ಕರ್ನಾಟಕದ ಅಭಿವೃದ್ಧಿಗೆ ಮೋದಿ ವೇಗ: ರೈಲ್ವೆ, ಇಂಧನ ಕ್ಷೇತ್ರಕ್ಕೆ ಹೊಸ ಯೋಜನೆಗಳ ಕೊಡುಗೆ!
ಮಧ್ಯಮ ವರ್ಗದ ಸಬಲೀಕರಣಕ್ಕೆ ಕೇಂದ್ರದ ಆದ್ಯತೆ – ಪ್ರಧಾನಿ ಮೋದಿ
ಕರ್ನಾಟಕಕ್ಕೆ ನಾಲ್ಕು ಅಮೃತ್ ಭಾರತ್ ನಿಲ್ದಾಣಗಳು, ಹೊಸ ವಂದೇ ಭಾರತ್ ರೈಲು
40 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಸೌರ ವಿದ್ಯುತ್ ಸೌಲಭ್ಯ
ಬೆಂಗಳೂರು: ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ರೈಲ್ವೆ, ಇಂಧನ, ಮೂಲಸೌಕರ್ಯ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದ ಹಲವು ಸೌಲಭ್ಯಗಳನ್ನು ಇದೀಗ ಬಡ ಮತ್ತು ಮಧ್ಯಮ ವರ್ಗದ ಜನರಿಗೂ ರೈಲು ನಿಲ್ದಾಣಗಳಲ್ಲಿ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ 10ರಿಂದ 12 ವರ್ಷಗಳಲ್ಲಿ ದೇಶದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಳವಾಗಿದ್ದು, ಕರ್ನಾಟಕಕ್ಕೆ ನೀಡಲಾಗುತ್ತಿರುವ ರೈಲ್ವೆ ಅನುದಾನದಲ್ಲಿ ಒಂಬತ್ತು ಪಟ್ಟು ಏರಿಕೆಯಾಗಿದೆ. ರಾಜ್ಯಕ್ಕೆ ನಾಲ್ಕು ಅಮೃತ್ ನಿಲ್ದಾಣಗಳು, ಎರಡು ರೈಲ್ವೆ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಯೋಜನೆಗಳು ಹಾಗೂ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ಹೊಸ ವಂದೇ ಭಾರತ್ ರೈಲು ದೊರೆತಿದೆ. ಈ ರೈಲು ಮಂಗಳೂರು ಸೇರಿದಂತೆ ಕರಾವಳಿ ಭಾಗದ ಪ್ರಯಾಣಿಕರಿಗೆ ಸೆಮಿ ಹೈ-ಸ್ಪೀಡ್ ರೈಲು ಪ್ರಯಾಣದ ಹೊಸ ಅನುಭವ ನೀಡಲಿದೆ ಎಂದು ಮೋದಿ ತಿಳಿಸಿದರು.
ಇಂಧನ ಭದ್ರತೆಗೆ ಮೂರು ಪ್ರಮುಖ ಯೋಜನೆಗಳು
ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಗಳು ಇಂಧನ ಭದ್ರತೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಭಾರತವು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಉತ್ಪಾದನೆ, ಕಚ್ಚಾ ತೈಲ ಸಂಗ್ರಹಣೆ ಹಾಗೂ ಸೌರ, ಜಲ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕರ್ನಾಟಕದಲ್ಲಿ ಮೂರು ಪ್ರಮುಖ ಇಂಧನ ಯೋಜನೆಗಳನ್ನು ಉಲ್ಲೇಖಿಸಿದ ಅವರು, ಮಂಗಳೂರಿನಲ್ಲಿ 80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಎಲ್‌ಪಿಜಿ ಶೇಖರಣಾ ಯೋಜನೆ, ದೇವನಗೊಂದಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಪೂರೈಕೆಗೆ ಅನುಕೂಲವಾಗುವ ಮಾರ್ಕೆಟಿಂಗ್ ಟರ್ಮಿನಲ್ ಹಾಗೂ ಬೆಂಗಳೂರಿನಲ್ಲಿ ಪ್ರತಿದಿನ 13 ಟನ್ ಜೈವಿಕ ಅನಿಲ ಉತ್ಪಾದಿಸುವ ಸಿಬಿಜಿ ಘಟಕವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಈ ಯೋಜನೆಗಳು ಇಂಧನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ತ್ಯಾಜ್ಯ ನಿರ್ವಹಣೆ ಮತ್ತು ನೈಸರ್ಗಿಕ ಅನಿಲ ಆಮದು ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿವೆ ಎಂದರು.
300 ಗಿಗಾವ್ಯಾಟ್ ದಾಟಿದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ
ಚಿಪ್ ಉತ್ಪಾದನೆಯಿಂದ ಹಿಡಿದು ಹಡಗು ನಿರ್ಮಾಣ, ಕೃತಕ ಬುದ್ಧಿಮತ್ತೆ (AI), ದತ್ತಾಂಶ ಕೇಂದ್ರಗಳು ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಭಾರತ ಜಾಗತಿಕ ನಾಯಕತ್ವ ಸಾಧಿಸಲು ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆ ಅತ್ಯಗತ್ಯವಾಗಿದೆ ಎಂದು ಮೋದಿ ಹೇಳಿದರು.
ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 300 ಗಿಗಾವ್ಯಾಟ್‌ಗಳನ್ನು ಮೀರಿದೆ. ಶುದ್ಧ ಇಂಧನ ಗುರಿ ಸಾಧಿಸಲು ಪರಮಾಣು ವಿದ್ಯುತ್ ಉತ್ಪಾದನೆಯನ್ನೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ 40 ಸಾವಿರ ಮನೆಗಳಿಗೆ ಸೌರ ವಿದ್ಯುತ್
ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ದೇಶಾದ್ಯಂತ 60 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗಿದೆ. ಕರ್ನಾಟಕದ 40 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆದಿವೆ. ಪ್ರತಿ ಕುಟುಂಬಕ್ಕೆ ಸುಮಾರು 80 ಸಾವಿರ ರೂಪಾಯಿಗಳ ಕೇಂದ್ರದ ನೆರವು ದೊರೆಯುತ್ತಿದೆ ಎಂದು ತಿಳಿಸಿದರು.
ಅದೇ ರೀತಿ ಪಿಎಂ ಕುಸುಮ್ ಯೋಜನೆಯಡಿ ಕರ್ನಾಟಕದ ರೈತರಿಗೆ 8 ಲಕ್ಷಕ್ಕೂ ಹೆಚ್ಚು ಸೌರ ಪಂಪ್‌ಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ರೈತರ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ರೈತರು ವಿದ್ಯುತ್ ಉತ್ಪಾದಕರಾಗಿಯೂ ಬೆಳೆಯಲು ಅವಕಾಶ ಸಿಗಲಿದೆ. ಕರ್ನಾಟಕದ ಅನ್ನದಾತರು ಈಗ ಊರ್ಜಾದಾತರಾಗುತ್ತಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸುವುದು ಸರ್ಕಾರದ ಗುರಿ
2014ರ ನಂತರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಂಕಲ್ಪದಡಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ದೇಶದಲ್ಲಿ ಹೊಸ ಮಹತ್ವಾಕಾಂಕ್ಷೆಯ ಮಧ್ಯಮ ವರ್ಗ ಸೃಷ್ಟಿಯಾಗಿದೆ ಎಂದು ಮೋದಿ ಹೇಳಿದರು.
ಗೃಹೋಪಯೋಗಿ ಉಪಕರಣಗಳು, ದ್ವಿಚಕ್ರ ವಾಹನಗಳು, ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಜನರ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಪ್ರವಾಸೋದ್ಯಮ ಮತ್ತು ಸೇವಾ ವಲಯಗಳಲ್ಲಿ ಉದ್ಯೋಗ ಹಾಗೂ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ದೊರೆಯುತ್ತಿದೆ ಎಂದರು.
ಮಧ್ಯಮ ವರ್ಗದ ಜನರ ಉಳಿತಾಯ ಹೆಚ್ಚಿಸಲು 12 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರು ಮತ್ತು ಬಾಡಿಗೆ ಆದಾಯ ಗಳಿಸುವವರಿಗೆ ಅನುಕೂಲವಾಗುವ ಟಿಡಿಎಸ್ ನಿಯಮಗಳ ಪರಿಷ್ಕರಣೆ ಹಾಗೂ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸುವ ಮೂಲಕ ವಿಮಾ ಸೌಲಭ್ಯಗಳನ್ನು ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದರ ಜೊತೆಗೆ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಜನರ ಉಳಿತಾಯ ಹೆಚ್ಚಬೇಕು, ಕೊಳ್ಳುವ ಶಕ್ತಿ ಬಲಗೊಳ್ಳಬೇಕು ಮತ್ತು ಕುಟುಂಬಗಳ ಕನಸುಗಳು ನನಸಾಗುವುದರ ಜೊತೆಗೆ ದೇಶದ ಆರ್ಥಿಕ ಪ್ರಗತಿಗೂ ಅವರು ಪಾಲುದಾರರಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.
– ಸಪ್ತಸ್ವರ ನ್ಯೂಸ್
