DSC 7078 scaled

ಒಂದೇ ಬಗೆಯ ಬೆಳೆಯನ್ನೆ ಅವಲಂಬಿಸಬೇಡಿ: ರೈತರಿಗೆ ಜೆ.ಸಿ. ಮಾಧುಸ್ವಾಮಿ ಸಲಹೆ

DISTRICT NEWS ತುಮಕೂರು

ಒಂದೇ ಬಗೆಯ ಬೆಳೆಯನ್ನೆ ಅವಲಂಬಿಸಬೇಡಿ: ರೈತರಿಗೆ ಜೆ.ಸಿ. ಮಾಧುಸ್ವಾಮಿ ಸಲಹೆ

ತುಮಕೂರು (ಕ.ವಾ.) ಜೂ.13: ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಒಂದೇ ಬಗೆಯ ಬೆಳೆಯ ಮೇಲೆ ಅವಲಂಬಿಸದೆ ವಿವಿಧ ರೀತಿಯ ಬೆಳೆಯನ್ನು ಬೆಳೆಯಬೇಕು. ಇದರಿಂದ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆ ಬಿದ್ದು, ಉತ್ತಮ ಗಾಳಿ ದೊರೆಯುವುದಲ್ಲದೆ ನೀರಿಗೆ ಸಮಸ್ಯೆಯಾಗದು ಎಂದು   ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.

ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿಂದು ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಭೂಮಿ ಮೇಲೆ ನೀರು ಮತ್ತು ಗಾಳಿಯನ್ನು ಉತ್ಪಾದಿಸುವ ಯಾವುದೇ ವ್ಯಕ್ತಿ-ಶಕ್ತಿ ಇನ್ನು ಹುಟ್ಟಿಕೊಂಡಿಲ್ಲ.   ಲಭ್ಯವಿರುವುದನ್ನು ಸಂರಕ್ಷಣೆ ಮಾಡುವುದೇ ನಮಗಿರುವ ಮಾರ್ಗ. ಈ ನಿಟ್ಟಿನಲ್ಲಿ ಗಿಡ-ಮರಗಳನ್ನು ಬೆಳೆಸಿ ಜಿಲ್ಲೆಯನ್ನು ಅರಣ್ಯೀಕರಣಗೊಳಿಸಬೇಕೆಂದರು.

 

DSC 7034      DSC 7052

ಅರಣ್ಯೀಕರಣದಿಂದ ವಾತಾವರಣ ತಂಪಾಗುತ್ತದೆ.  ವಾತಾವರಣದಲ್ಲಿರುವ ತೇವಾಂಶವನ್ನು ಗಿಡ-ಮರಗಳ ಮೂಲಕ ಮೋಡಗಳು ಆಕರ್ಷಿಸಿದಾಗ ಮಾತ್ರ ಕಾಲಕಾಲಕ್ಕೆ ಉತ್ತಮ ಮಳೆಯಾಗಲು ಸಾಧ್ಯ.  ಈ ನಿಟ್ಟಿನಲ್ಲಿ ಮರಗಳನ್ನು ನಾಶ ಮಾಡದೆ ಹಸಿರನ್ನು ಉಳಿಸಬೇಕು.  ಮರ-ಗಿಡಗಳು ತನ್ನ ಜೀವಿತಾವಧಿಯಲ್ಲಿ ಉತ್ಪತ್ತಿ ಮಾಡುವ ಆಮ್ಲಜನಕದ ಪ್ರಮಾಣವನ್ನು ಲೆಕ್ಕಕ್ಕಿಡಲು ಸಾಧ್ಯವಿಲ್ಲ.   ಹಸಿರನ್ನು ಉಳಿಸಿ ಬೆಳೆಸಿದಾಗ ಮಾತ್ರ ನಮ್ಮೆಲ್ಲರ ಉಸಿರು ಉಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಅರಣ್ಯ ಪ್ರದೇಶಗಳು ಮಾತ್ರ ಅರಣ್ಯೀಕರಣವಾಗಬೇಕೆನ್ನುವ   ತಪ್ಪು ಕಲ್ಪನೆ ನಮ್ಮಿಂದ ದೂರವಾಗಬೇಕು.  ನಗರ ಪ್ರದೇಶ ಸೇರಿದಂತೆ ಎಲ್ಲ ಕಡೆ ಹಸಿರನ್ನು ಬೆಳೆಸಬೇಕು.  ರೈತರು ಮೂಲ ಬೆಳೆಯನ್ನು ಬೆಳೆಯುವ ಪ್ರದೇಶದಲ್ಲಿ ಗಿಡ-ಮರಗಳನ್ನು  ಬೆಳೆಸಿದಾಗ    ಕಷ್ಟಕಾಲದಲ್ಲಿ ನೆರವಾಗುತ್ತವೆ.  ಮರವನ್ನು ಮಾರಿ ಮಕ್ಕಳ ಮದುವೆ ಮಾಡುವ ಕಾಲವೊಂದಿತ್ತು ಎಂದು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ಮರಗಳ ನಾಶ ಹಾಗೂ ಪರಿಸರ ಮಾಲಿನ್ಯದಿಂದ ವಾತಾವರಣದ ತಾಪಮಾನ ಹೆಚ್ಚಾಗುತ್ತಿದೆ.  ರೈತರು ತೆಂಗು, ಅಡಿಕೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಸುವ ಭರದಲ್ಲಿ  ತೋಟದಲ್ಲಿದ್ದ ಹಲಸು, ಮಾವು, ಹೊಂಗೆ, ಬೇವಿನ ಮರಗಳನ್ನು ನಾಶಪಡಿಸಲಾಗುತ್ತಿದೆ.  ಇದರಿಂದಲೂ ತಾಪಮಾನ ಏರಿಕೆಯಾಗತ್ತಿದೆ. ಎಷ್ಟೇ ಮಳೆ ಬಿದ್ದರೂ, ಗಿಡಗಳಿಗೆ ನೀರು ಕೊಟ್ಟರೂ 2-3 ದಿನಗಳವರೆಗೂ ಭೂಮಿಯಲ್ಲಿ ತೇವಾಂಶ ಉಳಿಯುವುದಿಲ್ಲ.   ವಾಡಿಕೆ ಮಳೆಯಾದರೂ ನೀರು ಇಂಗದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯ   ಅಂತರ್ಜಲ ಮಟ್ಟ 1200 ಅಡಿ ಆಳಕ್ಕೆ ಕುಸಿದಿದೆ.  ಅಂತರ್ಜಲ ಮಟ್ಟದ ಹೀಗೆ ಕುಸಿಯುತ್ತಿದ್ದರೆ ಜಿಲ್ಲೆಯು ಶಾಶ್ವತ ಮರಳುಗಾಡಾಗುವುದರಲ್ಲಿ ಸಂಶಯವಿಲ್ಲ. ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ಜಿಲ್ಲೆಯ 6 ತಾಲ್ಲೂಕು ಸೇರಿ ರಾಜ್ಯದ 41 ತಾಲ್ಲೂಕುಗಳು    ಮರಳುಗಾಡಾಗುವ ಆತಂಕವಿದೆ.  ಈ ನಿಟ್ಟಿನಲ್ಲಿ ಅಂತರ್ಜಲ ಸಂರಕ್ಷಣೆಯಾಗಬೇಕು.    ರಾಜ್ಯದ ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆಯಡಿ   1230 ಕೋಟಿ ರೂ.ಗಳ ಅನುದಾನ ಒದಗಿಸಿದೆ  ಎಂದು ತಿಳಿಸಿದರು.

ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೊಬ್ಬರಿ ಕೊಳ್ಳುವವರೇ ಇಲ್ಲದಂತಾಗಿದೆ.  ಉತ್ತರ ಭಾರತದಲ್ಲಿ ಕೊಬ್ಬರಿಗೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ  ಕ್ವಿಂಟಾಲ್‍ಗೆ 18,000 ರೂ.ಗಳಿಗೆ ಮಾರಾಟವಾಗುತ್ತಿದ್ದ ಕೊಬ್ಬರಿಯು 8,000 ರೂ.ಗಳಿಗೆ ಇಳಿಕೆ ಕಂಡಿದೆ.  ಕೊಬ್ಬರಿ ಬೆಳೆದ ರೈತರ ಹಿತದೃಷ್ಟಿಯಿಂದ ಈ ವಾರ ನಫೆಡ್‍ನಲ್ಲಿ ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಸಲು 10,300 ರೂ.ಗಳನ್ನು ನಿಗಧಿಗೊಳಿಸಿ   ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನೆರೆದಿದ್ದ ಸುತ್ತಮುತ್ತಲಿನ ರೈತರಿಗೆ ಶ್ರೀಗಂಧದ ಗಿಡಗಳನ್ನು ವಿತರಿಸಿ ಮಾತನಾಡಿದ ಸಚಿವರು ಶ್ರೀಗಂಧ ಬೆಳೆಯುವವರಿಗೆ ಅರಣ್ಯ ಇಲಾಖೆಯು ಸೂಕ್ತ ರಕ್ಷಣೆ ಒದಗಿಸಿದ್ದು, ನಿಯಮಗಳಲ್ಲಿ ಸಡಿಲಿಕೆ ನೀಡಿದೆ. ಶ್ರೀಗಂಧದ ಸಸಿಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅರಣ್ಯ ಇಲಾಖೆಯಿಂದ    3 ವರ್ಷ ಸಸಿಗಳ ನಿರ್ವಹಣೆಗಾಗಿ ಧನ ಸಹಾಯವನ್ನು ಒದಗಿಸಲಾಗುತ್ತಿದೆ.  ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು.   ಅಧಿಕ ಆದಾಯ ತರುವ  ಶ್ರೀಗಂಧ, ಮತ್ತಿ, ತೇಗದಂತಹ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

ನಂತರ ಅರಣ್ಯವೀಕ್ಷಕರಾದ ರಾಮಲಿಂಗಯ್ಯ, ಬಸವರಾಜು ಅವರನ್ನು ಉತ್ತಮ ಸೇವೆ ನಿರ್ವಹಿಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಳಿಲುಘಟ್ಟ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಯಶೋಧಮ್ಮ ಮಾತನಾಡಿ, ಸಸಿ ನೆಡುವುದರಿಂದ ಮಾತ್ರ ಅರಣ್ಯೀಕರಣ ನಿರ್ಮಿಸಿದಂತಾಗುವುದಿಲ್ಲ.  ಸಸಿ ನೆಟ್ಟು, ನೀರುಣಿಸಿ, ದನಕರುಗಳು ತಿನ್ನದಂತೆ ಪೋಷಿಸಿದಾಗ ಮಾತ್ರ ಅರಣ್ಯ ಬೆಳೆಸಿದಂತಾಗುತ್ತದೆ.  ಮರ-ಗಿಡಗಳ ನಾಶದಿಂದ ಮಳೆ ಕೊರತೆ ಉಂಟಾಗುತ್ತದೆ.  ಗಿಡಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗಿ ಕೆರೆಗಳು ತುಂಬುತ್ತವೆ. ಇದರಿಂದ ರೈತನ ಕೃಷಿ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಮಾತನಾಡಿ, ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರ ಸಹಕಾರದಲ್ಲಿ ಸಿರಿಗಂಧದ ನೆಡುತೋಪನ್ನು ನಿರ್ಮಿಸಲಾಗಿದೆ.  ಶ್ರೀಗಂಧ ಸಸಿಗಳು ಸ್ವಾಭಾವಿಕವಾಗಿ ಬೆಳೆಯುವಂತಹ ವಾತಾವರಣದಿಂದ ಕೂಡಿರುವ ಸುಮಾರು 1916 ಎಕರೆಯ  ಈ ಅರಣ್ಯ ಪ್ರದೇಶದಲ್ಲಿ 2018-19ರಲ್ಲಿ 52 ಹೆಕ್ಟೇರ್‍ನಲ್ಲಿ ನೆಡುತೋಪು ನಿರ್ಮಿಸಿದ್ದು,  52000 ಶ್ರೀಗಂಧದ ಸಸಿಗಳನ್ನು ನೆಡಲಾಗಿದೆ ಎಂದರು.

ಜಿಲ್ಲೆಯ ಗುಬ್ಬಿ ಸೇರಿದಂತೆ ಕುಣಿಗಲ್, ಶಿರಾ, ತುಮಕೂರು ತಾಲ್ಲೂಕಿನಲ್ಲಿಯೂ ಶ್ರೀಗಂಧದ ನೆಡುತೋಪುಗಳನ್ನು   ನಿರ್ಮಾಣ ಮಾಡಲಾಗಿದೆ.  ಶ್ರೀಗಂಧ ಗಿಡವು ಮರವಾಗಿ ಬೆಳೆದು ಕಟಾವಿಗೆ ಬರಲು 10-15 ವರ್ಷ ಕಾಲಾವಧಿ ಬೇಕು.    ಶ್ರೀಗಂಧ ನೆಡುತೋಪುಗಳಿಂದ ಸರ್ಕಾರಕ್ಕೆ 15 ವರ್ಷಗಳ ನಂತರ ನೂರಾರು ಕೋಟಿ ಆಸ್ತಿ ಸಂಪಾದನೆಯಾಗುತ್ತದೆ ಎಂದರಲ್ಲದೆ ಶ್ರೀಗಂಧದ ಗಿಡದಲ್ಲಿ ಹಣ್ಣು ಬಿಡಲು ಪ್ರಾರಂಭವಾದರೆ ವಿವಿಧ ಪ್ರಬೇಧದ ಪಕ್ಷಿಗಳಿಗೆ ಆಹಾರ ದೊರೆಯುತ್ತದೆ.  ಇದರಿಂದ ಪಕ್ಷಿಸಂಕುಲ, ವನ್ಯಜೀವಿಗಳ ಸಂಕುಲ ಬೆಳೆಯುತ್ತದೆ.  ರೈತರು ಬೆಳೆದ ದವಸ ಧಾನ್ಯಗಳಿಗೆ ಪಕ್ಷಿಗಳು ದಾಳಿಯಿಡುವುದು   ತಪ್ಪುತ್ತದೆ ಎಂದರು.

ಹಾರ್ನ್‍ಬಿಲ್(ಮಂಗಟ್ಟೆ), ರೆಡ್ ವೆಂಟೆಡ್ ಬುಲ್ ಬಲ್(ಕೆಂಪು ಬಾಲದ ಪಿಕಳಾರ) ಕೋಗಿಲೆಯಂತಹ ಪಕ್ಷಿಗಳು; ಚಿರತೆ, ಕರಡಿ, ಪುನಗಿನ ಬೆಕ್ಕು, ಮುಳ್ಳಂದಿ, ಕಾಡುಹಂದಿ, ಗೋಲ್ಡನ್ ಕ್ಯಾಟ್(ಚಿನ್ನದ ಬೆಕ್ಕು), ಜಿಂಕೆ, ಸಾಂಬಾರ್, ಕೃಷ್ಣಮೃಗದಂತಹ ವನ್ಯಜೀವಿಗಳನ್ನು   ಈ ಅರಣ್ಯ ಪ್ರದೇಶದಲ್ಲಿ ಕಾಣಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಉಮಾದೇವಿ, ಚಂದ್ರಶೇಖರ್ ಹಾಗೂ ಶೇಖರ್, ಗಣ್ಯರಾದ ದಿಲೀಪ್, ಸಾಮಾಜಿಕ ಅರಣ್ಯ ವಿಭಾಗದ ನಾಗರಾಜ್, ಕಿಡಿಗಣ್ಣಪ್ಪ, ಸುತ್ತಮುತ್ತಲಿನ ಗ್ರಾಮಗಳ ರೈತಬಾಂಧವರು, ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಚಿವರು ಶ್ರೀಗಂಧದ ಗಿಡ ನೆಟ್ಟು ನೀರುಣಿಸಿದರು.