*ಸರ್ವಪಕ್ಷ ಸಭೆಯಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ನಿರ್ಧಾರ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*84 ಸಾವಿರ ರೆಮಿಡಿಸ್ವಿರ್ ಖರೀದಿಗೆ ಕ್ರಮ*
*ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ ವ್ಯವಸ್ಥೆ*
*ಬೆಂಗಳೂರು: ಏಪ್ರಿಲ್ 18 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಧಾರವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೊರೊನಾ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಬಳಿಕ, ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಏಪ್ರಿಲ್ 18 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ. ನಂತರ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನೂ ಸರ್ಕಾರ ಪಡೆಯಲಿದೆ ಎಂದರು.
ರಾಜ್ಯದಲ್ಲಿ ಕೊರೊನಾಗೆ ಬೇಕಾದ ಔಷಧ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. *84 ಸಾವಿರ ರೆಮಿಡಿಸ್ವಿರ್ ಔಷಧ ಖರೀದಿಗೆ ಟೆಂಡರ್ ಕರೆಯಲಾಗಿದೆ. ಆಮ್ಲಜನಕ ಕೊರತೆಯಾಗದಂತೆ ಈಗಾಗಲೇ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಕ್ಕೆ ಟೆಂಡರ್ ಕರೆದಿದ್ದು, ಜಿಲ್ಲಾ ಮಟ್ಟದಲ್ಲೂ ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು* ಎಂದು ತಿಳಿಸಿದರು.
ಎರಡನೇ ಅಲೆಯ ಸಂದರ್ಭದಲ್ಲಿ ಶೇ.95 ರಷ್ಟು ಮಂದಿಗೆ ಕಡಿಮೆ ಲಕ್ಷಣ ಇರುತ್ತದೆ. ಶೇ.5 ರಷ್ಟು ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಿರುತ್ತದೆ. ಆದ್ದರಿಂದ ಸೋಂಕಿನ ತೀವ್ರ ಸ್ವರೂಪದ ಲಕ್ಷಣ ಇದ್ದವರು ಮಾತ್ರ ಆಸ್ಪತ್ರೆಗೆ ಬರಬೇಕು. ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಲು *ಖಾಸಗಿ ಆಸ್ಪತ್ರೆಗಳು ಹೋಟೆಲ್ ಗಳ ಸಹಯೋಗದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಸೂಚಿಸಲಾಗಿದೆ* ಎಂದು ಮಾಹಿತಿ ನೀಡಿದರು.
*24 ಗಂಟೆ ನಿಗದಿ*
ಕೋವಿಡ್ ಪರೀಕ್ಷೆ ವರದಿ ಬಹಳ ತಡವಾಗಿ ದೊರೆಯುತ್ತಿರುವುದು ತಿಳಿದಿದೆ. *ವರದಿಯನ್ನು 24 ಗಂಟೆಯೊಳಗೆ ನೀಡಬೇಕೆಂದು ಸೂಚಿಸಲಾಗಿದೆ.* ಅನಗತ್ಯವಾಗಿ ಗುಂಪು ಸೇರುವುದಕ್ಕೆ ಈಗಾಗಲೇ ಕಡಿವಾಣ ಹಾಕಲಾಗಿದೆ ಎಂದರು.
ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಸಲಾಗಿದೆ. ಹಾಸಿಗೆ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್ ಗೆ ತಲಾ ಒಂದರಂತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಐಸೋಲೇಷನ್ ನಲ್ಲಿರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕ್ವಾರಂಟೈನ್ ನಲ್ಲಿರುವವರ ಕೈಗೆ ಮುದ್ರೆ ಹಾಕಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ತಾತ್ಕಾಲಿಕ ನೇಮಕ ಮಾಡಲಾಗುತ್ತಿದೆ. ಫ್ರಂಟ್ ಲೈನ್ ವಾರಿಯರ್ಸ್ ಗಾಗಿ ನೇರ ನೇಮಕಾತಿ ಮಾಡಲಾಗುತ್ತಿದೆ. 6 ತಿಂಗಳ ಮಟ್ಟಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಸೋಂಕಿತರ ಅಂತ್ಯಕ್ರಿಯೆಗೆ ಹಣ ಪಡೆಯುವಂತಿಲ್ಲ. ಉಚಿತ 49 ಶ್ರದ್ಧಾಂಜಲಿ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
*ಸಭೆಯ ಇತರೆ ಅಂಶಗಳು*
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000, ಸರ್ಕಾರಿ ಆಸ್ಪತ್ರೆಗಳಲ್ಲಿ 1,000, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆ ಕೋವಿಡ್ ಗೆ ಮೀಸಲು.
5,000 ಆಕ್ಸಿಜನ್ ಸಿಲಿಂಡರ್ ಗೆ ಕೇಂದ್ರ ಸರ್ಕಾರಕ್ಕೆ ಮನವಿ.
ಕಂಟೈನ್ಮೆಂಟ್ ಮತ್ತು ಮೈಕ್ರೋ ಕಂಟೈನ್ಮೆಂಟ್ ವಲಯ ನಿಯಮ ಕಟ್ಟುನಿಟ್ಟಾಗಿ ಜಾರಿ.
108 ಸೇರಿದಂತೆ ಅಗತ್ಯ ಆಂಬ್ಯುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಲಭ್ಯವಾಗಿಸುವುದು.
ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 400 ಆಂಬ್ಯುಲೆನ್ಸ್ ನಿಗದಿ.