14 6 21 Grocery kits to teachers 4

ಪಾವಗಡ: ಅತಿಥಿ ಶಿಕ್ಷಕರಿಗೆ ದಿನಸಿ ಕಿಟ್‌ ವಿತರಣೆ

DISTRICT NEWS ತುಮಕೂರು

‌ಪಾವಗಡ:  ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 217 ಅತಿಥಿ ಶಿಕ್ಷಕರ ಪೈಕಿ ಮೊದಲನೆ ಹಂತವಾಗಿ 125 ಅತಿಥಿ ಶಿಕ್ಷಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಜಪಾನಂದಜಿ ರವರು ಅತಿಥಿ ಶಿಕ್ಷಕರ ಸೇವೆ “ಹೈರ್ ಅಂಡ್ ಫೈರ್” ಎಂಬಂತಾಗಿದೆ ಎಂದು ಈ ವ್ಯವಸ್ಥೆಯ ಬಗ್ಗೆ ತುಂಬಾ ಬೇಸರವನ್ನು ವ್ಯಕ್ತಪಡಿಸಿದರು. ಎಲ್ಲ ಶಿಕ್ಷಕರಿಗೂ ಸೂಕ್ತ ಸ್ಥಾನಮಾನ ದೊರಕಲಿ ಹಾಗೆಯೇ ಶೀಘ್ರದಲ್ಲಿಯೇ ಒಂದು ಶಾಶ್ವತ ನೆಲೆ ದೊರಕಲಿ ಎಂದು ಹಾರೈಸಿದರು. ಈ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ, ಅಧಿಕಾರಿಗಳಲ್ಲಿ ವಿಚಾರ ವಿಮರ್ಶೆ ಮಾಡುವುದಾಗಿಯೂ ತಿಳಿಸಿದರು.

ಶ್ರೀ ಸುದೇಶ್ ಬಾಬು ರವರು ಲಸಿಕೆಯ ಮಹತ್ವವನ್ನು ವಿವರಿಸಿದರು ಹಾಗೆಯೇ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಪಾವಗಡ ತಾಲ್ಲೂಕು ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶ್ಯಾ.ನಾ.ಪ್ರಸನ್ನ ಮೂರ್ತಿ ರವರು ಮಾತನಾಡಿ ಶಿಕ್ಷಕರು ಕೇವಲ ಶಾಲೆಗಳಲ್ಲಿ ಪಾಠ ಮಾಡುವುದಲ್ಲದೆ ಸಮಾಜ ಸುಧಾರಣೆಗೆ ಪಾಠ ಮಾಡುವ ಸಂದರ್ಭ ಈ ಕೋವಿಡ್ ಸಂದರ್ಭದಲ್ಲಿ ಒದಗಿ ಬಂದಿದೆ, ಕೂಡಲೇ ತಮ್ಮ ತಮ್ಮ ಗ್ರಾಮಗಳಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಒತ್ತಾಯಿಸಿದರು. ಇದುವರೆಗೆ ಖಾಸಗಿ ಶಾಲೆಗಳ ಹಾಗೂ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಹೀಗೆ ಸುಮಾರು 700 ಜನ ಈ ಒಂದು ಆಹಾರದ ಕಿಟ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಸ್ಮರಿಸಿದರು.

ದಿನಸಿ ಕಿಟ್ಟುಗಳ ವಿತರಣೆಯ ಸಂದರ್ಭದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪವನ್ ಕುಮಾರ್ ರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಬಸವರಾಜು, ಶ್ರೀ ಶಿವಕುಮಾರ್, ಶ್ರೀ ಸಾದಿಕ್, ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್, ಶ್ರೀ ವೇಣುಗೋಪಾಲರೆಡ್ಡಿ, ಮತ್ತಿತರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಹೆಚ್.ಐ.ವಿ./ಏಡ್ಸ್ಗೆ ಚಿಕಿತ್ಸೆ ಪಡೆಯುತ್ತಿರುವ ಸುಮಾರು 30 ಜನರಿಗೆ ಹಾಗೂ ಕಡು ಬಡವರಾದ ಸುಮಾರು 20 ಜನ ಕೂಲಿಕಾರ್ಮಿಕರಿಗೂ ಸಹ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.