Valmiki Jayanti

2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ….!

Genaral STATE

2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರ ಹೆಸರು ಪ್ರಕಟಿಸಿದ ಶ್ರೀ ಬಿ.ಶ್ರೀರಾಮುಲು

ಬೆಂಗಳೂರು.ಅ.19: 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅ.20 ರಂದು ನಡೆಯಲಿರುವ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದು ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಾರಿಗೆ ಸಚಿವರಾದ ಶ್ರೀ ಬಿ. ಶ್ರೀರಾಮುಲು ಅವರು ಪ್ರಕಟಿಸಿದರು.
ಶ್ರೀ ಕೆ. ಸಿ ನಾಗರಾಜು (ಸಮಾಜ ಸೇವೆ )–ಬೆಂಗಳೂರು ವಿಭಾಗ, ಶ್ರೀಮತಿ ಲಕ್ಷ್ಮಿಗಣಪತಿ ಸಿದ್ದಿ. (ಸಮಾಜ ಸೇವೆ) ಬೆಳಗಾವಿ ವಿಭಾಗ–, ಪ್ರೊ. ಎಸ್. ಆರ್. ನಿರಂಜನ (ಶಿಕ್ಷಣ ಕ್ಷೇತ್ರ ) ಮೈಸೂರು ವಿಭಾಗ, ಶ್ರೀ. ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ) ಕಲಬುರ್ಗಿ ವಿಭಾಗ, ಶ್ರೀ. ಟಿ. ಅಶ್ವತ್ಥರಾಮಯ್ಯ (ಸಮಾಜ ಸೇವೆ)ಬೆಂಗಳೂರು ಕೇಂದ್ರ ಸ್ಥಾನ ಹಾಗೂ ಶ್ರೀ ಜಂಬಯ್ಯ ನಾಯಕ ( ಸಮಾಜ ಸೇವೆ) ಅವರು 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಚಿವರು ಪ್ರಕಟಿಸಿದರು.
2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ. ಡಾ. ಕೆ.ಆರ್. ಪಾಟೀಲ್ ( ಸಮಾಜ ಸೇವೆ )- ಬೆಳಗಾವಿ ವಿಭಾಗ, ಡಾ. ಬಿ.ಎಲ್. ವೇಣು (ಸಾಹಿತ್ಯ )- ಬೆಂಗಳೂರು ವಿಭಾಗ, ಶ್ರೀಮತಿ ಗೌರಿ ಕೊರಗ( ಸಮಾಜಸೇವೆ)- ಮೈಸೂರು ವಿಭಾಗ, ಶ್ರೀ ಮಾರಪ್ಪ ನಾಯಕ ( ಸಂಘಟನೆ) – ಕಲಬುರಗಿ ವಿಭಾಗ ಮತ್ತು ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್)( ಸಮಾಜ ಸೇವೆ)- ಬೆಂಗಳೂರು ಕೇಂದ್ರಸ್ಥಾನ ಅವರು 2020 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ 2020 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಐವರು ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.
ಕಳೆದ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 5 ಸಾಧಕರು ಹಾಗೂ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 6 ಸಾಧಕರು ಸೇರಿದಂತೆ ಒಟ್ಟು 11 ಸಾಧಕರಿಗೆ ಅ. 20 ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಾಧಕರಿಗೆ ಪ್ರಶಸ್ತಿ ಪತ್ರ, 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಮೊತ್ತವನ್ನು ನೀಡಿ, ಗೌರವಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಅ.20 ಬೆಳಿಗ್ಗೆ 10.30ಕ್ಕೆ ಶಾಸಕರ ಭವನದ ಮುಂಭಾಗದ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ. ನಂತರ 11.00 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂಧಪುರಿ ಮಹಾಸ್ವಾಮೀಜಿಯವರು ಅವರು ದಿವ್ಯಸಾನಿಧ್ಯವಹಿಸಲಿದ್ದಾರೆ. ಸಚಿವರುಗಳು, ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ನಿಗಮಮಂಡಳಿಗಳ ಅಧ್ಯಕ್ಷರುಗಳು, ಪರಿಶಿಷ್ಟ ವರ್ಗಗಳ ಮುಖಂಡರುಗಳು, ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಪಿ.ಎಸ್. ಕಾಂತರಾಜು, ಸಚಿವರ ಆಪ್ತಕಾರ್ಯದರ್ಶಿ ಶ್ರೀ ರಾಘವೇಂದ್ರ ಉಪಸ್ಥಿತರಿದ್ದರು.

2021ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಸಂಕ್ಷಿಪ್ತ ವಿವರ

1. ಕೆ. ಸಿ ನಾಗರಾಜು (ಸಮಾಜ ಸೇವೆ)–ಬೆಂಗಳೂರು ವಿಭಾಗ
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕಸಾಪುರ ವಾಸಿಯಾಗಿರುವ ಸುಮಾರು ೫೯ ವರ್ಷದ ಶ್ರೀ ಕೆ.ಸಿ ನಾಗರಾಜು ರವರು ಸುಮಾರು ೩೦-೪೦ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಹಲವಾರು ಸಂಘ ಸಂಸ್ಥೆಗಳ ಮುಖೇನ ಜನಪರ ಕಾರ್ಯಕ್ರಮಗಳಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.
೨. ಲಕ್ಷ್ಮಿಗಣಪತಿ ಸಿದ್ದಿ. ( ಸಮಾಜ ಸೇವೆ) ಬೆಳಗಾವಿ ವಿಭಾಗ
ಉತ್ತರಕನ್ನಡ ಜಿಲ್ಲೆಯಲ್ಲಿನ ಬಹುತೇಕ ಸಿದ್ದಿ ಜನರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ ವಾಹನ ಹೋಗುವುದು ಅಸಾಧ್ಯವಾಗಿತ್ತು. ಲಕ್ಷ್ಮಿಗಣಪತಿ ಸಿದ್ದಿ ಸಿದ್ದಿರವರು ಕಳದೆ ೩೫ ವರ್ಷಗಳಿಂದ ನಾಟಿ ವೈದ್ಯೆಯಾಗಿ ಯಾವುದೇ ಫಲಾಪೇಕ್ಷ ಇಲ್ಲದೆ ಯಶಸ್ವಿಯಾಗಿ ೩೦೦ಕ್ಕಿಂತ ಹೆಚ್ಚು ಹೆರಿಗೆಯನ್ನು ಮಾಡಿಸಿದ್ದಾರೆ.
೩ ಪ್ರೋ. ಎಸ್. ಆರ್. ನಿರಂಜನ (ಶಿಕ್ಷಣ ಕ್ಷೇತ್ರ) ಮೈಸೂರು ವಿಭಾಗ–
ಮೈಸೂರು ಜಿಲ್ಲೆ ವಿಜಯನಗರ ೩ನೇ ಹಂತ ಇಲ್ಲಿ ವಾಸವಾಗಿರುವ ಇವರು ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತಮವಾದ ಸಂಶೋಧನೆಗಳನ್ನು ನಡೆಸಿ, ಹೆಚ್ಚಿನ ಸಂಶೋಧನಾ ಹಕ್ಕುಸ್ವಾಮ್ಯತೆಗಳನ್ನು ಹೊಂದಿದ್ದು, ಸದರಿಯವರಿಗೆ ಈಗಾಗಲೇ ಸರ್.ಸಿ.ವಿ.ರಾಮನ್ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ, ಡಾ. ರಾಜಾರಾಮಣ್ಣ ಪ್ರಶಸ್ತಿ ಹಾಗೂ ಇನ್ನಿತರೆ ಅತ್ಯುತ್ತಮ ಪ್ರಶಸ್ತಿಗಳನ್ನು ಬಾಜನರಾಗಿದ್ದಾರೆ.

೪.ಶ್ರೀ. ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ) ಕಲಬುರ್ಗಿ ವಿಭಾಗ–
ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಗುಡೆಕೋಟೆ ಹಾಲಸಾಗರ ಗ್ರಾಮದವರಾದ ಇವರು ಸಾಲ ಮರದ ತಿಮ್ಮಕ್ಕನಂತೆ ಸುಮಾರು ೨೫ ವರ್ಷಗಳಿಂದ ಸುಮಾರು ೭೫ ಎಕರೆ ಅರಣ್ಯ ಬೆಳೆಸಿದ್ದು, ಯಾವುದೇ ಫಲಾಪೇಕ ಇಲ್ಲದೆ ಪರಿಸರ ಸಂರಕ್ಷಣೆ ಮಾಡಿ, ಅರಣ್ಯ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
೫.ಶ್ರೀ. ಟಿ. ಅಶ್ವತ್ಥರಾಮಯ್ಯ (ಸಮಾಜ ಸೇವೆ)ಬೆಂಗಳೂರು ಕೇಂದ್ರ ಸ್ಥಾನ –
ಶ್ರೀ. ವಾಲ್ಮೀಕಿ ಮಹರ್ಷಿ ಆಶ್ರಮ ಆದಿಗುರು ಪೀಠ ಹಾಗೂ ಬಸವನಗುಡಿಯ ಶ್ರೀ.ಬೇಡರಕಣ್ಣಪ್ಪ ದೇವಸ್ಥಾನವನ್ನು ೧೯೭೯ರಲ್ಲಿ ಸ್ಥಾಪಿಸಿ ಅಭಿವೃದ್ದಿಗೊಳಿಸಿರುತ್ತಾರೆ. ವಾಲ್ಮೀಕಿ ಸಮಾಜದ ಬಡವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
೬.ಶ್ರೀ ಜಂಬಯ್ಯ ನಾಯಕ ( ಸಮಾಜ ಸೇವೆ)
ಇವರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಾಸಿಯಾಗಿದ್ದು, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಇದರ ಧರ್ಮದರ್ಶಿಗಳಾಗಿದ್ದು, ಪರಿಶಿಷ್ಟ ಪಂಗಡಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.

2020ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಸಂಕ್ಷಿಪ್ತ ವಿವರ
೧)ಡಾ|| ಕೆ.ಆರ್. ಪಾಟೀಲ್ (ಸಮಾಜ ಸೇವೆ):
ವೈದ್ಯಕೀಯ ಸೇವೆಯನ್ನು ಗ್ರಾಮೀಣ ಬುಡಕಟ್ಟು ಜನರ ಸೇವೆಗೆ ಮುಡುಪಾಗಿಟ್ಟಿದ್ದಾರೆ. ೧೯೩೦ ರಲ್ಲಿ ಧಾರವಾಡದಲ್ಲಿ ನಾಯಕ ಹಾಸ್ಟೆಲ್ ಸ್ಥಾಪನೆ ಮಾಡಿ ಬುಡಕಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗಿದ್ದಾರೆ. ಹುಬ್ಬಳ್ಳಿಯ ವಿಜಯನಗರದಲ್ಲಿ ಬುಡಕಟ್ಟು ಹಾಸ್ಟಲ್ ಸ್ಥಾಪನೆ ಮಾಡಿ ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸತತವಾಗಿ ದುಡಿಯುತ್ತಿದ್ದಾರೆ. ನಾಯಕ ಜನಾಂಗದ ಪರ್ಯಾಯ ಪದದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು. ರಾಜನಹಳ್ಳಿ ಗುರುಪೀಠದ ಧರ್ಮದರ್ಶಿಗಳಾಗಿ ಬುಡಕಟ್ಟು ಜನರ ಸೇವೆ ಮಾಡುತ್ತಿದ್ದಾರೆ.
೨)ಡಾ|| ಬಿ.ಎಲ್. ವೇಣು (ಸಾಹಿತ್ಯ):
ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ೨೦೦೩ರಲ್ಲಿ ನಿವೃತ್ತರಾಗಿರುತ್ತಾರೆ. ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರ ಎರಡರಲ್ಲೂ ಏಕ ಪ್ರಕಾರದ ಜನಪ್ರಿಯತೆ ಗಳಿಸಿದ ಅಪರೂಪದ ಲೇಖಕರು, ಬರವಣಿಗೆಯಂತೆ ವೇಣು ರವರ ವ್ಯಕ್ತಿತ್ವು ವರ್ಣರಂಚಿತವಾದುದು. ಮುನಿಸು ಮತ್ತು ಮೆಚ್ಚುಗೆ ಎರಡನ್ನು ಮುಚ್ಚಿಟ್ಟುಕೊಳ್ಳುವುದು ಅವರಿಗೆ ಗೊತ್ತಿಲ್ಲ. ದೀನ ದುರ್ಬಲರ ಒಳಿತುಗಳಿಗೆ ಅಭಿವೃದ್ಧಿ ನೀಡುವಲ್ಲಿ ಅವರಿಗೆ ಇನ್ನಿಲ್ಲದ ಆಸಕ್ತಿ. ಜಾತಿಯ ವಿರುದ್ಧ ಧ್ವನಿ ಎತ್ತುವ ಅವರ ಕೃತಿಗಳು ಪ್ರೇಮ-ಮಾನವೀಯತೆಯ ರಾಯಭಾರಿಗಳಂತೆ ಕಾಣಿಸುತ್ತವೆ.
೩)ಶ್ರೀಮತಿ. ಗೌರಿಕೊರಗ (ಸಮಾಜ ಸೇವೆ):
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೊರಗ ಮೂಲ ನಿವಾಸಿ ಸಮುದಾಯಕ್ಕೆ (ಪಿವಿಟಿಜಿ) ಸೇರಿದವರಾಗಿದ್ದು, ಕೊರಗ ಜನಾಂಗದ ಅಭ್ಯುದಯಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಹಾಗೂ ಚಳುವಳಿಗಳ ಮೂಲಕ ಸರ್ಕಾರದ ಗಮನ ಸೆಳೆದು ಕೊರಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
೪)ಶ್ರೀ ಮಾರಪ್ಪ ನಾಯಕ (ಸಂಘಟನೆ)
ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಪ್ರಮುಖ ಯೋಜನೆಗಳಾದ ಗಂಗಾ ಕಲ್ಯಾಣ, ಭೂ ಒಡೆತನ, ಏತ ನೀರಾವರಿ ಯೋಜನೆಗಳ ಸಮರ್ಪಕವಾಗಿ ಜಾರಿಗೆ ತರಲು ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಇವರು ನಕಲಿ ಜಾತಿ ಪ್ರಮಾಣ ಪತ್ರಗಳ ವಿರುದ್ದ ಹಲವಾರು ಚಳುವಳಿ ಮೂಲಕ ಸಮಾಜ ಸೇವೆ ಮತ್ತು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
೫)ಶ್ರೀ ತಿಪ್ಪೇಸ್ವಾಮಿ ಹೆಚ್(ಸಿರಿಗೆರೆ ತಿಪ್ಪೇಶ್) (ಸಮಾಜ ಸೇವೆ):
ಸುಮಾರು ೩೦ ವರ್ಷಗಳಿಂದ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಸಮಾಜ ಶ್ರೇಯೋಭಿವೃದ್ದಿಗಾಗಿ ಹೋರಾಟಗಳನ್ನು ಮಾಡಿ ಸಾಮಾಸಜಿಕ ನ್ಯಾಯ ದೊರೆಕಿಸುವಲ್ಲಿ ಯಶಸ್ವಿಯಾಗಿರುತ್ತಾರೆ.