ಕಲ್ಲಿದ್ದಲು ವಾಣಿಜ್ಯ ಗಣಿಗಾರಿಕೆ ಹರಾಜು ಪ್ರಕ್ರಿಯೆಗೆ ಪ್ರಧಾನಿ ಚಾಲನೆ
ಸ್ಪರ್ಧಾತ್ಮಕ, ಬಂಡವಾಳ, ಪಾಲ್ಗೊಳ್ಳುವಿಕೆ ಮತ್ತು ತಂತ್ರಜ್ಞಾನಕ್ಕಾಗಿ ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳು ಸಂಪೂರ್ಣ ಮುಕ್ತ: ಪ್ರಧಾನಿ ಕಲ್ಲಿದ್ದಲು ವಲಯದ ಸುಧಾರಣೆಗಳು ಪೂರ್ವ ಮತ್ತು ಮಧ್ಯ ಭಾರತವನ್ನು, ಬುಡಕಟ್ಟು ಪ್ರದೇಶವನ್ನುಅಭಿವೃದ್ಧಿಯ ಆಧಾರ ಸ್ತಂಭಗಳಾಗಿ ಪರಿವರ್ತನೆ.
ಬಲಿಷ್ಠ ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರದಿಂದ ಸ್ವಾವಲಂಬನೆ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 41 ಕಲ್ಲಿದ್ದಲು ಘಟಕಗಳ ವಾಣಿಜ್ಯ ಗಣಿಗಾರಿಕೆಯ ಹರಾಜು ಪ್ರಕ್ರಿಯೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಭಾರತ ಸರ್ಕಾರ ಘೋಷಿಸಿದ ಸರಣಿ ಪ್ರಕಟಣೆಗಳ ಭಾಗವಾಗಿತ್ತು. ಈ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಕಲ್ಲಿದ್ದಲು ಸಚಿವಾಲಯವು ಎಫ್‌ಐಸಿಸಿಐ ಸಹಯೋಗದೊಂದಿಗೆ ಪ್ರಾರಂಭಿಸಿದೆ. ಕಲ್ಲಿದ್ದಲು ಗಣಿಗಳ ಹಂಚಿಕೆಗಾಗಿ ಎರಡು ಹಂತದ ಎಲೆಕ್ಟ್ರಾನಿಕ್ ಹರಾಜು ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿ, ಭಾರತವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೊರಬರುತ್ತದೆ ಮತ್ತು ರಾಷ್ಟ್ರವು ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸುತ್ತದೆ. ಈ ಬಿಕ್ಕಟ್ಟು ಭಾರತಕ್ಕೆ ಸ್ವಾವಲಂಬಿಯಾಗುವ ಪಾಠವನ್ನು ಕಲಿಸಿದೆ ಎಂದರು. ಆತ್ಮ ನಿರ್ಭರ ಭಾರತ ಎಂದರೆ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಆಮದಿನ ಮೇಲಿನ ವಿದೇಶಿ ಕರೆನ್ಸಿಯನ್ನು ಉಳಿಸುವುದಾಗಿದೆ ಎಂದು ಅವರು ಹೇಳಿದರು. ಭಾರತವು ದೇಶೀಯವಾಗಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತದೆ, ಇದರಿಂದಾಗಿ ದೇಶವು ಆಮದನ್ನು ಅವಲಂಬಿಸಬೇಕಾಗುವುದಿಲ್ಲ. ಇದರರ್ಥ ನಾವು ಈಗ ಆಮದು ಮಾಡಿಕೊಳ್ಳುವ ಸರಕುಗಳ ಅತಿದೊಡ್ಡ ರಫ್ತುದಾರರಾಗುತ್ತೇವೆ ಎಂದರು.
ಇದನ್ನು ಸಾಧಿಸಲು, ನಿರ್ದಿಷ್ಟ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರತಿಯೊಂದು ವಲಯ, ಪ್ರತಿ ಉತ್ಪನ್ನ, ಪ್ರತಿ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು. ಇಂದು ಇಟ್ಟಿರುವ ಪ್ರಮುಖ ಹೆಜ್ಜೆಯು ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಇದು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಸುಧಾರಣೆಗಳ ಅನುಷ್ಠಾನವನ್ನು ಮಾತ್ರವಲ್ಲದೆ ಯುವಜನರಿಗೆ ಲಕ್ಷಾಂತರ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ ಎಂದರು. ಇಂದು ನಾವು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜನ್ನು ಪ್ರಾರಂಭಿಸುವುದರೊಂದಿಗೆ, ಕಲ್ಲಿದ್ದಲು ಕ್ಷೇತ್ರವನ್ನು ದಶಕಗಳ ಲಾಕ್‌ಡೌನ್‌ನಿಂದ ಮುಕ್ತಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ಸಂಪತ್ತು ಹೊಂದಿರುವ ಮತ್ತು ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಎರಡನೇ ಅತಿದೊಡ್ಡ ಕಲ್ಲಿದ್ದಲು ಆಮದುದಾರನೂ ಆಗಿರುವ ವ್ಯಂಗ್ಯದ ಬಗ್ಗೆ ಅವರು ಒತ್ತಿ ಹೇಳಿದರು. ಈ ಪರಿಸ್ಥಿತಿ ದಶಕಗಳಿಂದಲೂ ಇದೆ ಮತ್ತು ಕಲ್ಲಿದ್ದಲು ವಲಯವನ್ನು ಸ್ವಂತಕ್ಕೆ ಹಾಗೂ ಸ್ವಂತಕ್ಕಲ್ಲದ ಉಪಯೋಗಗಳ ಗಣಿಗಳ ಜಾಲರಿಯಲ್ಲಿ ಸಿಕ್ಕಿಸಲಾಗಿದೆ ಎಂದು ಅವರು ಹೇಳಿದರು. ಈ ಕ್ಷೇತ್ರವನ್ನು ಸ್ಪರ್ಧೆಯಿಂದ ಹೊರಗಿಟ್ಟಿರುವುದು ಮತ್ತು ಪಾರದರ್ಶಕತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ, ಕಲ್ಲಿದ್ದಲು ಕ್ಷೇತ್ರಕ್ಕೆ ಹೂಡಿಕೆಯ ಕೊರತೆಯಿದೆ ಮತ್ತು ಅದರ ದಕ್ಷತೆಯೂ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.
ಕಲ್ಲಿದ್ದಲು ಕ್ಷೇತ್ರಕ್ಕೆ ಉತ್ತೇಜನ ನೀಡಲು 2014 ರಲ್ಲಿ ಕಲ್ಲಿದ್ದಲು ಲಿಂಕೇಜ್ ಪರಿಚಯಿಸಲಾಯಿತು ಎಂದು ಪ್ರಧಾನಿ ಹೇಳಿದರು. ಹೆಚ್ಚಿನ ಸ್ಪರ್ಧೆ, ಹೂಡಿಕೆ, ಭಾಗವಹಿಸುವಿಕೆ ಮತ್ತು ತಂತ್ರಜ್ಞಾನಕ್ಕಾಗಿ ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಭಾರತ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಖಾಸಗಿ ಗಣಿಗಾರಿಕೆ ಕ್ಷೇತ್ರದಲ್ಲಿ ಹೊಸಬರು ಹಣಕಾಸಿನ ಸಮಸ್ಯೆಯನ್ನು ಎದುರಿಸದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಬಲವಾದ ಗಣಿಗಾರಿಕೆ ಮತ್ತು ಖನಿಜ ವಲಯವಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ. ಏಕೆಂದರೆ ಇವೆರಡೂ ನಮ್ಮ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂದು ಅವರು ಒತ್ತಿ ಹೇಳಿದರು.
ಈ ಸುಧಾರಣೆಗಳ ನಂತರ ಕಲ್ಲಿದ್ದಲು ಉತ್ಪಾದನೆ ಮತ್ತು ಇಡೀ ಕಲ್ಲಿದ್ದಲು ವಲಯವು ಸ್ವಾವಲಂಬಿಯಾಗಲಿದೆ ಎಂದು ಪ್ರಧಾನಿ ಹೇಳಿದರು. ಈಗ ಕಲ್ಲಿದ್ದಲು ಮಾರುಕಟ್ಟೆಯನ್ನು ಮುಕ್ತಗೊಳಿಸಲಾಗಿದೆ, ಆದ್ದರಿಂದ, ಯಾವುದೇ ವಲಯವು ಅವರ ಅಗತ್ಯಗಳಿಗೆ ಅನುಗುಣವಾಗಿ ಕಲ್ಲಿದ್ದಲನ್ನು ಖರೀದಿಸಬಹುದು. ಈ ಸುಧಾರಣೆಗಳಿಂದ ಕಲ್ಲಿದ್ದಲು ಕ್ಷೇತ್ರಕ್ಕೆ ಮಾತ್ರವಲ್ಲದೆ ಉಕ್ಕು, ಅಲ್ಯೂಮಿನಿಯಂ, ರಸಗೊಬ್ಬರ ಮತ್ತು ಸಿಮೆಂಟ್‌ನಂತಹ ಇತರ ಕ್ಷೇತ್ರಗಳಿಗೂ ಪ್ರಯೋಜನವಾಗುತ್ತವೆ. ಇದು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ ಎಂದು ಪ್ರಧಾನಿ ತಿಳಿಸಿದರು.
ಕಬ್ಬಿಣ, ಬಾಕ್ಸೈಟ್ ಮತ್ತಿತರ ಖನಿಜಗಳು ಕಲ್ಲಿದ್ದಲು ನಿಕ್ಷೇಪಕ್ಕೆ ಬಹಳ ಹತ್ತಿರದಲ್ಲಿರುವುದರಿಂದ ಖನಿಜ ಕ್ಷೇತ್ರದಲ್ಲಿನ ಸುಧಾರಣೆಗಳು ಕಲ್ಲಿದ್ದಲು ಗಣಿಗಾರಿಕೆ ಸುಧಾರಣೆಯಿಂದ ಬಲವನ್ನು ಪಡೆದಿವೆ ಎಂದು ಪ್ರಧಾನಿ ಹೇಳಿದರು. ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗಾಗಿ ಇಂದು ಹರಾಜಿನ ಆರಂಭವು ಎಲ್ಲಾ ಪಾಲುದಾರ ಕೈಗಾರಿಕೆಗಳಿಗೂ ಗೆಲುವಿನ ಸನ್ನಿವೇಶವಾಗಿದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ದೇಶದಲ್ಲಿ ಬೃಹತ್ ಉದ್ಯೋಗ ದೊರೆಯಲಿದೆ. ಇದು ಪ್ರತಿ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಕಲ್ಲಿದ್ದಲು ಕ್ಷೆತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವಾಗ, ಪರಿಸರ ಸಂರಕ್ಷಣೆಯ ಭಾರತದ ಬದ್ಧತೆಯು ದುರ್ಬಲಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. “ಕಲ್ಲಿದ್ದಲಿನಿಂದ ಅನಿಲವನ್ನು ತಯಾರಿಸಲು ಇತ್ತೀಚಿನ ತಂತ್ರಜ್ಞಾನವನ್ನು ಪರಿಚಯಿಸಬಹುದು ಮತ್ತು ಕಲ್ಲಿದ್ದಲಿನ ಅನಿಲೀಕರಣದಂತಹ ಕ್ರಮಗಳೊಂದಿಗೆ ಪರಿಸರವನ್ನು ಸಂರಕ್ಷಿಸಲಾಗುವುದು. ಕಲ್ಲಿದ್ದಲು ಅನಿಲವನ್ನು ಸಾರಿಗೆ ಮತ್ತು ಅಡುಗೆಯಲ್ಲಿ ಬಳಸಲಾಗುವುದು ಮತ್ತು ಇದು ಯೂರಿಯಾ ಮತ್ತು ಉಕ್ಕು ಉತ್ಪಾದನಾ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ.” ಎಂದು ಅವರು ಹೇಳಿದರು. 2030 ರ ವೇಳೆಗೆ ಸುಮಾರು 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಈ ಉದ್ದೇಶಕ್ಕಾಗಿ ನಾಲ್ಕು ಯೋಜನೆಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು.
ಈ ಕಲ್ಲಿದ್ದಲು ಕ್ಷೇತ್ರದ ಸುಧಾರಣೆಗಳು ಪೂರ್ವ ಮತ್ತು ಮಧ್ಯ ಭಾರತವನ್ನು, ನಮ್ಮ ಬುಡಕಟ್ಟು ಪ್ರದೇಶವನ್ನು, ಅಭಿವೃದ್ಧಿಯ ಆಧಾರ ಸ್ತಂಭಗಳನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಹೊಂದಿವೆ ಮತ್ತು ಇವು ಅಪೇಕ್ಷಿತ ಮಟ್ಟದ ಪ್ರಗತಿ ಮತ್ತು ಸಮೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ದೇಶದ 16 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಕಲ್ಲಿದ್ದಲು ಸಂಗ್ರಹವಿದೆ. ಆದರೆ ಈ ಪ್ರದೇಶಗಳ ಜನರಿಗೆ ಇದರ ಸಾಕಷ್ಟು ಲಾಭ ದೊರೆತಿಲ್ಲ. ಈ ಸ್ಥಳಗಳಿಂದ ಜನರು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗಬೇಕಾಗುತ್ತದೆ ಎಮದು ಅವರು ಹೇಳಿದರು.
ವಾಣಿಜ್ಯ ಗಣಿಗಾರಿಕೆಯ ಬಗ್ಗೆ ಕೈಗೊಂಡ ಕ್ರಮಗಳಿಂದಾಗಿ ಸ್ಥಳೀಯ ಜನರಿಗೆ ತಮ್ಮ ಮನೆಗಳ ಬಳಿಯೇ ಉದ್ಯೋಗ ನೀಡುವ ಮೂಲಕ ಪೂರ್ವ ಮತ್ತು ಮಧ್ಯ ಭಾರತಕ್ಕೆ ಬಹಳ ಸಹಾಯಕವಾಗುತ್ತವೆ ಎಂದು ಪ್ರಧಾನಿ ಹೇಳಿದರು. ಕಲ್ಲಿದ್ದಲು ಹೊರತೆಗೆಯುವಿಕೆ ಮತ್ತು ಸಾರಿಗೆಗಾಗಿ ಮೂಲಸೌಕರ್ಯಗಳನ್ನು ಸೃಷ್ಟಿಸಲು 50 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ, ಇದು ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಬುಡಕಟ್ಟು ಜನಾಂಗದವರ ಜೀವನವನ್ನು ಸುಗಮಗೊಳಿಸುವಲ್ಲಿ ಕಲ್ಲಿದ್ದಲು ಕ್ಷೇತ್ರದ ಸುಧಾರಣೆಗಳು ಮತ್ತು ಹೂಡಿಕೆಯು ದೊಡ್ಡ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕಲ್ಲಿದ್ದಲು ಉತ್ಪಾದನೆಯ ಮೂಲಕ ಬರುವ ಹೆಚ್ಚುವರಿ ಆದಾಯವನ್ನು ಈ ಪ್ರದೇಶದ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತದೆ. ಈ ಪ್ರದೇಶದ ಜಿಲ್ಲೆಗಳು ಖನಿಜ ನಿಧಿಯಿಂದ ಸಹಾಯ ಪಡೆಯುವುದು ಮುಂದುವರೆಯುತ್ತದೆ, ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಪ್ರಮುಖ ಭಾಗವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಆರ್ಥಿಕ ಚಟುವಟಿಕೆಗಳು ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಸಮಯದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಬಳಕೆ ಮತ್ತು ಬೇಡಿಕೆಯು ಕೋವಿಡ್ -19 ಕ್ಕಿಂತ ಮೊದಲಿನ ಮಟ್ಟವನ್ನು ವೇಗವಾಗಿ ತಲುಪುತ್ತಿದೆ. ವಿದ್ಯುತ್ ಬಳಕೆ, ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ, ಇ ವೇ ಬಿಲ್‌ಗಳು, ಟೋಲ್ ಸಂಗ್ರಹ, ರೈಲ್ವೆ ಸರಕು ಸಾಗಣೆ, ಡಿಜಿಟಲ್ ಚಿಲ್ಲರೆ ವಹಿವಾಟು ಮುಂತಾದವು ಕೋವಿಡ್ ಪೂರ್ವ ಮಟ್ಟವನ್ನು ವೇಗವಾಗಿ ತಲುಪುತ್ತಿವೆ ಎಂದರು.
ಗ್ರಾಮೀಣ ಆರ್ಥಿಕತೆಯೂ ಸುಧಾರಿಸುತ್ತಿದೆ ಎಂದು ಅವರು ಹೇಳಿದರು. ಈ ವರ್ಷ ಖಾರಿಫ್ ಕೃಷಿ ಬೆಳೆ ಪ್ರದೇಶ ಮತ್ತು ಗೋಧಿ ಸಂಗ್ರಹವೂ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದರರ್ಥ ಹೆಚ್ಚಿನ ಹಣ ರೈತರ ಜೇಬಿಗೆ ಹೋಗಿದೆ. ಈ ಎಲ್ಲಾ ಸೂಚಕಗಳು ಭಾರತದ ಆರ್ಥಿಕತೆಯು ಮತ್ತೆ ಪುಟಿದೇಳಲು ಮತ್ತು ಮುಂದೆ ಸಾಗಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತವೆ ಎಂದರು.
ಈ ಹಿಂದೆ ಭಾರತವು ಈಗಿರುವುದಕ್ಕಿಂತ ದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದ್ದು, ಈ ಬಿಕ್ಕಟ್ಟಿನಿಂದಲೂ ಹೊರಬರಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತವು ಸ್ವಾವಲಂಬಿಯಾಗುತ್ತದೆ. ಭಾರತದ ಯಶಸ್ಸು ಮತ್ತು ಬೆಳವಣಿಗೆ ನಿಶ್ಚಿತ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಕೆಲವು ವಾರಗಳ ಹಿಂದೆಯಷ್ಟೇ ಎನ್ -95 ಮುಖಗವಸುಗಳು, ಕೊರೊನಾ ಪರೀಕ್ಷಾ ಕಿಟ್‌ಗಳು, ಪಿಪಿಇ ಮತ್ತು ವೆಂಟಿಲೇಟರ್‌ಗಳ ಹೇಗೆ ಆಮದಿನ ಮೂಲಕ ಪೂರೈಕೆಯಾಗುತ್ತಿದ್ದವು ಎಂಬುದನ್ನು ಅವರು ಉಲ್ಲೇಖಿಸಿದರು. ಶೀಘ್ರದಲ್ಲೇ ನಾವು ವೈದ್ಯಕೀಯ ಉತ್ಪನ್ನಗಳ ಪ್ರಮುಖ ರಫ್ತುದಾರರಾಗುತ್ತೇವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. ನಾವು ಸ್ವಾವಲಂಬಿಗಳಾಗಲು ತಮ್ಮ ನಂಬಿಕೆ ಮತ್ತು ಸ್ಥೈರ್ಯವನ್ನು ಉಳಿಸಿಕೊಳ್ಳಬೇಕು ಎಂದು ಅವರು ಜನರಿಗೆ ಮನವಿ ಮಾಡಿದರು.