885ecba8 491f 407c a922 69e58a9ea6bb

ರಾಮನಗರದಲ್ಲಿ ಕೊರೋನಾ ಸೋಂಕು ಹರಡಿದರೆ ರಾಜ್ಯ ಸರ್ಕಾರವೇ ಹೊಣೆ

STATE Genaral

ಬೆಂಗಳೂರು ಏ ೨೪ :- ರಾಮನಗರಕ್ಕೆ ಪಾದರಾಯನಪುರ ಘಟನೆ ಆರೋಪಿಗಳನ್ನು ಸ್ಥಳಾಂತರ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ನಮಗೆ ಶಾಕ್ ನೀಡಿತ್ತು. ರಾಮನಗರದಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಆಗಲೇ 175 ಖೈದಿಗಳಿದ್ದರು. ಏಕಾಏಕಿ ಆ ಖೈದಿಗಳನ್ನು ಸ್ಥಳಾಂತರಿಸಿ, ಪಾದರಾಯನಪುರ ಆರೋಪಿಗಳನ್ನು ಅಲ್ಲಿರಿಸುವ ಸುದ್ದಿ ಬಂದಾಗಲೇ ಗೃಹ ಸಚಿವರ ಜತೆ ಮಾತನಾಡಿ, ನೀವು ಮಾಡುತ್ತಿರುವುದು ತಪ್ಪು. ನೀವು ಅವರನ್ನು ಕ್ವಾರೆಂಟೈನ್ ಮಾಡಲು ನಿರ್ಧರಿಸಿದ ಮೇಲೆ ಅವರನ್ನು ನಮ್ಮ ಜಿಲ್ಲೆಗೆ ಕರೆತರುವ ಅವಶ್ಯಕತೆ ಏನಿದೆ? ನಿಮ್ಮ ಈ ತೀರ್ಮಾನ ಕೈಬಿಡಿ ಅಂತಾ ಮನವಿ ಮಾಡಿದೆ. ಆಗ ಸಚಿವರು ಆರೋಪಿಗಳನ್ನು ಜೈಲಲ್ಲೇ ಇರಿಸಬೇಕಾಗಿದೆ ಎಂದರು.

ಅವರನ್ನು ಜೈಲಲ್ಲೇ ಇರಿಸಬೇಕಾದರೆ ಪರಪ್ಪನ ಅಗ್ರಹಾರದಲ್ಲೇ ಒಂದು ಭಾಗವನ್ನು ಖಾಲಿ ಮಾಡಿಸಿ ಅಲ್ಲಿ ಇಡಬಹುದಾಗಿತ್ತು. ಬಂಧಿಸಿದ ನಂತರ ಆರೋಪಿಗಳನ್ನು ಕರೆತರುವ ಮುನ್ನ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿದ್ದೀರಾ ಅಂತಾ ಜಿಲ್ಲಾಧಿಕಾರಿಗಳನ್ನು ಕೇಳಿದೆ. ಅವರು ಇಲ್ಲಾ ಅಂದರು. ಹಾಗಾದ್ರೆ ಸರಕಾರದ ಉದ್ದೇಶವೇನು? ಅವರನ್ನು ಕರೆತಂದು ರಾಮನಗರ ಜಿಲ್ಲೆಯಲ್ಲಿ ಕೊರೋನಾ ಹರಡಿಸಲು ವ್ಯವಸ್ಥಿತ ಪಿತೂರಿ ಮಾಡಿದೆಯೇ? ನಮ್ಮ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿಗಳು ತಮ್ಮ ಕ್ಷೇತ್ರ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲೂ ವರದಿಯಾಗಿದೆ. ನಂತರ ಅದನ್ನು ಸರ್ಕಾರವೇ ಅನುಮೋದಿಸಿತು.

8b73cc4f e000 486c 8029 031b74aa6982

ಜಿಲ್ಲಾ ಉಸ್ತುವಾರಿ ಸಚಿವರು ಈ ಆರೋಪಿಗಳನ್ನು ಸ್ಥಳಾಂತರ ಮಾಡುವ ಮುನ್ನ ಅವರನ್ನು ಪರೀಕ್ಷೆ  ಮಾಡಿಸದೇ ರಾಮನಗರಕ್ಕೆ ಕಳುಹಿಸಿರುವುದು ಗಂಭೀರ ವಿಚಾರ. ಏಕಾಏಕಿ ಏರೆ ಕಳುಹಿಸಿದರು ಎಂಬುದು ಯೋಚಿಸಬೇಕಾದ ಸಂಗತಿ. ಆರೋಪಿಗಳ ಜತೆ ರಾಮನಗರ ಪೊಲೀಸರು ಓಡಾಡಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಲ್ಲಿ ರಾಮನಗರಕ್ಕೆ ಪ್ರಯಾಣ ಮಾಡಿಸಿದ್ದಾರೆ. ಅವರನ್ನು ಕರೆತಂದ 48 ಗಂಟೆಗಳ ನಂತರ ಇವರಲ್ಲಿ ಐವರಿಗೆ ಸೋಂಕು ಬಂದಿರುವುದು ವರದಿ ಆಗಿದೆ.

ಅತ್ತ ಮಂಡ್ಯ, ಇತ್ತ ಬೆಂಗಳೂರಿನಲ್ಲಿ ಸೋಂಕು ಇದ್ದರೂ ಮಧ್ಯದ ನಮ್ಮ ಜಿಲ್ಲೆ ರಾಮನಗರ ಸೋಂಕು ಮುಕ್ತವಾಗಿ ಹಸಿರು ವಲಯದಲ್ಲಿತ್ತು. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕು ಪ್ರದೇಶದಿಂದ ಆರೋಪಿಗಳನ್ನು ಇಲ್ಲಿಗೆ ಕರೆತರಲಾಗಿದೆ. ಜನ ಇದರಿಂದ ಹೆದರಿದ್ದಾರೆ. ಆರೋಪಿಗಳನ್ನು ತರಬೇಕೇ ಬೇಡವೇ ಎಂಬ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಪರಮಾಧಿಕಾರ ಇದೆ. ಈ ಸ್ಥಳಾಂತರ ಪ್ರಸ್ತಾವನೆ ತಿರಸ್ಕರಿಸಿ ಎಂದು ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆವು. ಈ ವಿಚಾರದಲ್ಲಿ ನಾವು ನಿಶ್ಯಕ್ತರಾಗಿದ್ದೇವೆ. ಏನೂ ಮಾಡದ ಸ್ಥಿತಿಯಲ್ಲಿದ್ದೇವೆ. ಆರೋಪಿಗಳನ್ನು ಈಗಾಗಲೇ ಕರೆತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡರು. ಈ ವಿಚಾರದಲ್ಲಿ ನಮ್ಮ ಜಿಲ್ಲೆ ಉಸ್ತುವಾರಿ ಸಚಿವರು ಯಾವುದೇ ಸಹಾಯ ಮಾಡಲಿಲ್ಲ. ನಮ್ಮ ಆಯುಕ್ತರಂತೂ ನಮ್ಮ ಜತೆ ಮಾತನಾಡಲೂ ಸಿದ್ಧರಿಲ್ಲ.

ಈಗ ಬಂದಿರುವ ಮಾಹಿತಿ ಪ್ರಕಾರ ಇವರನ್ನು ಮತ್ತೆ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರೆಂಟೈನ್ ನಲ್ಲಿ ಇಡಬೇಕಾಗುತ್ತದೆ. ಜಿಲ್ಲೆಯ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಒಂದು ವೇಳೆ ರಾಮನಗರ ಜಿಲ್ಲೆಯಲ್ಲಿ ಸೋಂಕು ಹರಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ. ಇದಕ್ಕೆ ಕಾರಣವಾದವರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.