24 6 21 Doctors visit to villages prog SVIRHC 4

ಪಾವಗಡ: “ವೈದ್ಯರ ನಡೆ ಹಳ್ಳಿಯ ಕಡೆ”..!

DISTRICT NEWS ತುಮಕೂರು
ಪಾವಗಡ: – “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಅತ್ಯಂತ ಶಿಸ್ತುಬದ್ದವಾಗಿ ಪಾವಗಡದ ಮೆಹರ್ ಬಾಬಾ ಸಮುದಾಯ ಭವನದಲ್ಲಿ ಉದ್ಘಾಟನೆಯಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನುಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕೋವಿಡ್19 ಮೂರನೇ ಅಲೆಯ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ, ಮಾನ್ಯ ಕುಲಪತಿಗಳು, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ತುಮಕೂರು ರವರ ಅಮೂಲ್ಯ ಸಹಕಾರದಿಂದ ಪಾವಗಡದ ರೆಡ್‍ಜೋನ್ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಯೋಜನೆಯನ್ನು ತತ್‍ಕ್ಷಣ ಡಾ.ಜಿ.ಪರಮೇಶ್ವರ್ ರವರು ಒಪ್ಪಿಕೊಂಡು ಇಂದು ಹತ್ತು ಮಂದಿ ವೈದ್ಯರ ತಂಡ ಡಾ.ಪ್ರಭಾಕರ್ ಹಾಗೂ ಡಾ.ರಾಜೇಶ್ ರವರ ನೇತೃತ್ವದಲ್ಲಿ ಹಾಗೂ ಶ್ರೀ ಪ್ರದೀಪ್, ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಅತ್ಯಂತ ಶಿಸ್ತುಬದ್ದವಾಗಿ ಈ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ನಡೆಸಿಕೊಡುವವರಿದ್ದಾರೆ ಎಂದು ತಿಳಿಸಿದರು.
ಈ ಭಯಾನಕ ಕೋವಿಡ್ ಹಿನ್ನೆಲೆಯಲ್ಲಿ ಹತ್ತು ಮಂದಿ ವೈದ್ಯರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ಜೊತೆಯಲ್ಲಿಯೇ ಔಷಧೋಪಚಾರವನ್ನು ನೀಡುವುದಲ್ಲದೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಇದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ವೆಂಕಟರಮಣಪ್ಪ, ಮಾನ್ಯ ಶಾಸಕರು, ಪಾವಗಡ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರ ಹಾಗೂ ಡಾ.ಜಿ.ಪರಮೇಶ್ವರ್ ರವರ ಸಹಕಾರದಿಂದ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಯೋಜನೆ ಪಾವಗಡಕ್ಕೂ ತಲುಪಿರುವುದು ಅತ್ಯಂತ ಸಂತೋಷಕರ ವಿಚಾರ ಎಂದು ವಿವರಿಸಿ 1986ರಿಂದಲೂ ಪೂಜ್ಯ ಸ್ವಾಮೀಜಿಯವರ ನಿರಂತರ ಸೇವಾ ಕಾರ್ಯಗಳನ್ನು ತಾವು ನೋಡುತ್ತಾ ಬಂದಿದ್ದಾಗಿ ಈ ಸಂದರ್ಭದಲ್ಲಿ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಹಾಗೂ ಪಾವಗಡ ತಾಲ್ಲೂಕಿನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಕ್ರಮೇಣ ತುಮಕೂರು ಜಿಲ್ಲೆ, ರಾಯಚೂರು, ಯಾದಗಿರಿ ಮುಂತಾದ ಪ್ರದೇಶಗಳಿಗೂ ತಮ್ಮ ಸೇವಾ ಯೋಜನೆಗಳನ್ನು ವಿಸ್ತರಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್19ರ ಭಯಾನಕ ಸ್ಥಿತಿಯನ್ನು ಎದುರಿಸಿದ ನಾವು ಇನ್ನು ಮುಂದೆ ಬರುವ ಮೂರನೇ ಅಲೆಗೂ ಸಿದ್ದರಾಗಿರಬೇಕೆಂದು ತಿಳಿಸಿದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಡಾ.ಪ್ರಭಾಕರ್ ರವರು ನೆರೆದ ಜನರಿಗೆ ಕೋವಿಡ್19ರ ಮೊದಲನೇ ಅಲೆ, ಎರಡನೇ ಅಲೆ ಹಾಗೂ ಮೂರನೇ ಅಲೆಯ ಬಗ್ಗೆ ಬಹಳ ಸುಂದರವಾಗಿ ಮನಮುಟ್ಟುವಂತೆ ವಿವರಿಸಿ ಜನರು ಯಾವ ರೀತಿ ಎಚ್ಚರದಿಂದಿರಬೇಕು ಎಂದು ಅನೇಕ ಉದಾಹರಣೆಗಳ ಮೂಲಕ ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ರವರು ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದು ಬೇರೆ ಬೇರೆ ತಾಲ್ಲೂಕುಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತಿರುವುದು ಅತ್ಯಂತ ಸಂತೋಷಕರ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ತಹಶೀಲ್ದಾರ್ ರವರೂ ಸಹ ಮಾತನಾಡಿ ಪಾವಗಡ ತಾಲ್ಲೂಕು ಯಾವ ರೀತಿಯಲ್ಲಿ ಈ ಭಯಾನಕ ಕಾಯಿಲೆಯನ್ನು ಎದುರಿಸಿ ಮುಂದುವರೆಯುತ್ತಿದೆ, ಇನ್ನು ಬರುವ ದಿನಗಳಲ್ಲಿ ಮೂರನೇ ಅಲೆಯನ್ನು ನಾವು ಎದುರಿಸಲು ಸರ್ವ ರೀತಿಯಲ್ಲಿ ಸನ್ನದ್ದವಾಗಿರಬೇಕು ಎಂದು ತಿಳಿಸಿದರು.
24 6 21 Doctors visit to villages prog SVIRHC 6
ಕಾರ್ಯಕ್ರಮ ಪಾವಗಡದ ಪುರಸಭೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಅರ್ಚನಾ ರವರ ಸ್ವಾಗತ ಭಾಷಣದಿಂದ ಆರಂಭವಾಗಿ, ತಾಲ್ಲೂಕು ಪಂಚಾಯಿತಿಯ ಯೋಜನಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸುದೇಶ್ ಬಾಬು, ಶ್ರೀ ವಿಜಯಕುಮಾರ್, ಶ್ರೀ ರಾಮಾಂಜಿನಪ್ಪ, ಅಧ್ಯಕ್ಷರು, ಪುರಸಭೆ, ಡಾ.ತಿರುಪತಯ್ಯ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಗೌರವಾನ್ವಿತ ಪುರಸಭೆಯ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವು ಜನಪರವಾದ ಕಾರ್ಯಕ್ರಮ ಎಂದು ಸಾಬೀತುಪಡಿಸಿದರು. ಪುರಸಭೆಯ ಹಾಗೂ ತಾಲ್ಲೂಕು ಪಂಚಾಯಿತಿಯ ಎಲ್ಲ ಅಧಿಕಾರಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿದರು.
ಕಾರ್ಯಕ್ರಮದ ನಂತರ ವೈದ್ಯಕೀಯ ತಪಾಸಣೆ ಹಾಗೂ ಲಸಿಕೆ ನೀಡುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಪಾವಗಡದ ಅದರಲ್ಲಿಯೂ ಗುಟ್ಟಹಳ್ಳಿ, ಕಾಳಿದಾಸನಗರ, ಕನ್‍ಮಾನ್‍ಚೆರುವು, ಮುಂತಾದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಂಡಿದ್ದು ನಿಜಕ್ಕೂ ಕಾರ್ಯಕ್ರಮಕ್ಕೆ ಹೆಚ್ಚು ವಿಶಿಷ್ಟ್ಯತೆಯನ್ನು ತಂದೊಟ್ಟಿತು. ಕಾರ್ಯಕ್ರಮದ ರೂವಾರಿಗಳಾದ ಸ್ವಾಮಿ ಜಪಾನಂದಜೀ ರವರು ಇನ್ನು ಒಂದು ವಾರಗಳ ಕಾಲ ಪಾವಗಡದ ನಾನಾ ಗ್ರಾಮಗಳಲ್ಲಿ ಅದರಲ್ಲಿಯೂ ರೆಡ್‍ಜೋನ್ ಗ್ರಾಮಗಳಿಗೆ ಆದ್ಯತೆಯ ಮೂಲಕ ಭೇಟಿ ನೀಡುವುದು ಹಾಗೂ ತಪಾಸಣೆ ನಡೆಸುವುದು ಈ ಯೋಜನೆಯ ಮುಖ್ಯ ಗುರಿ ಎಂದು ತಿಳಿಸಿದರು.