IMG 20220320 WA0018

ಪಾವಗಡ ಬಸ್ ದುರಂತ: ಗ್ರಾಮೀಣ ಪ್ರದೇಶಗಳಿಗೆ ಸುಸ್ಥಿತ ಬಸ್ʼಗಳನ್ನು ನೀಡಬೇಕು

Genaral STATE

ಬಸ್‌ ದುರಂತದಲ್ಲಿ ಗಾಯಗೊಂಡವರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂತ್ವನ

ಆಸ್ಪತ್ರೆಗೆ ಭೇಟಿ; ನೊಂದ ಕುಟುಂಬಗಳಿಗೆ ನೆರವು

ದುರಂತದ ಸೂತಕದಲ್ಲಿ ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದ ಸಿಎಂಗೆ ಚಾಟಿ

ಗ್ರಾಮೀಣ ಪ್ರದೇಶಗಳಿಗೆ ಸುಸ್ಥಿತ ಬಸ್ʼಗಳನ್ನು ನೀಡಬೇಕು


ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಖಾಸಗಿ ಬಸ್ ದುರಂತದಲ್ಲಿ ಗಾಯಗೊಂಡು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಗಾಯಾಳುಗಳ ಆರೋಗ್ಯ ವಿಚಾರಿಸಲು ಧಾವಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ನೊಂದ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದರು.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಗಾಯಾಳುಗಳಿಗೆ ತಲಾ 10,000 ರೂ. ಹಾಗೂ ದುರಂತದಲ್ಲಿ ಜೀವ ಕಳೆದುಕೊಂಡು ಆರು ಕುಟುಂಬಗಳಿಗೆ ತಲಾ 50,000 ರೂ.ಗಳ ನಗದು ಮೊತ್ತವನ್ನು ಹಸ್ತಾಂತರ ಮಾಡಿದರು.

ಅಲ್ಲದೆ, ಸರಕಾರದಿಂದ ಇನ್ನೂ ಹೆಚ್ಚಿನ ನೆರವು ಕೊಡಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೆ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿ ಹೇಳಿದರು.

ವೈದ್ಯರ ಜತೆ ಪ್ರತಿ ಗಾಯಾಳುವಿನ ಬಳಿಗೂ ತೆರಳಿದ ಕುಮಾರಸ್ವಾಮಿ ಅವರು, ಅವರ ಕ್ಷೇಮ ವಿಚಾರಿಸಿದರಲ್ಲದೆ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದಲ್ಲದೆ, ಅವರ ಕುಟುಂಬದ ಪರಿಸ್ಥಿತಿಗಳನ್ನು ಕೇಳಿ ತಿಳಿದುಕೊಂಡರು. ನಂತರ ವೈದ್ಯರಿಂದಲೂ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಸಂಪೂರ್ಣವಾಗಿ ಭರಿಸಬೇಕು. ಸುರಕ್ಷತಾ ಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಅಪಘಾತಗಳನ್ನು ತಡೆಯಬೇಕು. ಗ್ರಾಮೀಣ ಪ್ರದೇಶಗಳಿಗೆ ಸುಸ್ಥಿತಿಯಲ್ಲಿರುವ ಬಸ್ʼಗಳನ್ನೇ ನೀಡಬೇಕು. ಕ್ರಮ ಜರುಗಿಸಿ ಎಂದರೆ ಖಾಸಗಿ ಬಸ್ʼಗಳ ಪರ್ಮಿಟ್ ರದ್ದು ಮಾಡುವುದು ಪರಿಹಾರವಲ್ಲ. ಇರುವ ನಿಯಮಗಳನ್ನು ಬಿಗಿಯಾಗಿ ಜಾರಿ ಮಾಡಬೇಕು. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡದೇ ಅವುಗಳ ಪರ್ಮಿಟ್ ರದ್ದುಗೊಳಿಸುವುದರಿಂದ ಏನು ಪ್ರಯೋಜನ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

IMG 20220320 WA0016

ಎಲ್ಲೆಡೆ ಕೆಎಸ್ಆರ್ಟಿಸಿ ಬಸ್ʼಗಳ ಸಂಖ್ಯೆಯನ್ನೇ ಕಡಿಮೆ ಮಾಡಲಾಗಿದೆ. ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ಅನೇಕ ಸಿಬ್ಬಂದಿಯನ್ನು ಮನೆಗೆ ಕಳಿಸಲಾಗಿದೆ. ಕೋವಿಡ್ ಅನಾಹುತದಿಂದಲೂ ಇಲಾಖೆ ವೆಚ್ಚ ಕಡಿತ ಮಾಡಿದೆ. ಹೀಗಾಗಿ ಕಡಿಮೆ ಬಸ್ಸುಗಳು ಓಡಾಡುತ್ತಿವೆ. ಲಾಭ-ನಷ್ಟದ ಯೋಚನೆ ಮಾಡದೆ ಪ್ರತಿ ಹಳ್ಳಿಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪಾವಗಡ ತಾಲೂಕಿನಲ್ಲಿ ಅತ್ಯಂತ ಕಡಿಮೆ ಬಸ್ಸುಗಳು ಸಂಚರಿಸುತ್ತಿವೆ ಎಂಬ ಮಾಹಿತಿ ಇದೆ. ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕವಿಲ್ಲದಂತಾಗಿದ್ದು, ತಕ್ಷಣವೇ ಕೆಎಸ್ಆರ್ಟಿಸಿ ಈ ನ್ಯೂನ್ಯತೆಗಳನ್ನು ಸರಿಪಡಿಸಬೇಕು.

ಬಸ್ ದುರಂತದಲ್ಲಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಸರಕಾರ ತಕ್ಷಣವೇ ಇತ್ತ ಗಮನ ಹರಿಸಬೇಕು. ಸಾರಿಗೆ ಇಲಾಖೆ ಮತ್ತು ಸರಕಾರದ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಇದರಿಂದ ಪರೀಕ್ಷೆ ಬರೆಯಬೇಕಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಪುನಾ ವಿಶೇಷ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ಬರೆಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಖಾಸಗಿ ಬಸ್ಸುಗಳ ಮೇಲೆ ನಿಗಾ ಇಡಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಜನರ ಹಿತದೃಷ್ಟಿಯಿಂದ ಚೆನ್ನಾಗಿ ಕೆಲಸ ಮಾಡಬೇಕು. ಬಸ್ʼಗಳು ಓವರ್ ಲೋಡ್ ಮಾಡುವುದಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕರ ಅನುಕೂಲಕ್ಕೆ ಇರುವ ಕೆಎಸ್ಆರ್ಟಿಸಿಯಿಂದ ಲಾಭ ನಿರೀಕ್ಷೆ ಸರಿಯಲ್ಲ. ಆದರೆ, ಅಸಮರ್ಪಕ ನಿರ್ವಹಣೆಯಿಂದ ಹಣ ದುರುಪಯೋಗವಾಗುತ್ತಿದೆ ಎಂದು ಅವರು ಹೇಳಿದರು.

ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದ ಸಿಎಂಗೆ ಚಾಟಿ:

ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ. ಮುಖ್ಯಮಂತ್ರಿಗಳು ನೋಡಿದರೆ ನಾಲ್ಕು ಗಂಟೆಗಳ ಕಾಲ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಪಘಾತವಾಗಿ ಜನ ಸತ್ತರೂ, ಆಸ್ಪತ್ರೆಗಳಲ್ಲಿ ಅವರ ಆರ್ತನಾದ ಮುಗಿಲುಮುಟ್ಟಿದ್ದರೂ ಮುಖ್ಯಮಂತ್ರಿಗಳಿಗೆ ಸಿನಿಮಾ ಕಾರ್ಯಕ್ರಮವೇ ಮುಖ್ಯವಾಗಿದೆ. ನೊಂದ ಜನರಿಗೆ ಸಾಂತ್ವನ ಹೇಳುವುದಕ್ಕಿಂತ ಅವರಿಗೆ ಸಿನಿಮಾ ಕಾರ್ಯಕ್ರಮವೇ ಹೆಚ್ಚಾಗಿದೆ ಎಂದು ಕುಮಾರಸ್ವಾಮಿ ಅವರು ಬೊಮ್ಮಾಯಿ ಅವರ ಟೀಕಾಪ್ರಹಾರ ನಡೆಸಿದರು.

ನೈಜವಾಗಿ ಹೋರಾಟ ಮಾಡಿದ ವ್ಯಕ್ತಿಗಳೇ ಬೇರೆ, ಸಿನಿಮಾದಲ್ಲಿ ತೋರಿಸಿರುವುದೇ ಬೇರೆ. ಭಾವನಾತ್ಮಕ ವಿಚಾರಗಳು, ಹೆಸರುಗಳ ಮೇಲೆ ಮತ ಪಡೆಯುವುದು ಈಗೀಗ ಹೆಚ್ಚಾಗಿದೆ. ಜನರು ಬುದ್ಧಿವಂತರಾಗಬೇಕು. ಸರಕಾರದ ವೈಫಲ್ಯದಿಂದಲೇ ಈ ಅಪಘಾತವಾಗಿದೆ. ಇದರ ಹೊಣೆಯನ್ನು ಸರಕಾರವೇ ಹೊರಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.