file 00000000564c8211935b57fbac0d4086 200kb

Karnataka : ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ….!

Genaral STATE

ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಡಿಸಿಎಂ ಡಿ.ಕೆ. ಶಿವಕುಮಾರ್

ಜಾತಿ-ಕುಲದ ಹೆಸರಿನಲ್ಲಿ ಸಂಘರ್ಷ ಬೇಡ; ಮಾನವೀಯತೆ, ಸಮಾನತೆಯ ಹಾದಿಯಲ್ಲಿ ಸಾಗೋಣ – ಕನಕದಾಸರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ

ಬೆಂಗಳೂರು, ನ.27: ಕನಕದಾಸರ ತತ್ವ, ಭಕ್ತಿ ಹಾಗೂ ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆ. ಜಾತಿ ಮತ್ತು ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಹಾಗೂ ಸಮಾನತೆಯ ಹಾದಿಯಲ್ಲಿ ಸಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬೆಂಗಳೂರಿನ ಶಾಸಕರ ಭವನದ ಬಳಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನಕದಾಸರ ಜೀವನದ ಆದರ್ಶಗಳು ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ಹೆಜ್ಜೆಗುರುತುಗಳನ್ನು ಪಾಲಿಸಿಕೊಂಡು ನಡೆಯುವುದೇ ಆ ಮಹಾನ್ ದಾಸರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

“ಕುಲ ಕುಲ ಕುಲವೆಂದು ಹೊಡೆದಾಡಬೇಡಿ, ಇದೆಲ್ಲವನ್ನೂ ಬಿಟ್ಟು ಮಾನವೀಯತೆಯ ಹಾದಿಯಲ್ಲಿ ಸಾಗಬೇಕು ಎಂದು ಕನಕದಾಸರು ನಮಗೆಲ್ಲ ಕಿವಿಮಾತು ಹೇಳಿದ್ದಾರೆ. ಅವರ ಈ ಸಂದೇಶವನ್ನು ನಾವೆಲ್ಲರೂ ಪಾಲಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ” ಎಂದು ತಿಳಿಸಿದರು.

ಭಕ್ತಿಯ ಪರಂಪರೆಯಲ್ಲಿ ಕನಕದಾಸರು ಅತ್ಯಂತ ಶ್ರೇಷ್ಠ ಸ್ಥಾನ ಹೊಂದಿದ್ದಾರೆ. ಭಕ್ತಿಗೆ ಕೃಷ್ಣನೇ ತಿರುಗಿದ ಪ್ರಸಂಗವು ಕನಕದಾಸರ ಅಪಾರ ಭಕ್ತಿಗೆ ಸಾಕ್ಷಿಯಾಗಿದೆ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಬಿಟ್ಟುಹೋದ ಆದರ್ಶಗಳು, ತತ್ವಗಳು ಮತ್ತು ಸಂದೇಶಗಳು ಸದಾ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.

ಕನಕದಾಸರ ಜಯಂತಿ ಹಾಗೂ ಸ್ಮರಣಾ ಕಾರ್ಯಕ್ರಮಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಅವರ ಚಿಂತನೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀಗಳ ಆಹ್ವಾನದ ಮೇರೆಗೆ ಹಾವೇರಿಗೆ ಭೇಟಿ

ಹಾವೇರಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಸಂಬಂಧಪಟ್ಟ ಸಮುದಾಯದ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಶ್ರೀಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹಾವೇರಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ಕನಕದಾಸರ ಸಮಾನತೆ, ಮಾನವೀಯತೆ ಮತ್ತು ಭಕ್ತಿಯ ಸಂದೇಶಗಳನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ತಮ್ಮ ಮಾತುಗಳ ಮೂಲಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *