ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರದಲ್ಲಿಯೇ ಬಸ್ಸುಗಳ ರಾತ್ರಿ ಸಂಚಾರವನ್ನೂ ಕೂಡ ಪುನರಾರಂಭಿಸಲಾಗುವುದು. ಕೋವಿಡ್ ಲಾಕ್ ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು 1700 ಕೋಟಿ ರೂ.ನಷ್ಟ ಅನುಭವಿಸಿವೆ
ಹುಬ್ಬಳ್ಳಿ ೨೬ :- ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸದ್ಯ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸಾರಿಗೆ ಬಸ್ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರದಲ್ಲಿಯೇ ಬಸ್ಸುಗಳ ರಾತ್ರಿ ಸಂಚಾರವನ್ನೂ ಕೂಡ ಪುನರಾರಂಭಿಸಲಾಗುವುದು. ಕೋವಿಡ್ ಲಾಕ್ ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು 1700 ಕೋಟಿ ರೂ.ನಷ್ಟ ಅನುಭವಿಸಿವೆ. ಹಾನಿ ಇನ್ನೂ ಮುಂದುವರೆದಿದೆ.ಸಾರಿಗೆ ನಿಗಮಗಳ ನೌಕರರ ಎಪ್ರೀಲ್ ತಿಂಗಳ ವೇತನಕ್ಕಾಗಿ ಸರ್ಕಾರ 326 ಕೋಟಿ ರೂ.ನೀಡಿದೆ. ಮೇ ತಿಂಗಳ ವೇತನಕ್ಕಾಗಿ ಅರ್ಧದಷ್ಟು ಅನುದಾನ ನೀಡಿದೆ. ಪರಿಸ್ಥಿತಿ ಸಂಕಷ್ಟದಲ್ಲಿದೆಯಾದರೂ, ಸದ್ಯ ಟಿಕೆಟ್ ದರದ ಹೆಚ್ಚಳ ಕುರಿತು ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ವಾಕರಸಾಸಂ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಾಕ್ ಡೌನ್ ಜಾರಿಯಿಂದಾಗಿ ಸ್ಥಗಿತವಾಗಿದ್ದ ಸಾರ್ವಜನಿಕ ಸಾರಿಗೆ ಸೇವೆ ಮೇ.6 ರಿಂದ ಪುನರಾರಂಭವಾಗಿದೆ. ಸಾರ್ವಜನಿಕ ಸಾರಿಗೆ ಅವಲಂಬಿಸಿರುವ ಜನರ ತೊಂದರೆ ನೀಗಿಸಲು ಬಸ್ ಸಂಚಾರ ಪುನರಾರಂಭದ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ವಾಕರಸಾಸಂ, ಈಕರಸಾಸಂ, ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮಗಳು ಇಲ್ಲಿಯವರೆಗೆ ಅನುಭವಿಸಿರುವ ಹಾನಿ ಹಾಗೂ ಮುಂದಿನ ದಿನಗಳ ಸವಾಲುಗಳ ಕುರಿತು ಚರ್ಚಿಸಲು ಎಲ್ಲಾ ನಿಗಮಗಳ ಪರಿಶೀಲನೆ ಸಭೆ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ.ಹುಬ್ಬಳ್ಳಿಯಲ್ಲಿ ವಾಕರಸಾಸಂ ಪರಿಶೀಲನೆ ಸಭೆ ಮೂಲಕ ಈ ಪ್ರಕ್ರಿಯೆ ಪ್ರಾರಂಭವಾಗಿದೆ.
ಸಾಮಾಜಿಕ ಅಂತರ ನಿಯಮದ ಪಾಲನೆ ಕಡ್ಡಾಯವಾಗಿರುವದರಿಂದ ಶೇ.100 ರಷ್ಟು ಆಸನಗಳ ಭರ್ತಿ ಸಾಧ್ಯವಿಲ್ಲ. ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ.ಜೂನ್ 1 ರ ನಂತರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳು ಏನಿರುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು.
ರಾಜ್ಯದ 4 ನಿಗಮಗಳಲ್ಲಿ ಒಟ್ಟು ಸುಮಾರು 1,30,000 ಸಿಬ್ಬಂದಿ ವರ್ಗದವರಿದ್ದಾರೆ.ಎಪ್ರಿಲ್ ತಿಂಗಳ ವೇತನಕ್ಕೆ ಸರ್ಕಾರ ಅನುದಾನ ನೀಡಿದೆ.ಮೇ ತಿಂಗಳ ವೇತನಕ್ಕೆ ಅರ್ಧದಷ್ಟು ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಹುಬ್ಬಳ್ಳಿಯ ವಾಕರಸಾಸಂ ಈ ಲಾಕ್ ಡೌನ್ ಅವಧಿಯಲ್ಲಿ 414 ಕೋಟಿ ರೂ.ಹಾನಿ ಅನುಭವಿಸಿದೆ.ಪ್ರತಿ ತಿಂಗಳು ಸುಮಾರು 90 ಕೋಟಿ ರೂ.ನಷ್ಟವಾಗುತ್ತಿದೆ. ಸಿಬ್ಬಂದಿ ವೇತನಕ್ಕೆ 96 ಕೋಟಿ ರೂ.ಹಾಗೂ ಇಂಧನ ವೆಚ್ಚಕ್ಕೆ 90 ಕೋಟಿ ರೂ.ಗಳ ಅಗತ್ಯವಿದೆ.
ನೀಲನಕ್ಷೆಗೆ ಸೂಚನೆ: ಕೊರೊನಾ ಇನ್ನೂ ಎಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂಬ ಅಂದಾಜು ಯಾರಿಗೂ ಇಲ್ಲ.ಕೊರೊನಾ ನಿಯಂತ್ರಣದ ಮೇಲೆ ಸಾರಿಗೆ ಸಂಸ್ಥೆಯ ಭವಿಷ್ಯ ಅವಲಂಬನೆಯಾಗಿದೆ.ವೆಚ್ಚ ಕಡಿಮೆ ಮಾಡಿ, ಹಾನಿಯ ಪ್ರಮಾಣ ಕಡಿಮೆ ಮಾಡಲು ಮುಂದಿನ ಮೂರು ತಿಂಗಳ ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಹುಬ್ಬಳ್ಳಿ- ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಗೆ, ರಾಜ್ಯದ ಒಳನಾಡಿನ ದೂರದ ಜಿಲ್ಲೆಗಳಿಗೆ ಬಸ್ ಸೇವೆ ಪುನರಾರಂಭಿಸಲಾಗುವುದು. 2014 ರಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 54 ರೂ.ಇತ್ತು.ಈಗ ಹೆಚ್ಚಾಗಿದೆ.ಸಂಬಳದಲ್ಲಿಯೂ ಈಗ ಶೇ.30 ರಷ್ಟು ಹೆಚ್ಚಾಗಿದೆ. ವಾಹನದ ಬಿಡಿ ಭಾಗಗಳು, ಟಯರ್ ಸೇರಿದಂತೆ ಇತರೆ ವೆಚ್ಚದ ಹೆಚ್ಚಳಕ್ಕೆ ಸಮಾನಾಂತರವಾಗಿ ಟಿಕೆಟ್ ದರದಲ್ಲಿ ಹೆಚ್ಚಳವಾಗದಿರುವದು ಹಾನಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಪೂರ್ವದಲ್ಲಿ ಶೇ.12 ರಷ್ಟು ಟಿಕೆಟ್ ದರ ಹೆಚ್ಚಿಸಿದಾಗ, ವಿರೋಧ ಪಕ್ಷಗಳೂ ಕೂಡ ಸಹಮತ ವ್ಯಕ್ತಪಡಿಸಿದವು.ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ,ಸೋರಿಕೆ ತಡೆದು ಹಾನಿ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.ಓವರ್ ಟೈಮ್ ಕರ್ತವ್ಯ ಕಡಿಮೆ ಮಾಡಿ, ಎಲ್ಲರನ್ನೂ ಡ್ಯೂಟಿಗೆ ಬಳಸಿಕೊಳ್ಳಲಾಗುವುದು.ಅನಗತ್ಯವಾಗಿ ಹೆಚ್ಚು ಟ್ರಿಪ್ ಗಳಲ್ಲಿ ವಾಹನ ಓಡಿಸುವುದನ್ನು ಸ್ಥಗಿತ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹೇಳಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು