ಸರ್ಕಾರಿ ಶಾಲೆಗೆ ಬೀಗ ಹಾಕಿ ಮದ್ದೆ ಗ್ರಾಮಸ್ಥರ ಪ್ರತಿಭಟನೆ.
ಪಾವಗಡ : ತಾಲೂಕಿನ ಮದ್ದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮಂಗಳವಾರ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಶಾಲೆಯ ಮುಂದೆ ಜಮಾಯಿಸಿದ ಸಾವಿರಾರು ಗ್ರಾಮಸ್ಥರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಬೇಕೆ ಬೇಕು ನ್ಯಾಯ ಬೇಕು ಎಂದು ಗಟ್ಟಿ ಧ್ವನಿಯಲ್ಲಿ ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಶಾಲೆಯಲ್ಲಿ ಶಿಕ್ಷಕರ ಕೊರೆತೆಯಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವಿಲ್ಲದೆ ನಮ್ಮೂರಿನ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಪ್ರತಿಭಟಿಸಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರಿದರು ಕೂಡಲೇ ಸಂಬಂಧಿಸಿದ ಬಿಇಓ, ಡಿಡಿಪಿಐ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಶಾಲೆಯಲ್ಲಿ ಸುಮಾರು 70 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯಲ್ಲಿ ಕೇವಲ ಇಬ್ಬರು ಅತಿಥಿ ಶಿಕ್ಷರಿದ್ದಾರೆ. ಬಿಟ್ಟರೆ ಖಾಯಂ ಸರ್ಕಾರಿ ಶಿಕ್ಷಕರಿಲ್ಲದೆ . ವಿದ್ಯಾರ್ಥಿಗಳ ಶಿಕ್ಷಣ ಕುಂಟಿತವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಹಿಂದಿದ್ದ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಅವರು ವರ್ಗಾವಣೆಗೊಂಡಿದ್ದಾರೆ, ಇನ್ನೋರ್ವ ಗಾಯಿತ್ರಿ ಎನ್ನುವ ಖಾಯಂ ಶಿಕ್ಷಕಿಯು ಅರಸೀಕೆರೆ ಎಚ್.ಪಿ.ಎಸ್. ವರ್ಗಾವಣೆಗೊಂಡಿದ್ದಾರೆ.ಹದಿನೈದು ದಿನ ಆಯ್ತು ನಮಗೆ ರಿಲೀವ್ ಕೊಟ್ಟಿಲ್ಲ ಎಂದು ಅವರು ಅಳಲನ್ನು ತೋಡಿಕೊಂಡರು.
ಹಾಗಾಗಿ ಖಾಯಂ ಶಿಕ್ಷಕರ ಸಂಖ್ಯೆಯಲ್ಲಿ ಶೂನ್ಯ, ಡೆಪ್ಟೇಶನ್ ರೂಪದಲ್ಲಿ ಒಬ್ಬರನ್ನ ನೇಮಿಸಲಾಗಿದೆ ಒಂದೆರಡು ದಿನ ಬಂದು ಹೋಗ್ತಾರೆ ನಮ್ಮಮಕ್ಕಳ ವಿದ್ಯಾಭ್ಯಾಸದ ಪರಿಸ್ಥಿತಿ ಅಧೋಗತಿಯಾಗುತ್ತಿದೆ ಎಂದು ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಂಗೇಗೌಡ ಆರೋಪಿಸಿದ್ದಾರೆ.
ಸುಮಾರು ವರ್ಷಗಳಿಂದ ಈ ಶಾಲೆಯಲ್ಲಿ ಒಂದಿಲ್ಲೊಂದು ಸಮಸ್ಯೆಯಿಂದ ಹಾಳಾಗಿದೆ. ಯಾವ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಇ.ಒ ಅಶ್ವಥನಾರಾಯಣ ಅವರನ್ನು ಕೇಳಿದ್ರೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಯಾವುದೇ ಪ್ರಯೋಜನವಿಲ್ಲ ಎಂದು ನೇರವಾಗಿಯೇ ಗ್ರಾಮಸ್ಥ ಶಿವಕುಮಾರ್ ಗುಡುಗಿದರು.
ಒಟ್ಟಾರೆ ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಇಂತಹ ಗ್ರಾಮಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡಬೇಕಾದ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.
ಇಲ್ಲಿನ ಹಳ್ಳಿಜನರು ಕೂಲಿನಾಲಿ ಬದುಕು ಕಟ್ಟಿಕೊಳ್ಳುವ ಮಂದಿ ಮೊದಲೇ ಶಿಕ್ಷಣ ಇಲ್ಲ ಅಂತದ್ರಲ್ಲಿ ಮಕ್ಕಳ ಭವಿಷ್ಯ ಕಟ್ಟಬೇಕಾದ ಈ ಹಂತದಲ್ಲೆ ಸರಿಯಾದ ಶಿಕ್ಷಣ ದೊರೆಯಲಿಲ್ಲವಾದರೆ ಮುಂದೆ ಅವರ ಭವಿಷ್ಯ ಹಾಳೋಗೋದ್ರಲ್ಲಿ ಯಾವುದೇ ಸಂಶಯವಿಲ್ಲ..
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮವಹಿಸಿ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಶಿಕ್ಷಕರನ್ನು ನೇಮಿಸದೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಮುಂದಿನ ಹಂತದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶವನ್ನು ಗ್ರಾಮಸ್ಥರು ಹೊರಹಾಕಿದರು.
ಈ ಕೂಡಲೇ ಶಾಸಕರಾದ ಹೆಚ್.ವಿ.ವೆಂಕಟೇಶ್ ಮದ್ದೆ ಗ್ರಾಮದ ಶಾಲೆಗೆ ಶಿಕ್ಷಕರನ್ನು ನೇಮಿಸುವತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವರಾಜು, ಶಿವಮೂರ್ತಿ,ಲಕ್ಷ್ಮ ಮ್ಮ, ಯಶೋಧಮ್ಮ, ನಾಗರಾಜು, ಬೆಟ್ಟಪ್ಪ,ಸಣ್ಣಪ್ಪ ಸ್ವಾರಣ್ಣ,ಶಿವಕುಮಾರ್ ,ಓಬಣ್ಣ ಶಿವಣ್ಣ, ಮೂರ್ತಪ್ಪ, ರಮೇಶ್ ಇನ್ನು ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.