IMG 20220320 WA0076

ಪಾವಗಡ:ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ….!

DISTRICT NEWS ತುಮಕೂರು

ಸುಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮತ್ತು ದನಗಳ ಜಾತ್ರೆಗೆ ಚಾಲನೆ…ಪಾವಗಡ. ತಾಲೂಕಿನ ವದನಕಲ್ಲು ಗ್ರಾಮದಲ್ಲಿ ಇಂದು ಚಿತ್ತ ನಕ್ಷತ್ರ ದಲ್ಲಿ 4 ಗಂಟೆಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯಿತು.                ಕಳೆದ ಮೂರು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಕ್ರಮೇಣ ಕರೋನಾ ಸಂಖ್ಯೆ ಇಳಿಮುಖ ವಾದ ಕಾರಣ ಹೆಚ್ಚಿನ ಜನ ರಥೋತ್ಸವಕ್ಕೆ ಬಂದು ದೇವರ ಕೃಪೆಗೆ ಪಾತ್ರರಾದರು, ಇಂದು ಸಂಜೆ 4 ಗಂಟೆಗೆ ಸಮಯಕ್ಕೆ ಸರಿಯಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಡಳಿತ ಮಂಡಳಿಯ ಅಧ್ಯಕ್ಷರಾದ ತಿಮ್ಮಾರೆಡ್ಡಿ ಅವರು, ರಥಕ್ಕೆ  ತೆಂಗಿನಕಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

IMG 20220320 WA0097

ರಥವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.  ಈ ಜಾತ್ರೆ ವಿಶೇಷವೆಂದರೆ ಜನರು ಬೆಳಗಿನಿಂದ ಉಪವಾಸವಿದ್ದು ರಥವನ್ನ ಎಳೆದ ನಂತರ ಪ್ರಸಾದ ಸ್ವೀಕರಿಸುವುದು ಅನಾದಿ ಕಾಲದಿಂದಲೂ ಬಂದ ಸಂಪ್ರದಾಯವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ರಥಕ್ಕೆ ಹಗ್ಗವನ್ನು ಕಟ್ಟಿ ಜನರು ಶ್ರದ್ಧಾಭಕ್ತಿಯಿಂದ ತೇರನ್ನು ಎಳೆದರು. ಭಕ್ತಾದಿಗಳು ರಥಕ್ಕೆ ಬಾಳೆಹಣ್ಣನ್ನು ಎಸೆದು ಭಕ್ತಿಯನ್ನು ಸಮರ್ಪಿಸಿದರು.  ಜಾತ್ರೆಗೆ ಬಂದ ಜನರಿಗೆ  ದೇವಸ್ಥಾನದ ಟ್ರಸ್ಟ್  ವತಿಯಿಂದ ಜಾತ್ರೆಗೆ ಬಂದಿರುವ ಭಕ್ತಾದಿಗಳಿಗೆ  ಮಜ್ಜಿಗೆ, ಕುಡಿಯುವ ನೀರು, ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ರಥೋತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಬಾರಿ ದನಗಳ ಜಾತ್ರೆಗೆ ವದನಕಲ್ಲು ಪ್ರಸಿದ್ಧಿ ಹೊಂದಿದೆ. ಜಾತ್ರೆ ವಿಶೇಷಗಳೆಂದರೆ, ಮಂಗಳವಾದ್ಯ, ಡೋಲು ಕುಣಿತ, ವೀರಭದ್ರ ಸ್ವಾಮಿ ಕುಣಿತ ನಂದೀಶ್ವರ ಸ್ವಾಮಿ ಕುಣಿತ, ಪ್ರಮುಖ ಆಕರ್ಷಣೆಗಳಾಗಿವೆ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಸಂಘ ಎರಡು ಕಮಿಟಿಗಳನ್ನು ಹೊಂದಿದ್ದು ಒಂದು ದಾಸೋಹ ಕಮಿಟಿ, ಮತ್ತೊಂದು ಕಾರ್ಯನಿರ್ವಾಹಕ ಕಮಿಟಿ ಆಗಿದೆ, ದಾಸೋಹ ಕಮಿಟಿಯ ಮುಖ್ಯ ಉದ್ದೇಶ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನಿರಂತರ ದಾಸೋಹ ಮಾಡುವುದು,

ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜನರು ಆಗಮಿಸಿದ್ದು, ಅವರು ತಮ್ಮ ರಾಸುಗಳನ್ನು ಪ್ರದರ್ಶಿಸುವ ಕಾರ್ಯ ನಡೆಯಿತು, ಉತ್ತಮ ರಾಸುಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಶಸ್ತಿಯನ್ನು ಸಹ ನೀಡುವ ಪದ್ಧತಿ ಅನಾದಿಕಾಲದಿಂದಲೂ ಬಂದಿರುವುದಾಗಿ ವದನಕಲ್ಲು ಶಾಲೆಯ ಮುಖ್ಯಶಿಕ್ಷಕ ರಾಜಪ್ಪ ತಿಳಿಸಿದರು. ಜಾತ್ರೆ ಯಶಸ್ವಿಯಾಗಿ ನಡೆಯುವಲ್ಲಿ ಊರಿನ ಗ್ರಾಮಸ್ಥರು, ವದನ ಕಲ್ಲಿನ ಗೆಳೆಯರ ಬಳಗ, ಹಾಗೂ ದೇವಸ್ಥಾನದ ಮಂಡಳಿ ಪ್ರಮುಖ ಪಾತ್ರವಹಿಸಿದರು.

ಜಾತ್ರೆಯಲ್ಲಿ ಯಾವುದೇ ತೊಂದರೆಗಳು ಆಗದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ಈ ಸುಪ್ರಸಿದ್ಧ ಜಾತ್ರೆಗೆ  ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ತಿಮ್ಮಾರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗೋಪಾಲ್ ರೆಡ್ಡಿ, ಶಿಕ್ಷಕ ರಾಜ ಗೋಪಾಲ್, ದೇವಾಲಯ ಟ್ರಸ್ಟ್ ಕಾರ್ಯದರ್ಶಿಯಾದ ಮಂಜುನಾಥ ಶಾಸ್ತ್ರಿ, ಸಹ ಕಾರ್ಯದರ್ಶಿಯಾದ, ರವಿಶಾಸ್ತ್ರಿ, ಕೃಷ್ಣಾರೆಡ್ಡಿ, ವದನಕಲ್ಲು ಗ್ರಾಮಸ್ಥರು, ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸುಲು ಎ