IMG 20201228 WA0009

ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಗುರಿ

STATE Genaral

*ಆರ್ಥಿಕ ಸಂಕಷ್ಟವಿದ್ದರೂ ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕಾರ್ಯ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಗುರಿ*

ಬೆಂಗಳೂರು, ಡಿ 28 : ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಾದರೂ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮಾಗಡಿ ರಸ್ತೆ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ‘ಆರೋಗ್ಯ ಸೌಧ’ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿದರು. ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರ್ಥಿಕ ದುಸ್ಥಿತಿ ಇದ್ದರೂ ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ 4 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ ನೀಡಿದ್ದು, ಈ ಪೈಕಿ ಮೂರು ಕಾಲೇಜುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಕೂಡ ಉದ್ಘಾಟನೆಯಾಗಲಿದೆ ಎಂದರು.

ರಾಜ್ಯದಲ್ಲಿ 18 ವೈದ್ಯಕೀಯ ಕಾಲೇಜುಗಳಿವೆ. ಆದರೆ 9 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಅಂತಹ ಕಡೆಗಳಲ್ಲಿ ಪಿಪಿಪಿ ಮಾದರಿ ಅಥವಾ ಬೇರೆ ಮಾದರಿಯಲ್ಲಿ ಹೊಸ ಕಾಲೇಜು ನಿರ್ಮಿಸುವ ಗುರಿ ಇದೆ. ಅದಕ್ಕೆ ಹೊಂದಿಕೊಂಡಂತೆ ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೂಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

IMG 20201228 WA0008

ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ. ಹಲವಾರು ವರ್ಷಗಳಿಂದ ರಾಜ್ಯದ ಆಸ್ಪತ್ರೆಗಳಲ್ಲಿ ಸುಮಾರು ಐದಾರು ಸಾವಿರ ಹಾಸಿಗೆಗಳಿಗೆ ಮಾತ್ರ ಆಕ್ಸಿಜನ್ ಅಳವಡಿಸಲಾಗಿತ್ತು. ಆದರೆ ಕಳೆದ ಕೆಲವೇ ತಿಂಗಳಲ್ಲಿ ಸುಮಾರು 30 ಸಾವಿರ ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ. ಕೊರೊನಾ ಯೋಧರಾದ ವೈದ್ಯರು, ಸಿಬ್ಬಂದಿಗೆ ಸುಮಾರು 125 ಕೋಟಿ ರೂ. ಖರ್ಚು ಮಾಡಿ ಭತ್ಯೆ ನೀಡಲಾಗುತ್ತಿದೆ ಎಂದರು.

ದೇಶದ ಜಿಡಿಪಿಯಲ್ಲಿ ಶೇ.1 ರಿಂದ 1.5 ರಷ್ಟು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುತ್ತಿತ್ತು. ಇನ್ನು ಮುಂದೆ ಶೇ.2.5 ರಷ್ಟು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಸರ್ಕಾರ ಜಾರಿ ಮಾಡಿದ ಆಯುಷ್ಮಾನ್ ಭಾರತ್ ಯೋಜನೆ ಆರೋಗ್ಯ ಕರ್ನಾಟಕವಾಗಿ ನಮ್ಮಲ್ಲಿ ಜಾರಿಯಾಗಿದ್ದು, ಬಿಪಿಎಲ್ ಜೊತೆಗೆ ಎಪಿಎಲ್ ವರ್ಗಕ್ಕೂ ವಿಮೆ ಲಭ್ಯವಿದೆ ಎಂದರು.

ಆರೋಗ್ಯ ಇಲಾಖೆಯ 53 ಕಚೇರಿಗಳು ಒಂದೇ ಕಡೆ ಸುಲಲಿತವಾಗಿ ಕಾರ್ಯನಿರ್ವಹಿಸಲು ಹೊಸ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಆಯುಕ್ತಾಲಯ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಲ್ಲವೂ ಈ ಕಟ್ಟಡದಲ್ಲಿ ಕಚೇರಿ ಹೊಂದಲಿದೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಉಪಸ್ಥಿತರಿದ್ದರು.

*ಮುಖ್ಯಮಂತ್ರಿಗಳಿಂದ ಮೆಚ್ಚುಗೆ*

*ಸಚಿವ ಡಾ.ಕೆ.ಸುಧಾಕರ್ ಅವರು ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.*

IMG 20201228 WA0010

*ಸಚಿವರು ಹೇಳಿದ ಇತರೆ ಅಂಶಗಳು*

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳ ಸಂಜೀವಿನಿಯಾಗಿವೆ. ಇಂತಹ ಕೇಂದ್ರಗಳನ್ನು ಸುಸಜ್ಜಿತವಾಗಿಸಲು ಯೋಜನೆ ರೂಪಿಸಲಾಗಿದೆ.

ಆರೋಗ್ಯ, ಅನುಕಂಪ ಮತ್ತು ಬದ್ಧತೆ ಮೂರು ಅಂಶಗಳನ್ನು ನಾವು ಅಳವಡಿಸಿಕೊಂಡಿದ್ದೇವೆ.

ಜನರಿಗೆ ನೀಡುವ ಆರೋಗ್ಯ ಸೇವೆಗೆ ತಕ್ಕಂತೆ ಶುಲ್ಕ ಪಡೆಯಬೇಕು. ಆದರೆ ಖಾಸಗಿ ಆರೋಗ್ಯ ಕ್ಷೇತ್ರದಿಂದ ಜನರಿಂದ ವಂಚಿಸುವ ಕೆಲಸವಾಗಬಾರದು.