ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ; ಡಿ.ಕೆ. ಶಿವಕುಮಾರ್ ಸ್ವಾಗತ*
*ಬೆಂಗಳೂರು: ಮುಂದಿನ ಆರು ವಾರಗಳ ಅವಧಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ.
‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವಧಿಗೆ ಅನುಗುಣವಾಗಿ ಚುನಾವಣೆಗಳು ನಡೆಯಬೇಕು. ಆದರೆ ಬಿಜೆಪಿ ಸರ್ಕಾರ ಇದನ್ನು ಮುಂದಕ್ಕೆ ತಳ್ಳಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡಿತ್ತು. ಆದರೆ, ನ್ಯಾಯಾಲಯ ಅದರ ಹುನ್ನಾರಕ್ಕೆ ಕಡಿವಾಣ ಹಾಕಿ, ಚುರುಕು ಮುಟ್ಟಿಸಿದೆ. ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಬಿಜೆಪಿಯವರು ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಮುಂದೂಡಲು ಪ್ರಯತ್ನಿಸಿದ್ದರು. ಜನಸಾಮಾನ್ಯರಿಗೆ ಅಧಿಕಾರ ಸಿಗಬೇಕು ಎಂಬುದು ಕಾಂಗ್ರೆಸ್ ಉದ್ದೇಶ. ಹೀಗಾಗಿ ಸರ್ಕಾರದ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದವು. ಆಗಲೂ ನ್ಯಾಯಾಲಯ ನಮ್ಮ ಅಹವಾಲಿಗೆ ಮನ್ನಣೆ ನೀಡಿತ್ತು.
ಗ್ರಾಮ ಪಂಚಾಯ್ತಿ ಚುನಾವಣೆ ಅಧಿಸೂಚನೆ ಪ್ರಕಟವಾದಾಗ, ಬಿಬಿಎಂಪಿ ಚುನಾವಣೆಯನ್ನೂ ನಡೆಸಬೇಕು ಎಂದು ನಾನು ಒತ್ತಾಯಿಸಿದ್ದೆ. ಸರಕಾರ ಇದಕ್ಕೆ ಕಿವಿಗೊಡಲಿಲ್ಲ. ಹೀಗಾಗಿ ಬಿಬಿಎಂಪಿ ಚುನಾವಣೆ ನಡೆಸಲು ನಮ್ಮ ಪಕ್ಷ ಮತ್ತೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಇದೀಗ ಕೋರ್ಟ್ ನೀಡಿರುವ ತೀರ್ಪು ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯವನ್ನು ಎತ್ತಿ ಹಿಡಿದಿದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಈ ನೆಲದ ಕಾನೂನನ್ನು ನಾವು ಗೌರವಿಸುತ್ತೇವೆ. ತಾವು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.