ ಹಿರಿಯೂರು ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನೆ ಹಾಗೂ ಮುಂಬರುವ ಉಪಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಎನ್ಡಿಎ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ಆಯ್ಕೆಯನ್ನು ಎರಡೂ ಪಕ್ಷಗಳ ಮುಖಂಡರು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಅಂತಿಮಗೊಳಿಸುತ್ತಾರೆ. ಟಿಕೆಟ್ ವಿಚಾರವಾಗಿ ಯಾರೂ ಬಹಿರಂಗವಾಗಿ ಚರ್ಚೆ ನಡೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.
**ಮನೆ ಮನೆಗೆ ತಲುಪಲು ಮುಖಂಡರಿಗೆ ಸೂಚನೆ**
ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕೇವಲ ಸಭೆಗಳಿಗೆ ಸೀಮಿತವಾಗದೆ ಮನೆ ಮನೆಗೆ ತೆರಳಿ ಜನರನ್ನು ತಲುಪಬೇಕು. ಮೈತ್ರಿಕೂಟದ ಗೆಲುವಿಗಾಗಿ ಮುಖಂಡರು ಮತ್ತು ಕಾರ್ಯಕರ್ತರು ಸಮರ್ಪಣಾ ಮನೋಭಾವದಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್–ಬಿಜೆಪಿ ಮೈತ್ರಿಯ ಶಕ್ತಿಯನ್ನು ಈಗಾಗಲೇ ವಿಧಾನ ಪರಿಷತ್ ಚುನಾವಣೆಗಳಲ್ಲಿ ಸಾಬೀತುಪಡಿಸಿದ್ದೇವೆ. ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಆಡಳಿತಾರೂಢ ಕಾಂಗ್ರೆಸ್ಗೆ ರಾಜಕೀಯವಾಗಿ ಉತ್ತರ ನೀಡಿವೆ. ರಾಜ್ಯದಲ್ಲಿ ಸರ್ಕಾರದ ಆಡಳಿತದ ವಿರುದ್ಧ ಜನರ ಅಸಮಾಧಾನ ಹೆಚ್ಚುತ್ತಿದೆ. ಶಿಕ್ಷಕರು ಮತ್ತು ಪದವೀಧರರು ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ತೀರ್ಪಿನ ಮೂಲಕ ಇದನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
**ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಕರೆ**
ಕಳೆದ ಮೂರುವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜನವಿರೋಧಿ ನೀತಿಗಳು ಹಾಗೂ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಸಾರ್ವಜನಿಕರ ತೆರಿಗೆ ಹಣದ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮುಖಂಡರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಕ್ಷೇತ್ರದ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
**ಹಿರಿಯ ನಾಯಕರು ಭಾಗಿ**
ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರಾದ ಮಂಜುನಾಥ್, ಅನ್ನದಾನಿ, ತಿಮ್ಮರಾಯಪ್ಪ, ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಹಿರಿಯೂರು ಕ್ಷೇತ್ರದ ಮುಖಂಡರಾದ ಜಯಣ್ಣ, ರವೀಂದ್ರಪ್ಪ, ಯಶೋಧರ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯೂರು ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಆಯ್ಕೆ ಮತ್ತು ಮೈತ್ರಿಕೂಟದ ಸಂಘಟಿತ ಕಾರ್ಯತಂತ್ರ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
