ಸಿಬ್ಬಂದಿ ಸಮರ್ಪಕ ಬಳಕೆ ಮಾಡದಿರುವ ಬಗ್ಗೆ ಅಸಮಾಧಾನ
ಪಿಪಿಇ ಕಿಟ್ ನೀಡದ ಆಡಳಿತದ ಕ್ರಮಕ್ಕೆ ತರಾಟೆ
ಬೀದರ್ : ಬ್ರಿಮ್ಸ್ ಕಾಲೇಜು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೆಂಡಾಮಂಡಲ.
ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಮಾಡದ ನಿರ್ದೇಶಕರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
ಏಳನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ಮಾಹಿತಿ ಸರಿಯಾಗಿ ನೀಡಲು ವಿಫಲವಾಗಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾತ್ರಿಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ರೋಗಿ ಸಂಬಂಧಿಗಳು ವಾಡ್೯ ಗೆ ಬಿಡುತ್ತಿರುವುದರ ಬಗ್ಗೆ ಸಿಇಓ ಅವರನ್ನು ತರಾಟೆ ತೆಗೆದುಕೊಂಡ ಸಚಿವರು, ರೋಗದ ಹರಡುವಿಕೆ ತಡೆಯಲು ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಹೋಮ್ ಐಸೋಲೇಷನ್ ನಲ್ಲಿರುವ ಸಕಿತರಿಗೆ ಔಷಧಗಳ ಕಿಟ್ ನೀಡದಿರುವ ಮತ್ತು ನಿಗಾ ವ್ಯವಸ್ಥೆ ರೂಪಿಸದಿರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೆಲಸಕ್ಕೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆಲಂಗಾಣ ಮತ್ತು ಆಂಧ್ರದ ಸೋಂಕಿತರು ಬಂದರೂ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಇದೆ. ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಯಾವುದೇ ಕಾರ್ಪೋರೆಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಹೇಗೆ? ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜನೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಇದು ಯುದ್ಧದ ಸಮಯ. ಇಂತಹ ಸಂದರ್ಭದಲ್ಲಿ ಹೌಸ್ ಸರ್ಜನ್ಸ್, ರೆಸಿಡೆಂಟ್ ಡಾಕ್ಟರ್ಸ್, ಪಿಜಿ ಸ್ಟೂಡೆಂಟ್ಸ್ ಗಳು ಕಡ್ಡಾಯವಾಗಿ ಕೋವಿಡ್ ಕರ್ತವ್ಯ ದಲ್ಲಿ ಪಾಲ್ಗೊಳ್ಳಬೇಕು. ಟೆಲಿಕಾಲ್, ಕೌನ್ಸೆಲಿಂಗ್ ನಂತಹ ಕರ್ತವ್ಯದಲ್ಲಿ ನಿಯೋಜನೆ ಮಾಡಬೇಕು ಎಂದು ತಾಕೀತು ಮಾಡಿದರು.
*ಪಿಪಿಇ ನೀಡದಕ್ಕೆ ತರಾಟೆ*
ವಾಡ್೯ ಮತ್ತು ಐಸಿಯುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಪಿಪಿಇ ಕಿಟ್ ನೀಡದ್ದನ್ನು ಕಂಡು ಸಚಿವರು ಕೆಂಡಾಮಂಡಲರಾದರು.
ಉತ್ತಮ ಗುಣಮಟ್ಟದ ವಸ್ತುಗಳನ್ನು ಕಳುಹಿಸಿದ್ದರೂ ನೀಡದ್ದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಜಹೀರಾ ನಸೀಂ ಅವರಿಗೆ ಸೂಚನೆ ನೀಡಿದರು.
ಸಿಟಿ ಸ್ಕ್ಯಾನರ್ ಕೆಲಸ ಮಾಡದ್ದನ್ನೂ ತಿಳಿದ ಸಚಿವರು ಸಂಜೆ ವೇಳೆಗೆ ಅದನ್ನು ಸುಸ್ಥಿತಿಗೆ ತರಬೇಕು. ಹೆಚ್ಚುವರಿಯಾಗಿ ಮತ್ತೊಂದು ಸಿಟಿ ಸ್ಕ್ಯಾನರ್ ಖರೀದಿಸಲು ಸ್ಥಳದಲ್ಲೇ ಆದೇಶ ನೀಡಿದರು.
ಉಸ್ತುವಾರಿ ಸಚಿವ ಚವ್ಹಾಣ್, ಸಂಸದರಾದ ಭಗವಂತ ಖೂಬ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ನಹೀಂಖಾನ್ ಉಪಸ್ಥಿತರಿದ್ದರು.