IMG 20200731 WA0063

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕೊರೋನಾಗಿಂತ ಭಯಂಕರ ರೋಗ: ಡಿ.ಕೆ ಶಿ

STATE POLATICAL

*ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕೊರೋನಾಗಿಂತ ಭಯಂಕರ ರೋಗ: ಡಿ.ಕೆ ಶಿವಕುಮಾರ್*

ಮಂಗಳೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕೊರೋನಾಗಿಂತ ಭಯಂಕರ ರೋಗ. ಈ ಬಿಜೆಪಿ ಸರ್ಕಾರವೇ ಜನರಿಗೆ ಶಾಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ 30 ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸ್ಪೀಕ್ ಅಪ್ ಕರ್ನಾಟಕದ ಭಾಗವಾಗಿ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ಕೋರೋನಾ ಸಮಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರಕ್ಕೆ ತೊಂದರೆ ಆಗಬಾರದು ಎಂದು ಹೇಳಿ ಅಧಿವೇಶನದಲ್ಲಿ ಕೆಲವು ಸಲಹೆ ನೀಡಿ ಬಜೆಟ್ ಅನುಮತಿಗೆ ಸಹಕರಿಸಿದೆವು.

ನಾವೆಲ್ಲರೂ ಇಂದು ಕೊರೋನಾ ಸವಾಲಿನಲ್ಲಿ ಸಿಲುಕಿದ್ದೇವೆ. ಜೀವ ಇದ್ದರೆ ಜೀವನ. ಇಂದು ಅನೇಕರು ಗಾಬರಿ, ಆತಂಕದಲ್ಲಿ ಬದುಕುತ್ತಿದ್ದಾರೆ. ಕೊರೋನಾ ಆರಂಭದ ದಿನಗಳಲ್ಲಿ ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರವನ್ನು ಕೊಟ್ಟೆವು. ಕೇವಲ ನಾಲ್ಕು ಗಂಟೆ ಅವಕಾಶ ನೀಡಿ ಲಾಕ್ ಡೌನ್ ಹೇರಿದರೂ ಕೂಡ 124 ದಿನವಾದರೂ ನಾವು ಸಹಕಾರ ನೀಡುತ್ತಲೇ ಇದ್ದೇವೆ. ಜನರ ಜೀವನ ಉಳಿಸಲು, ಎಲ್ಲ ರೀತಿಯ ಸಹಕಾರ ನೀಡಿ ಸರ್ಕಾರದ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ.

ಆದರೆ ಕೊರೋನಾ ವಿಚಾರದಲ್ಲಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಏನಾಗಿದೆ ಕರ್ನಾಟಕದಲ್ಲಿ ಏನಾಗಿದೆ ಎಂದು ನಾನು ಹಾಗೂ ನಮ್ಮ ವಿರೋಧ ಪಕ್ದ ನಾಯಕರಾದ ಸಿದ್ದರಾಮಯ್ಯನವರು ಜನರ ಮುಂದೆ ಇಟ್ಟಿದ್ದೇವೆ.

ರಾಜ್ಯ ಸರ್ಕಾರ ಕೊರೋನಾ ವಿಚಾರವಾಗಿ 4 ಸಾವಿರ ಕೋಟಿ ಖರ್ಚು ಮಾಡಿದ್ದು ಅದರಲ್ಲಿ 2 ಸಾವಿರ ಕೋಟಿ ಲೂಟಿ ಮಾಡಿದೆ. ಇದನ್ನು ನಾನು ಹೇಳುತ್ತಿಲ್ಲ, ನಿಮ್ಮ ಮಾಧ್ಯಮ ಸ್ನೇಹಿತರುಗಳು ಪ್ರಕಟಿಸಿರುವ ದಾಖಲೆಗಳನ್ನೇ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಾಧ್ಯಮಗಳಲ್ಲಿ ಬಂದ ವರದಿ, ಕೋರ್ಟ್ ನಲ್ಲಿ ಸಲ್ಲಿಸಿರುವ ಅಫಿಡೆವಿಟ್, ಸರ್ಕಾರದ ಆದೇಶಗಳ ತುಣುಕು ನಿಮ್ಮ ಮುಂದೆ ಇಡುತ್ತೇನೆ.

ಕೊರೋನಾದಲ್ಲಿ ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಸಂಸ್ಕಾರ. ಇದನ್ನು ನಿಮ್ಮ ಮುಂದೆ ತಿಳಿಸಲು ಬಂದಿದ್ದೇನೆ. ಇವತ್ತು ಸಿಎಂ ಅವರು ಸಹಕಾರ ಕೊಡಿ, ಬೆಂಬಲ ಕೊಡಿ ಅಂತಾ ಕೇಳುತ್ತಿದ್ದಾರೆ. ಕೊರೋನಾ ಭ್ರಷ್ಟಾಚಾರ ವಿಚಾರವಾಗಿ ಸಿದ್ದರಾಮಯ್ಯನವರು ಲೆಕ್ಕ ಕೊಡಿ ಅಂತಾ ಕೇಳಿದರು. ನಾನು ಉತ್ತರ ಕೊಡಿ ಅಂತಾ ಕೇಳಿದೆ. ಆದರೆ ಮುಖ್ಯಮಂತ್ರಿಗಳು ನೀವು ಯಾವುದೇ ದಾಖಲೆ ಬೇಕಿದ್ದರೂ ಬಂದು ನೋಡಿ ಅಂತಾ ಹೇಳಿದರು. ರಾಜ್ಯದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ. ಈ ಸಮಿತಿಯಲ್ಲಿ ನಿಮ್ಮ ಪಕ್ಷದವರೂ ಇದ್ದಾರೆ, ದಳದವರೂ ಇದ್ದಾರೆ ಈ ಸಮಿತಿಗೆ ನೀವು ಸಭೆ ನಡೆಸಲು, ಸ್ಥಳಗಳ ಪರಿಶೀಲನೆಗೆ ಏಕೆ ಅವಕಾಶ ನೀಡುತ್ತಿಲ್ಲ? ನಾವು ಪಾರದರ್ಶಕವಾಗಿದ್ದೇವೆ ಎಂದು ಹೇಳುತ್ತೀರಾ, ಆದರೆ ಅದನ್ನು ಪಾಲಿಸುತ್ತಿಲ್ಲ.

ಆರ್ ಟಿಐ ಮೂಲಕ ಮಾಹಿತಿ ಕೇಳಿದರೆ ಅಲ್ಲಿ ಪ್ರಧಾನಿಗಳೂ ನೀಡುತ್ತಿಲ್ಲ, ನೀವು ನೀಡುತ್ತಿಲ್ಲ. ಇದು ಯಾರ ದುಡ್ಡು? ಜನ ಕೊಟ್ಟ ಹಣವನ್ನು ನಿಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದೀರಿ, ಅಭಿವೃದ್ಧಿ ನಿಲ್ಲಿಸಿದ್ದೀರಿ.ನಾವು ಬೇರೆ ವಿಚಾರದ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ. ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ದರ ನಿಗದಿ ಪಡಿಸಿದ್ದಾರೆ, ರಾಜ್ಯ ಸರ್ಕಾರ ಯಾವ ದರ ನಿಗದಿ ಮಾಡಿದೆ, ನೆರೆ ರಾಜ್ಯದವರು ಯಾರ ದರ ನಿಗದಿ ಮಾಡಿದ್ದಾರೆ ಅಂತಾ ಕೇಳುತ್ತಿದ್ದೇವೆ. ಹತ್ತೋ, ಹದಿನೈದು ಪರ್ಸೆಂಟ್ ವ್ಯತ್ಯಾಸ ಬಂದರೆ ಏನೋ ಇರಬಹುದು ಅಂತಾ ಸುಮ್ಮನಾಗಬಹುದು.

ಆದರೆ ನಿಮ್ಮ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ 4 ಲಕ್ಷಕ್ಕೆ ಖರೀದಿಸಿದ ವೆಂಟಿಲೇಟರ್ ಅನ್ನು ನೀವು 6ರಿಂದ 18 ಲಕ್ಷದವರೆಗೂ ಖರೀದಿಸಿದ್ದೀರಿ. ಅಲ್ಲಿಗೆ ಎ,ಟು ಪರ್ಸೆಂಟ್ ಹೆಚ್ಚಾಯಿತು? ತಮಿಳುನಾಡು, ಮಹಾರಾಷ್ಟ್ರದವರಿಗೆ ಸಿಕ್ಕ ದರದಲ್ಲಿ ನಿಮಗೆ ಯಾಕೆ ಸಿಗಲಿಲ್ಲ? ಇದನ್ನು ಕೇಳುವುದು ತಪ್ಪಾ?

ನಾನು ಆರೋಗ್ಯ ಹಸ್ತ ಕಾರ್ಯಕ್ರಮ ಮಾಡುತ್ತಿದ್ದು, ಅದಕ್ಕೆ ಖರೀದಿಸಿದ ಆಕ್ಸಿಮೀಟರ್ 565 ರೂಪಾಯಿಗೆ ಖರೀದಿಸಿದ್ದೇನೆ. ಸರ್ಕಾರ 1500 ರೂಪಾಯಿಗೆ ಖರೀದಿಸಿದೆ. ಥರ್ಮಲ್ ಸ್ಕ್ಯಾನರ್ ಅನ್ನು 2ರಿಂದ 4 ಸಾವಿರ ರೂಪಾಯಿವರೆಗೂ ಖರೀದಿಸಿದ್ದೀರಿ ಸ್ಯಾನಿಟೈಸರ್ ಅನ್ನು ಸಾಮಾಜಿಕ ಕಲ್ಯಾಮ ಇಲಾಖೆ. ನಾನು ಕಾಂಗ್ರೆಸ್ ಕಚೇರಿಯಿಂದ 1050 ರೂಪಾಯಿಗೆ ಖರೀದಿಸಿದ್ದೇನೆ. ಅರ್ಧ ಲೀಟರ್ ಸ್ಯಾನಿಟೈಸರ್ ಅನ್ನು 100 ರೂಪಾಯಿಗೆ ಖರೀದಿಸಿದ್ದೇನೆ. ಆದರೆ ಸಮಾಜ ಕಲ್ಯಾಣ ಇಲಾಖೆ 600 ರೂಪಾಯಿಗೆ ಖರೀದಿಸಿದೆ. ನಾನು ಸುಳ್ಳು ಹೇಳುತ್ತಿಲ್ಲ. ಸುಳ್ಳು ಹೇಳುತ್ತಿದ್ದರೆ ನೀವು ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮಾನನಷ್ಟ ಮೊಕದ್ದಮೆ ಹೂಡಿ. ನನ್ನ ಬಳಿ ಸರ್ಕಾರದ ಆದೇಶವನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇನೆ.

ಕಾರ್ಮಿಕ ಇಲಾಖೆ ಎಷ್ಟು ಕಿಟ್ ಹಂಚಿತು? ಯಾರಿಗೆ ಹಂಚಿತು? ವಲಸೆ ಕಾರ್ಮಿಕರು ಕೇವಲ ಕಾರ್ಮಿಕರಲ್ಲ ಅವರು ದೇಶ ಕಟ್ಟುತ್ತಿರುವವರು. ನೀವು ಅವರಿಗೆ ಸರಿಯಾಗಿ ಹಣ ಕೊಟ್ಟಿದ್ದರೆ, ಊಟ, ಆಹಾರ ಪದಾರ್ಥ, ಸೂರು ಕೊಟ್ಟಿದ್ದರೆ ಅವರ್ಯಾಕೆ ಊರು ಬಿಟ್ಟು ಹೋಗುತ್ತಿದ್ದರು? ನಮ್ಮ ರಾಜ್ಯದವರಿಗೆ ಬಸ್ ದರ ಡಬಲ್ ಮಾಡಿದರು. ನಾನು ಉಚಿತ ಪ್ರಯಾಣ ಸೌಲಭ್ಯಕ್ಕೆ ಆಗ್ರಹಿಸಿದೆ. ನಮ್ಮ ನಾಯಕರೆಲ್ಲ ಹೋಗಿ ಚೆಕ್ ಕೊಟ್ಟೆವು. ಆದರೆ ಮಂತ್ರಿಯೊಬ್ಬರು ಅದನ್ನು ಬೋಗಸ್ ಚೆಕ್ ಅಂದರು. ನಂತರ ನಾವು ಸರ್ಕಾರ ತನ್ನ ನಿರ್ಧರ ಹಿಂಪಡೆಯುವಂತೆ ಮಾಡಿದೆವು.

ಕಾರ್ಮಿಕರ ಬಸ್ ಪ್ರಯಾಣದಿಂದ, ರೈಲು ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಪ್ರತಿ ಹಂತದಲ್ಲೂ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಅಜೆಂಡಾ ಸಿದ್ಧಪಡಿಸಿ ಕೊಟ್ಟಿದೆ. ಸರ್ವಪಕ್ಷ ಸಭೆ ಕರೆಯಲು ಆಗ್ರಹಿಸಿದ್ದೇ ನಾವು, ನಮ್ಮ ಒತ್ತಾಯಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸರ್ವಪಕ್ಷ ಸಭೆ ಕರೆಯಲಾಯಿತು. ನಾವು ಇಲ್ಲಿ ರೈಲು ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತು ಶ್ರಮಿಕ ರೈಲು ವ್ಯವಸ್ಥೆ ಕಲ್ಪಿಸಿತು. ಹೀಗೆ ಪ್ರತಿ ಹಂತದಲ್ಲೂ ನಮ್ಮ ಪಕ್ಷ ಸರ್ಕಾರಕ್ಕೆ ದಾರಿ ತೋರಿಸಿದೆ.

ಆಹಾರ ಕಿಟ್ ಹಂಚಿಕೆ ವಿಚಾರ. ಸರ್ಕಾರದ ಕಿಟ್ ಗೆ ಪಕ್ಷದ ಫೋಟೋ ಹಾಕಿಕೊಂಡು ಬೆಂಗಳೂರಿನಲ್ಲಿ ಹಂಚಿದರು. ಮಕ್ಕಳು ಬಾಣಂತಿಯರ ಆಹಾರವನ್ನು ಅಕ್ರಮವಾಗಿ ತಮ್ಮ ಹೆಸರಲ್ಲಿ ಹಂಚಲಾಗುತ್ತಿತ್ತು. ಇವೆಲ್ಲವನ್ನು ನಾವು ಬಯಲಿಗೆಳೆದೆವು. ಆದರೆ ಮುಖ್ಯಮಂತ್ರಿಗಳುಈ ವಿಚಾರವಾಗಿ ಒಂದು ಕೇಸ್ ದಾಖಲಿಸಿ ಒಬ್ಬರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಆದರೂ ನೀವು ನಮ್ಮ ಸಹಕಾರ ಕೇಳುತ್ತಿದ್ದೀರಿ. ನೀವು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇದೆಯಾ?

ನೀವು ನಮ್ಮ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದಿರಿ? ಶ್ರಮಿಕ ರೈಲಲ್ಲಿ ಹೊದವರಿಗೆ ಮೊಟ್ಟೆ, ಮೊಸಂಬಿ, ಆಹಾರ ಪಟ್ಟಣವನ್ನು ಕೊಟ್ಟರಂತೆ. ಬೆಂಗಳೂರಿನಲ್ಲಿ ಕಾರ್ಮಿಕರಿಗೆ ಊಟ ಹಂಚಿದವರು ಎನ್ ಜಿಒಗಳು. ಆದರೆ ಸರ್ಕಾರ ಇದರಲ್ಲಿ 85 ಕೋಟಿ ಖರ್ಚು ಮಾಡಿರುವುದಾಗಿ ತಿಳಿಸಿದೆ. ಇದು ಯಾವ ಲೆಕ್ಕ?

ಇನ್ನು ರೈತರ ವಿಚಾರ, ರೈತರು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಲೆ ಇಲ್ಲದೆ ಕಂಗಾಲಾಗಿದ್ದಾಗ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ 1 ಕೋಟಿಯಷ್ಟು ಖರ್ಚು ಮಾಡಿ 100 ಕೋಟಿಯಷ್ಟು ರೈತರ ತರಕಾರಿ, ಹಣ್ಣು ಬೆಳೆಗಳನ್ನು ಖರೀದಿ ಮಾಡಿದೆ. ನಾನು ಸರ್ಕಾರಕ್ಕೆ ಕೇಳುತ್ತಿರುವುದು, ನೀವು ಯಾವ ರೈತನ ಬಳಿ ಹೋಗಿ ಅವನ ಬೆಳ ಖರೀದಿಸಿ, ಅವನಿಗೆ ದುಡ್ಡು ಕೊಟ್ಟಿದ್ದೀರಿ? ಉದಾಹರಣೆ ಕೊಡಿ. ಇನ್ನು ಮೀನುಗಾರರು ಮೀನು ಹಿಡಿದಿದ್ದರು, ಅದಕ್ಕೆ ಬೆಂಬಲ ಬೆಲೆ ಕೊಟ್ಟರೇ? ಅವರಿಗೆ ಪರಿಹಾರ ಕೊಟ್ಟರಾ?

ಇನ್ನು ಸಂಪ್ರದಾಯಿಕ ವೃತ್ತಿ ಅವಲಂಬಿಸಿರುವವರು ಹಾಗೂ ಅಸಂಘಟಿತ ಕಾರ್ಮಿಕರಿಗೆ 10000 ಪ್ರೋತ್ಸಾಹ ಧನ ನೀಡಿ ಎಂದು ಕೇಳಿದೆವು. ನಮ್ಮ ಒತ್ತಾಯಕ್ಕೆ 1600 ಕೋಟಿ ಪ್ಯಾಕೇಜ್ ಘೋ,ಣೆ ಮಾಡಿದರು. ಆದರೆ ಇದನ್ನು ಪಡೆಯಲು ಆಯಪ್ ಅಲ್ಲಿ ನೊಂದಣಿ ಮಾಡಿಸಬೇಕು ಎಂದು ಅವರಿಗೆ ಅರ್ಜಿ ಹಾಕಲು ಸಾಧ್ಯವಾಗದಂತೆ ಮಾಡಿದಿರಿ. ಇದುವರೆಗೂ ಹೆಚ್ಚೆಂದರೆ ಶೇ. 10ರಿಂದ 15 ರಷ್ಟು ಮಂದಿಗೆ ಹಣ ಸಿಕ್ಕಿರಬಹುದು ಅಷ್ಟೇ. ಅವರು ಸತ್ತ ಮೇಲೆ ನೀವು ಹಣ ಕೊಡ್ತೀರಾ?

ಲಾಕ್ ಡೌನ್ ಆರಂಭದಲ್ಲೇ ಸರ್ವಪಕ್ಷ ಸಭೆ ಕರೆದಾಗಲೇ ನಾನು ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದ್ದೆ. 120 ದಿನ ಸುಮ್ಮನಿದ್ದು, ಈಗ ಬೆಡ್ ವ್ಯವಸ್ಥೆ ಮಾಡಲು ಆಸ್ಪತ್ರೆಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಲಾಕ್ ಡೌನ್ ಮಾಡಿದ್ದು ಯಾಕೆ? ತಯಾರಿ ಮಾಡಿಕೊಳ್ಳಲು ಅಲ್ಲವೇ? ನಿಮಗೆ ಸರ್ಕಾರ ಹೇಗೆ ನಡೆಸಬೇಕು ಅಂತಾನು ಗೊತ್ತಿಲ್ಲ.

ಡಿಸಿಎಂ ಅಶ್ವಥ ನಾರಾಯಣ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಪತ್ರಿಕಾಗೋಷ್ಠಿ ಕರೆದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಲು ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸುತ್ತಾರೆ. ಇದು ತಾಂತ್ರಿಕ ವಿಚಾರ ಅಂತಾ ನೆಪ ಕೊಡುತ್ತಾರೆ. ಹಾಗಿದ್ದರೆ ಉಪಮುಖ್ಯಮಂತ್ರಿಯಾಗಿ ನಿವ್ಯಾಕೆ ಇದ್ದೀರಿ? ಅಧಿಕಾರಿಗಳೇ ನಡೆಸುತ್ತಾರೆ, ನಿಮ್ಮ ಅಗತ್ಯವೇನಿದೆ?

ಸರ್ಕಾರ ಬೇರೆ ಆಡಳಿತ ಬೇರೆ. ಜನರ ಭಾವನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಸರ್ಕಾರಕ್ಕೆ ಕಣ್ಣು ಇಲ್ಲ, ಹೃದಯವೂ ಇಲ್ಲ, ಕಿವಿಯೂ ಇಲ್ಲ. ಈ ಸರ್ಕಾರ ಕೊರೋನಾ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಸತ್ತವರಿಗೆ ಒಳ್ಳೆಯ ಸಂಸ್ಕಾರ ನೀಡಲು ನಿಮ್ಮಿಂದ ಸಾಧ್ಯವಾಗಲಿಲ್ಲವಲ್ಲ. ಇದು ಸಂಸ್ಕೃತಿಯ ಭೂಮಿ. ನಮ್ಮ ನಾಯಕರು ಸತ್ತವರ ಅಂತ್ಯ ಸಂಸ್ಕಾರಕ್ಕೆ ತಾವೇ ಮುಂದೆ ನಿಂತು ಮಾಡಿಸಿದ್ದಾರೆ. ಅವರ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಆಸ್ಪತ್ರೆಯಲ್ಲಿ ರೋಗಿಗೆ ಧೈರ್ಯ ತುಂಬಲು ಒಬ್ಬ ಬಿಜೆಪಿ ನಾಯಕ ಹೋಗಲಿಲ್ಲ. ಯಾವ ಜಿಲ್ಲೆಯಲ್ಲಿ ಯಾರಿಗೆ ಸಹಾಯ ಮಾಡಿದ್ದಾರೆ?

ಜೀವನಕ್ಕಾಗಿ ಹೊರರಾಜ್ಯಗಳಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಅಂತಾ ನಮ್ಮ ರಮಾನಾಥ ರೈ ಅಗ್ರಹಸಿದರು. ಇದು ಕಾಂಗ್ರೆಸ್ ಸಂಸ್ಕೃತಿ. ಹೊರ ರಾಜ್ಯದಿಂದ ಬಂದವರನ್ನು ನೀವು ಯಾವ ರೀತಿ ನಡೆಸಿಕೊಂಡಿರಿ? ಅವರಿಗೆ ನೀವು ಧೈರ್ಯ ನೀಡಲು ಸಾಧ್ಯವಾಗಲಿಲ್ಲ. ಇದೇನಾ ಬಿಜೆಪಿ ಸಂಸ್ಕೃತಿ, ಆರ್ ಎಸ್ಎಸ್ ಸಂಸ್ಕೃತಿ? ನೀವು ಅವರಿಗೆ ಸಹಾಯ ಮಾಡದಿದ್ದರೂ ಅವರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನಿಮ್ಮನ್ನು ಅದೇ ಪೊರಕೆಯಲ್ಲಿ ಕ್ಲೀನ್ ಮಾಡಿ ಕಳುಹಿಸುತ್ತಾರೆ.ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಇಡೀ ಸರ್ಕಾರದ ನೀತಿಗೆ ಗರ ಬಡಿದಿದೆ. ಮಕ್ಕಳು, ಪೊಷಕರಿಗೆ ಸರಿಯಾದ ಮಾರ್ಗದರ್ಶನ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೊಟೇಲ್ ನಡೆಸುವವರು 20 ಜನಕ್ಕೆ ಕೆಲಸ ಕೊಟ್ಟಿರುತ್ತಾರೆ ಅವರ ಬಗ್ಗೆ ಯೋಚಿಸಿದ್ದೀರಾ, ಶಾಲೆ ಕಾಲೇಜು ಬಂದ್ ಆಗಿದೆ, ಶಿಕ್ಷಕರ ಸಂಬಳದ ಬಗ್ಗೆ ಯೋಚಿಸಿದ್ದೀರಾ? ಪ್ರಧಾನಿಗಳು ಉದ್ಯೋಗಿಗಳ ಬಗ್ಗೆ ಮಾತನಾಡಿದರು. ಆದರೆ ಇದ್ಯೋಗ ನೀಡುವವನ ಬಗ್ಗೆ ಮಾತನಾಡಲಿಲ್ಲ. ಕೇವಲ ಉದ್ಯೋಗಿ ಮಾತ್ರವಲ್ಲ ಉದ್ಯೋಗ ಸೃಷ್ಟಿಸುವವನೂ ಕೂಡ ಮುಖ್ಯ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್, ರಾಜ್ಯ ಸರ್ಕಾರ ಸಾವಿರಾರು ಕೋಟಿ ಪ್ಯಾಕೇಜ್ ಘೋಷಿಸಿತಲ್ಲಾ ಯಾರಿಗೆ ತಲುಪಿದೆ ಅಂತಾ ಪಟ್ಟಿ ಕೊಡಿ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಮ ಕೊಡುವ ಬದಲು ಮೂರು ತಿಂಗಳು ಡಫರ್ ಪೇಮೆಂಟ್ ಅಂತಾ ಮುಂದಕ್ಕೆ ಹಾಕಿ ಆಮೇಲೆ ಅವರಿಂದ ವಸೂಲಿ ಹೆಸರಲ್ಲಿ ಸುಲಿಗೆ ಮಾಡಲು ಮುಂದಾಗಿದೆ.

ಇದನ್ನು ಕೇಳಿದರೆ ಸಹಕಾರ ಕೊಡುತ್ತಿಲ್ಲಾ ಅಂತೀರಾ. ನೀವು ಲಂಚ ಹೊಡೆಯುವುದಕ್ಕೆ ನಾವು ಸಹಕಾರ ನೀಡಬೇಕಾ? ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿಚಾರವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಬೇಕಾದರೆ ನಮ್ಮ ಕಾಲದಿಂದಲೂ ತನಿಖೆ ನಡೆಸಿ. ನಾವು ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಗೆ ಒಳಪಡಿಸಿ. ನನ್ನ ಮೇಲೆ ಇಡಿ, ಸಿಬಿಐ ಅಂತಾ ಕೇಸ್ ಹಾಕಿದ್ದೀರಲ್ಲಾ, ಮಾಡಿ ತೊಂದರೆ ಇಲ್ಲ. ತಪ್ಪು ಮಾಡಿದ್ದರೆ ನಾನು ಶಿಕ್ಷೆಗೆ ಒಳಗಾಗಲೇ ಬೇಕು.

ಇಂದು ವರಮಹಾಲಕ್ಷ್ಮಿ, ಬಕ್ರೀದ್ ಹಾಗೂ ಸೆಂಟ್ ಅಲೋಶಿಯಸ್ ಫೀಸ್ಟ್ ಇದ್ದು ಇದೊಂದು ಪವಿತ್ರ ದಿನವಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಕೋರುತ್ತೇನೆ.


*ಯಾವ ನೋಟೀಸ್ ಗೂ ಹೆದರುವುದಿಲ್ಲ*
ಅವರು ನೋಟೀಸ್ ಕೊಡಲಿ, ಕೇಸು ಹಾಕಲಿ. ನಾವು ಉತ್ತರಿಸಲು ಸಿದ್ಧ. ಈ ವಿಚಾರದಲ್ಲಿ ನಾನು ಮಾತನಾಡುತ್ತಿಲ್ಲ. ನೀವು ಈ ಬಗ್ಗೆ ಬರೆದಿದ್ದೀರಿ. ನಿಮ್ಮ ಮೇಲೂ ಹಾಕಬೇಕಲ್ಲಾ? ಎಲ್ಲ ತನಿಖೆಗೆ ನಾವಂತೂ ತಯಾರಿದ್ದೇವೆ. ಎಲ್ಲರ ವಿಚಾರದಲ್ಲೂ ತನಿಖೆಯಾಗಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ

*ಉಚಿತ ಚಿಕಿತ್ಸೆ ನೀಡಲಿ*

ಖಾಸಗಿ ಆಸ್ಪತ್ರೆಯಲಲ್ಲಿ ಸುಲಿಗೆ ಮಾಡುತ್ತಿದ್ದು, ನಾವು ಉಚಿತವಾಗಿ ಚಿಕಿತ್ಸೆ ಕೊಡಿ ಅಂತಾ ಕೇಳುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಾದರೂ ಕಾನೂನಿನಲ್ಲಿ ನೀವು ಅದರಲ್ಲಿ ಪಾಲುದಾರರು.ನೀವು ರೇಟ್ ಫಿಕ್ಸ್ ಮಾಡಿದ್ದೇ ತಪ್ಪು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ಜಾರಿ ಮಾಡಿದ್ದು ಅದರ ಮೂಲಕ ಉಚಿತ ಚಿಕ್ತಿಸೆ ಕೊಡಿಸಿ. ಹಣ ಯಾಕೆ ಬೇಕು? ಈ ಕೊರೋನಾ ಹಂಚಿದ್ದು ನೀವು.

*ಕಾಂಗ್ರೆಸ್ ಗೆ ಗಾಂಧಿ ಕುಟುಂಬ ಅಗತ್ಯ*
ಗಾಂಧಿ ಕುಟುಂಬವಿಲ್ಲದೇ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಇಲ್ಲದೆ ದೇಶ ಒಂದಾಗಿರಲು ಸಾಧ್ಯವಿಲ್ಲ. ನಾನು ದೇಶದ ಎಲ್ಲ ಕಾಂಗ್ರೆಸಿಗರ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತೇನೆ. ಪಕ್ಷದ ಅಧ್ಯಕ್ಷ ಹುದ್ದೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡುವ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಕೊರೋನಾ ವಿಚಾರದಲ್ಲಿ ಇದನ್ನು ಸೇರಿಸುವುದು ಬೇಡ. ನಾವೀಗ ಮೊದಲು ಜನರ ಜೀವ ಉಳಿಸಬೇಕು. ಸರ್ಕಾರದ ಭ್ರಷ್ಟಾಚಾರ ನಿಲ್ಲಿಸಬೇಕು.

*ಕರಾವಳಿ ಭೂಮಿ ನನ್ನ ಹೃದಯಕ್ಕೆ ಹತ್ತಿರ:*

ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕೃತವಾಗಿ ಪದಗ್ರಹಣ ಮಾಡಲು ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ತಡೆ ಹಿಡಿದರು. ನಂತರ ಒತ್ತೃ ಬಂದ ಮೇಲೆ ಮಾಧ್ಯಮಗಳ ಮುಂದೆ ಒಪ್ಪಿಗೆ ಸೂಚಿಸಿದರು. ನಂತರ ನಾವು ನಮ್ಮದೇ ಶೈಲಿಯಲ್ಲಿ ಕಾರ್ಯಕರ್ತರ ಮಧ್ಯೆ ಪ್ರತಿಜ್ಞಾ ವಿಧ ಸ್ವೀಕರಿಸಿದೆ.

ಇಂದು ಮೊದಲ ಬಾರಿಗೆ ನಾನು ಬೆಂಗಳೂರಿನಿಂದ ಹೊರಗಡೆ ಬರಲು ಸಾಧ್ಯವಾಗಿದೆ. ಇವತ್ತೂ ಕೂಡ ರಾಜಕೀಯ ಸಭೆ ನಡೆಸಲು ಅನುಮತಿ ಇಲ್ಲ. ಇದನ್ನು ಅರಿತು, ವಿವಿಧ ನಾಯಕರೆಲ್ಲರೂ ಸೇರಿ 30 ಜಿಲ್ಲೆಗಳಲ್ಲಿ ಮಾಧ್ಯಮಗಳ ಮುಂದೆ ಬಂದು ಕೊರೋನಾ ವಿಚಾರದಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ರಮ ರೂಪಿಸಿದ್ದೇವೆ.

ಮೊದಲು ನಾನು ದಕ್ಷಿಣ ಕನ್ನಡ ಜಿಲ್ಲೆಯನ್ನು ಆರಿಸಿದ್ದೇನೆ. ಕರಾವಳಿ ಭಾಗದ ಪ್ರದೇಶ ನನ್ನ ಹೃದಯಕ್ಕೆ ಬಹಳ ಹತ್ತಿರವಾದಂತ ಪ್ರದೇಶ. ಈ ಭಾರದಲ್ಲಿ ಬಹಳ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರು ಹೆಚ್ಚಾಗಿದ್ದಾರೆ. ಈ ಭೂಮಿಯಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮವಿರಬಹುದು ಎಲ್ಲರೂ ಪರಸ್ಪರ ಗೌರವದಿಂದ ಸೋದರತ್ವ ಭಾವನೆಯಲ್ಲಿ ಐಕ್ಯತೆಯಲ್ಲಿ ಬದುಕುತ್ತಿದ್ದಾರೆ.

ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯ ಇರಬಹುದು. ಸಾಮಾನ್ಯ ಜನ ಎಲ್ಲ ಧರ್ಮದವರು ಒಟ್ಟಿಗೆ ಬದುಕುತ್ತಿದ್ದಾರೆ. ಇತಿ ಹೆಚ್ಚು ಇಂಜಿನೀಯರಿಂಗ್, ಮೆಡಿಕಲ್, ಪದವಿ ಕಾಲೇಜುಗಳನ್ನು ಹೊಂದಿದ್ದು, ಶೈಕ್ಷಣಿಕವಾಗಿ ಮುಂದಿದೆ. ಸಹಕಾರ, ಬ್ಯಾಂಕಿಂಗ್ ಕ್ಷೇತ್ರಗಳ ಬುನಾದಿ ಬಲವಾಗಿದೆ. ಈ ಇತಿಹಾಸವನ್ನು ಯಾರೂ ತಿದ್ದಲು ಸಾಧ್ಯವಿಲ್ಲ. ಈ ಪುಣ್ಯ ಭೂಮಿಗೆ ಬಂದು ಕಾಂಗ್ರೆಸ್ ಪಕ್ಷದ ಆಚಾರ ವಿಚಾರವನ್ನು ಪ್ರಚಾರ ಮಾಡಲು ಬಂದಿದ್ದೇನೆ.

*ಡಿ.ಕೆ ಶಿವಕುಮಾರ್ ಅವರ ದಿನದ ಕಾರ್ಯಕ್ರಮ ಪಟ್ಟಿ*

ಶುಕ್ರವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ ಶಿವಕುಮಾರ್ ಅವರು ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರೊಂದಿಗೆ ಮೊದಲು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಅಲ್ಲಿಂದ ಮಂಗಳೂರಿನ ಬಿಶಪ್ ಮೋ.ರೆ.ಡಾ. ಪೀಟರ್ ಪೌಲ್ ಸಲ್ಡಾನಾ ಅವರನ್ನು ಭೇಟಿ ಮಾಡಿದರು.

ನಂತರ ಗೋಕರ್ಮೇಶ್ವರ ದೇವಾಲಯಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಸಿದರು.

ಪತ್ರಿಕಾಗೋಷ್ಠಿ ನಂತರ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕ್ಷೇಮ ಸಮಾಚಾರ ವಿಚಾರಿಸಿದರು.

IMG 20200731 WA0054