ಬರ ಪರಿಹಾರಕ್ಕೆ ₹22,400 ಕೋಟಿ ನೆರವಿಗೆ ಪರಮೇಶ್ವರ ಆಗ್ರಹ!
226 ತಾಲ್ಲೂಕುಗಳಲ್ಲಿ ಭೀಕರ ಬರ; 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ – ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಪತ್ರ ಬರೆದ ಡಿಸಿಎಂ
ಬೆಂಗಳೂರು: ನವೆಂಬರ್ 03 ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ₹22,400.58 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ತುರ್ತು ಭೇಟಿಗೆ ಸಮಯ ನೀಡುವಂತೆಯೂ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 62 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ!
ಕರ್ನಾಟಕದ 226 ತಾಲ್ಲೂಕುಗಳು ಬರಪೀಡಿತವಾಗಿದ್ದು, ಸುಮಾರು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿನ ಮೇಲೆ ಬರದ ಹೊಡೆತ ಗಂಭೀರ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
₹20,585 ಕೋಟಿಯಿಂದ ₹22,400 ಕೋಟಿಗೆ ಪರಿಹಾರದ ಬೇಡಿಕೆ ಹೆಚ್ಚಳ
ಕೇಂದ್ರ ಸರ್ಕಾರವು SDRF ಮತ್ತು NDRF ಅಡಿಯಲ್ಲಿ 2026-27ರಿಂದ 2030-31ರ ಅವಧಿಗೆ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿದೆ. ಇದರ ಹಿನ್ನೆಲೆಯಲ್ಲಿ ಕರ್ನಾಟಕದ ಬರ ಪರಿಹಾರದ ಬೇಡಿಕೆಯನ್ನು ₹20,585.73 ಕೋಟಿಯಿಂದ ₹22,400.58 ಕೋಟಿಗೆ ಹೆಚ್ಚಿಸಲಾಗಿದೆ.
ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿ ಪರಿಹಾರದ ಮೊತ್ತ ₹6,128.70 ಕೋಟಿಯಿಂದ ₹7,943.55 ಕೋಟಿಗೆ ಏರಿಕೆಯಾಗಿದೆ. ಅಂದರೆ ಹೆಚ್ಚುವರಿಯಾಗಿ ₹1,814.85 ಕೋಟಿ ನೆರವಿನ ಅಗತ್ಯವಿದೆ ಎಂದು ಡಾ. ಪರಮೇಶ್ವರ ತಿಳಿಸಿದ್ದಾರೆ.
ಕೇಂದ್ರದ ಪರಿಹಾರ ಮಾನದಂಡಗಳೇ ಅಸಮರ್ಪಕ!
ಕೇಂದ್ರ ಸರ್ಕಾರ ಪರಿಷ್ಕರಿಸಿರುವ ಪರಿಹಾರ ಮಾನದಂಡಗಳು ರೈತರ ನೈಜ ಕೃಷಿ ವೆಚ್ಚಕ್ಕೆ ಅನುಗುಣವಾಗಿಲ್ಲ ಎಂದು ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹30,000 ಪರಿಹಾರ ನಿಗದಿಪಡಿಸಲಾಗಿದೆ.
ಆದರೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ ಸೇರಿದಂತೆ ಕೃಷಿಗೆ ತಗಲುವ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ 2026ರ ಕೃಷಿ ವೆಚ್ಚ ಮತ್ತು ರೈತರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಮಾನದಂಡಗಳನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಳೆಯ ಕೃಷಿ ಗಣತಿ ಬದಲು FRUITS ದತ್ತಾಂಶ ಬಳಕೆಗೆ ಒತ್ತಾಯ
ರೈತರಿಗೆ ಪರಿಹಾರ ನೀಡಲು 2015-16ರ ಕೃಷಿ ಗಣತಿಯ ದತ್ತಾಂಶ ಬಳಸುತ್ತಿರುವುದಕ್ಕೂ ಡಾ. ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ತು ವರ್ಷಗಳ ಹಿಂದಿನ ಮಾಹಿತಿ ಇಂದಿನ ರೈತರ ಭೂಹಿಡುವಳಿ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ.
ಆದ್ದರಿಂದ ಕರ್ನಾಟಕ ಸರ್ಕಾರದ FRUITS ದತ್ತಾಂಶವನ್ನು ಬಳಸುವ ಮೂಲಕ ಅರ್ಹ ರೈತರನ್ನು ಗುರುತಿಸಿ ಪರಿಹಾರ ವಿತರಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರದ ತುರ್ತು ಮಧ್ಯಪ್ರವೇಶಕ್ಕೆ ಮನವಿ
ರಾಜ್ಯದ ಪರಿಷ್ಕೃತ ಬರ ಪರಿಹಾರದ ಮನವಿಯನ್ನು ತ್ವರಿತವಾಗಿ ಪರಿಶೀಲಿಸಿ, ನಿಯಮಾನುಸಾರ ದೊರೆಯಬೇಕಾದ ಪರಿಹಾರ ಮೊತ್ತವನ್ನು ಶೀಘ್ರ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಡಾ. ಜಿ. ಪರಮೇಶ್ವರ ಒತ್ತಾಯಿಸಿದ್ದಾರೆ.
ರೈತರ ಹಿತಾಸಕ್ತಿಯಲ್ಲಿ ರಾಜಕೀಯ ಅಥವಾ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಆಶಯದಂತೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಒಂದು ಮುಂಗಾರು ವೈಫಲ್ಯದಿಂದ ರೈತರ ಹಲವು ವರ್ಷಗಳ ಪರಿಶ್ರಮ ವ್ಯರ್ಥವಾಗಬಾರದು. ರೈತರು ಮತ್ತೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಅರ್ಥಪೂರ್ಣ ಆರ್ಥಿಕ ನೆರವು ಸಿಗಬೇಕು. ಕೇವಲ ಸಹಾನುಭೂತಿ ಸಾಲದು, ರೈತರ ನಷ್ಟಕ್ಕೆ ಅನುಗುಣವಾಗಿ ನ್ಯಾಯಯುತ ಪರಿಹಾರ ದೊರೆಯಬೇಕು ಎಂದು ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಪ್ತಸ್ವರ ನ್ಯೂಸ್ | ಬೆಂಗಳೂರು
