ಬೆಂಗಳೂರು – ಮೇ 21, 2020: ನೊವೆಲ್ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ, ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಕುರಿತು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು – ಆರೋಗ್ಯ ಸೇತು ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಾಗಿದೆ, ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಗಳೂ ಇದನ್ನು ಡೌನ್ ಲೋಡ್ ಮಾಡಿಕೊಳ್ಳುವದು ಕಡ್ಡಾಯವಾಗಿದ್ದು, ಇದನ್ನು ಬಳಸದೇ ಕಚೇರಿಗೆ ಬರುವ ಹಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಆರೋಗ್ಯ ಸೇತು ಒಂದು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ಕೂಡ ಈ ಆ್ಯಪ್ ನೀಡುತ್ತದೆ, ಸೋಂಕಿತರು ನಿಕಟದಲ್ಲಿದ್ದರೆ ಬಳಕೆದಾರರನ್ನು ಈ ಆಪ್ ಎಚ್ಚರಿಸುತ್ತದೆ. ಕೊರೋನ ವೈರಸ್ ಕುರಿತಾದ ಎಲ್ಲಾ ಸಂದೇಹ, ಗೊಂದಲಗಳಿಗೆ ಉತ್ತರವನ್ನೂ ನೀಡುವ ಈ ಆ್ಯಪ್ ಕೊರೋನ ವಿರುದ್ಧದ ಈ ಹೋರಾಟದಲ್ಲಿ ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಈ ವರೆಗೆ 63 ಲಕ್ಷ ಜನ ಆರೋಗ್ಯ ಸೇತು ಆ್ಯಪ್ ಅನ್ನು ಬಳಸುತ್ತಿದ್ದು ಇದರಲ್ಲಿನ ಸ್ವಯಂ ನಿಗಾ ಪ್ರಕ್ರಿಯೆ ಮೂಲಕ2,255 ಜನರಿಗೆ ರೆಡ್ ಫ್ಲಾಗ್ ಅಲರ್ಟ್ ನೀಡಲಾಗಿದ್ದು ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಂದೇಶ ಹೋಗಿದೆ. ಇವರಲ್ಲಿ 233 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು 17 ಮಂದಿಗೆ ಪಾಸಿಟೀವ್ ಬಂದಿದೆ. ಅಂದರೆ ಆ್ಯಪ್ ಮೂಲಕ ಪರೀಕ್ಷೆಗೆ ಒಳಪಟ್ಟವರಲ್ಲಿ ರಾಜ್ಯದ ಶೇ.7.5% ಪಾಸಿಟೀವ್ ಪ್ರಕರಣಗಳು ಪಾಸಿಟೀವ್ ಬಂದಿದ್ದು ರಾಷ್ಟ್ರೀಯ ಸರಾಸರಿ ಶೇ.30 ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದ ಜನತೆಯ ಜೀವ ಉಳಿಸುವುದು ಸರ್ಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಈ ಆ್ಯಪ್ ಬಹಳಷ್ಟು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆರೋಗ್ಯ ಸೇತು ಆ್ಯಪ್ ನ ಸುರಕ್ಷತೆಯ ಬಗ್ಗೆ ಇರುವ ಗೊಂದಲಗಳಿಗೆ ಉತ್ತರಿಸಿದ ಸಚಿವರು, ಈ ಆ್ಯಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಭಾರತ ಸರ್ಕಾರದ ನೇರ ಸುಪರ್ದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಡಾಟ ರಿಟೆನ್ಷನ್ ಮತ್ತು ಸುರಕ್ಷತೆಯ ದೃಷ್ಟಿಯಲ್ಲಿ ಸುಸ್ಥಾಪಿತ ಗೌಪ್ಯತೆ ತತ್ವಗಳನ್ನು ಅಳವಡಿಸಿಕೊಂಡಿದೆ, ಅದರ ಬಗ್ಗೆ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಿ ಕೋವಿಡ್ ವಿರುದ್ಧದ ಈ ಸಮರದಲ್ಲಿ ಸಹಕರಿಸುವಂತೆ ಸಚಿವರು ಕೋರಿದ್ದಾರೆ.