ಶಕ್ತಿ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಡಿ.ಕೆ. ಶಿವಕುಮಾರ್
ಮೈಸೂರು: ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ಸಂಗಮವಾಗಿದೆ. ಮಾನವ ಧರ್ಮವೇ ವಿಶ್ವಶಾಂತಿಗೆ ಬುನಾದಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಮೈಸೂರು ರೇಷ್ಮೆ, ಶ್ರೀಗಂಧ, ಮೈಸೂರು ಪಾಕ್ ಹಾಗೂ ಕನ್ನಂಬಾಡಿ ಅಣೆಕಟ್ಟಿನಂತಹ ಸಾಧನೆಗಳು ‘ಬ್ರ್ಯಾಂಡ್ ಮೈಸೂರು’ಗೆ ಗುರುತಾಗಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾನತೆಯ ಆಶಯವನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿವೆ ಎಂದ ಅವರು, ಮಠಮಾನ್ಯಗಳ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಮಾಜಸೇವೆ ದೇಶಕ್ಕೆ ಮಾದರಿಯಾಗಿದೆ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು ಎಂದು ಕರೆ ನೀಡಿದರು.
ಮೈಸೂರು ದಸರಾ ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಸಾರುವ ನಾಡಹಬ್ಬವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ದೊರೆಯ ಹಬ್ಬ ಧರೆಯ ಹಬ್ಬವಾಗಿದೆ: ಅಭಿನವ ಗವಿಸಿದ್ದೇಶ್ವರ ಶ್ರೀ
ಮೈಸೂರು ಕರ್ನಾಟಕ ಸಂಸ್ಕೃತಿಯ ಆತ್ಮ, ಸಂಸ್ಕಾರವಂತರ ನಗರ; ನೆಲ-ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
, ಮೈಸೂರು ಕರ್ನಾಟಕ ಸಂಸ್ಕೃತಿಯ ಆತ್ಮ, ಅರಿವಿನ ಮಂಟಪ ಹಾಗೂ ಸಂಸ್ಕಾರವಂತರ ನಗರವಾಗಿದೆ. ವಿಜಯನಗರದ ಮಹಾನವಮಿ ದಿಬ್ಬದಲ್ಲಿ ಆರಂಭವಾದ ದಸರಾ ಪರಂಪರೆ ಇಂದು ಮೈಸೂರಿನ ನಾಡಹಬ್ಬವಾಗಿ ಬೆಳೆದು ಬಂದಿದೆ. ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಣ್ಣಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ದಸರಾ ನಾಡಿನ ಗತವೈಭವದ ಸಂಕೇತವಾಗಿದ್ದು, ಭವಿಷ್ಯಕ್ಕೆ ದಿಕ್ಸೂಚಿಯಾಗಿದೆ ಎಂದರು.
ಕನ್ನಡ ನಾಡು ಕವಿ, ದಾಸ, ಶರಣರು ಹಾಗೂ ಮಹನೀಯರಿಗೆ ಜನ್ಮ ನೀಡಿದ ಪುಣ್ಯಭೂಮಿ. ಬಸವಣ್ಣನವರು ದುಡಿದು ತಿನ್ನುವುದನ್ನು ಕಲಿಸಿದ್ದಾರೆಯೇ ಹೊರತು, ಬಡಿದು ತಿನ್ನುವುದನ್ನಲ್ಲ. ಧರ್ಮವೆಂದರೆ ಇನ್ನೊಬ್ಬರನ್ನು ತುಳಿದು ಬದುಕುವುದಲ್ಲ, ತಿಳಿದು ಬದುಕುವುದು. ಈ ಭೂಮಿಯನ್ನೇ ಸ್ವರ್ಗವನ್ನಾಗಿಸುವುದು ನಿಜವಾದ ಧರ್ಮ ಎಂದು ಹೇಳಿದರು.
ಮೈಸೂರಿನ ಅರಸರು ಜನರ ಅಳಲಿಗೆ ಸ್ಪಂದಿಸಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕನ್ನಂಬಾಡಿ ಅಣೆಕಟ್ಟಿನ ನಿರ್ಮಾಣಕ್ಕೆ ರಾಜಮನೆತನದ ರಾಣಿಯರು ಆಭರಣಗಳನ್ನು ಒತ್ತೆ ಇಡಲು ಮುಂದಾಗಿದ್ದು ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.
ನದಿ, ಜಲ ಮತ್ತು ಪರಿಸರ ಸಂರಕ್ಷಣೆಗೆ ಕರೆ
ಗೂಗಲ್‌ನಲ್ಲಿ ಅನೇಕ ವಿಷಯಗಳನ್ನು ಪಡೆಯಬಹುದು. ಆದರೆ ಅನ್ನ ಮತ್ತು ನೀರನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಅವುಗಳಿಗಾಗಿ ರೈತರು ಬೆವರು ಸುರಿಸಬೇಕು ಎಂದು ಸ್ವಾಮೀಜಿ ಹೇಳಿದರು.
ತುಂಗಭದ್ರೆ, ಕಾವೇರಿಯಂತಹ ನದಿಗಳು ನಾಡಿನ ಸಂಪತ್ತಾಗಿದ್ದು, ಅವು ಕೇವಲ ನದಿಗಳಲ್ಲ, ಜನರ ಅನ್ನದ ತಟ್ಟೆಗಳಾಗಿವೆ. ನದಿ ಮೂಲಗಳು, ಕೆರೆ, ಹಳ್ಳ-ಕೊಳ್ಳಗಳನ್ನು ಸಂರಕ್ಷಿಸುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದ್ದು, ಜನರೂ ಕೈಜೋಡಿಸಬೇಕು ಎಂದರು.
ಲಕ್ಷ ದೀಪಗಳನ್ನು ಹಚ್ಚುವುದಕ್ಕಿಂತ ವೃಕ್ಷಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ಬೆಳಕಾಗಬೇಕು. ನಾವು ಕಲಿತ ಶಾಲೆಗೆ ಪ್ರಯೋಗಾಲಯ ನಿರ್ಮಿಸುವುದು, ಮಕ್ಕಳಿಗೆ ಶರಣರ ವಚನಗಳನ್ನು ಪರಿಚಯಿಸುವುದು ಸೇರಿದಂತೆ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ಕನ್ನಡಿಗನೂ ಒಂದು ಉತ್ತಮ ಸಂಕಲ್ಪದ ಹೆಜ್ಜೆ ಇಟ್ಟರೆ ಕೋಟ್ಯಂತರ ಜನರ ಹೆಜ್ಜೆಗಳು ನಾಡಿನ ಪ್ರಗತಿಯತ್ತ ಸಾಗಲಿವೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಪ್ತಸ್ವರ ನ್ಯೂಸ್ | ಮೈಸೂರು
