*ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ; ಡಿ.ಕೆ ಶಿವಕುಮಾರ್*
ರಾಮನಗರ:- ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು.
ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್ ₹220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ 3.17% ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ.
ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಿನ್ನೆಯಷ್ಟೇ ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ₹900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿ.
ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ ₹100 ಕೋಟಿ ಯೋಜನೆ ಜಾರಿಗೆ ತಯಾರಿದ್ದೇವೆ.
*ಬೆಲೆ ಏರಿಕೆ ಬರೆ*
ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಅದು ಜನಸಾಮಾನ್ಯರಿಗೆ ಪೆಟ್ರೋಲ್ ಕೈಗೆಟುಕದಂತೆ ಮಾಡಲು ನಿರ್ಧರಿಸಿದೆ. ನಾವೆಲ್ಲರೂ ಪೆಟ್ರೋಲ್ ಪಂಪ್‌ಗಳ ಮುಂದೆ ಪ್ರತಿಭಟನೆ ಮಾಡೋಣ.
ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಇಂಧನ ಬೆಲೆ ಹೆಚ್ಚಿಸಿಲ್ಲ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಶಾಮನೂರ್ ಶಿವಶಂಕರಪ್ಪ ಅವರು ತಮ್ಮ ಕ್ಷೇತ್ರ ದಾವಣಗೆರೆಯಲ್ಲಿ ಶುಕ್ರವಾರ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಿದರು. ವ್ಯಾಕ್ಸಿನೇಷನ್ ಡ್ರೈವ್ ಅನ್ನು ರಾಜ್ಯದ ಇತರ ಭಾಗಗಳಲ್ಲಿ ಜೂನ್ ತಿಂಗಳಲ್ಲಿ ವಿಸ್ತರಿಸಲು ಕಾಂಗ್ರೆಸ್ ಪಕ್ಷ ಯೋಜಿಸಿದೆ.
6.6 ಕೋಟಿ ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಸರ್ಕಾರ ತನ್ನದೇ ಜನರ ಆರೋಗ್ಯ ಮತ್ತು ಜೀವನದೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಆ ಮೂಲಕ ದೇಶದಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸಿದೆ.’