a5cc2b6f 424a 4156 beb8 51e7ad78a8d5

ಪಾವಗಡ : ಇನ್ಫೋಸಿಸ್ ಸಮರ್ಪಣಾ ತಂಡದಿಂದ ದಿನಸಿಕಿಟ್ ವಿತರಣೆ…!

DISTRICT NEWS ತುಮಕೂರು

ಪಾವಗಢ :- ಮಹಾರಾಷ್ಟ್ರ ರಾಜ್ಯದ ರಾಯಘಡದಿಂದ ಪಾವಗಡ ತಾಲ್ಲೂಕಿನ ಶ್ರೀರಂಗಪುರಕ್ಕೆ ಬಂದು ಇದ್ದಿಲು ಸುಡುವ ಕೆಲಸ ಮಾಡುತ್ತಾ ಹಲವಾರು ತಿಂಗಳುಗಳಿಂದ ಸುಮಾರು 120 ಮಂದಿ ಸಿಲುಕಿಕೊಂಡಿದ್ದರು.  ಕೋವಿಡ್19ರ ಲಾಕ್‍ಡೌನ್ ಪ್ರಯುಕ್ತ ಇವರ ಪಾಡು ಹೇಳತೀರದಾಗಿತ್ತು. ಈಗಾಗಲೇ ಎರಡು ತಿಂಗಳಿನಿಂದ ಸೇವಾಶ್ರಮದ ಪರವಾಗಿ ದಿನಸಿ ಕಿಟ್‍ಗಳನ್ನು, ಟಾರ್‍ಪಾಲ್‍ಗಳನ್ನು ನೀಡಿ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು.

ಇಂದು ಶ್ರೀ ಸ್ವಾಮಿ ಜಪಾನಂದಜೀ ರವರು ಇನ್ಫೋಸಿಸ್ ಸಮರ್ಪಣಾ ತಂಡದ ಸದಸ್ಯರೊಂದಿಗೆ ತೆರಳಿ ದವಸಧಾನ್ಯ, ದಿನಸಿಕಿಟ್, ತರಕಾರಿ,  ಟಾರ್‍ಪಾಲ್ ಹಾಗೂ ನೂತನ ವಸ್ತ್ರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ ಒಂದು ಆಘಾತ ಎದುರಾಯಿತು, ಅದೇನೆಂದರೆ ಕಾರ್ಮಿಕರೆಲ್ಲರೂ ಸೇರಿ ಸ್ವಾಮೀಜಿಯವರಲ್ಲಿ ಹೇಗಾದರೂ ಮಾಡಿ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಂಡಿ ಎಂದು ಅಂಗಲಾಚಿದ ದೃಶ್ಯ ಮನ ಕಲಕುವಂತಿತ್ತು. ದುರದೃಷ್ಟವಶಾತ್ ಇವರನ್ನು ಇಲ್ಲಿಗೆ ಕರೆತಂದ ವ್ಯಕ್ತಿಯೂ ಸಹ ಹಣವಿಲ್ಲದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದು ವಿಪರ್ಯಾಸವೇ ಸರಿ. ಇದನ್ನು ಕಂಡ ಸ್ವಾಮೀಜಿಯವರು ತತ್‍ಕ್ಷಣ ಚಿಕ್ಕೋಡಿ ತಹಶೀಲ್ದಾರ್‍ರವರೊಂದಿಗೆ ದೂರವಾಣಿ ಕರೆ ಮಾಡಿ ಇಲ್ಲಿರುವ ಕಾರ್ಮಿಕರನ್ನು ನಿಪ್ಪಾಣಿಗೆ ಕಳುಹಿಸಲು ಸರ್ವ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸರ್ಕಾರವು ಯಾವುದೇ ರೀತಿಯ ಸಹಾಯ ಮಾಡಲು ಬರುವುದಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂತು. ಸ್ಥಳೀಯ ತಹಶೀಲ್ದಾರ್ ರವರಲ್ಲಿ ಮಾತನಾಡಿ ರಹದಾರಿ ಪರವಾನಗಿ ಪತ್ರಗಳನ್ನು ಕೊಡಿಸುವುದಾಗಿ ಪತ್ರಕರ್ತರಾದ ಶ್ರೀ ಸತ್ಯ ಲೋಕೇಶ್ ತಿಳಿಸಿರುತ್ತಾರೆ. ಶ್ರೀ ಸ್ವಾಮೀಜಿಯವರು ಇವರನ್ನು ಬೆಂಗಳೂರಿಗೆ ಕಳುಹಿಸಲು ಸರ್ವ ರೀತಿಯ ವ್ಯವಸ್ಥೆ ಮಾಡುವುದಾಗಿ ತಿಳಿಸಿರುತ್ತಾರೆ ಮತ್ತು ಅಲ್ಲಿಂದ ಬೆಳಗಾವಿಗೆ ರೈಲಿನಲ್ಲಿ ಕಳುಹಿಸಲೂ ಸಹ ವ್ಯವಸ್ಥೆ ಮಾಡುವುದಾಗಿ ತಿಳಿಸಿರುತ್ತಾರೆ. 

ಇದೇ ದಿನ ಮಧ್ಯಾನ್ಹ ಆಶ್ರಮದ ಆವರಣದಲ್ಲಿ ಸಾಕ್ಷರತಾ ಸ್ವಯಂಸೇವಕರುಗಳಿಗೆ ಹಾಗೂ ಆಯ್ದ ಬಡ ನೊಂದ ಜನರಿಗೆ ದವಸ ಧಾನ್ಯ ಹಾಗೂ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.  ಈ ದಿನ ಸರಿಸುಮಾರು 300 ಕಿಟ್‍ಗಳನ್ನು ವಿತರಿಸಲಾಯಿತು. ಒಟ್ಟಿನಲ್ಲಿ ಇದುವರೆವಿಗೆ 6000ಕ್ಕೂ ಮಿಗಿಲಾದ ಕಿಟ್‍ಗಳನ್ನು ವಿತರಿಸಲಾಗಿದೆ.

ಈ ಮೇಲ್ಕಂಡ ಎರಡೂ ವಿತರಣಾ ಕಾರ್ಯಕ್ರಮಗಳಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ್ ರವರು ಭಾಗವಹಿಸಿದ್ದರು.