ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಠೇವಣಿದಾರರ ಪರವಾಗಿ ಹೈಕೋರ್ಟ್ ನಲ್ಲಿ ವಕೀಲರಾಗಿ ವಾದ ಮಂಡಿಸಿದ ಸಂಸದ ಶ್ರೀ ತೇಜಸ್ವೀ ಸೂರ್ಯ.
ಬೆಂಗಳೂರು ಜೂನ್ 12,- ಬೆಂಗಳೂರು ದಕ್ಷಿಣ ಸಂಸದರು ಹಾಗೂ ಸ್ವತಃ ವಕೀಲರು ಕೂಡ ಆಗಿರುವ ಶ್ರೀ ತೇಜಸ್ವೀ ಸೂರ್ಯ ರವರು ಶುಕ್ರವಾರ ರಾಜ್ಯ ಹೈಕೋರ್ಟ್ ನಲ್ಲಿ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಸುಮಾರು 45,000 ಠೇವಣಿದಾರರ ಪರವಾಗಿ ವಾದ ಮಂಡಿಸಿ ಗಮನ ಸೆಳೆದರು. ಸಂಸದ ಶ್ರೀ ತೇಜಸ್ವೀ ಸೂರ್ಯ ರವರು ಇಂದು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಅರ್ಜಿದಾರ ಡಾ.ಎನ್.ಆರ್.ರವಿ ಯವರ ಪರವಾಗಿ ಹೈಕೋರ್ಟ್ ನಲ್ಲಿ ಹಾಜರಾಗಿ ವಾದ ಮಂಡಿಸಿದ್ದು, ಸಂಸದರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕೋರ್ಟ್ ಅಂಗಳದಲ್ಲಿ ಕಾಣಿಸಿಕೊಂಡಿರುತ್ತಾರೆ.
ಡಾ.ಎನ್ ಆರ್ ರವಿ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಸದರಿ ಬ್ಯಾಂಕ್ ಗೆ ಆಡಳಿತಾಧಿಕಾರಿ ನೇಮಕ ಮಾಡಿ ಹೊರಡಿಸಿರುವ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಪ್ರಸ್ತುತ ಶ್ರೀ ಗುರು ರಾಘವೇಂದ್ರ ಕೋ ಆಪರರೇಟಿವ್ ಬ್ಯಾಂಕ್ , ರಿಸರ್ವ್ ಬ್ಯಾಂಕ್ ನ ವೀಕ್ಷಣೆಯಲ್ಲಿದ್ದು, ಬ್ಯಾಂಕ್ ನ ನಿರ್ದೇಶಕರುಗಳು ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿರುತ್ತದೆ.
ಬ್ಯಾಂಕ್ ಆಡಳಿತ ಮಂಡಳಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸುದೇವ್ ಮಯ್ಯ, ಅಧ್ಯಕ್ಷರಾದ ರಾಮಕೃಷ್ಣ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವನೆಯನ್ನು ವಜಾಗೊಳಿಸಲು ಕೋರಿದ್ದು, ಕೋರ್ಟ್ ಮುಂದಿನ ಶುಕ್ರವಾರಕ್ಕೆ ವಾದಮಂಡನೆಯನ್ನು ಮುಂದೂಡಿದೆ.
” ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಸುಮಾರು 2 ಲಕ್ಷ ನಾಗರಿಕರಿಗೆ ಪರೋಕ್ಷ/ಅಪರೋಕ್ಷವಾಗಿ ಹಾನಿಯುಂಟಾಗಿದ್ದು, ಆ ಎಲ್ಲ ಕುಟುಂಬಗಳಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರೆಲ್ಲರ ಪರವಾಗಿ ಕೋರ್ಟ್ ನಲ್ಲಿ ಇಂದು ವಾದ ಮಂಡಿಸಿದ್ದೇನೆ ” ಎಂದು ಕೋರ್ಟ್ ಕಲಾಪದ ನಂತರ ಸಂಸದ ಶ್ರೀ ತೇಜಸ್ವೀ ಸೂರ್ಯ ತಿಳಿಸಿದರು.
ನಂತರ ಈ ಸಂಬಂಧ ರಾಜ್ಯ ಸಹಕಾರ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ್, ಬಸವನಗುಡಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಮತ್ತು ಚಿಕ್ಕಪೇಟೆ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ರೊಂದಿಗೆ ಪರಿಶೀಲನೆ ನಡೆಸಿದ ಸಂಸದ ತೇಜಸ್ವೀ ಸೂರ್ಯ ರವರು ಸದರಿ ಬ್ಯಾಂಕ್ ನ ಠೇವಣಿದಾರರ ಹಿತಾಸಕ್ತಿ ಕಾಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಬ್ಯಾಂಕ್ ನ ಆಡಳಿತ ಮಂಡಳಿಯು ಠೇವಣಿದಾರರ ಹಣ ಮತ್ತು ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಹಿರಿಯ ನಾಗರಿಕರು ತಮ್ಮ ಜೀವನ ಪೂರ್ತಿ ಗಳಿಸಿರುವ ಹಣವನ್ನು ಈ ಬ್ಯಾಂಕ್ ನಲ್ಲಿ ಇರಿಸಿದ್ದು, ಅವರೆಲ್ಲರ ಹಿತಾಸಕ್ತಿ ನನ್ನ ಆದ್ಯತೆಯಾಗಿದೆ” ಎಂದು ಸಂಸದರು ವಿವರಿಸಿದರು.
ಬ್ಯಾಂಕ್ ನ ಅವ್ಯವಹಾರ ಬೆಳಕಿಗೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಶ್ರೀ ತೇಜಸ್ವೀ ಸೂರ್ಯ ರವರು ಠೇವಣಿದಾರರ ನಿಯೋಗವನ್ನು ಕರೆದುಕೊಂಡು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬ್ಯಾಂಕ್ ಅನ್ನು ನೂತನ ನಿರ್ದೇಶಕ ಮಂಡಳಿಯೊಂದಿಗೆ ಒಂದು ವರ್ಷದಲ್ಲಿ ಪುನರುಜ್ಜೀವನ ಗೊಳಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ ಎಂದು ಬೆಂಗಳೂರು ದಕ್ಷಿಣ ಸಂಸದರ ಕಚೇರಿಯ ಪ್ರಕಟಣೆ ತಿಳಿಸಿರುತ್ತದೆ.