IMG 20211014 WA0010

ಎಂ.ಎಸ್.ಪಿ ದರದಲ್ಲಿ ಭತ್ತ ಖರೀದಿಗೆ ತೀರ್ಮಾನ…!

Genaral STATE

*ಎಂ.ಎಸ್.ಪಿ ದರದಲ್ಲಿ ಭತ್ತ ಖರೀದಿಗೆ ತೀರ್ಮಾನ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹುಬ್ಬಳ್ಳಿ, ನವೆಂಬರ್ 03:ಭತ್ತ ಬೆಳೆಯುವ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ ಕೃಷ್ಣ , ಕಾವೇರಿ ಮತ್ತು ಕರಾವಳಿ ಜಲಾನಯನ ಪ್ರದೇಶದ ರೈತರಿಂದ ಭತ್ತ ಖರೀದಿ ಮಾಡಬೇಕೆಂಬ ಬೇಡಿಕೆಯಿದ್ದು, ಸರ್ಕಾರ ಎಂ.ಎಸ್.ಪಿ ದರದಲ್ಲಿ ಖರೀದಿಗೆ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಭತ್ತ ಮಾರಾಟ ಮಾಡುವ ರೈತರ ನೋಂದಣಿಯನ್ನು ದೀಪಾವಳಿಯ ನಂತರ ಪ್ರಾರಂಭಿಸಲು ಹಾಗೂ ಎಂ.ಎಸ್.ಪಿ ದರ ಆಧರಿಸಿ ಭತ್ತ ಖರೀದಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಗೋವಿನ ಜೋಳ ಖರೀದಿಯ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.

*ಹಾನಗಲ್ ಸೋಲಿನ ಕುರಿತು ಆತ್ಮವಿಮರ್ಶೆ*:
ಹಾನಗಲ್ ನಲ್ಲಿ ಸಾಮೂಹಿಕವಾಗಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು, ಅವರಿವರೆನ್ನದೆ ನಾವೆಲ್ಲರೂ ಅದರ ಹೊಣೆ ಹೊತ್ತಿದ್ದೇವೆ. ಅಲ್ಪ ಅಂತರದಲ್ಲಿ ಸೋತಿದ್ದೇವೆ. ಹಾನಗಲ್ ಸದಾ ಪೈಪೋಟಿಯ ಕ್ಷೇತ್ರ. ಒಮ್ಮೆ ಭಾ.ಜ.ಪ ಮತ್ತೊಮ್ಮೆ ಕಾಂಗ್ರೆಸ್ ಆಯ್ಕೆಯಾಗುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸದಿಂದ ಜನ ಅವರಿಗೆ ಮತ ನೀಡಿದ್ದಾರೆ. ಲೋಪಗಳನ್ನು ಎಲ್ಲಿ ಸರಿಪಡಿಸಿಕೊಳ್ಳಬೇಕೋ ಅಲ್ಲಿ ಸರಿಪಡಿಸಲಾಗುವುದು ಎಂದರು. ಭಾ.ಜ.ಪಕ್ಕೆ ಸಿ.ಎಂ.ಉದಾಸಿಯವರಿಗೆ ಇದ್ದ ಬೆಂಬಲವನ್ನು ಪೂರ್ಣಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಸಿಂಧಗಿಯಲ್ಲಿ 31 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದೇವೆ. ಉಪಚುನಾವಣೆ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಲ್ಲ ಎಂದರು. ನಮ್ಮ ಆಡಳಿತಕ್ಕೆ ಒಪ್ಪಿಗೆಯ ಮುದ್ರೆ ಹಾಕಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

*ಬಿಟ್ ಕಾಯಿನ್*
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪಷ್ಟೀಕರಣ ನೀಡಲಾಗಿದೆ. ಇ.ಡಿ ಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

*100 ದಿನ*
ಸರ್ಕಾರಕ್ಕೆ 100 ದಿನಗಳಾಗುತ್ತಿರುವುದು ಮಹತ್ವದ ವಿಚಾರವಲ್ಲ. ಆದರೆ ಪ್ರಾರಂಭಿಕ ಇಟ್ಟಿರುವ ಹೊಸ ಹೆಜ್ಜೆ, ನಿರ್ಧಾರ ಸವಾಲುಗಳನ್ನು ನಿಭಾಯಿಸಿದ ಬಗೆಯನ್ನು ವಿವರಿಸುವ ಕೆಲವನ್ನು ನಾಳೆ ಮಾಡಲಾಗುವುದು ಎಂದರು. ನಮ್ಮ ಕೆಲಸದ ಬಗ್ಗೆ ನಿರಂತರ ಮೌಲ್ಯಮಾಪನ ಮಾಡಿಕೊಳ್ಳಲಾಗುತ್ತಿದೆ ಎಂದರು.

*ಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ*
ಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಕಳೆದ 2 ವರ್ಷದಲ್ಲಿ ಅತಿ ಹೆಚ್ಚು ಪೊಲೀಸ್ ನೇಮಕಾತಿಯನ್ನು ಮಾಡಲಾಗಿದೆ ಎಂದರು.

*ಬೆಳಗಾವಿ ಅಧಿವೇಶನ ದಿನಾಂಕ*
ನವೆಂಬರ್ 8 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ ಅಧಿವೇಶದ ದಿನಾಂಕವನ್ನು ನಿರ್ಧರಿಸಲಾಗುವುದು ಎಂದರು.