ಬೆಂಗಳೂರು, ಮೇ 21- ಚೈನಾದಲ್ಲಿರುವ ಕೈಗಾರಿಕೋದ್ಯಮಿಗಳು ಇತರ ದೇಶಗಳಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಈ ಟಾಸ್ಕ್ ಫೋರ್ಸಿನ ಕಾರ್ಯ ಚಟುವಟಿಕೆಗಳನ್ನು ಪ್ರತಿ ವಾರ ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಎಂಎಸ್ ಎಂಇ ಹಾಗೂ ಸಕ್ಕರೆ ಮತ್ತು ಕಾರ್ಮಿಕ ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ವಿಶೇಷ ಟಾಸ್ಕ್ ಫೋರ್ಸನ್ನು ರಚಿಸಲಾಗಿದೆ. ಇದಕ್ಕಾಗಿ ವಿಶೇಷ ಪ್ರೋತ್ಸಾಹಕಗಳ ಯೋಜನೆಯನ್ನು ರೂಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತ ಗೊಂಡಿದ್ದ ಕಾರ್ಖಾನೆಗಳಲ್ಲಿ ಪ್ರಸ್ತುತ ಶೇ. 70 ರಷ್ಟು ಕೈಗಾರಿಕೆಗಳು ಪುನರಾರಂಭಗೊಂಡಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ವಲಯದ ಪರಿಣಿತರೊಂದಿಗೆ, ಅಂತರರಾಷ್ಟ್ರೀಯ ಕೈಗಾರಿಕೋದ್ಯಮಿಗಳ ಸಂಘಟನೆಗಳೊಂದಿಗೆ ಸರ್ಕಾರವು ಸಮಾಲೋಚನೆ ನಡೆಸುತ್ತಿದೆ.
ಇದಲ್ಲದೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕೈಗಾರಿಕೋದ್ಯಮಿಗಳಿಗೆ ಜಮೀನು ಖರೀದಿಸುವ ಪ್ರಕ್ರಿಯೆ ಸರಳಗೊಂಡಿದ್ದು, ಇದರಿಂದ ಹೂಡಿಕೆದಾರರನ್ನು ಆಕರ್ಷಿಸುವುದು ಸುಲಭವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲಾ ಮಟ್ಟದಲ್ಲಿಯೂ ಕೈಗಾರಿಕೆ ಸ್ಥಾಪಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಕೋವಿಡ್ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಿಯವರು ತಿಳಿಸಿದಂತೆ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಮಹತ್ತರ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೊರ ದೇಶದಿಂದ ಆಮದಾಗುತ್ತಿದ್ದ ಪಿಪಿಇ ಕಿಟ್ ಗಳನ್ನು ದೇಶದಲ್ಲಿಯೇ ತಯಾರಿಸಲು ಉತ್ತೇಜನ ನೀಡಲಾಗಿದ್ದು, ರಾಜ್ಯದಲ್ಲಿ 22 ಘಟಕಗಳು ಈಗ ಪಿಪಿಇ ಕಿಟ್ ಗಳನ್ನು ಉತ್ಪಾದಿಸುತ್ತಿವೆ. 4 ಸಂಸ್ಥೆಗಳು ವೆಂಟಿಲೇಟರುಗಳ ತಯಾರಿಕೆ ಮಾಡುತ್ತಿವೆ. ಸ್ಯಾನಿಟೈಸರ್ ಕೊರತೆ ನೀಗಿಸಲು 40 ಕ್ಕೂ ಹೆಚ್ಚು ಡಿಸ್ಟಿಲರಿಗಳಿಗೆ ಪರವಾನಗಿ ನೀಡಿ, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಎಲ್ಲಾ ಔದ್ಯೋಗಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಮೈಸೂರು ಜಿಲ್ಲಯ ನಂಜನಗೂಡು ತಾಲ್ಲೂಕಿನ ಕೋವಿಡ್ -19 ನಿಂದಾಗಿ ಮುಚ್ಚಲಾಗಿದ್ದ ಜುಬಿಲಿಯಂಟ್ ಕಾರ್ಖಾನೆಯನ್ನು ಸಹ ತೆರೆಯಲು ಅನುಮತಿ ನೀಡಲಾಗಿದೆ
ಕಾರ್ಮಿಕ ಇಲಾಖೆ
ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪ್ರಸ್ತುತ ಕೇವಲ 89 ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಈ ವಲಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಅಭಿಯಾನದ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ವರೆಗೆ 12.40 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು
ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.