IMG 20210526 WA0006

ಕಪ್ಪು ಶಿಲೀಂಧ್ರ ರೋಗ ಪತ್ತೆ, ಚಿಕಿತ್ಸಾವಿಧಾನಕ್ಕೆ ಮಾರ್ಗಸೂಚಿ ….!

Genaral STATE

ಕಪ್ಪು ಶಿಲೀಂಧ್ರ ರೋಗ ಪತ್ತೆ, ಚಿಕಿತ್ಸಾವಿಧಾನಕ್ಕೆ ಮಾರ್ಗಸೂಚಿ : ಸಚಿವ ಸುಧಾಕರ್
ಎರಡೂ ಸಮಿತಿಗಳ ತಜ್ಞರ ಜತೆ ಸುಧೀರ್ಘ ಸಮಾಲೋಚನೆ
ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್‌ ನಂತರದ ಚಿಕಿತ್ಸಾ ಘಟಕ ಸ್ಥಾಪನೆ

ಬೆಂಗಳೂರು : ಮ್ಯೂಕೊರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ) ಚಿಕಿತ್ಸಾ ವಿಧಾನಗಳ ಬಗ್ಗೆ ಸೂಕ್ತ ನೀತಿ ರೂಪಿಸಲಾಗುತ್ತಿದೆ. ತಕ್ಷಣದಿಂದಲೇ ಕೋವಿಡ್‌ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲೇ ಕೌನ್ಸೆಲಿಂಗ್‌ ಮತ್ತು ನಿಗಾ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ರೋಗದ ಮೂಲ ಪತ್ತೆ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಅಂಬಿಕಾ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಚ್ಚಿದಾನಂದ ಅವರ ಅಧ್ಯಕ್ಷತೆಯ ಎರಡು ಪ್ರತ್ಯೇಕ ಸಮಿತಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.
ಎರಡೂ ಸಮಿತಿಗಳ ತಜ್ಞರ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅವರು ನೀಡಿರುವ ಅಭಿಪ್ರಾಯಗಳ ಆಧಾರದ ಮೇಲೆ ಕೋವಿಡ್‌ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಮೊದಲ ವಾರ ಅನಗತ್ಯವಾಗಿ ಸ್ಟಿರಾಯ್ಡ್‌ ನೀಡದಂತೆ ವೈದ್ಯರಲ್ಲಿ ಮನವಿ ಮಾಡುತ್ತಿದ್ದೇನೆ. ಚಿಕಿತ್ಸೆ ಆರಂಭಿಸಿದ ಎರಡನೇ ವಾರದಲ್ಲಿ ಅಗತ್ಯವಿದ್ದರೆ ಮಾತ್ರ ಸ್ಟಿರಾಯ್ಡ್‌ ನೀಡಬಹುದಾಗಿದೆ. ಅದು ಕೂಡ ವೈದ್ಯರ ನಿಗಾ ವ್ಯವಸ್ಥೆಯಲ್ಲಿ ಮಾತ್ರ. ಈ ಕುರಿತು ಎಲ್ಲಾ ವೈದ್ಯರಿಗೂ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಅಧಿಕ ಸಕ್ಕರೆ ಅಂಶ
ಬೆಂಗಳೂರು ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ರೋಗದ ಸೋಂಕಿನಿಂದ ತೊಂಬತ್ತೈದು ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಂದಿ ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಜ್ಯದ ಇತರೆ ಆಸ್ಪತ್ರೆಗಳಲ್ಲಿರುವ ರೋಗಿಗಳಲ್ಲಿ ಕೂಡ ಸಾಮಾನ್ಯವಾಗಿ ಕಂಡು ಬಂದಿರುವ ಈ ಅಂಶವನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸ್ಟಿರಾಯ್ಡ್‌ ನೀಡಿದಾಗ ಮ್ಯೂಕೊರ್‌ಮೈಕೊಸಿಸ್‌ ಕಂಡು ಬಂದಿದೆ ಎಂದು ತಜ್ಞರು ತಿಳಿಸಿರುವುದಾಗಿ ವಿವರಿಸಿದರು.
ಇದಲ್ಲದೆ, ಸಕ್ಕರೆ ಹಾಗೂ ಗುರುತಿಸಿರುವ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್‌ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಬಿಡುಗಡೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಿಡುಗಡೆಗೂ ಮೊದಲು, ಇಎನ್‌ಟಿ ತಜ್ಞರಿಂದ ಪರಿಶೀಲನೆ, ಅಗತ್ಯವಿದ್ದರೆ ಎಂಆರ್‌ಐ ಪರೀಕ್ಷೆ ಬಿಡುಗಡೆಯಾಗಿ ಮನೆಗೆ ಹಿಂತಿರುಗಿದ ಒಂದು ವಾರದ ಬಳಿಕ ಅವರಾಗಿಯೇ ಬಂದು ನಮ್ಮ ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಿರುವ ಕೋವಿಡ್‌ ನಂತರದ ಚಿಕಿತ್ಸಾ ವಾರ್ಡುಗಳಲ್ಲಿ ಅವರಿಗೆ ಪರೀಕ್ಷೆ ನಡೆಸಬೇಕು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದರು.IMG 20210526 WA0009
ವಿಡಿಯೋ ಕೌನ್ಸೆಲಿಂಗ್‌
ಕೋವಿಡ್‌ ನಂತರದ ಚಿಕಿತ್ಸಾ ವಾರ್ಡುಗೆ ತಪಾಸಣೆಗೆ ಬರಲು ಸಾಧ್ಯವಾಗದವರಿಗೆ ವಿಡಿಯೋ ಕಾಲ್‌ ಮೂಲಕ ಕೌನ್ಸೆಲಿಂಗ್‌ ಮಾಡಲಾಗುವುದು. ಹದಿನೈದು ದಿನಗಳ ಕಾಲ ಅವರನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಒಂದು ವೇಳೆ ಯಾರಿಗಾದರೂ ರೋಗ ಲಕ್ಷಣ ಕಂಡು ಬಂದಲ್ಲಿ ಅವರಿಗೆ ವಿಡಿಯೋ ಕಾಲ್‌ ಮೂಲಕ ಪರಿಶೀಲಿಸಿ ಅಗತ್ಯವಿದ್ದರೆ ಆಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಗುವುದು. ಈ ಎಲ್ಲಾ ಅಂಶಗಳನ್ನು ಡಿಸ್ಚಾರ್ಜ್‌ ಪಾಲಿಸಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಅಧಿಕ ಸಕ್ಕರೆ ಅಂಶ ಇರುವ ರೋಗಿಗಳಲ್ಲದೆ, ಸಣ್ಣ ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆದವರಲ್ಲೂ ರೋಗ ಕಾಣಿಸಿಕೊಂಡಿದೆ. ಇದಲ್ಲದೆ, ದೀರ್ಘ ಕಾಲ ಚಿಕಿತ್ಸೆ ಪಡೆದವರು, ಹೆಚ್ಚು ಅವಧಿ ಮತ್ತು ಡೋಸ್‌ಗಳ ಸ್ಟಿರಾಯ್ಡ್‌ ಪಡೆದವರಲ್ಲೂ ರೋಗ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸಾ ವಿಧಾನ ಮತ್ತು ಡಿಸ್ಚಾರ್ಜ್‌ ಪಾಲಿಸಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಜೆ಼ಕ್‌ ಗಣರಾಜ್ಯದ ಕಂಪನಿಗಳ ೭೦ ವೆಂಟಿಲೇಟರ್‌ ಸ್ವೀಕಾರ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಜೆ಼ಕ್‌ ಗಣರಾಜ್ಯದ ಕಂಪನಿಗಳು
ಬೆಂಗಳೂರಿನ ಪುಕ್ಷ್ಪಕ್‌ ಪ್ರಾಡೆಕ್ಟ್ಸ್‌ ಸಂಸ್ಥೆಯ ಸಹಯೋಗದಲ್ಲಿ ಕೊಡುಗೆ ನೀಡಿರುವ ೭೦ ವೆಂಟಿಲೇಟರ್‌ಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಸ್ವೀಕರಿಸಿದರು.
ಜೆ಼ಕ್‌ ಗಣರಾಜ್ಯದ ಗೌರವ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳು ಈ ವೆಂಟಿಲೇಟರ್‌ಗಳನ್ನು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು. ಐದು ಕೋಟಿ ಮೊತ್ತದ ವೆಂಟಿಲೇಟರ್‌ಗಳನ್ನು ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ೪೬ ವೆಂಟಿಲೇಟರ್‌ಗಳನ್ನು ನೀಡಲಾಗಿದೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ತ್ರಿಲೋಕ್‌ ಚಂದ್ರ, ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಅಭಿನಂದನೆ
ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪದನಾಮ ಬದಲಾವಣೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಕಡತ ವಿಲೇವಾರಿ ಮಾಡಿದ ಸಚಿವ ಸುಧಾಕರ್‌ ಅವರನ್ನು ಆರೋಗ್ಯ ಸಹಾಯಕ ವೃಂದದ ಪರವಾಗಿ ಪದಾಧಿಕಾರಿಗಳಾದ ಆನಂದ್‌, ಎ.ಜಿ. ಮಂಜುನಾಥ್‌ ಮತ್ತು ಮಹಾಲಿಂಗಯ್ಯ ಅವರು ಬುಧವಾರ ವಿಧಾನಸೌಧದಲ್ಲಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
——————————————