IMG 20200923 221747

Covid 19: CM ಗಳ ಜೊತೆ PM ಮಾತು…

STATE Genaral

*ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವೀಡಿಯೋ ಸಂವಾದ*
ಬೆಂಗಳೂರು, ಸೆಪ್ಟೆಂಬರ್ 23: ಕೋವಿಡ್ 19 ಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ರಾಜ್ಯ ಖಾತೆ ಸಚಿವರಾದ ಅಶ್ವಿನಿಕುಮಾರ್ ಚೌಬೆ ಅವರು ಹಾಗೂ ಕೇಂದ್ರ ಆರೋಗ್ಯ ಮಂತ್ರಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂವಾದದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯ ಪ್ರಮುಖ ಅಂಶಗಳು:

1.ಸೋಂಕಿತರು ಆಸ್ಪತ್ರೆಗೆ ದಾಖಲಾದ ನಂತರ ಅವರಿಗೆ ಅಗತ್ಯವಿರುವ ಚಿಕಿತ್ಸೆ, ಔಷಧಿಗಳು ಮತ್ತು ಆಕ್ಷಿಜನ್ ಲಭ್ಯತೆಯನ್ನು ಖಾತ್ರಿಪಡಿಸಲಾಗುತ್ತಿದೆ.

2.ರಾಜ್ಯದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಸಾಕಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ನಮ್ಮಲ್ಲಿ 136 ಪರೀಕ್ಷಾ ಪ್ರಯೋಗಾಲಯಗಳಿದ್ದು, ಪ್ರತಿ ದಿನದ ಪರೀಕ್ಷಾ ಸಾಮಥ್ರ್ಯವನ್ನು 70 ಸಾವಿರ ಮಾದರಿಗಳಿಗೆ ಹೆಚ್ಚಿಸಲಾಗಿದೆ. ಈವರೆಗೆ 43 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ.

IMG 20200923 221734

3.ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ symptomatic ಪ್ರಕರಣಗಳನ್ನು ಕೂಡಲೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿಯೇ ಆಂಬ್ಯುಲೆನ್ಸ್‍ಗಳ ಸಂಖ್ಯೆಯನ್ನು 800 ರಿಂದ 2000ಕ್ಕೆ ಹೆಚ್ಚಿಸಲಾಗಿದೆ.

4.24 ಗಂಟೆಗಳೊಳಗಾಗಿ ಎಲ್ಲಾ ಪಾಸಿಟಿವ್ ಪ್ರಕರಣಗಳ ಸಂಪರ್ಕಿತರನ್ನು ಗುರುತಿಸಲು ಹಾಗೂ 48 ಗಂಟೆಗಳೊಳಗಾಗಿ ಅವರೆಲ್ಲರನ್ನು ಕ್ವಾರಂಟೈನ್ ಮಾಡುವಂತೆ ಗುರಿ ನಿಗದಿ ಮಾಡಲಾಗಿದೆ.

5.ಪರೀಕ್ಷೆಗಳನ್ನು ಹೆಚ್ಚು ಮಾಡುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳು ಹಾಗೂ ಮರಣ ಪ್ರಮಾಣವನ್ನು ಕ್ರಮೇಣವಾಗಿ ಕಡಿಮೆ ಮಾಡಲು ಸಾಧ್ಯವಾಗಿದೆ. 2020 ರ ಜುಲೈ 13 ಮತ್ತು ಜುಲೈ 19ರ ನಡುವೆ ರಾಜ್ಯದಲ್ಲಿ ಅತಿ ಹೆಚ್ಚಿನ ಮರಣ ಪ್ರಮಾಣ ಅಂದರೆ ಶೇ. 2.6ರಷ್ಟಿತ್ತು. ಪ್ರಸ್ತುತ, ಕರ್ನಾಟಕದ ಮರಣ ಪ್ರಮಾಣವು ಶೇ.1.54ರಷ್ಟಿದೆ. ಕಳೆದ ವಾರದಲ್ಲಿ ಇದು ಕೇವಲ 1.3 ರಷ್ಟಿತ್ತು. ಪ್ರಧಾನಮಂತ್ರಿಗಳು ನಿದಗಿಪಡಿಸಿರುವಂತೆ ಬಹಳ ಬೇಗ ಮರಣಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆ ಮಾಡಲಾಗುವುದು.

6.ಕ್ಲಿನಿಕಲ್ ನಿರ್ವಹಣೆಯ ಕುರಿತು ಶಿಷ್ಟಾಚಾರವನ್ನು ನೀಡಲು ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯು ಭಾರತ ಸರ್ಕಾರ ಮತ್ತು ಐ.ಸಿ.ಎಂ.ಆರ್ ಶಿಫಾರಸ್ಸುಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ರಾಜ್ಯಕ್ಕೆ ಚಿಕಿತ್ಸಾ ಶಿಷ್ಟಾಚಾರವನ್ನು ಶಿಫಾರಸ್ಸು ಮಾಡುತ್ತದೆ. ಪ್ರಸ್ತುತ, ಶಿಫಾರಸ್ಸಿನ ಮೂರನೇ ಆವೃತ್ತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

7.‘ನಾವೆಲ್ ಔಷಧ’ಗಳನ್ನು ಸೋಂಕಿತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರೆಮಿಡಿಸ್ವಿರ್ ಸೇರಿದಂತೆ ಎಲ್ಲಾ ಔಷಧಗಳು ನಿರಂತರವಾಗಿ ಸರಬರಾಜು ಆಗುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ.

8.ಕೋವಿಡ್ 19 ರ ಗಂಭೀರ ಪ್ರಕರಣಗಳ ಚಿಕಿತ್ಸೆಗೆ ಆಕ್ಸಿಜನ್ ಬೆಡ್‍ಗಳು, ಐ.ಸಿ.ಯುಗಳು ಹಾಗೂ ವೆಂಟಿಲೇಟರ್‍ಗಳು ಅತ್ಯಗತ್ಯವಾಗಿವೆ. ಸೋಂಕು ಪ್ರಾರಂಭವಾದ ಸಂದರ್ಭದಲ್ಲಿ, 7 ಸಾವಿರ ಆಕ್ಸಿಜನ್ ಬೆಡ್‍ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿತ್ತು. ಈ ಸಂಖ್ಯೆಯನ್ನು 18 ಸಾವಿರಕ್ಕೆ ಹೆಚ್ಚಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಇದಲ್ಲದೆ, 4250 ಆಕ್ಷಿಜನೇಟೆಡ್ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ.

9.1811 ಐ.ಸಿಯು ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು 1269 ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ.

10.ಹಾಸಿಗೆಗಳನ್ನು ಆಕ್ಸಿಜನೇಟ್ ಮಾಡುವ ಕಾರ್ಯ ಪೂರ್ಣವಾದ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿಯೇ 31 ಸಾವಿರ ಹಾಸಿಗೆಗಳು ಲಭ್ಯವಿರಲಿದೆ.

11.ರಾಜ್ಯದಲ್ಲಿ ಅಗತ್ಯವಿರುವ ಆಸ್ಪತ್ರೆಗಳಿಗೆ ಸಕಾಲದಲ್ಲಿ ಆಕ್ಸಿಜನ್ ರವಾನೆಯಾಗುವುದನ್ನು ಖಾತ್ರಿಪಡಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ.

12.ಕೈಗಾರಿಕಾ ಆಕ್ಸಿಜನ್ ಸಿಲಿಂಡರ್‍ಗಳನ್ನು ವೈದ್ಯಕೀಯ ಸಿಲಿಂಡರ್‍ಗಳನ್ನಾಗಿ ಪರಿವರ್ತಿಸಲು ಅನುಮತಿಯನ್ನು ನೀಡಲಾಗಿದೆ. ಸಂಗ್ರಹಣಾ ವ್ಯವಸ್ಥೆ ಕಡಿಮೆಯಿರುವ ಆಸ್ಪತ್ರೆಗಳಲ್ಲಿ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ.

13.ಆಕ್ಸಿಜನೇಟೆಡ್ ಹಾಸಿಗೆಗಳು ಮತ್ತು ಐ.ಸಿ.ಯುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಕ್ಸಿಜನ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.ವೈದ್ಯಕೀಯ ಉದ್ದೇಶಗಳಿಗಾಗಿ ಲಿಕ್ವಿಡ್ ಆಕ್ಸಿಜನ್‍ನ್ನಿನ ಲಭ್ಯತೆಯು ಪ್ರಸ್ತುತ ದಿನಂ ಪ್ರತಿ 375 ಮೆಟ್ರಿಕ್ ಟನ್ ನಷ್ಟಿದ್ದು, ಸದ್ಯಕ್ಕೆ ಸಾಕಾಗುತ್ತಿದೆ.ಆದರೆ, ಆಕ್ಸಿಜನೇಟೆಡ್ ಬೆಡ್‍ಗಳನ್ನು ಹೆಚ್ಚಿಸುವ ಯೋಜನೆ ಪೂರ್ಣಗೊಂಡ ನಂತರ ಹಾಗೂ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾದಲ್ಲಿ, ನಾವು ಕೈಗಾರಿಕೆಗಳಿಂದ ಸಾಕಷ್ಟು ವೈದ್ಯಕೀಯ ಆಕ್ಸಿಜನ್‍ನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಪ್ರಕರಣಗಳು ಗರಿಷ್ಠ ಮಟ್ಟ ತಲುಪಿದ ಸಂದರ್ಭದಲ್ಲಿ ಆಕ್ಸಿಜನ್ ಬೇಡಿಕೆಯು ದಿನವೊಂದಕ್ಕೆ 870 ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿದೆ.

14.ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯು, ಕೈಗಾರಿಕೆಗಳು ನೂತನ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸುವಂತೆ ಉತ್ತೇಜಿಸಲು ಪ್ರೋತ್ಸಾಹಕಗಳನ್ನು ನೀಡಲು ಮನವಿ ಮಾಡಲಾಯಿತು.

15.ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲು ಆಸ್ಪತ್ರೆಗಳ ಮಟ್ಟದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು.

ಸಲಹೆಗಳು:

1. ಮುಂದಿನ ಆರು ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೋವಿಡ್ ನಿಯಂತ್ರಣವನ್ನು ಸಾಧಿಸುವುದು.

2. ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಲ್ಲಿ ಅವರಿಗೆ ಕೋವಿಡ್ ಲಕ್ಷಣಗಳಿರುವವರಿಗೆ ಪುನ: ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಮಾಡುವುದು.

3. ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವ್ಯಾಪಕವಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು.

4. ಕೋವಿಡ್ ಬಗ್ಗೆ ಅರಿವು ಮೂಡಿಸಲು ಜನಾಂದೋಲನವನ್ನು ರೂಪಿಸುವುದು.

5. ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು.

6. ನಿರ್ಬಂಧಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು

7. ಜೀವ ಹಾಗೂ ಜೀವನವನ್ನು ಉಳಿಸುವ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸೂಕ್ತ ಪರೀಕ್ಷಾ ಮತ್ತು ಆಸ್ಪತ್ರೆ ಸೌಕರ್ಯಗಳನ್ನು ಖಾತ್ರಿಪಡಿಸಿಕೊಂಡು ಹಂತ ಹಂತವಾಗಿ ಆರಂಭಿಸುವುದು.

8. ಮನೆ ಆರೈಕೆಯಲ್ಲಿರುವ ಸೋಂಕಿತರ ನಿರಂತರ ಮೇಲ್ವಿಚಾರಣೆಯನ್ನು ಕಡ್ಡಾಯವಾಗಿ ಕೈಗೊಳ್ಳುವುದು.

9. ಪ್ರತಿ ಜೀವವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಕರೋನಾ ಹರಡುವುದನ್ನು ನಿಯಂತ್ರಿಸುವುದು ಕೂಡ ಪ್ರಮುಖವಾಗಿದೆ.

10. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚಿಸುವುದು ಅತಿ ಮುಖ್ಯ. ಮೈಕ್ರೋ ಕಂಟೈನ್‍ಮೆಂಟ್ ಜೋನ್‍ಗಳನ್ನು ರೂಪಿಸಬೇಕು.

11. ಕರ್ನಾಟಕದಲ್ಲಿ ಹೆಚ್ಚಿನ ಪರೀಕ್ಷೆಗಳಾಗುತ್ತಿವೆ. ವೈಜ್ಞಾನಿಕ ಪರೀಕ್ಷೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್‍ನಿಂದ ಮರಣ ಹೊಂದಿರುವವರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು.

12. ಸರ್ವೇಕ್ಷಣಾ ಕ್ರಮಗಳು, ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳು ಮೂರು ಪಟ್ಟು ಹೆಚ್ಚಾಗಬೇಕು.

ಸಭೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.