*ಸರಕಾರದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ಪಕ್ಷದ ಸಿದ್ಧಾಂತ; ಡಿ.ಕೆ. ಶಿವಕುಮಾರ್*
ಬಾಗೇಪಲ್ಲಿ:- ಜನರ ಸಂಕಷ್ಟದಲ್ಲಿ ಭಾಗಿಯಾಗಿ, ನೆರವು ನೀಡಿ ಅವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ್ ಸಿದ್ಧಾಂತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬಾಗೇಪಲ್ಲಿಯಲ್ಲಿ ಬಡವರಿಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಸುಬ್ಬಾರೆಡ್ಡಿ ಅವರು 81 ಸಾವಿರ ಆಹಾರ ಕಿಟ್ ನೀಡಿದ್ದಾರೆ. 20 ಕೆ.ಜಿ ಅಕ್ಕಿ, ಎಣ್ಣೆ ಮತ್ತಿತರ ದಿನಸಿ ಪದಾರ್ಥ ಕೊಟ್ಟಿದ್ದಾರೆ. ಇಂತಹ ನಾಯಕರ ಜತೆ ಇದ್ದೀವಿ ಎಂದು ಹೇಳಲು ನಾನು ಮತ್ತು ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದಿದ್ದೇವೆ. ಸರಕಾರ ನಿಮಗೆ ಏನು ಕೊಡಬೇಕಿತ್ತೋ ಅದನ್ನು ನೀಡಲಿಲ್ಲ. ತರಕಾರಿ ಬೆಳೆಗಾರರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಹೋಗುತ್ತಿರುವವರಿಗೂ ಪರಿಹಾರ ಸಿಕ್ಕಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಈ ಸಮಯದಲ್ಲಿ ಎಲ್ಲರ ಮನೆಗೂ ಹೋಗಿ ಅವರಿಗೆ ಸಹಾಯ ಮಾಡಬೇಕು, ಸಾಂತ್ವನ ಹೇಳಬೇಕು. ಬಿಜೆಪಿಯವರು ಯಾರ ಮನೆಗೂ ಹೋಗಿಲ್ಲ, ಸಹಾಯ ಮಾಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಉದ್ದಗಲಕ್ಕೂ ಜನರ ಸೇವೆ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ.
ಜನರ ಮಧ್ಯೆ ಹೋಗಿ ಅವರ ಕಷ್ಟದಲ್ಲಿ ನಾವು ಇದ್ದೇವೆ ಎಂದು ಧೈರ್ಯ ತುಂಬಬೇಕು. ಇದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಜನರ ಮನೆಗೆ ಹೋಗಿ ಅವರಿಗೆ ಬೇಕಾದ ನೆರವು ನೀಡಿ. ನಾವು ನಿಮ್ಮ ಜತೆ ಇರುತ್ತೇವೆ.’
ಈಗ ಸುರಿಯುತ್ತಿರುವ ಮಳೆ ಶುಭಸೂಚಕ, ಸಮೃದ್ಧಿಯ ಸಂಕೇತ. ವರುಣನ ಆಗಮನ ಕಾಂಗ್ರೆಸ್ ನೆರವಿನ ಕಾರ್ಯ ಹಾಗೂ ಸರಕಾರದ ವಿರುದ್ಧದ ಹೋರಾಟಕ್ಕೆ ಶುಭ ಕೋರಿದೆ.