ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಆಯವ್ಯಯ
ನಮ್ಮದು ರೈತ ಪರ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 17: ರೈತರ ಸಮಸ್ಯೆಗಳನ್ನು ಮನಗಂಡು ಪರಿಹಾರ ನೀಡುವ ಯೋಜನೆಗಳನ್ನು ಆಯವ್ಯಯದಲ್ಲಿ ಘೋಷಿಸಿರುವುದು ನಮ್ಮ ಸರ್ಕಾರ ರೈತರ ಪರವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2023-24 ರ ಆಯವ್ಯಯ ಕುರಿತಂತೆ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರೈತರಿಗೆ ಭೂ ಸಿರಿ
ಕೃಷಿಗೆ ರೈತರ ಸಾಲದ ಮಿತಿಯನ್ನು 3 ರಿಂದ 5ಲಕ್ಷದ ವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲದಲ್ಲಿ ಹೆಚ್ಚಳವಾಗದಿದ್ದು 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಲಾಭವಾಗಲಿದೆ. ಇನ್ನು ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆಯುವ ಅಗತ್ಯವಿಲ್ಲ. ಅಗತ್ಯವಿದ್ದಾಗ ಬೀಜ ಗೊಬ್ಬರ ಖರೀದಿಗೆ ಭೂಸಿರಿ ಎಂಬ ಯೋಜನೆಯಡಿ 10ಸಾವಿರ ರೂ. ನೀಡಲಾಗುವುದು. 2500 ರೂ.ರಾಜ್ಯ ಸರ್ಕಾರ, 7500 ರೂ. ನಬಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು ಎಂದರು.
ಜೀವನ ಜ್ಯೋತಿ ಜೀವ ವಿಮೆ ಯೋಜನೆ
ರೈತ ಯಾವುದೇ ಕಾರಣದಿಮದ ಸಾವನ್ನಪ್ಪಿದರೆ ಅವನ ಕುಟುಂಬಕ್ಕೆ ತೊಂದರೆಯಾದಬಾರದೆಂದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನ ಜ್ಯೋತಿ ಜೀವ ವಿಮೆ ಯೋಜನೆ ಘೋಷಣೆಯಾಗಿದೆ. ಸಹಜವಾಗಿ ತೀರಿಕೊಂಡರೂ 2 ಲಕ್ಷ ರೂ.ಗಳು ಅವರ ಕುಟುಂಬಕ್ಕೆ ದೊರೆಯುತ್ತದೆ. ರೈತರಿಗೆ 180 ಕೋಟಿ ರೂ.ಗಳ ವೆಚ್ಚದ ಯೋಜನೆ ಇದಾಗಿದ್ದು, 53 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಿದೆ. ರೈತರಿಗೆ ಬೆಲೆ ಕುಸಿತ ಆದಾಗ ಸಮಸ್ಯೆಯಾಗದಂತೆ ಆವರ್ತ ನಿಧಿ 3500 ಕೋಟಿ ಮೀಸಲಿಡಲಾಗಿದೆ. .ಅತಿ ಹೆಚ್ಚು ಹಣ ಆವರ್ತ ನಿಧಿಗೆ ನೀಡಿರುವುದು ಒಂದು ದಾಖಲೆ. ನೀರಾವರಿಗೆ 25000 ಕೋಟಿ ರೂ.ಒದಗಿಸಲಾಗಿದೆ ಎಂದರು.
ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕ
ಸರ್ಕಾರಿ ಪಿಯುಸಿ ಮತ್ತು ಪದವಿ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಶುಲ್ಕ ಸಂಪೂರ್ಣ ವಿನಾಯ್ತಿ ನೀಡಲಾಗಿದೆ. 8 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಇದರಿಂದ ಲಾಭವಾಗಲಿದೆ. ಬಡವರ ಮಕ್ಕಳಿಗೆ ಶುಲ್ಕ ಕಟ್ಟಲು ಹಣ ಇಲ್ಲದೆ ಕಾಲೇಜು ಬಿಟ್ಟ ಪರಿಸ್ಥಿತಿ ಇರಬಾರದು ಎಂದು ಈ ಯೋಜನೆಯನ್ನು ತರಲಾಗಿದೆ ಎಂದರು.
ಅನುತ್ತೀರ್ಣ ಪಿಯುಸಿ ಅಥವಾ ಪದವಿ ವಿದ್ಯಾರ್ಥಿಗಳಿಗೆ ತರಬೇತಿ
ಪಿಯುಸಿ ಅಥವಾ ಪದವಿ ಅನುತ್ತೀರ್ಣವಾಗಿದ್ದರೆ ಆ ಮಕ್ಕಳಿಗೂ ಇನ್ನೊಂದು ಅವಕಾಶ ನೀಡಲು ತರಬೇತಿಗೆ ಅವಕಾಶ ನೀಡಲಾಗಿದೆ. ಅವರಿಗೆ ವಿಶೇಷ ಅವಕಾಶ ನೀಡಿ ಮೂರು ತಿಂಗಳ ಕಾಲ ತರಬೇತಿಯನ್ನು ಐಟಿಐ ಡಿಪ್ಲೊಮಾ ಕಾಲೇಜುಗಳಲ್ಲಿ ನೀಡಲು ಪ್ರತಿ ತಿಂಗಳು 1500 ರೂ. ನೀಡಲಾಗುವುದು. ಕೆಲಸ ಸೇರಿದಾಗಲೂ 3 ತಿಂಗಳು 1500 ರೂ ಪ್ರತಿ ತಿಂಗಳು ನೀಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 3000 ಕೋಟಿ ಮೀಸಲಿಡಲಾಗಿದೆ ಎಂದರು. ನಿರುದ್ಯೋಗಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರೆಯಲು ಅನುಕೂಲವಾಗುವಂತೆ , ಪದವಿ ಮುಗಿಸಿ ಮೂರು ವರ್ಷ ಕಾಲ ಕೆಲಸ ಸಿಗದ ನಿರುದ್ಯೋಗಿಗಳಿಗೆ 2000 ಕೋಟಿ ರೂ. ಮೀಸಲಿಟ್ಟಿದ್ದೇವೆ. ದುಡಿಯುವ ಮಹಿಳೆಯರಿಗೆ ಪ್ರಯಾಣ ಮಾಡುವುದು ಬಹಳ ಕಷ್ಟವಿದ್ದು, ಅವರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದರು.
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಭೂ ರಹಿತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ 500 ರೂ. ನೀಡುವ ಯೋಜನೆ ರೂಪಿಸಲಾಗಿದೆ. ಗೃಹಿಣಿಯರಿಗೆ 1_ಲಕ್ಷ ಮಹಿಳೆಯರಿಗೆ ಮನೆಯಲ್ಲೇ ಉದ್ಯೋಗ ಮಾಡಲು ಸಹಾಯಧನ ನೀಡಲು ಘೋಷಣೆ ಮಾಡಿದೆ. 30 ಸಾವಿರ ಮಹಿಳಾ ಸ್ವ ಸಹಾಯ ಸಂಘಗಳಿಗೆ 1.50 ಲಕ್ಷ ರೂ.ಗಳನ್ನು ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ಯೋಜನೆ ಜಾರಿ ಮಾಡಲಾಗುತ್ತಿದ್ದು, ಈ ಯೋಜನೆ ಇದೇ ವರ್ಷ ಆರಂಭವಾಗಲಿದೆ ಎಂದರು.
ಹಳ್ಳಿಗಾಡಿನ ಶಾಲಾ ಮಕ್ಕಳಿಗೆ 1000 ಬಸ್ :
ಹಳ್ಳಿಗಾಡಿನಲ್ಲಿ ಶಾಲಾಮಕ್ಕಳಿಗೆ 1000 ಶಾಲಾ ಬಸ್ ಓಡಿಸಲು ತೀರ್ಮಾನ ಮಾಡಲಾಗಿದೆ. ಬಸ್ ಲಭ್ಯತೆಗನುಗುಣವಾಗಿ ಕೆಎಸ್ ಆರ್ ಟಿ ಸಿ ಅಥವಾ ಖಾಸಗಿ ಬಸ್ ಸೇವೆಯನ್ನು ಈ ಉದ್ದೇಶಕ್ಕೆ ಬಳಸಲಾಗುವುದು.ಶಾಲಾ ಬಸ್ ಗಳ ಸಮಸ್ಯೆಯನ್ನು ನೀಗಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚ್ಯುಟಿ :
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಗ್ರಂಥಪಾಲಕರು ಅವರು ನಿವೃತ್ತರಾದ ಮೇಲೆ ಗ್ರ್ಯಾಚ್ಯುಟಿ ಕೊಡಲು ತೀರ್ಮಾನ ಮಾಡಲಾಗಿದೆ. ಈ ಯೋಜನೆಗೆ ಸುಮಾರು 70 ಕೋಟಿ ರೂ.ಗಳ ವೆಚ್ಚ ಬರಲಿದೆ. ಇದಲ್ಲದೇ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಗ್ರಂಥಪಾಲಕರಿಗೆ ಈ ವರ್ಷ ಮತ್ತೊಮ್ಮೆ 1000 ರೂ. ಹೆಚ್ಚಳ .ಮಾಡಲಾಗುವುದು.ಸೇವಾ ಭದ್ರತೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಹೋಮ್ ಗಾರ್ಡ್ ಗಳಿಗೆ ಪ್ರತಿ ದಿನ 100 ರೂ ಭತ್ಯೆ ಹೆಚ್ಚಳ ಮಾಡಲಾಗುವುದು ಎಂದರು.
ಆರ್ಥಿಕ ಬಲ ವರ್ಧನೆಗೆ ಕಾರ್ಯಕ್ರಮ
ಆರ್ಥಿಕ ಬಲ ವರ್ಧನೆಗೆ ಕಾರ್ಯಕ್ರಮ ಮಾಡಿದ್ದೇವೆ. ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ 7651 ಕೋಟಿ ರೂ. ಹಣ ನೀಡಿದೆ. ಇದಕ್ಕೆ ಸಮಾನ ಅನುದಾನ ರಾಜ್ಯ ಸರ್ಕಾರದಿಂದ ನೀಡಬೇಕಾಗಿದೆ., ಭೂ ಸ್ವಾಧೀನಕ್ಕೆ ಅವಕಾಶ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಹಣ ಒದಗಿಸಲಾಗುವುದು. ಸಾಗರ ಮಾಲಾ ಯೋಜನೆ ಅಡಿಯಲ್ಲಿ 12 ಬಂದರು ಅಭಿವೃದ್ಧಿ ಗೆ ಅವಕಾಶ ದೊರೆತಿದೆ. 8 ಮೀನುಗಾರರ ಬಂದರುಗಳ ಡ್ರೆಜ್ಜಿಂಗ್ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣ ಈ ವರ್ಷ ಆರಂಭವಾಗಲಿದೆ. ರಾಯಚೂರು ಇದೇ ವರ್ಷ ಪ್ರಾರಂಭವಾಗುತ್ತಿದ್ದು ಹಣ ಒದಗಿಸಲಾಗುವುದು. ಕಾರವಾರ ನೌಕಾ ನೆಲೆಯ ಅಭಿವೃದ್ದಿಗೆ ಹೆಚ್ಚುವರಿ 54 ಕೋಟಿ ರೂ. ಒದಗಿಸಲಾಗುವುದು. ದಾವಣೆಗೆರೆ ಕೊಪ್ಪಳ ವಿಮಾನ ನಿಲ್ದಾಣಕ್ಕೆಈ ವರ್ಷ ಡಿಪಿಆರ್ ಸಿದ್ಧಗೊಳಿಸಲಾಗುವುದು. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಅನುದಾನ ಮೀಸಲಿಡಲಾಗಿದೆ ಎಂದರು.
ಘೋಷಿತ ಕಾರ್ಯಕ್ರಮಗಳ ಅನುಷ್ಠಾನ
100 ಎಸ್ ಸಿ ಎಸ್ ಟಿ ಹಾಸ್ಟೆಲ್ ಗಳು, 50 ಓಬಿಸಿ ಹಾಸ್ಟೆಲ್, 5 ಮೆಗಾ ಹಾಸ್ಟೆಲ್ ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ವಸತಿ ಶಾಲೆಗಳ ಅಭಿವೃದ್ದಿ, ಹೊಸ ಶಾಲೆಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗುವುದು. ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚವರಿಯಾಗಿ ವಿದ್ಯಾ ಸಿರಿ ಯೋಜನೆ ನೀಡಲಾಗುತ್ತಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 15000 ನೀಡಲಾಗುತ್ತಿದೆ. ಕಳೆದ ಬಾರಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ. ಹಣ ಮೀಸಲಿಡುವುದಷ್ಟೆ ಅಲ್ಲ. ಅನುಷ್ಠಾನ ಮಾಡುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ. ಕೇವಲ ಬಜೆಟ್ ಘೋಷಣೆಯಲ್ಲಿ, ಘೋಷಣೆಗಳನ್ನು ವಾಸ್ತವದಲ್ಲಿ ಅನುಷ್ಠಾನಗೊಳಿಸುತ್ತಿರುವ ಸರ್ಕಾರ ನಮ್ಮದು ಎಂದರು.
ಅಸಂಘಟಿತ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ :
ಕುರಿಗಾರರ ಅಭಿವೃಧ್ಧಿಗೆ 355 ಕೋಟಿ ರೂ.ಗಳ ಯೋಜನೆ, ಬಡಿಗೇರ, ಕಂಬಾರ, ಕುಂಬಾರ ಸೇರಿದಂತೆ ಕುಶಲಕರ್ಮಿಗಳಿಗೆ ಕಾಯಕ ಯೋಜನೆ ಅಡಿ 50 ಸಾವಿರ ರೂ ನೀಡಲಾಗುವುದು. ಕಾರ್ಮಿಕ ವರ್ಗದ ಏಳಿಗೆಗೆ ವಿದ್ಯಾನಿಧಿ, ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಎಲ್ಲ ಕಸುಬುಗಳಿಗೆ ಸೇರಿದ ಸುಮಾರು 70 ಲಕ್ಷವಿರುವ ಅಸಂಘಟಿತ ಕಾರ್ಮಿಕರಿಗೆ ನಿಗಮ ಸ್ಥಾಪನೆ ಮಾಡಲಾಗುವುದು. ಎಲ್ಲ ಉದ್ಯೋಗ, ಆರೋಗ್ಯ, ಶಿಕ್ಷಣಗಳಲ್ಲಿ ಅಸಂಘಟಿತ ಕಾರ್ಮಿಕರ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಎಸ್ಸಿ ಎಸ್ಟಿ ಗುತ್ತಿಗೆ ಮೊತ್ತವನ್ನು 1 ಕೊಟಿ ರೂ.ಗೆ ಹೆಚ್ಚಳ :
ಎಸ್ಸಿಪಿ ಟಿಎಸ್ ಪಿ ಯೋಜನೆಯಲ್ಲಿ ತಾಂತ್ರಿಕ ತೊಂದರೆ, 7ಡಿ ಕಾಯ್ದೆಗೆ ತಿದ್ದುಪಡಿ, ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಕ್ರಮ, ಎಸ್ಸಿ ಎಸ್ಟಿ ಗುತ್ತಿಗೆ ಮೊತ್ತವನ್ನು 1 ಕೊಟಿ ರೂ.ಗೆ ಹೆಚ್ಚಳ ಮಾಡಲಾಗುವುದು. ಸಾಮಾಜಿಕ ವಲಯ, ಮೂಲ ಸೌಕರ್ಯ, ಆರ್ಥಿಕ ನಿರ್ವಹಣೆ ಚೆನ್ನಾಗಿ ಮಾಡಿದ್ದೇವೆ. ಜಿಎಸ್ ಟಿ ಜಾರಿಯಾಗುವ ಮುಂಚಿನ ಪ್ರಕರಣಗಳಿಗೆ ಒಂದೇ ಬಾರಿ ಸೆಟಲ್ ಮೆಂಟ್ ಮಾಡಿಕೊಳ್ಳಲು ಪ್ರೀ ಜಿಎಸ್ ಟಿ ರೆಜಿಮ್ ಗೆ ಅವಕಾಶ ನೀಡಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಪರಿಹಾರ:
ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡಲು ಭೂ ಸ್ವಾಧಿನ ಪ್ರಕ್ರಿಯೆ ಹಂತ ಹಂತವಾಗಿ ಆಗುತ್ತದೆ. ಎಲ್ಲರಿಗೂ ಒಂದೇ ರೀತಿಯ ದರ ನಿಗದಿ ಮಾಡಿದ್ದೇವೆ. ಈ ನೆಪವಿಟ್ಟುಕೊಂಡು ಹಿಂದಿನ ಸರ್ಕಾರಗಳು ದರ ನಿಗದಿ ಕೆಲಸವನ್ನು ಮಾಡಿರಲಿಲ್ಲ. ಈಗ ಏಕರೀತಿಯ ದರ ನಿಗದಿಪಡಿಸಲಾಗಿದ್ದು, ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ. ಅವಶ್ಯಕತೆ ಇದ್ದ ಹಾಗೆ ಹಂತ ಹಂತವಾಗಿ, ಹಣ ಮೀಸಲಿಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು
ಕಲ್ಯಾಣ ಕರ್ನಾಟಕದಲ್ಲಿ ಎರಡು ಪ್ರಮಾಣದ ಮೂಲಭೂತ ಸೌಕರ್ಯಗಳಿವೆ. ಮಾನವ ಮೂಲಭೂತ ಸೌಕರ್ಯಗಳಾದ ಶಾಲಾ ಆಸ್ಪತ್ರೆಗಳು, ಮಕ್ಕಳ ಪೌಷ್ಠಿಕ ಆಹಾರ ಮತ್ತು ದೊಡ್ಡ ಪ್ರಮಾಣ ಮೂಲಭೂತಸೌಕರ್ಯಗಳಾದ ರೈಲ್ವೆ, ರಸ್ತೆ, ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಗಳು, ಕೈಗಾರಿಕೆ ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.
—