IMG 20201008 WA0016

ಶಾಲೆ ಆರಂಭಕ್ಕೆ ಆತುರವಿಲ್ಲ….!

STATE Genaral

*ಶಿಕ್ಷಕ, ಪದವೀಧರ ಕ್ಷೇತ್ರಗಳಲ್ಲಿ ಗೆಲವು ನಮ್ಮದೇ:‌ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿಸುತ್ತಿದ್ದಾರೆ*

*ಶಾಲೆ ಆರಂಭಕ್ಕೆ ಆತುರವಿಲ್ಲ, ತಜ್ಞರ ವರದಿ ಬಳಿಕ ನಿರ್ಧಾರ*

ಬೆಂಗಳೂರು, ಅ 8 : – ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಪ್ರಬುದ್ಧ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದು,‌ ನಾಲ್ವರು ಅಭ್ಯರ್ಥಿಗಳಿಗೆ ಗೆಲವು ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ವಿಧಾನಪರಿಷತ್ ಆಗ್ನೇಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಾದ ಪುಟ್ಟಣ್ಣ ಮತ್ತು ಚಿದಾನಂದಗೌಡ ಅವರ ನಾಮಪತ್ರ ಸಲ್ಲಿಕೆ ಬಳಿಕ ಸಚಿವರು ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಸಮರ್ಥ ಆಡಳಿತದ ಮೂಲಕ ಪದವೀಧರ ಮತ್ತು ಶಿಕ್ಷಕ ಸಮುದಾಯದ ಮನ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲವು ನಿಶ್ಚಿತ” ಎಂದರು.

“ವಿಧಾನಪರಿಷತ್ತು ಶಕ್ತಿಶಾಲಿ ಆಗಬೇಕು ಎಂದಾದರೆ, ಪುಟ್ಟಣ್ಣ ಮತ್ತು ಚಿದಾನಂದಗೌಡರಂತಹ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಸರ್ಕಾರದ ಪರ ಪ್ರಜ್ಞಾವಂತ ಮತದಾರರು ಬೆಂಬಲ ನೀಡಲು ಇದು ಸೂಕ್ತ ವೇದಿಕೆ. ಪಕ್ಷದ ಪರವಾದ ವಾತಾವರಣ ಎಲ್ಲೆಡೆ ಕಂಡುಬರುತ್ತಿದೆ. ಹೀಗಾಗಿ ಗೆಲವು ನಮ್ಮದೇ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

*ತಜ್ಞರೊಂದಿಗೆ ಚರ್ಚೆ*

ಶಾಲೆ,‌ ಕಾಲೇಜು ಆರಂಭಿಸುವ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ತರಾತುರಿ ಇಲ್ಲ. ಈ ಕುರಿತು ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಈಗಾಗಲೇ ಸಮಿತಿ ಅನೇಕ ಸಭೆಗಳನ್ನು ನಡೆಸಿ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಇತರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳನ್ನೂ ಪರಿಶೀಲಿಸಿ ತಜ್ಞರು ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಖ್ಯಮಂತ್ರಿ ಅವರು ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ವಿಷಯದಲ್ಲಿ ಯಾವುದೇ ಆತುರವಿಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ, “ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇನ್ನೂ ಪ್ರಕಟಿಸಿಲ್ಲ. ನಮ್ಮ ಹೈಕಮಾಂಡ್ ಮುನಿರತ್ನ ಅವರ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದರು.

ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕರಾದ ಎಂ.ಪಿ. ನಾರಾಯಣ ಸ್ವಾಮಿ, ತಿಪ್ಪಾರೆಡ್ಡಿ, ಜ್ಯೋತಿ ಗಣೇಶ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಉಪಸ್ಥಿತರಿದ್ದರು.