IMG 20211020 WA0032

2 ವರ್ಷದಿಂದ ಜನರಿಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ಜನರೇ ಟೋಪಿ ಹಾಕಬೇಕು…!

POLATICAL STATE

 

*2 ವರ್ಷದಿಂದ ಜನರಿಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ಜನರೇ ಟೋಪಿ ಹಾಕಬೇಕು*

ಹಾವೇರಿ: – ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕೆ ಮತ ಹಾಕಬೇಕು ಎಂದು ಅವರೇ ಹೇಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ.

ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು. ಎರಡು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಅವರು ಹೇಳಿದ್ದಂತೆ ಅಚ್ಚೇ ದಿನ ಬರಲೇ ಇಲ್ಲ.

2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ.

ದಿನನಿತ್ಯ ನಿಮ್ಮ ಜೇಬನ್ನು ಬಿಜೆಪಿ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೂ ತಲಾ 15 ಲಕ್ಷ ರು. ಹಣ ಹಾಕುತ್ತೇವೆ ಎಂದಿದ್ದರು. ಅದಕ್ಕಾಗಿ ನಿಮ್ಮ ಖಾತೆ ತೆರೆಯಿರಿ ಎಂದರು. ಅವರು ಹಣ ಹಾಕಿದರಾ? ಯಾರಿಗಾದರೂ ಹಣ ಬಂತಾ? ಯುವಕರಿಗೆ ಕೆಲಸ ಸಿಕ್ಕಿತಾ? ಯಾವುದಾದದರರೂ ಫ್ಯಾಕ್ಟರಿ ನಿರ್ಮಾಣ ಮಾಡಿದರಾ?

ಕೋವಿಡ್ ರೋಗ ತಂದು ಹಬ್ಬಿಸಿದರು. ನಂತರ ಕೋವಿಡ್ ವಿರುದ್ಧದ ಹೋರಾಟದಲ್ಲಿ 21 ದಿನ ನೀವು ಸುಮ್ಮನಿರಿ, ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿದಿತ್ತು. ನೀವು ಗಂಟೆ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು ದೀಪ ಹಚ್ಚಿ ಎಂದರು. ಅದನ್ನು ನಾವೆಲ್ಲ ಮಾಡಿದ್ದೇವೆ. ಕೊರೋನಾ ಹೋಯಿತೇ? ಒಂದೂವರೆ ವರ್ಷದಿಂದ ಔಷಧಿ ಬೆಲೆ ಗಗನಕ್ಕೇರಿಸಿದರು. ಔಷಧಿ ಮತ್ತು ರಸಗೊಬ್ಬರ ಮಂತ್ರಿಯಾಗಿ ನಮ್ಮ ರಾಜ್ಯದವರೇ ಇದ್ದಾರೆ. ಅವರು ಬೆಲೆ ಕಡಿಮೆ ಮಾಡಲಿಲ್ಲ. ಗೊಬ್ಬರದ ಬೆಲೆ ಇಳಿಸಲಿಲ್ಲ.IMG 20211020 WA0029

ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ, ವ್ಯಾಪಾರಿಗಳು, ವೃತ್ತಿಪರರಿಗೆ ಪರಿಹಾರ ನೀಡುವುದಾಗಿ ಹೇಳಿದರು. ನಿಮಗೆ ಯಾರಿಗಾದರೂ ಹಣ ಬಂತಾ? ಯಾರಿಗೂ ಇಲ್ಲ. ನಮ್ಮ ಪಕ್ಷದಲ್ಲಿ ಗೆದ್ದು ಬಿಜೆಪಿಗೆ ಹೋದ ಸಚಿವ ಬಿ.ಸಿ ಪಾಟೀಲ್ ಎಲ್ಲ ರೈತರ ಖಾತೆಗೆ ಹಣ ಹಾಕುವುದಾಗಿ ಹೇಳಿದರು. ಯಾರಿಗಾದರೂ ಸರಿಯಾಗಿ ಪರಿಹಾರ ಸಿಕ್ಕಿದ್ದರೆ ಹೇಳಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ.

ರೈತನಿಗೆ ಹೆಕ್ಟೇರ್ ಪ್ರದೇಶಕ್ಕೆ 10 ಸಾವಿರ ಪರಿಹಾರ ಘೋಷಿಸಿದರು. ಅಂದರೆ ಎಕರೆಗೆ 4 ಸಾವಿರ, ಕುಂಟೆಗೆ 100 ರೂ. ಮಾತ್ರ. ಇದನ್ನು ಪಡೆಯಲು ರೈತರು ಕಂಪ್ಯೂಟರ್ ನಲ್ಲಿ ಅರ್ಜಿ ಹಾಕಬೇಕಂತೆ. ಅವರು ಕೊಡುವ ಈ ಪರಿಹಾರಕ್ಕೆ ಯಾರು ತಾನೇ ಅರ್ಜಿ ಹಾಕುತ್ತಾರೆ? ಈ ಸರ್ಕಾರ ರೈತನಿಗೆ ಸಹಾಯ ಮಾಡಲಿಲ್ಲ, ಚಾಲಕರಿಗೆ, ಸವಿತಾ ಸಮಾಜದವರಿಗೆ, ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ 10 ಸಾವಿರ ನೀಡುವಂತೆ ಆಗ್ರಹಿಸಿದೆವು. 5 ಸಾವಿರ ನೀಡುವುದಾಗಿ ಘೋಷಿಸಿದ ಯಡಿಯೂರಪ್ಪನವರು1900 ಕೋಟಿ ರು. ಪ್ಯಾಕೇಜ್ ಘೋಷಿಸಿದರು. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿ, ನಷ್ಟ ಅನುಭವಿಸಿದ ಎಲ್ಲರಿಗೂ ಪರಿಹಾರ ಎಂದರು. ಆದರೆ ಯಾರಿಗಾದರೂ ಪರಿಹಾರ ಬಂತಾ? ಇಲ್ಲ. ಇದನ್ನು ಕೊಡುವ ಅಧಿಕಾರ ಯಡಿಯೂರಪ್ಪ, ಬೊಮ್ಮಾಯಿ, ಶಿವಕುಮಾರ್ ಉದಾಸಿ ಅವರಿಗೆ ಇತ್ತು. ಆದರೆ ನೀಡಲಿಲ್ಲ. ನಾವು ಅಧಿಕಾರದಲ್ಲಿ ಇದ್ದಿದ್ದರೆ, ಪ್ರತಿ ಅಂಗಡಿ ಮುಂದೆ ಹೋಗಿ, ಚೆಕ್ ಬರೆದು ಕೊಡುತ್ತಿದ್ದೆವು. ರೈತರು, ಕಾರ್ಮಿಕರಿಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬಂತು? ಇಷ್ಟಾದರೂ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ.

ನೀವೆಲ್ಲ ಶ್ರೀನಿವಾಸ ಮಾನೆ ಅವರನ್ನು ಆಪದ್ಭಾಂದವ ಎಂದು ಕರೆಯುತ್ತಿದ್ದೀರಿ. ನಾನು ಯಾಕೆ ಎಂದು ಕೇಳಿದಾಗ, ಕೋವಿಡ್ ಸಂಕಷ್ಟದ ಸಮಯದಲ್ಲಿ ಯಾರೊಬ್ಬರು ನಮಗೆ ನೆರವಾಗಲಿಲ್ಲ ಸ್ವಾಮಿ. ಆದರೆ ಮಾನೆ ಅವರು ಬಡವರು, ಉದ್ಯೋಗ ಕಳೆದುಕೊಂಡವರಿಗೆ 2 ಸಾವಿರ ರುಪಾಯಿ ನೆರವು ಕೊಟ್ಟರು. ಮಾನೆ ಅವರಿಗೆ ಅಧಿಕಾರ ಇಲ್ಲ. ಆದರೂ ನಿಮಗೆ ನೆರವು ನೀಡಿದ್ದಾರೆ. ಇದರಿಂದ ನಿಮ್ಮ ಬದುಕು ಹಸನಾಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಕಷ್ಟಕಾಲದಲ್ಲಿ ಅವರು ನಿಮ್ಮ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಅವರನ್ನು ಆಪದ್ಭಾಂದವ ಎಂದು ಕರೆಯುತ್ತಿದ್ದೀರಿ. ಈ ಕಾರ್ಯದ ಮೂಲಕ ಮಾನೆ ಅವರು ಇಡೀ ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿದರು. ರಾಜ್ಯದ ಉದ್ದಗಲಕ್ಕೆ ನಮ್ಮ ಪಕ್ಷದ ನಾಯಕರು ಅಧಿಕಾರ ಇಲ್ಲದಿದ್ದರೂ ಔಷಧಿ, ಊಟ, ದಿನಸಿ, ಲಸಿಕೆ, ಆಕ್ಸಿಜನ್ ನೀಡಿದ್ದಾನೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ಒದ್ದಾಡಿ ಸತ್ತರು. ಈ ಸರ್ಕಾರ ಕೋವಿಡ್ ಸಮಯದಲ್ಲಿ ಆಸ್ಪತ್ರೆ ಬೆಡ್, ಔಷಧಿ, ಆಕ್ಸಿಜನ್ ನಿಂದ ಹಿಡಿದು ಕೊನೆಗೆ ಶವಗಳ ಅಂತ್ಯಕ್ರಿಯೆಗೂ ಕ್ಯೂ ನಿಲ್ಲಿಸಿದರು. ಇವರಿಗೆ ಕೊಂಚವಾದರೂ ಮಾನವೀಯತೆ ಬೇಡವೇ? ಬಿಜೆಪಿಯವರು ಜನರಿಗೆ ಮಾಡಿದ ಸಹಾಯ, ಸಾಧನೆಗಳನ್ನು ಹೇಳಲಾಗದೇ, ಜನರನ್ನು ತಪ್ಪುದಾರಿಗೆ ಎಳೆಯಲು ಬೇರೆ ವಿಚಾರಗಳನ್ನು ಮಾತನಾಡುತ್ತಿದ್ದಾರೆ.IMG 20211020 WA0030

ಈ ಗ್ರಾಮದವರು ಇಲ್ಲಿ ಹೂ ಬೆಳೆದು ಅದನ್ನು ಗೋವಾಗೆ ಮಾರುತ್ತಿದ್ದರು. ಆದರೆ ಇಂದು ನೀವು ಬೆಳೆದ ಹೂವು ಬೇಡ ಎಂದು ತಿರಸ್ಕರಿಸುತ್ತಿದ್ದಾರೆ. ಈ ವಿಚಾರವಾಗಿ ನನಗೆ ಮನವಿ ಪತ್ರವನ್ನು ಗ್ರಾಮಸ್ಥರೇ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಇದು ನಿಮ್ಮ ತವರು ಜಿಲ್ಲೆ. ಈ ರಾಜ್ಯದ ರೈತನ ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಿಮ್ಮದು. ಈ ರೈತರ ಕಷ್ಟ ನಿಮ್ಮ ಕಣ್ಣಿಗೆ ಕಾಣುತ್ತಿದೆಯೋ, ಇಲ್ಲವೋ? ನಿಮಗೆ ಕಣ್ಣು, ಕಿವಿ, ಹೃದಯ ಇದೆಯೋ, ಇಲ್ಲವೋ?

ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ತಮ್ಮ ಊರಿಗೆ ವಾಪಸ್ ಮರಳಲು ಮುಂದಾದಾಗ ಸರ್ಕಾರ ಅವರಿಂದ ಮೂರು ಪಟ್ಟು ಹಣ ಸುಲಿಗೆ ಮಾಡಲು ಮುಂದಾಗಿತ್ತು. ಆಗ ಕಾಂಗ್ರೆಸ್ ಪಕ್ಷ ಬಡ ಕಾರ್ಮಿಕರ ಪರವಾಗಿ ನಿಂತು ಅವರಿಂದ ಹಣ ಪಡೆಯಬೇಡಿ, ಅವರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ 1 ಕೋಟಿ ರು. ಚೆಕ್ ನೀಡಲು ಮುಂದಾದೆವು. ನಂತರ ಸರ್ಕಾರ ಎಚ್ಚೆತ್ತು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತು.

ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಪಂಪ್ಸೆಟ್ ಗೆ ಉಚಿತ ವಿದ್ಯುತ್ ನೀಡಿದ್ದರು. ನಂತರ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ನಾನು ಇಂಧನ ಸಚಿವನಾಗಿದ್ದಾಗ ನಿತ್ಯ 7 ತಾಸುಗಳ ಕಾಲ ವಿದ್ಯುತ್ ನೀಡಿದ್ದೆವು. ಆದರೆ ಪ್ರಹ್ಲಾದ್ ಜೋಷಿ ಅವರು ಕಲ್ಲಿದ್ದಲು ಮಂತ್ರಿಯಾಗಿದ್ದು, ಕಲ್ಲಿದ್ದಲು ಪೂರೈಕೆಯಾಗದೆ ರಾಜ್ಯವನ್ನು ಕತ್ತಲೆಗೆ ದೂಡುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸಿ, ಅದನ್ನು ಹೊರ ರಾಜ್ಯಗಳಿಗೆ ನೀಡುವ ಸ್ಥಿತಿ ನಿರ್ಮಾಣ ಮಾಡಿದ್ದೆವು. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವದಲ್ಲಿ ಮತದಾರನೇ ಈಶ್ವರ.

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ್ ಅವರು ನಮ್ಮ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ. ಅವರನ್ನು ಚಾಮುಂಡೇಶ್ವರಿ ಮತದಾರ ಕೆಆರೆಸ್ ಡ್ಯಾಂಗೆ ಹಾಕಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಸೋತು ಮೂರು ವರ್ಷ ಆಗಿದೆ., ಆದರೆ ಈ ಬಿಜೆಪಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ನಿಮ್ಮ ಪಕ್ಷ ಯಾವ ಸಮುದ್ರಕ್ಕೆ ಎಸೆದಿದೆ ಎಂದು ಕೇಳುತ್ತೇನೆ. ದೊಡ್ಡ ಉದಾಸಿ ಅವರು ಪಕ್ಷವನ್ನು ಕಟ್ಟಿದ್ದರೂ ಅಧಿಕಾರ ನೀಡಲಿಲ್ಲ ಎಂದು ನರಳಿ ಕೊರಗಿ ಸಾಯುವಂತೆ ಮಾಡಿದ್ದಾರೆ. ಅವರಿಗೆ ಯಾವ ಅರ್ಹತೆ ಕಡಿಮೆಯಾಗಿತ್ತು ಎಂದು ಬಿಜೆಪಿ ಅಧಿಕಾರ ನೀಡಲಿಲ್ಲ.

ನಮಗೆ ಜಾತಿ, ಧರ್ಮ ಬೇಡ. ನೀತಿ ಬೇಕು. ಪ್ರಜಾಪ್ರಭುತ್ವದಲ್ಲಿ ನೀವು ಮತದಾರರು ತೀರ್ಮಾನ ಮಾಡುವವರು. ಕಳೆದ ಚುನಾವಣೆಯಲ್ಲಿ ಮಾನೆ 5 ಸಾವಿರ ಮತಗಳಿಂದ ಸೋತಿದ್ದರು, ನಾವು ಅದನ್ನು ಒಪ್ಪಿದ್ದೇವೆ. ನೀವು ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ನಿಮಗೆ ಏನಾದರೂ ಸಹಾಯ ಆಗಬೇಕಿತ್ತಲ್ಲವೇ? ಯಾರಿಗಾದರೂ ಮನೆ ಕಟ್ಟಿಸಿಕೊಟ್ಟರಾ? ಇಲ್ಲ. ಕೇವಲ ಜಾತಿ-ಧರ್ಮದ ಬಗ್ಗೆ ಮಾತಾಡಿ, ಸಮಾಜದ ಶಾಂತಿ ಕೆಡಿಸುತ್ತಿದ್ದಾರೆ.

ಮೊನ್ನೆ ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೊಲೀಸರು ಖಾಕಿ ಬಟ್ಟೆ ತೆಗೆದುಹಾಕಿ ಕೇಸರಿ ಬಟ್ಟೆ ಧರಿಸಿದ್ದಾರೆ. ಸಂವಿಧಾನ ನಿಮಗೆ ಖಾಕಿ ಬಟ್ಟೆ, ಅಧಿಕಾರ ಕೊಟ್ಟಿದೆ. ಅದನ್ನು ಹಾಕಿಕೊಂಡು ರಾಷ್ಟ್ರಧ್ವಜಕ್ಕೆ ಸೇವೆ ಮಾಡಿ. ನಿಮ್ಮ ನಿಷ್ಠೆ ಹಾಗೂ ಸೆಲ್ಯೂಟ್ ರಾಷ್ಟ್ರಕ್ಕೆ ಇರಬೇಕೇ ಹೊರತು ಸಂಘ-ಪರಿವಾರಕ್ಕೆ ಅಲ್ಲ. ಚುನಾವಣೆ ಮುಗಿಯಲಿ, ಪೊಲೀಸ್ ಠಾಣೆ ಮುಂದೆ ಹೋಗಿ ಧರಣಿ ಮಾಡುತ್ತೇವೆ. ನಮ್ಮ ಸಂವಿಧಾನ ರಕ್ಷಣೆಗೆ ಶ್ರಮಿಸುತ್ತೇವೆ.IMG 20211020 WA0033

ಹುಬ್ಬಳ್ಳಿಯಲ್ಲಿ ಚರ್ಚ್ ಒಳಗೆ ನುಗ್ಗಿ ಭಜನೆ ಮಾಡಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ದೇವನೊಬ್ಬ ನಾಮ ಹಲವು. ಇದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ಆದರೆ ಪೊಲೀಸ್, ಸರ್ಕಾರ ಏನು ಮಾಡುತ್ತಿದೆ? ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಮುಖ್ಯಮಂತ್ರಿಗಳು ಇದನ್ನು ಬೆಂಬಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಶಾಂತಿ ಕದಡುವುದಕ್ಕೆ ನೀವು ಬೆಂಬಲವಾಗಿ ನಿಂತು, ಇತಿಹಾಸದಲ್ಲಿ ಕೆಟ್ಟ ಉದಾಹರಣೆಯಾಗುತ್ತಿದ್ದೀರಿ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕೆಟ್ಟ ಸಂಪ್ರದಾಯಕ್ಕೆ ನೀವು ಸಾಕ್ಷಿಯಾಗುತ್ತಿದ್ದು ಇದು ಒಳ್ಳೆಯದಲ್ಲ.

ಮುಂದಿನ ದಿನಗಳಲ್ಲಿ ಎಲ್ಲ ಧರ್ಮಗಳನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮದಾಗಿದೆ. ಬಿಜೆಪಿ ಸರ್ಕಾರ ಚುನಾವಣೆ ಸಮಯದಲ್ಲಿ ಕೋಮುಗಲಭೆ ನಡೆಸುತ್ತದೆ. ಯಾರ ಹಸಿವನ್ನಾದರೂ ಇವರು ನೀಗಿಸಿದ್ದಾರಾ? ಬಿಜೆಪಿಯವರು ಸೋಲಿನ ಭೀತಿಯಿಂದ ಈ ರೀತಿ ಬೇರೆ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವರದಿ ಹೋಗಿದ್ದೆ ತಡ ಎಲ್ಲ ಮಂತ್ರಿಗಳನ್ನು ಈ ಕ್ಷೇತ್ರಗಳಿಗೆ ದುಡ್ಡು ಕೊಟ್ಟು ಕಳಿಸಿ, ಹಂಚಲು ಹೇಳಿದ್ದಾರೆ. ಪ್ರತಿ ಮತಕ್ಕೆ 2 ಸಾವಿರ ರು. ಹಂಚುತ್ತಿದ್ದಾರೆ. ಅವರು ನಿಮಗೂ ನೀಡುತ್ತಾರೆ. ಅವರ ನೋಟು ತೆಗೆದುಕೊಳ್ಳಿ. ಅದು ನಿಮ್ಮ ಹಣ. ಆ ನೋಟು ತೆಗೆದುಕೊಂಡು ನೀವು ಏನು ಮಾಡಬೇಕು? ಕಾಂಗ್ರೆಸ್ ಗೆ ಮತ ಹಾಕಬೇಕು.

ಮಾನೆ ಅವರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ನೀವು ಈ ಬಾರಿ ಅವರನ್ನು 25 ಸಾವಿರ ಅಂತರದಲ್ಲಿ ಗೆಲ್ಲಿಸಬೇಕು. ಅದಕ್ಕಾಗಿ ನೀವು ಕಾಂಗ್ರೆಸ್ ಗೆ ಮತ ಹಾಕುವುದರ ಜತೆಗೆ ಇನ್ನು ಐದು ಜನ ಕಾಂಗ್ರೆಸ್ ಗೆ ಮತಹಾಕುವಂತೆ ಮಾಡಬೇಕು.

ಈ ದೇಶಕ್ಕೆ ಬುದ್ದಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಪ್ರಜ್ಞಾವಂತರು ಇರಬೇಕು. ಹೀಗಾಗಿ ಹಾನಗಲ್ ನ ಪ್ರಜ್ಞಾವಂತ ಮತದಾರ ತಮ್ಮ ಮತವನ್ನು ಕಾಂಗ್ರೆಸ್ ಹಾಕಬೇಕು. ನಿಮ್ಮ ತೀರ್ಪನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಇಡೀ ದೇಶ ಕುತೂಹಲದಿಂದ ನೋಡುತ್ತಿದೆ. ನಿಮ್ಮ ಜತೆ ಇದ್ದೇವೆ ಎಂದು ಹೇಳಿ, ನಿಮ್ಮ ಆಶೀರ್ವಾದ ಕೇಳಲು ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಸೇವೆ ಮಾಡಲು ನಮಗೆ ಒಂದು ಅವಕಾಶ ಮಾಡಿಕೊಡಿ.