ತಿಂಗಳ ಮೊದಲ ಶನಿವಾರ ಸ್ವಚ್ಛತಾ ದಿನ-ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ
ತುಮಕೂರು(ಕ.ವಾ.) ಡಿ.19: ಇನ್ನು ಮುಂದೆ ಪ್ರತಿ ತಿಂಗಳ ಮೊದಲ ಶನಿವಾರದ ದಿನವನ್ನು ‘ಸ್ವಚ್ಛತಾ ದಿನ’ವೆಂದು ಪರಿಗಣಿಸಿ, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳ ಆವರಣಗಳನ್ನು ಶುಚಿಗೊಳಿಸುವಂತೆ ಮತ್ತು ಈ ಮೂಲಕ ಕಚೇರಿ ಪರಿಸರದ ಸ್ವಚ್ಛತೆಗೆ ಒತ್ತು ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡುತ್ತಾ, ತಮ್ಮ ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಶಿಸ್ತನ್ನು ಕಾಪಾಡಿಕೊಳ್ಳಬಹುದು ಮತ್ತು ಈ ಮೂಲಕ ಆಡಳಿತ ನಿಯಂತ್ರಣವನ್ನು ಅಧಿಕಾರಿಗಳು ಹೊಂದಬಹುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಯಲ್ಲಿ ಜೆಇ ಲಸಿಕಾಕರಣ 5.23ಲಕ್ಷ ಗುರಿಗೆ ಈಗಾಗಲೇ 4.33ಲಕ್ಷ ಪ್ರಗತಿ ಹೊಂದಲಾಗಿದ್ದು, ಇನ್ನು 5 ದಿನಗಳಲ್ಲಿ ಶೇ.100ರಷ್ಟು ಲಸಿಕಾಕರಣ ಗುರಿ ತಲುಪಬೇಕು ಮತ್ತು ಡಿಡಿಪಿಐಗಳು ಬಿಇಓ ಮೂಲಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸಿಡಿಪಿಓಗಳ ಮೂಲಕ ತಮ್ಮ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಜೆಇ ಲಸಿಕಾ ಕರಣ ಸಂಪೂರ್ಣವಾಗಿ ಹಾಕಿಸಲಾಗಿದೆ ಎಂಬ ದೃಢೀಕರಣ ಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಲಸಿಕಾಕರಣದ ರೂಪುರೇಷೆ ರಚಿಸಿಕೊಂಡು ಮದರಸಾ ಮತ್ತು ಕೊಳಗೇರಿಗಳನ್ನು ಗುರಿಯಾಗಿಟ್ಟುಕೊಂಡು ನಗರದಲ್ಲಿ ಎಲ್ಲಾ ಮಕ್ಕಳಿಗೆ ಲಸಿಕಾಕರಣ ಮಾಡಿಸುವಂತೆ ಸೂಚಿಸಿದರು.
ಅಪಘಾತ, ಹೆರಿಗೆ ಮುಂತಾದ ತುರ್ತು ಸಂದರ್ಭಗಳಲ್ಲಿ 108 ಆ್ಯಂಬುಲೆನ್ಸ್ ವಾಹನದ ಚಾಲಕರು ಸ್ಪಂದಿಸದಿದ್ದರೆ ಅಥವಾ ವಾಹನ ತಡವಾಗಿ ಬರುವ ಕುರಿತು ಮನವರಿಕೆಯಾದ ಪಕ್ಷದಲ್ಲಿ ಸಾರ್ವಜನಿಕರು ತಮ್ಮ ಸಮೀಪದ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಆಡಳಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಆ್ಯಂಬುಲೆನ್ಸ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ರೋಗಿಯ ಗಂಭೀರ ಪರಿಸ್ಥಿತಿಯನ್ನು ಅವಲಂಬಿಸಿ ವಾಹನ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಿಇಓಗಳು ತಮ್ಮ ವ್ಯಾಪ್ತಿಯ ಇಓ ಮತ್ತು ತಹಶೀಲ್ದಾರರನ್ನು ಸಂಪರ್ಕಿಸುವ ಮೂಲಕ ಇ-ಸ್ವತ್ತು ಮೂಲಕ ಖಾತೆ ಮಾಡಿಸಿಕೊಳ್ಳಬೇಕು. ಇನ್ನು 15 ದಿನಗಳೊಳಗಾಗಿ ಅಭಿಯಾನ ರೂಪದಲ್ಲಿ ಖಾತಾ ಪ್ರಕ್ರಿಯೆ ನಡೆಯಬೇಕಿದ್ದು, ಒಟ್ಟು 638 ಪ್ರಕರಣಗಳಿಗೆ 300 ಖಾತಾ ಆಗಲೇಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕುರಿತಂತೆ ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಪಿಯು ಮತ್ತು ಡಿಗ್ರಿ ಕಾಲೇಜು, ಎಸ್‍ಸಿ/ಎಸ್‍ಟಿ/ಓಬಿಸಿ ಹಾಸ್ಟೆಲ್‍ಗಳನ್ನು ಸಂಪರ್ಕಿಸಿ ನೋಂದಣಿ ಕುರಿತು ಪರಿಶೀಲಿಸಬೇಕು ಮತ್ತು 17 ತುಂಬಿದ ಯುವ ಮತದಾರರ ನೋಂದಣಿಯನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಕಂದಾಯ ಗ್ರಾಮಕ್ಕೆ ಸಂಬಂಧಿಸಿದಂತೆ 2ಇ ಪ್ರಸ್ತಾವನೆ ಪ್ರಕ್ರಿಯೆ ಮುಗಿದಿದ್ದು, ಉಪವಿಭಾಗಾಧಿಕಾರಿಗಳು ಆರ್‍ಟಿಸಿಗಳನ್ನು ಅಪ್‍ಡೇಟ್ ಮಾಡಬೇಕು. ತದನಂತರ ನಿರಾಕ್ಷೇಪಣಾ ಪತ್ರ ಮತ್ತು ಅಂತಿಮ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಹಕ್ಕು ಪತ್ರ ವಿತರಣೆಯನ್ನು ನಿಗಧಿತ ಗುರಿ ಮೀರಿ ನೀಡಬೇಕೆಂದು ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದಂತಹ ಅರ್ಜಿಗಳನ್ನು ಕಡ್ಡಾಯವಾಗಿ ನಿಗಧಿತ ಕಾಲಮಿತಿಯೊಳಗಾಗಿ ವಿಲೇ ಮಾಡಬೇಕು. ಕಂದಾಯ ಇಲಾಖೆ ಹೊರತುಪಡಿಸಿದ ಅರ್ಜಿಗಳನ್ನು ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸುವಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅವರು ಶಿರಾ ತಾಲ್ಲೂಕಿನ 18 ಮಂದಿ ಜೀತಮುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಜೀತ ಪದ್ಧತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲಿಗೆ ತಹಶೀಲ್ದಾರರುಗಳು ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಡಿಹೆಚ್‍ಓ ಡಾ: ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ: ವೀಣಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.