IMG 20210713 WA0011

ಜಲಜೀವನ್ ಮಿಷನ್: 2023ರೊಳಗೆ ಕರ್ನಾಟಕ ರಾಜ್ಯವನ್ನು ‘ಹರ್ ಘರ್ ಜಲ’ವನ್ನಾಗಿ ಮಾಡಲು ಅಗತ್ಯ ಕ್ರಮ….!

Genaral STATE

ಕೇಂದ್ರ ಜಲಶಕ್ತಿ ಸಚಿವರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಅವರಿಂದ ರಾಜ್ಯದಲ್ಲಿ ಜಲಜೀವನ್ ಮಿಷನ್ ಅನುಷ್ಠಾನದ ಕುರಿತು ಜಂಟಿ ಪರಿಶೀಲನಾ ಸಭೆ

ಜೆಜೆಎಂ ಅನುಷ್ಠಾನ ವೇಗಗೊಳಿಸುವ ಮೂಲಕ 2023ರೊಳಗೆ ಕರ್ನಾಟಕ ರಾಜ್ಯವನ್ನು ‘ಹರ್ ಘರ್ ಜಲ’ವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಭರವಸೆ

ಬೆಂಗಳೂರು: –

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ವಿಧಾನಸೌಧದಲ್ಲಿಂದು ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಜಾರಿ ಕುರಿತು ಜಂಟಿ ಪರಿಶೀಲನಾ ಸಭೆ ನಡೆಸಿದರು. ಜಲಜೀವನ್ ಮಿಷನ್ ಜಾರಿಗೆ ವೇಗ ನೀಡಲು ಮತ್ತು 2023ರೊಳಗೆ ಕರ್ನಾಟಕದಲ್ಲಿ ಬಾಕಿ ಇರುವ 61.05 ಲಕ್ಷ ಕುಟುಂಬಗಳಿಗೆ ಕೊಳಾಯಿ ಮೂಲಕ ನೀರು ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕೇಂದ್ರ ಸಚಿವರಿಗೆ ಭರವಸೆ ನೀಡಿದರು. “ಹರ್ ಘರ್ ಜಲ್ (ಪ್ರತಿ ಮನೆಗೆ ನೀರು) ಯೋಜನೆಯ ಗುರಿ ಸಾಧನೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವರು ಮುಖ್ಯಮಂತ್ರಿಯವರಿಗೆ ಆಶ್ವಾಸನೆ ನೀಡಿದರು. ಇದರೊಂದಿಗೆ 2024ರೊಳಗೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕನಸು ಸಾಕಾರಗೊಳಿಸುವ ಗುರಿ ಹೊಂದಲಾಗಿದೆ.

ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ, ರಾಜ್ಯದ ಪ್ರತಿಯೊಂದು ಗ್ರಾಮೀಣ ಕುಟುಂಬಗಳಿಗೆ ನಿಯಮಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ನಿಗದಿತ ಗುಣಮಟ್ಟದಲ್ಲಿ ಸಾಕಷ್ಟು ಪ್ರಮಾಣದ ಶುದ್ಧ ಕುಡಿಯುವ ನೀರನ್ನು ಕೊಳಾಯಿ ಮೂಲಕ ಪೂರೈಕೆ ಖಾತ್ರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಯೋಜನೆಯ ಜಾರಿಯ ಬಗ್ಗೆ ಪರಿಶೀಲನಾ ಸಭೆ ನಡೆಸುತ್ತಿದೆ. ಸಭೆಯ ವೇಳೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಲಜೀವನ್ ಮಿಷನ್ ಯೋಜನಾ ನಿರ್ದೇಶಕರಾದ ಶ್ರೀ ಭರತ್ ಲಾಲ್ ಮೀನಾ, ರಾಜ್ಯದಲ್ಲಿ ಜೆಜೆಎಂ ಅನುಷ್ಠಾನ ಮತ್ತು ಯೋಜನೆಯ ಪ್ರಮುಖಾಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ನಂತರ ಅವರು, ಕರ್ನಾಟಕದಲ್ಲಿ ಮಿಷನ್ ಅನ್ನು ತ್ವರಿತವಾಗಿ ಜಾರಿಗೊಳಿಸುವ ಕುರಿತು ಪ್ರಧಾನ ಕಾರ್ಯದರ್ಶಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಪರಿಶೀಲನಾ ಸಭೆ ನಡೆಸಿದರು.IMG 20210713 WA0012

ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಆರಂಭವಾದ ಸಮಯದಲ್ಲಿ, ರಾಜ್ಯದಲ್ಲಿನ ಒಟ್ಟು 91.19 ಲಕ್ಷ ಕುಟುಂಬಗಳ ಪೈಕಿ ಕೇವಲ 24.51 ಲಕ್ಷ (ಶೇ.26.88) ಕುಟುಂಬಗಳಿಗೆ ಮಾತ್ರ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿತ್ತು. 22 ತಿಂಗಳಲ್ಲಿ 5.62 ಲಕ್ಷ ಕುಟುಂಬಗಳಿಗೆ ಹೊಸದಾಗಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅದರ ಪರಿಣಾಮ ಕರ್ನಾಟಕದ ಗ್ರಾಮೀಣ ಪ್ರದೇಶದ 30.14 ಲಕ್ಷ (ಶೇ.33.05) ಕುಟುಂಬಗಳಿಗೆ ಕೊಳಾಯಿ ಮೂಲಕ ನೀರು ಲಭ್ಯವಾದಂತಾಗಿದೆ. 2023ರೊಳಗೆ ಕರ್ನಾಟಕದ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು, ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 25.17 ಲಕ್ಷ ಹೊಸ ನಲ್ಲಿ ನೀರಿನ ಸಂಪರ್ಕಗಳನ್ನು ನೀಡಲು ಉದ್ದೇಶಿಸಿದೆ. ಅಂತೆಯೇ 2022-23ರಲ್ಲಿ 17.93 ಲಕ್ಷ ಹಾಗೂ 2023-24ರಲ್ಲಿ ಇನ್ನುಳಿದ 19.93 ಲಕ್ಷ ಕುಟುಂಬಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹಾಕಿಕೊಂಡಿದೆ.

ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ರಾಜ್ಯ ದೃಢ ನಿಶ್ಚಯ ಕೈಗೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಜಲ ಜೀವನ್ ಮಿಷನ್ ಅಡಿ ಕೇಂದ್ರದಿಂದ 5,008.79 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದರು. ಈ ಮೊತ್ತ ಹಿಂದಿನ ವರ್ಷಗಳಲ್ಲಿ ಹಂಚಿಕೆ ಮಾಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಕೇಂದ್ರದ ಅನುದಾನದ ಹೆಚ್ಚಳದಿಂದ ಆರಂಭಿಕ ಬಾಕಿ 177.196 ಕೋಟಿ ರೂ. ಆಗಿದೆ ಮತ್ತು ಇದಕ್ಕೆ ರಾಜ್ಯದ ಹೊಂದಾಣಿಕೆ ಪಾಲು 5,215.93 ಕೋಟಿ ರೂ. ಸೇರಿಸಿದರೆ 2021-22ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಜಲ ಪೂರೈಕೆ ಕಾರ್ಯಕ್ಕೆ ಜಲಜೀವನ್ ಮಿಷನ್ ಅಡಿ ಒಟ್ಟು 10,401.88 ಕೋಟಿ ರೂ. ಲಭ್ಯವಾಗಲಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲು ಸಾಕಷ್ಟು ಹಣಕಾಸು ಲಭ್ಯತೆ ಖಾತ್ರಿಯಾಗಿದೆ.

2021-22ನೇ ಸಾಲಿನಲ್ಲಿ ಕರ್ನಾಟಕಕ್ಕೆ ನೀರು ಮತ್ತು ನಿರ್ಮಲೀಕರಣಕ್ಕಾಗಿ 15ನೇ ಹಣಕಾಸು ಯೋಜನೆಯಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು/ಪಂಚಾಯತ್ ರಾಜ್ ಸಂಸ್ಥೆಗಳಿಗೆ 1,426 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳಿಗೆ ಅಂದರೆ 2025-26ರವರೆಗೆ 7,524 ಕೋಟಿ ರೂ. ನಿಧಿ ಲಭ್ಯವಾಗುವ ಭರವಸೆಯಿದೆ. ಈ ಭಾರಿ ಹೂಡಿಕೆಯೊಂದಿಗೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ, ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರಕಲಿದೆ. ಅಲ್ಲದೆ, ಇದರಿಂದ ಗ್ರಾಮಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

IMG 20210713 WA0014

ಶಾಲೆಗಳು, ವಸತಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಕೊಳಾಯಿ ಮೂಲಕ ಕುಡಿಯುವ ನೀರು ಪೂರೈಸುವಲ್ಲಿ ಕರ್ನಾಟಕ ಅತ್ಯುತ್ತಮ ಕೆಲಸ ಮಾಡಿದೆ. ಸದ್ಯ 41,636 ಶಾಲೆಗಳು (ಶೇ.99ರಷ್ಟು) ಮತ್ತು 51,563 ಅಂಗನವಾಡಿ ಕೇಂದ್ರ (ಶೇ.95ರಷ್ಟು)ಗಳಿಗೆ ಕೊಳಾಯಿ ಮೂಲಕ ನೀರು ಪೂರೈಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಿಗೆ ಸಂಬಂಧಿಸಿದಂತೆ ಉತ್ತಮ ಕಾರ್ಯನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಉತ್ತಮ ಆರೋಗ್ಯ, ಸುಧಾರಿತ ನೈರ್ಮಲ್ಯ ಮತ್ತು ಮಕ್ಕಳ ಶುಚಿತ್ವದ ದೃಷ್ಟಿಯಿಂದ ಆದಷ್ಟು ಶೀಘ್ರ ಉಳಿದ ಕಲಿಕಾ ಕೇಂದ್ರಗಳಿಗೂ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸುವ ಮೂಲಕ ಶೇ.100ರಷ್ಟು ಸಾಧನೆ ಖಾತ್ರಿಪಡಿಸಬೇಕು ಎಂದು ಕರೆ ನೀಡಿದರು.

ಅಲ್ಲದೆ, ರಾಜ್ಯ ನೀರಿನ ಅಭಾವವಿರುವ, ಗುಣಮಟ್ಟ ಬಾಧಿತವಾಗಿರುವ, ಆಶೋತ್ತರ ಜಿಲ್ಲೆಗಳು, ಎಸ್ ಸಿ /ಎಸ್ ಟಿ ಸಮುದಾಯದ ಜನರು ಹೆಚ್ಚಿರುವ ಗ್ರಾಮಗಳು ಮತ್ತು ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್ ಎಜಿವೈ) ಗ್ರಾಮಗಳಲ್ಲಿನ ಕುಟುಂಬಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆಯನ್ನು ನೀಡುತ್ತಿದೆ.

ನೀರಿನ ಗುಣಮಟ್ಟದ ಮೇಲೆ ನಿಗಾ ಮತ್ತು ಮೇಲ್ವಿಚಾರಣೆ ನಡೆಸುವ ಚಟುವಟಿಕೆಗಳಿಗೂ ಅಗ್ರ ಅದ್ಯತೆಯನ್ನು ನೀಡಲಾಗುತ್ತಿದೆ, ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವ ಸಹಾಯ ಗುಂಪುಗಳ ಸದಸ್ಯರು, ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರು, ಶಾಲಾ ಶಿಕ್ಷಕರು ಮತ್ತಿತರರಿಗೆ ಕ್ಷೇತ್ರ ಪರೀಕ್ಷಾ ಕಿಟ್ (ಎಫ್ ಟಿಕೆ ಎಸ್)ಗಳನ್ನು ಬಳಸಿ ನೀರು ಕಲುಷಿತವಾಗಿದೆಯೇ ಎಂಬ ಕುರಿತು ಮಾದರಿಯನ್ನು ಸಂಗ್ರಹಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 78 ನೀರಿನ ಪ್ರಯೋಗಾಲಯಗಳಿದ್ದು, ಆ ಪೈಕಿ ಒಂದಕ್ಕೆ ಎನ್ ಎಬಿಲ್ ಮಾನ್ಯತೆ ಲಭಿಸಿದೆ. ಈ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ನವೀಕರಣ ಮತ್ತು ಎನ್ ಎಬಿಎಲ್ ಮಾನ್ಯತೆ ಪಡೆಯುವುದನ್ನು ರಾಜ್ಯವು ಚುರುಕುಗೊಳಿಸಬೇಕಾಗಿದೆ. ಈ ಪ್ರಯೋಗಾಲಯಗಳನ್ನು ಸಾರ್ವಜನಿಕರಿಗೂ ಸಹ ಮುಕ್ತಗೊಳಿಸಬೇಕು, ಆಗ ಅವರು ಕಡಿಮೆ ವೆಚ್ಚದಲ್ಲಿ ತಮ್ಮ ನೀರಿನ ಮಾದರಿಯನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

ಜಲ ಜೀವನ್ ಮಿಷನ್ ಜಾರಿಯ ತಳಮಟ್ಟದಲ್ಲಿ, ಯೋಜನೆಯ ಅನುಷ್ಠಾನ, ನಿರ್ವಹಣೆ, ಕಾರ್ಯಾಚರಣೆ ಮತ್ತು ನಿಭಾಯಿಸುವುದರಲ್ಲಿ ಸಮುದಾಯ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಅದನ್ನು ಸಾಧಿಸಲು ಗ್ರಾಮ ಜಲ ಮತ್ತು ನಿರ್ಮಲೀಕರಣ ಸಮಿತಿ (ವಿಡಬ್ಲೂ ಎಸ್ ಸಿ)/ ಪಾನಿ ಸಮಿತಿಗಳನ್ನು ಬಲವರ್ಧನೆಗೊಳಿಸಬೇಕು, ಮುಂದಿನ ಐದು ವರ್ಷಗಳಿಗೆ ಗ್ರಾಮಗಳ ಕ್ರಿಯಾ ಯೋಜನೆ ಅಭಿವೃದ್ಧಿಪಡಿಸುವುದು, ಅನುಷ್ಠಾನಗೊಳಿಸುವ ರಾಜ್ಯ ಏಜೆನ್ಸಿಗಳಿಗೆ (ಐಎಸ್ ಎಎಸ್) ಬೆಂಬಲ ಮತ್ತು ಗ್ರಾಮಗಳ ಸಮುದಾಯಗಳಿಗೆ ನೆರವು ನೀಡುವುದು ಮತ್ತು ಜನರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತಿತರ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಈವರೆಗೆ 22,203 ವಿಡಬ್ಲೂಎಸ್ ಸಿಗಳು ಅಥವಾ 28,883 ಗ್ರಾಮಗಳಲ್ಲಿ ಪಾನಿ ಸಮಿತಿಗಳು ಮತ್ತು 19,446 ಗ್ರಾಮಗಳ ಕ್ರಿಯಾ ಯೋಜನೆಗಳು (ವಿಎಪಿ) ಸಿದ್ಧವಾಗಿದೆ. 2021-22ನೇ ಸಾಲಿನಲ್ಲಿ, ರಾಜ್ಯ 30 ಅನುಷ್ಠಾನ ರಾಜ್ಯ ಏಜೆನ್ಸಿಗಳನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಪ್ರತಿಯೊಂದು ಮನೆಗೂ ನಿಯಮಿತ ನೀರು ಪೂರೈಕೆಗೆ ನೀರು ಪೂರೈಕೆ ಮೂಲಸೌಕರ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಹಾಗೂ ಅದು ದೀರ್ಘಕಾಲದ ಸುಸ್ಥಿರತೆ ಖಾತ್ರಿಗೆ ಕರ್ನಾಟಕ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ಜನರಿಗೆ ತರಬೇತಿಯನ್ನು ನೀಡಬೇಕಾದ ಅಗತ್ಯವಿದೆ.

2019ರ ಆಗಸ್ಟ್ 15ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಜಲ ಜೀವನ್ ಮಿಷನ್ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. 2019ರಲ್ಲಿ ಯೋಜನೆ ಆರಂಭವಾದಾಗ, ದೇಶದಲ್ಲಿನ 19.20 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಕೇವಲ 3.23 ಕೋಟಿ (ಶೇ.17ರಷ್ಟು ) ಕುಟುಂಬಗಳಿಗೆ ಮಾತ್ರ ಕೊಳಾಯಿ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಕಳೆದ 22 ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅಡೆತಡೆಗಳ ನಡುವೆಯೇ, ಹೊಸದಾಗಿ 4.47 ಕೋಟಿ ಕುಟುಂಬಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರೊಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ವ್ಯಾಪ್ತಿ ಶೇ.23.63ಕ್ಕೆ ಹೆಚ್ಚಳವಾಗಿದೆ, ಸದ್ಯ ದೇಶದ 7.71 ಕೋಟಿ (ಶೇ.41ರಷ್ಟು ) ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ಮೂಲಕ ನೀರು ಒದಗಿಸಲಾಗುತ್ತಿದೆ. ಗೋವಾ, ತೆಲಂಗಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಪುದುಚೆರಿ ಗ್ರಾಮೀಣ ಪ್ರದೇಶದ ಶೇ.100ರಷ್ಟು ಕುಟುಂಬಗಳಿಗೆ ಕೊಳಾಯಿ ಮೂಲಕ ನೀರು ಒದಗಿಸುವ ‘ಹರ್ ಘರ್ ಜಲ’ ಸಾಧಿಸಿವೆ. ಪ್ರಧಾನಮಂತ್ರಿಗಳ “ಸಬ್ ಕ ಸಾಥ್, ಸಬ್ ಕ ವಿಕಾಸ್ , ಸಬ್ ಕ ವಿಶ್ವಾಸ್ ‘’ ದೂರದೃಷ್ಟಿಯ ತತ್ವವನ್ನು ಪಾಲಿಸುತ್ತಾ, ಯಾರೊಬ್ಬರೂ ಮಿಷನ್ ನಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜೊತೆಗೆ ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಸಂಪರ್ಕ ಗುರಿ ಹೊಂದಲಾಗಿದೆ. ಸದ್ಯ 71 ಜಿಲ್ಲೆಗಳಲ್ಲಿ ಮತ್ತು 99 ಸಾವಿರಕ್ಕೂ ಅಧಿಕ ಗ್ರಾಮಮಗಳಲ್ಲಿ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.