IMG 20201120 184133

ಪೋಲೀಸರಿಗೆ ಪದಕ ಪ್ರಧಾನ….!

STATE Genaral

ಮುಖ್ಯಮಂತ್ರಿಗಳಿಂದ ಪೋಲೀಸ್ ಪದಕ ಪ್ರಧಾನ

ಬೆಂಗಳೂರು, ನವೆಂಬರ್ 20 (ಕರ್ನಾಟಕ ವಾರ್ತೆ): ಪೋಲೀಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ ಹಾಗೂ ಗಣನೀಯ ಕಾರ್ಯ ಸಲ್ಲಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಇಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಮುಖ್ಯಮಂತ್ರಿಗಳ ಪದಕ ಪ್ರದಾನ  ಮಾಡಿದರು.
2017 ಮತ್ತು 2018 ನೇ ಸಾಲಿನ ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದಲ್ಲಿ ಪದಕ ವಿಜೇತರಾದ ಎಲ್ಲಾ ಪೊಲೀಸ್ ಬಂಧುಗಳಿಗೆ ಅಭಿನಂದನೆ ಸಲ್ಲಿಸುತ್ತಾ ಕರ್ನಾಟಕ ಪೊಲೀಸ್ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್ ಪಡೆಯೆಂದೆ ಹೆಸರಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಶೌರ್ಯ, ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆ ಮೂಲಕ ಅಪ್ರತಿಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.

IMG 20201120 184149
ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ, ನಕ್ಸಲೈಟ್ ಚಟುವಟಿಕೆಗಳ ನಿಗ್ರಹ, ಗುಪ್ತವಾರ್ತೆಗಳ ಸಂಗ್ರಹ, ರಸ್ತೆ ಸಂಚಾರ ಸುರಕ್ಷತೆ, ಜಟಿಲ ಪ್ರಕರಣಗಳ ತನಿಖೆ, ಕಳವು ಮಾಲನ್ನು ವಶಕ್ಕೆ ಪಡೆಯುವುದು ಮತ್ತಿತರ ಮೊದಲಾದ ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ವೃತ್ತಿ ನಿಪುಣತೆಯನ್ನು ಪ್ರದರ್ಶಿಸುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವ ಸಂಘಟಿತ ಅಪರಾಧಿಗಳು, ಸಮಾಜ ವಿರೋಧಿ ಶಕ್ತಿಗಳು, ಮತೀಯವಾದಿಗಳನ್ನು ನಿಯಂತ್ರಿಸಲು ನಮ್ಮ ಪೊಲೀಸರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಪೊಲೀಸ್ ಸಿಬ್ಬಂದಿಯ  ಬದ್ಧತೆಯಿಂದ ಅಪರಾಧಮುಕ್ತ ಸಮಾಜ ನಿರ್ಮಾಣವಾಗಲಿದೆ ಎಂದರು
ಪದಕವು ವಿಜೇತರ ಸಾಧನೆಯ ಸಂಕೇತವಾಗಿರುವುದಲ್ಲದೆ ಇತರೆ ಸಿಬ್ಬಂದಿಗೂ ಇವರ ಸಾಧನೆ ಪ್ರೇರಣಾದಾಯಕವಾಗಿದೆ. ಪದಕ ವಿಜೇತರಿಗೆ ಹತ್ತು ಸಾವಿರ ಮೊತ್ತವನ್ನ ಪ್ರೋತ್ಸಾಹ  ಧನವನ್ನು ನೀಡಲಾಗುತ್ತದೆ. ರಾಜ್ಯದ ಪೋಲೀಸರ ಮನೋಸ್ಥೈರ್ಯವನ್ನು ಹೆಚ್ಚಿಸಿ, ಅವರು ನಿಸ್ವಾರ್ಥ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳೆಯರಿಗೆ ಅನುಕೂಲವಾಗುವಂತೆ  ಮಹಿಳಾ ಪೊಲೀಸ್ ಠಾಣೆಗಳನ್ನು ಒನ್‍ಸ್ಟಾಪ್ ಸರ್ವಿಸ್ ಕೇಂದ್ರಗಳಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವರು ನಾಗರೀಕರ ಶಾಂತಿಯುತ ಜೀವನಕ್ಕೆ ಕಾರಣೀಭೂತರಾಗಿದ್ದಾರೆ. ಸಮಾಜದ ಶಾಂತಿ ನೆಮ್ಮದಿ ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸರು ತಮ್ಮ ದಕ್ಷತೆ, ಪ್ರಾಮಾಣಿಕತೆಗಳನ್ನು ಸಾಬೀತು ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ಪೊಲೀಸರು  ಹೆಚ್ಚು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಿರ್ಭಿತಿಯಿಂದ ಪೊಲೀಸ್ ಠಾಣೆಗೆ ಬರುವಂತಾಗಬೇಕು ಎಂದು ತಿಳಿಸಿದರು.

IMG 20201120 184155
ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಪದಕ ವಿಜೇತ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಸಂತೋಷದ ದಿನವಾಗಿದೆ. ಎರಡು ವರ್ಷದಿಂದ ಪದಕ ವಿತರಿಸಲು ಸಾಧ್ಯವಾಗಿರುವುದಿಲ್ಲ. ನೂರಾರು ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ಮೀರಿ ಸವಾಲುಗಳನ್ನು ಎದುರಿಸಿದ್ದನ್ನು ಸರ್ಕಾರ ಗುರುತಿಸಿದೆ ಎಂದು ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾನಿರ್ದೇಕರು ಮತ್ತು ಪೊಲೀಸ್ ಮಹಾನಿರೀಕ್ಷಕರಾದ ಪ್ರವೀಣ್ ಸೂದ್ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಹಾಗೂ  ಇತರ ಗಣ್ಯರು ಭಾಗವಹಿಸಿದ್ದರು.