ಚಿಕ್ಕಬಳ್ಳಾಪುರ ಮೇ 19:- ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಅವರು ಎಚ್‍ಡಿಕೆ ವಿರೋಧ ಪಕ್ಷದವರಾಗಿ ಟೀಕೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್‍ಡಿ ಕುಮಾರಸ್ವಾಮಿ ಅವರು ಪ್ರಧಾನಿಗಳನ್ನು ಟೀಕೆ ಮಾಡಿ ತೃಪ್ತಿ ಪಡುತ್ತಿದ್ದಾರೆ. ಪಡೆಯಲಿ. ಆದರೆ ನಾವು ಎಚ್‍ಡಿ ಕುಮಾರಸ್ವಾಮಿ ಅವರ ಟೀಕೆಗಳನ್ನು ಮಾರ್ಗದರ್ಶನ ಎಂದು ಭಾವಿಸುತ್ತೇವೆ. ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಪ್ರಧಾನ ಮಂತ್ರಿಗಳ ಪ್ಯಾಕೇಜನ್ನು ಇಡೀ ದೇಶದ ಜನ ಮೆಚ್ಚಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಟೀಕೆ ಮಾಡುವುದು ಸರಿನೋ, ತಪ್ಪೋ ಅನ್ನೋದನ್ನು ರಾಜ್ಯದ ಜನರಿಗೆ ಬಿಡುತ್ತೇನೆ ಎಂದರು.
ಇದೇ ವೇಳೆ ವಿಶ್ವದಲ್ಲೇ ಕೊರೊನಾವನ್ನು ದೂರ ಓಡಿಸುವಲ್ಲಿ, ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಬೆಸ್ಟ್ ಎನಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಸಹ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಯಶಸ್ವಿಯಾಗಿ ಕೊರೊನಾ ಸಂಕಷ್ಟ ನಿಭಾಯಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಸಹ ನರೇಂದ್ರ ಮೋದಿಗಳಿದ್ದಂತೆ ಎಂದು ಈಶ್ವರಪ್ಪ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಪುನಶ್ಚೇತನ ಯೋಜನೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಸುಧಾಕರ್ ಹಾಗೂ ಸಂಸದ ಬಚ್ಚೇಗೌಡ ಚಾಲನೆ ನೀಡಿದರು.