….
ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ವಿತರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಎಚ್ಚರಿಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿ ಕದಿರೇಹಳ್ಳಿಯಲ್ಲಿ ಭಾನುವಾರ ನಡೆದ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ, ರೈತರ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ರೈತರು ಹಲ ದಶಕಗಳಿಂದ ಅಕಾಲಿಕ ಮಳೆ, ಬರದಿಂದ ತತ್ತರಿಸಿದ್ದಾರೆ. ಮುಂಗಾರಿನಲ್ಲಿ ಮಳೆ ಬೀಳದೆ ಈ ವರ್ಷ ಕಾಟಾವು ವೇಳೆ ಮಳೆಯಾಗಿ ಕೈಗೆ ಸಿಕ್ಕ ಅಲ್ಪ ಸ್ವಲ್ಪ ಬೆಳೆಯೂ ಹಾಳಾಗಿದೆ. ವಿಮಾ ಕಂಪನಿಗಳು ಮನ ಬಂದಂತೆ ವರ್ತಿಸುತ್ತಿದ್ದಾರೆ. ಸಮರ್ಪಕವಾಗಿ ಬೆಳೆ ವಿಮೆಯಡಿ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಎಸಗುತ್ತಿವೆ ಎಂದು ಆರೋಪಿಸಿದರು.
ಸರ್ಕಾರ ಸಮರ್ಪಕವಾಗಿ ಬೆಳೆ ನಷ್ಟ ಪರಿಹಾರದ ಬಗ್ಗೆ ಸಮೀಕ್ಷೆ ನಡೆಸಿಲ್ಲ. ಅರ್ಜಿ ಸ್ವೀಕರಿಸುವ ಮುನ್ನ ಕಡೆಯ ದಿನಾಂಕ ಘೋಷಿಸಿದ ಕಾರಣ ಸಾಕಷ್ಟು ರೈತರು ಅರ್ಜಿ ಸಲ್ಲಿಸಲಾಗಿಲ್ಲ. ನಷ್ಟ ಪರಿಹಾರ ನಿಗದಿಯಲ್ಲೂ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಜಿಲ್ಲೆಯಲ್ಲಿ ರಾಗಿ, ಭತ್ತ, ಶೇಂಗಾ ಸೇರಿದಂತೆ ವಿವಿದ ಬೆಳೆಗಳು ಹಾನಿಯಾಗಿವೆ. ಸರ್ಕಾರ ಬೆಳೆ ನಷ್ಟ ಪರಿಹಾರ ಶೀಘ್ರ ನೀಡಬೇಕು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದುಪಡಿಸಿಲ್ಲ. ಶೀಘ್ರ ಕಾಯ್ದೆ ತಿದ್ದುಪಡಿ ಹಿಂಪಡೆಯದಿದ್ದಲ್ಲಿ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ದೊಡ್ಡಮಾಳಯ್ಯ, ಕೆಂಚಪ್ಪ, ಜಗದೀಶಪ್ಪ, ಜಯಣ್ಣ, ನಾರಾಯಣಪ್ಪ, ವೆಂಕಟಸ್ವಾಮಿ, ವೀರಭದ್ರಪ್ಪ, ಜಂಪಣ್ಣ, ಶಿವರಾಜು, ನಡುಪನ್ನ, ಚಿತ್ತಯ್ಯ ಉಪಸ್ಥಿತರಿದ್ದರು.
ಪಾವಗಡ ತಾಲ್ಲೂಕು ನಿಡಗಲ್ ಹೋಬಳಿ ಕದಿರೇಹಳ್ಳಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಪದಾಧಿಕಾರಿಗಳಾದ ದೊಡ್ಡಮಾಳಯ್ಯ, ಕೆಂಚಪ್ಪ, ಜಗದೀಶಪ್ಪ, ಜಯಣ್ಣ ಉಸ್ಥಿತರಿದ್ದರು
.ವರದಿ: ಶ್ರೀನಿವಾಸುಲು ಎ