ಕೋವಿಡ್ ೧೯: ಸರ್ಕಾರಿ ಆಸ್ಪತ್ರೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಕ್ರಮ: ಶೀಘ್ರದಲ್ಲೇ ಚಿಕಿತ್ಸಾದರ ಸರ್ಕಾರದಿಂದಲೇ ನಿಗದಿ – ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ – ಸಚಿವ ಸುಧಾಕರ್
ಬೆಂಗಳೂರು – ಜೂನ್ 15, 2020: ರಾಜ್ಯದಲ್ಲಿ ಇದುವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದ ಪರಾಮರ್ಶೆ ಸಭೆಯ ನಂತರ ಸಚಿವ ಸುಧಾಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಿಪಿಇ ಕಿಟ್ ಮುಂತಾದ ಉಪಕರಣಗಳ ಖರೀದಿ ಕುರಿತಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, MDA ಹಾಗು CE ಅನುಮೋದನೆ ದೊರಕಿರುವ ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳನ್ನೇ ನಮ್ಮ ರಾಜ್ಯದಲ್ಲಿ ಖರೀದಿಸಲಾಗುತ್ತಿದ್ದು ಈ ಕುರಿತು ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ತಾವೇ ಖುದ್ದಾಗಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದ ಡಾ.ಸುಧಾಕರ್, ಸರ್ಕಾರವೇ ಚಿಕಿತ್ಸಾ ದರ, ಪರೀಕ್ಷಾ ದರ ಮುಂತಾದವುಗಳನ್ನು ನಿಗದಿಪಡಿಸಲಿದ್ದು, ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ರಾಜ್ಯಾದ್ಯಂತ ಏಕರೂಪದ ಚಿಕಿತ್ಸಾದರ ನಿಗದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು. ಕೊರೋನ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿ ವಲಯವೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಕೊರೋನ ಚಿಕಿತ್ಸೆಗೆ ವಿಮಾ ಸೌಲಭ್ಯ
ಕೊರೋನಗೆ ಚಿಕಿತ್ಸೆಯನ್ನೂ ABARK ಅಡಿಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದರು. ಇದರಿಂದ ಆರೋಗ್ಯ ವಿಮೆಯ ಅಡಿಯಲ್ಲಿ ಕೋವಿಡ್ ಚಿಕಿತ್ಸೆಯೂ ಸೇರಲ್ಪಡುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಚಿಕಿತ್ಸೆಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾಸ್ಕ್ ಧರಿಸುವುದರಿಂದ 90% ಸೋಂಕು ತಡೆಗಟ್ಟಬಹುದಾಗಿದೆ. ಆದ್ದರಿಂದ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಮದುವೆ ಮುಂತಾದ ಸಮಾರಂಭಗಳಿಗೂ ನೀಡಲಾಗಿರುವ ಮಾರ್ಗಸೂಚಿಗಳ ಪಾಲನೆ ಆಗಬೇಕು ಎಂದು ಅವರು ಹೇಳಿದರು.