50 ಹೊಸ ನಾಯಿಗಳನ್ನು ಶ್ವಾನದಳಕ್ಕೆ ಸೇರ್ಪಡೆ,2.5 ಕೋಟಿ ವೆಚ್ಚದಲ್ಲಿ ಶ್ವಾನದಳದ ಉನ್ನತೀಕರಣ: ಆಯುಕ್ತ ಭಾಸ್ಕರ್ ರಾವ್ ಖ್ಯಾತ ಶ್ವಾನ ಮನೋತಜ್ಞ ಅಮೃತ್ ಹಿರಣ್ಯ ಅವರ ಸೇವೆಯನ್ನು ಪಡೆದುಕೊಳ್ಳಲು ನಿರ್ಧಾರ.
ಬೆಂಗಳೂರು ಮೇ 26: ರಾಜ್ಯದ ಪೊಲೀಸ್ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 50 ಶ್ವಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶ್ರಿ ಭಾಸ್ಕರ್ ರಾವ್ ತಿಳಿಸಿದರು.
ನಗರದ ಕೋರಮಂಗಲದಲ್ಲಿರುವ ಆಡುಗೋಡಿಯಲ್ಲಿರುವ ಸಿಎಆರ್ ಸೌತ್ ನಲ್ಲಿ ಹೊಸದಾಗಿ ಉನ್ನತೀಕರಿಸಿರುವ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದರು. ಸ್ಪೋಟಕ ವಸ್ತುಗಳನ್ನು, ಡ್ರಗ್ಸ್‌ಗಳನ್ನು ಪತ್ತೆಹಚ್ಚುವ ಹಾಗೂ ಅಫರಾದ ಸ್ಥಳದಲ್ಲಿ ಅಫರಾದಿಯನ್ನು ಪತ್ತೆಹಚ್ಚುವಲ್ಲಿ ನಮ್ಮ ಇಲಾಖೆಯ ಶ್ವಾನಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ತಂಡವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವುಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಿಎಆರ್ ಸೌತ್ ನಲ್ಲಿ ಡಿಸಿಪಿ ಯೋಗೇಶ್ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಉನ್ನತೀಕರಿಸಲಾಗಿದೆ. ಇದಕ್ಕೆ ಡಾಗ್ ಗುರು ಎಂದೇ ಪ್ರಸಿದ್ದಿಯಾಗಿರುವ ಶ್ವಾನ ಮನೋ ವೈದ್ಯ ಅಮೃತ್ ಹಿರಣ್ಯ ಅವರು ಸಲಹೆಗಳನ್ನು ನೀಡಿದ್ದಾರೆ. ಈ ಚಟುವಟಿಕೆಯ ಉದ್ಯಾನವನವನ್ನು ನಮ್ಮ ಸಿಬ್ಬಂದಿಗಳೇ ಶೃದ್ದೆಯಿಂದ ನಿರ್ಮಿಸಿದ್ದಾರೆ. ಈ ಶ್ವಾನದಳಕ್ಕೆ ಇನ್ನೂ ಹೆಚ್ಚಿನ ಶ್ವಾನಗಳನ್ನು ಸೇರಿಸುವ ಉದ್ದೇಶದಿಂದ ರಾಜ್ಯ ಸರಕಾರ 2.5 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ಬೆಂಗಳೂರು ಉತ್ತರದಲ್ಲೂ ಕೂಡಾ ಶ್ವಾನ ತರಬೇತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ ದಿನದಲ್ಲಿ ಪೊಲೀಸ್ ಇಲಾಖೆಯ ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ಡಾಗ್ ಹ್ಯಾಂಡ್ಲರ್‌ಗಳಾಗಿ ನೇಮಿಸಲು ಚಿಂತನೆ ನಡೆಯುತ್ತಿದೆ. ಡಾಗ್ ಗುರು ಎಂದೇ ಖ್ಯಾತಿ ಪಡೆದಿರುವ ಶ್ವಾನ ಮನೋತಜ್ಞ ಅಮೃತ್ ಹಿರಣ್ಯ ಅವರ ಸೇವೆಯನ್ನು ಪಡೆದುಕೊಂಡು ಶ್ವಾನದಳವನ್ನು ಉನ್ನತೀಕರಿಸಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಅಮೃತ್ ಹಿರಣ್ಯ ಅವರ ತರಬೇತಿಯಂತೆ ಶ್ವಾನದಳ ವೆಹಿಕಲ್ ಹೈಜಾಕಿಂಗ್, ಸ್ಪೋಟಕ ಹಾಗೂ ಡಗ್ರ ಡಿಟೆಕ್ಷನ್, ಆಂಟಿ ಟೆರರಿಸ್ಟ್/ನಕ್ಸಲ್ ವಾರ್ ಫೇರ್ ನಂತಹ ನೂತನ ತಂತ್ರಗಳನ್ನು ಪ್ರದರ್ಶಿಸಿತು.